
ನವದೆಹಲಿ, ಏಪ್ರಿಲ್ 8: ಹಾರ್ಮುಜ್ ಜಲಸಂಧಿ (Hormuz Strait) ಮೂಲಕ ಸಾಗುವ ಹಡಗುಗಳಿಗೆ ಟೋಲ್ ವಿಧಿಸಲು ಇರಾನ್ ಯೋಜಿಸಿದೆ. ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರ ಕದನ ವಿರಾಮ ಘೋಷಣೆ (ceasefire) ಆದ ಬೆನ್ನಲ್ಲೇ ಈ ಟೋಲ್ ವಿಚಾರ ಮುನ್ನೆಲೆಗೆ ಬಂದಿದೆ. ಮಾರ್ಗದಲ್ಲಿ ಸಾಗುವ ಪ್ರತೀ ಹಡಗಿನಿಂದ 2 ಮಿಲಿಯನ್ ಡಾಲರ್ ಶುಲ್ಕ ವಸೂಲಿ ಮಾಡಲು ಇರಾನ್ ಪ್ಲಾನ್ ಹಾಕಿದೆ. ಇರಾನ್ನ ಸೇನಾಪಡೆಗಳು ಈ ಜಲಸಂಧಿಯನ್ನು ನಿಯಂತ್ರಿಸಿ, ಹಡಗುಗಳ ಸಾಗಣೆಗೆ ಅವಕಾಶ ಮಾಡಿಕೊಡುತ್ತವೆ.
ಹಾರ್ಮುಜ್ ಜಲಸಂಧಿಯಲ್ಲಿ ಅಧಿಕೃತವಾಗಿ ಹಡಗುಗಳಿಂದ ಟೋಲ್ ಸಂಗ್ರಹಿಸಲು ಇರಾನ್ ಸಂಸತ್ತಿನಲ್ಲಿ ಕರಡ ಮಸೂದೆ ಸಿದ್ಧವಾಗಿದೆ. ಇದೇನಾದರೂ ಅನುಮೋದನೆಗೊಂಡು ಜಾರಿಯಾದಲ್ಲಿ ಟೋಲ್ ಸಿಸ್ಟಂ ಸ್ಥಾಪನೆಯಾಗಬಹುದು. ಈ ಟೋಲ್ನಿಂದ ಸಂಗ್ರಹವಾಗುವ ಹಣವನ್ನು ಇರಾನ್ ಯುದ್ಧದಿಂದ ಹಾನಿಯಾದ ತನ್ನ ಪ್ರದೇಶಗಳ ಪುನರಭಿವೃದ್ಧಿಗೆ ಬಳಸಲು ಯೋಜಿಸಿದೆ.
ಇರಾನ್ ಹಾಗು ಅದರ ಪುರಾತನ ನಾಗರಿಕತೆಯನ್ನು ಧೂಳೀಪಟ ಮಾಡುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ನಿನ್ನೆಯಷ್ಟೇ ಎಚ್ಚರಿಕೆ ಕೊಟ್ಟಿದ್ದರು. ಈ ಮಧ್ಯೆ ಯುದ್ಧ ನಿಲುಗಡೆಗೆ ಪಾಕಿಸ್ತಾನದ ಮೂಲಕ ಇರಾನ್ 10 ಅಂಶಗಳ ಪ್ಲಾನ್ ಅನ್ನು ಅಮೆರಿಕಕ್ಕೆ ಕಳುಹಿಸಿತ್ತು. ಈ ಪ್ಲಾನ್ ಅನ್ನು ಪರಿಗಣಿಸುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: ಯುಎಇಗೆ ಸಾಲ ವಾಪಸ್ ಕೊಟ್ಟರೆ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಏನಾಗಬಹುದು? ಇಲ್ಲಿದೆ ಇಂಟರೆಸ್ಟಿಂಗ್ ಲೆಕ್ಕಾಚಾರ
ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಾಗಾಟದ ಮೇಲೆ ನಿಯಂತ್ರಣ; ಯುದ್ಧ ನಿಲ್ಲಿಸುವುದು; ಸುತ್ತಲಿನ ದೇಶಗಳಲ್ಲಿರುವ ಅಮೆರಿಕನ್ ಮಿಲಿಟರಿ ನೆಲೆಗಳನ್ನು ತೆರವುಗೊಳಿಸುವುದು; ಇರಾನ್ಗೆ ಆದ ನಷ್ಟಕ್ಕೆ ಪೂರ್ಣ ಪರಿಹಾರ ನೀಡುವುದು; ಎಲ್ಲಾ ನಿಷೇಧಗಳನ್ನು ರದ್ದುಗೊಳಿಸುವುದು; ಇರಾನ್ನ ನಿರ್ಬಂಧಿತ ಆಸ್ತಿಗಳನ್ನು ಬಿಡುಗಡೆ ಮಾಡುವುದು, ಇವೇ ಮುಂತಾದ 10 ಅಂಶಗಳ ಪ್ಲಾನ್ ಅನ್ನು ಟ್ರಂಪ್ಗೆ ಇರಾನ್ ಕೊಟ್ಟಿದೆ.
ಸೂಜ್ ಕೆನಾಲ್ ಮತ್ತು ಪನಾಮ ಕೆನಾಲ್ನಲ್ಲಿ ಹಡಗುಗಳಿಗೆ ಟ್ರಾನ್ಸಿಟ್ ಫೀ ವಿಧಿಸಲಾಗುತ್ತದೆ. ಅದೇ ಮಾದರಿಯಲ್ಲಿ ಇರಾನ್ನ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಟ್ರಾನ್ಸಿಟ್ ಶುಲ್ಕ ವಸೂಲಿ ಮಾಡಲು ಹೊರಟಿದೆ. ಆದರೆ, ಗಮನಿಸಬೇಕಾದ ಸಂಗತಿ ಎಂದರೆ ಸೂಜ್ ಕಾಲುವೆ ಮತ್ತು ಪನಾಮೆ ಕಾಲುವೆಗಳನ್ನು ಮನುಷ್ಯರೇ ನಿರ್ಮಿಸಿ, ನಿರ್ವಹಿಸುತ್ತಾರೆ. ಹೀಗಾಗಿ, ಸುಂಕದ ರೀತಿ ಹಡಗುಗಳಿಂದ ಟ್ರಾನ್ಸಿಟ್ ಫೀ ಪಡೆಯಲಾಗುತ್ತದೆ.
ಇದನ್ನೂ ಓದಿ: ಕದನವಿರಾಮ ಬೆನ್ನಲ್ಲೇ ತೈಲ ಬೆಲೆ ಐತಿಹಾಸಿಕ ಕುಸಿತ; ಪೆಟ್ರೋಲ್, ಡೀಸಲ್ ಬೆಲೆಯೂ ಇಳಿಯುತ್ತಾ?
ಆದರೆ, ಹಾರ್ಮುಜ್ ಜಲಸಂಧಿಯು ನೈಸರ್ಗಿಕವಾಗಿ ನಿರ್ಮಾಣವಾಗಿರುವ ಜಲಮಾರ್ಗ. ವಿಶ್ವಸಂಸ್ಥೆಯ ಸಾಗರ ಕಾನೂನು ನಿಯಮಾವಳಿ ಪ್ರಕಾರ ಅಂತಾರಾಷ್ಟ್ರೀಯವಾಗಿ ಜಲಮಾರ್ಗಗಳು ಮತ್ತು ವಾಯುಮಾರ್ಗಗಳು ಮುಕ್ತವಾಗಿರಬೇಕು. ಕರಾವಳಿ ಪ್ರದೇಶಗಳು ಇದನ್ನು ತಡೆಯುವಂತಿಲ್ಲ ಅಥವಾ ನಿಯಂತ್ರಿಸುವಂತಿಲ್ಲ ಎಂದು ನಿಯಮಗಳು ಹೇಳುತ್ತವೆ. ಹೀಗಾಗಿ, ಇರಾನ್ ದೇಶವು ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಂದ ಟ್ರಾನ್ಸಿಟ್ ಫೀ ಪಡೆಯುವುದು ವಿಶ್ವಸಂಸ್ಥೆ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ