ನವದೆಹಲಿ, ಜುಲೈ 29: ಹಿಂದಿನ ಹಣಕಾಸು ವರ್ಷದ ಆದಾಯ ತೆರಿಗೆಯ ರಿಟರ್ನ್ಸ್ ಅನ್ನು ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಒಂದು ವೇಳೆ ಗಡುವಿನೊಳಗೆ ಐಟಿಆರ್ ಸಲ್ಲಿಸದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಜುಲೈ 31ರ ಗಡುವು ತಪ್ಪಿ ಹೋದರೂ ಡಿಸೆಂಬರ್ 31ರವರೆಗೆ ಫೈಲಿಂಗ್ ಮಾಡುವ ಅವಕಾಶ ಇದೆ. ಆದರೆ, ಕೆಲ ಅನನುಕೂಲಗಳು ಆಗಬಹುದು. ದಂಡ ಪಾವತಿಸುವುದರಿಂದ ಹಿಡಿದು, ಡೀಫಾಲ್ಟ್ ಟ್ಯಾಕ್ಸ್ ರೆಜಿಮೆವರೆಗೆ ಕ್ರಮಗಳಿಗೆ ನೀವು ಒಳಗಾಗಬೇಕಾಗುತ್ತದೆ.
ನೀವು ಗಡುವಿನೊಳಗೆ ಐಟಿ ರಿಟರ್ನ್ಸ್ ಸಲ್ಲಿಸದೇ ಇದ್ದರೆ, ಅಥವಾ ಗಡುವಿನ ಬಳಿಕ ರಿಟರ್ನ್ಸ್ ಫೈಲ್ ಮಾಡಿದರೆ ಹಳೆಯ ಟ್ಯಾಕ್ಸ್ ರೆಜಿಮೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇರುವುದಿಲ್ಲ. ಡೀಫಾಲ್ಟ್ ಆಗಿ ಹೊಸ ಟ್ಯಾಕ್ಸ್ ರೆಜಿಮೆಯೇ ಇರುತ್ತದೆ. ನೀವು ಸಾಕಷ್ಟು ಡಿಡಕ್ಷನ್ಸ್ ಇರುವ ಓಲ್ಡ್ ಟ್ಯಾಕ್ಸ್ ರೆಜಿಮೆಯನ್ನು ಐಟಿಆರ್ ಸಲ್ಲಿಕೆಗೆ ಬಳಸುತ್ತಿದ್ದೇ ಆದಲ್ಲಿ ಖಂಡಿತವಾಗಿ ಜುಲೈ 31ರ ಡೆಡ್ಲೈನ್ ತಪ್ಪಿಸದಿರಿ.
ಇದನ್ನೂ ಓದಿ: ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನ; ಡೆಡ್ಲೈನ್ ವಿಸ್ತರಣೆ ಸಾಧ್ಯತೆ ಕಡಿಮೆ
ಜುಲೈ 31ರ ಡೆಡ್ಲೈನ್ ಮಿಸ್ ಆದರೆ ಡಿಸೆಂಬರ್ 31ರವರೆಗೂ ಐಟಿಆರ್ ಸಲ್ಲಿಕೆಗೆ ಕಾಲಾವಕಾಶ ಇರುತ್ತದೆ. ಆದರೆ, ಲೇಟ್ ಪೇಮೆಂಟ್ ಫೀ ಕಟ್ಟಬೇಕು. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 234ಎಫ್ ಅಡಿಯಲ್ಲಿ ತಡವಾಗಿ ರಿಟರ್ನ್ ಫೈಲ್ ಮಾಡಿದರೆ 5,000 ರೂ ಶುಲ್ಕ ವಸೂಲಿ ಮಾಡಬಹುದು.
ನಿಮ್ಮ ಆದಾಯ ವರ್ಷಕ್ಕೆ 5 ಲಕ್ಷ ರೂ ಒಳಗಿದ್ದರೆ ತಡ ಪಾವತಿ ಶುಲ್ಕ 1,000 ರೂ ಇರುತ್ತದೆ. ಐದು ಲಕ್ಷ ರೂಗಿಂತ ಮೇಲಿದ್ದರೆ ಹೆಚ್ಚಿನ 5,000 ರೂವರೆಗೆ ದಂಡ ಹಾಕಬಹುದು.
ಅಲ್ಲದೇ, ನಿಮ್ಮ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿರುವ ಮೊತ್ತಕ್ಕೆ ತಿಂಗಳಿಗೆ ಶೇ. 1ರಂತೆ ಬಡ್ಡಿಯನ್ನೂ ಹಾಕಲಾಗುತ್ತದೆ. ನೀವು ತಡ ಮಾಡಿದಷ್ಟೂ ಬಡ್ಡಿಯೂ ಏರುತ್ತಾ ಹೋಗುತ್ತದೆ. ಆದರೆ, ನಿಮಗೆ ವಿಧಿಸಲಾಗುವ ಬಡ್ಡಿ, ದಂಡ ಇತ್ಯಾದಿ ಮೊತ್ತವು ನಿಮ್ಮ ತೆರಿಗೆ ಬಾಕಿ ಹಣಕ್ಕಿಂತ ಹೆಚ್ಚಿರುವುದಿಲ್ಲ.
ಇದನ್ನೂ ಓದಿ: PM Surya Ghar Yojana: ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಪಿಎಂ ಸೂರ್ಯಘರ್ ಯೋಜನೆಯ ಪೂರ್ಣ ವಿವರ
ಷೇರು, ಸೈಟು ಇತ್ಯಾದಿ ಮಾರಾಟದಿಂದ ಬಂದ ಲಾಭವನ್ನು ಕ್ಯಾಪಿಟಲ್ ಗೇನ್ ಎನ್ನುತ್ತಾರೆ. ಇದಕ್ಕೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಇರುತ್ತದೆ. ಹಾಗೆಯೇ, ಮೇಲಿನ ವಹಿವಾಟುಗಳಲ್ಲಿ ನಷ್ಟವಾದರೆ ಕ್ಯಾಪಿಟಲ್ ಲಾಸ್ ಎನ್ನುತ್ತಾರೆ. ನೀವು ಗಳಿಸಿದ ಲಾಭಕ್ಕೆ ಈ ನಷ್ಟವನ್ನು ಕಳೆದು, ಉಳಿದ ಮೊತ್ತಕ್ಕೆ ಮಾತ್ರ ತೆರಿಗೆ ಪಾವತಿಸಬಹುದು. ನೀವು ತಡವಾಗಿ ಐಟಿಆರ್ ಸಲ್ಲಿಸಿದರೆ ಈ ಕ್ಯಾಪಿಟಲ್ ಲಾಸ್ ಅನ್ನು ಮುಂದಿನ ಫೈಲಿಂಗ್ಗೆ ಕ್ಯಾರಿ ಫಾರ್ವರ್ಡ್ ಮಾಡಲು ಆಗುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ