ಬೆಳಗಾವಿ, ಡಿಸೆಂಬರ್ 8: ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಭರ್ಜರಿ ಬಂಡವಾಳ ಹರಿದುಬರುತ್ತಿರುವ ವಿಚಾರವನ್ನು ಸರ್ಕಾರ ಬಹಿರಂಗಪಡಿಸಿದೆ. ಬೆಂಗಳೂರಿನಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ ಸಮಾವೇಶದ ಮೂಲಕ 57 ಕಂಪನಿಗಳೊಂದಿಗೆ ರಾಜ್ಯ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ ಎಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಈ ಎಲ್ಲಾ 57 ಒಡಂಬಡಿಕೆಗಳ ಮೊತ್ತ 5,51,369 ಕೋಟಿ ರೂ ಆಗುತ್ತದೆ. ಈ ಎಲ್ಲಾ ಯೋಜನೆಗಳು ಜಾರಿಯಾಗಲು 3ರಿಂದ 4 ವರ್ಷ ಆಗಬಹುದು ಎಂದೂ ಅವರು ಹೇಳದ್ದಾರೆ.
ಇದರ ಜೊತೆಗೆ ಹುಬ್ಬಳ್ಳಿಯಲ್ಲಿ ನಡೆದ ಎಫ್ಎಂಸಿಜಿ ಹೂಡಿಕೆದಾರರ ಸಮಾವೇಶದಲ್ಲಿ 16 ಕಂಪನಿಗಳ ಜೊತೆ 1,275 ಕೋಟಿ ರೂ ಮೊತ್ತದ ಹೂಡಿಕೆಗೆ ಒಪ್ಪಂದಾಗಿವೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ. ಇನ್ವೆಸ್ಟ್ ಕರ್ನಾಟಕ ಬೆಂಗಳೂರಿನಲ್ಲಿ 2022ರ ನವೆಂಬರ್ನಲ್ಲಿ ನಡೆದಿತ್ತು. ಎಫ್ಎಂಸಿಜಿ ಹೂಡಿಕೆದಾರರ ಸಮಾವೇಶ ಹುಬ್ಬಳ್ಳಿಯಲ್ಲಿ ನಡೆದಿತ್ತು.
ಇನ್ವೆಸ್ಟ್ ಕರ್ನಾಟಕದಲ್ಲಿ ಕುದುರಿಸಲಾದ 57 ಒಡಂಬಡಿಕೆ (ಎಂಒಯು) ಪೈಕಿ 7 ಯೋಜನೆಗಳಿಗೆ ಎಕಗವಾಕ್ಷಿ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದೆ. ಇವುಗಳಿಗೆ ಭೂಮಿ, ನೀರು ಮತ್ತು ವಿದ್ಯುತ್ ಪೂರೈಕೆ ಒದಗಿಸಲಾಗುವುದು. ಇವು ಬೃಹತ್ ಯೋಜನೆಗಳಾದ್ದರಿಂದ ಕಾರ್ಯಾರಂಭಕ್ಕೆ 3-4 ವರ್ಷ ಆಗುತ್ತದೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.
ಇನ್ನು, ಹುಬ್ಬಳ್ಳಿಯ ಎಫ್ಎಂಸಿಜಿ ಹೂಡಿಕೆದಾರರ ಸಮಾವೇಶದಲ್ಲಿ ಆಗಿರುವ 16 ಒಪ್ಪಂದಗಳ ಪೈಕಿ 3 ಯೋಜನೆಗಳಿಗೆ ಏಕಗವಾಕ್ಷಿ ವ್ಯವಸ್ಥೆ ಮೂಲಕ ಅನುಮೋದನೆ ನೀಡಲಾಗಿದೆ ಎಂದೂ ಸಚಿವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Onion Export Ban: ಮಾರ್ಚ್ವರೆಗೂ ಈರುಳ್ಳಿ ರಫ್ತು ನಿಷೇಧ; ಕೇಂದ್ರ ಸರ್ಕಾರದ ಕ್ರಮಕ್ಕೆ ಮಹಾರಾಷ್ಟ್ರದಲ್ಲಿ ವಿರೋಧ
ಹಿಂದಿನ ಸರ್ಕಾರ ಇದ್ದಾಗ ಇನ್ವೆಸ್ಟ್ ಕರ್ನಾಟಕ 2022 ನಡೆದಿತ್ತು. ಅದಕ್ಕೆ 74.99 ಕೋಟಿ ರೂ ವೆಚ್ಚವಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಎಫ್ಎಂಸಿಜಿ ಇನ್ವೆಸ್ಟರ್ಸ್ ಸಮಾವೇಶದಲ್ಲಿ 12.23 ಲಕ್ಷ ರೂ ಅನ್ನು ಸರ್ಕಾರ ವ್ಯಯಿಸಿದೆ ಎಂಬ ಮಾಹಿತಿಯನ್ನು ಪ್ರಶ್ನೋತ್ತರ ವೇಳೆ ಎಂಬಿ ಪಾಟೀಲ್ ನೀಡಿದ್ದಾರೆ.
ಇದೇ ವೇಳೆ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ‘ಈ ಉದ್ಯಮದಲ್ಲಿ ಡಿ ಗ್ರೂಪ್ ಹುದ್ದೆಗಳನ್ನು ಕನ್ನಡಿಗರಿಗೆ ಶೇ. 100ರಷ್ಟು ಉದ್ಯೋಗ ಕೊಡಬೇಕು. ಒಟ್ಟಾರೆ ಶೇ. 70ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಕೊಡಬೇಕು ಎನ್ನುವ ನಿಯಮ ರೂಪಿಸಲಾಗಿದೆ,’ ಎಂದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ