Atal Pension Yojana: ದಿನಕ್ಕೆ 7 ರೂಪಾಯಿ ಉಳಿಸಿ; ವಾರ್ಷಿಕ 60 ಸಾವಿರ ರೂ. ಪೆನ್ಷನ್, ತೆರಿಗೆ ಅನುಕೂಲ ಪಡೆಯಿರಿ
ಸರ್ಕಾರದ ಈ ಯೋಜನೆಯಲ್ಲಿ ದಿನಕ್ಕೆ 7 ರೂಪಾಯಿಯಂತೆ ಹೂಡಿಕೆ ಮಾಡಿದರೂ ವರ್ಷಕ್ಕೆ ರೂ. 60 ಸಾವಿರ ಪೆನ್ಷನ್ ಪಡೆಯಬಹುದು. ಯಾವುದು ಸ್ಕೀಮ್ ಮತ್ತು ಇತರ ವಿವರಗಳು ಇಲ್ಲಿವೆ.
ಅಟಲ್ ಪಿಂಚಣಿ ಯೋಜನೆ (Atal Pension Yojana) ಎಂಬುದು ಭಾರತ ಸರ್ಕಾರದ ಬೆಂಬಲ ಇರುವಂಥ ಖಾತ್ರಿ ಪೆನ್ಷನ್ ಸ್ಕೀಮ್. ಖಾಸಗಿ ಉದ್ಯೋಗಿಗಳಿಗೆ ಇರುವ ಈ ಯೋಜನೆಯಲ್ಲಿ ತಿಂಗಳಿಗೆ ಕನಿಷ್ಠ ಮೊತ್ತವಾದ 7 ರೂಪಾಯಿಯಂತೆ ಹೂಡಿಕೆ ಮಾಡಿದರೂ ನಿವೃತ್ತಿ ಜೀವನಕ್ಕೆ ಅನುಕೂಲ ಆಗುತ್ತದೆ. ಮೊದಲೇ ಹೇಳಿದಂತೆ ಈ ಯೋಜನೆಯನ್ನು ನಡೆಸುವುದು ಸರ್ಕಾರವೇ ಆದರೂ ಆಡಳಿತ ನಿರ್ವಹಣೆ ನೋಡಿಕೊಳ್ಳುವುದು ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (PFRDA). ಈ ಪಿಂಚಣಿ ಯೋಜನೆಯನ್ನು ಸರ್ಕಾರವು ಆರಂಭ ಮಾಡಿದ್ದು 2015ರಲ್ಲಿ; ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ವಯಸ್ಸಾದ ನಂತರ ಆದಾಯ ಭದ್ರತೆ ಒದಗಿಸಬೇಕು ಎಂಬ ಕಾರಣಕ್ಕಾಗಿ ಆರಂಭಿಸಲಾಯಿತು.
APY ನಿಯಮಾವಳಿಯ ಪ್ರಕಾರ, 18ರಿಂದ 40 ವರ್ಷ ವಯೋಮಾನದ ಭಾರತೀಯ ನಾಗರಿಕರು ಈ ಖಾತೆಯನ್ನು ತೆರೆಯಬಹುದು. ಅಲ್ಲಿಂದ 60 ವರ್ಷದ ತನಕ ಉಳಿತಾಯ ಮಾಡಿದಲ್ಲಿ ಆ ನಂತರ ಮಾಸಿಕ ಪಿಂಚಣಿಗೆ ಅರ್ಹರಾಗುತ್ತಾರೆ. ಅಂದರೆ ಈ ಯೋಜನೆಯ ಅನುಕೂಲ ಪಡೆಯುವುದಕ್ಕೆ ಕನಿಷ್ಠ 20 ವರ್ಷಗಳ ಕಾಲ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಹೂಡಿಕೆದಾರರು ಬದುಕಿರುವ ತನಕ ತಿಂಗಳ ಪೆನ್ಷನ್ ಪಡೆಯುತ್ತಾರೆ. ಆ ನಂತರ ಸಂಗಾತಿಯು ಬದುಕಿರುವ ತನಕ ಪೆನ್ಷನ್ ಪಡೆಯುತ್ತಾರೆ. ಹೂಡಿಕೆದಾರರು ಮತ್ತು ಸಂಗಾತಿ ಇಬ್ಬರೂ ಮೃತರಾದಲ್ಲಿ ನಿಧಿಯ ಸಂಪೂರ್ಣ ಮೊತ್ತವನ್ನು ನಾಮಿನಿ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
APY ಅಡಿಯಲ್ಲಿ ಚಂದಾದಾರರಿಗೆ ನಿಶ್ಚಿತ ಮಾಸಿಕ ಪಿಂಚಣಿಯಾಗಿ 1000, 2000, 3000, 4000 ಮತ್ತು 5000 ರೂಪಾಯಿ ಪಡೆಯುವಂಥ ಆಯ್ಕೆಗಳಿರುತ್ತವೆ. ತಿಂಗಳಿಗೆ ಎಷ್ಟು ಪಿಂಚಣಿ ಬರಬೇಕು ಎಂದುಕೊಂಡಿರುತ್ತಾರೋ ಅದರ ಆಧಾರದಲ್ಲಿ ವ್ಯಕ್ತಿಯೊಬ್ಬರು ತಿಂಗಳಿಗೆ ಎಷ್ಟು ಮೊತ್ತ ಕಟ್ಟಬೇಕು ಎಂದು ನಿರ್ಧಾರ ಆಗುತ್ತದೆ. APY ಖಾತೆ ತೆರೆಯುವುದಕ್ಕೆ ಹತ್ತಿರದ ಬ್ಯಾಂಕ್ ಶಾಖೆಗೆ ಗುರುತಿನ ಪುರಾವೆ, ವಿಳಾಸ ದೃಢೀಕರಣ, ವಯಸ್ಸಿನ ದೃಢೀಕರಣಕ್ಕೆ ಸೂಕ್ತ ದಾಖಲೆಯೊಂದಿಗೆ ತೆರಳಬೇಕು. ಆ ನಂತರ ನೋಂದಣಿಗಾಗಿ ಅರ್ಜಿ ಭರ್ತಿ ಮಾಡಬೇಕು.
ಅಟಲ್ ಪೆನ್ಷನ್ ಯೋಜನಾದ ಚಾರ್ಟ್ನಂತೆ, ಒಬ್ಬ ವ್ಯಕ್ತಿಗೆ 18 ವರ್ಷ ವಯಸ್ಸಿದ್ದಲ್ಲಿ ತಿಂಗಳಿಗೆ 42 ರೂಪಾಯಿ ಕಟ್ಟಿದ್ದರೆ 60 ವರ್ಷದ ನಂತರ 1000 ರೂಪಾಯಿ ಮಾಸಿಕ ಪೆನ್ಷನ್ ಬರುತ್ತದೆ. ಅದೇ ರೀತಿ 84 ರೂಪಾಯಿ ಕಟ್ಟಿದಲ್ಲಿ 2000 ರೂಪಾಯಿ, 126 ಆದಲ್ಲಿ 3000 ರೂ., 168ಕ್ಕೆ 4000 ರೂ. ಮತ್ತು ತಿಂಗಳಿಗೆ 210 ರೂಪಾಯಿಯಂತೆ ಕಟ್ಟಿದರೆ 60 ವರ್ಷದ ನಂತರ ತಿಂಗಳಿಗೆ 5000 ರೂಪಾಯಿ ಪೆನ್ಷನ್ ಬರುತ್ತದೆ. ಇದೇ ರೀತಿ 20, 25, 30, 35 ಹಾಗೂ 40 ವರ್ಷಕ್ಕೆ ಚಾರ್ಟ್ ಇದೆ. ಅದರ ಪ್ರಕಾರ ತಿಂಗಳಿಗೆ 5000 ರೂಪಾಯಿ ಪೆನ್ಷನ್ ಪಡೆಯುವುದಕ್ಕೆ ಕ್ರಮವಾಗಿ ತಿಂಗಳಿಗೆ 248 ರೂ., 376 ರೂ., 577 ರೂ., 902 ರೂ., ಮತ್ತು 1454 ರೂ. ಪಾವತಿಸಬೇಕಾಗುತ್ತದೆ.
ವಯಸ್ಸಾಗುತ್ತಾ ಎಷ್ಟು ತಡವಾಗಿ APY ಖಾತೆಯನ್ನು ತೆರೆಯಲಾಗುತ್ತದೋ ಅಷ್ಟು ಮೊತ್ತವು ಕಟ್ಟುವುದಕ್ಕೆ ಹೆಚ್ಚುತ್ತಾ ಹೋಗುತ್ತದೆ. APY ಖಾತೆಯನ್ನು 18ನೇ ವಯಸ್ಸಿಗೆ ತೆರೆದರೆ 42 ವರ್ಷಗಳ ಕಾಲ ಕಟ್ಟಬೇಕಾಗುತ್ತದೆ. ಅದೇ 30 ವರ್ಷದ ವ್ಯಕ್ತಿಗೆ 1000 ರೂಪಾಯಿಗೆ ಪೆನ್ಷನ್ಗೆ ತಿಂಗಳಿಗೆ 116 ರೂ. ಪಾವತಿಸ ಬೇಕಾದರೆ, 5000 ರೂಪಾಯಿ ಪೆನ್ಷನ್ಗಾಗಿ ತಿಂಗಳಿಗೆ 577 ರೂಪಾಯಿ ಕಟ್ಟಬೇಕಾಗುತ್ತದೆ. ಆದ್ದರಿಂದ 18ನೇ ವಯಸ್ಸಿಗೇ ಒಬ್ಬ ವ್ಯಕ್ತಿ APY ಖಾತೆ ತೆರೆದಲ್ಲಿ ತಿಂಗಳಿಗೆ 210 ರೂಪಾಯಿ ಪಾವತಿ ಮಾಡಿದರೂ ಸಾಕು, 60 ವರ್ಷದ ನಂತರ ಮಾಸಿಕ ಪಿಂಚಣಿ 5000 ರೂಪಾಯಿ ಬರುತ್ತದೆ.
ಇದನ್ನೂ ಓದಿ: Post Office Scheme: ಪೋಸ್ಟ್ ಆಫೀಸ್ನ ಈ ಸ್ಕೀಮ್ನಲ್ಲಿ 50 ಸಾವಿರ ರೂಪಾಯಿ ಇಟ್ಟರೆ 3300 ರೂ. ಪೆನ್ಷನ್