IPOs in January: ಈ ಜನವರಿ ತಿಂಗಳಲ್ಲಿ ಮೆಡಿ ಅಸಿಸ್ಟ್ ಸೇರಿದಂತೆ 5 ಸಂಸ್ಥೆಗಳಿಂದ ಐಪಿಒ ಬಿಡುಗಡೆ ಸಾಧ್ಯತೆ
Primary Capital Market: 2024ರ ಜನವರಿ ತಿಂಗಳಲ್ಲಿ ಐದು ಸಂಸ್ಥೆಗಳ ಐಪಿಒ ಬಿಡುಗಡೆ ಆಗಲಿದೆ. ಜ್ಯೋತಿ ಸಿಎನ್ಸಿ ಆಟೊಮೇಶನ್ ಐಪಿಒ ದಿನಾಂಕ ಮಾತ್ರ ಖಚಿತವಾಗಿದೆ. ಮೆಡಿ ಅಸಿಸ್ಟ್ ಹೆಲ್ತ್ಕೇರ್, ಮುಕ್ಕ ಪ್ರೋಟೀನ್ಸ್, ಎಸ್ಪಿಸಿ ಲೈಫ್ ಸೈನ್ಸಸ್, ಅಲೈಡ್ ಬ್ಲೆಂಡರ್ಸ್ ಸಂಸ್ಥೆಗಳ ಐಪಿಒ ಜನವರಿಯಲ್ಲೇ ಇರಬಹುದು. ಐಪಿಒದಲ್ಲಿ ಷೇರು ಹಂಚಿಕೆ ಆದ ಬಳಿಕ ಆ ಷೇರುಗಳನ್ನು ಬಿಎಸ್ಇ ಅಥವಾ ಎನ್ಎಸ್ಇಗಳಲ್ಲಿ ಲಿಸ್ಟ್ ಮಾಡಲಾಗುತ್ತದೆ. ಅಲ್ಲಿ ಆ ಷೇರುಗಳ ವಹಿವಾಟು ನಡೆಸಲು ಅವಕಾಶ ಇರುತ್ತದೆ.
ನವದೆಹಲಿ, ಜನವರಿ 5: ಕಳೆದ ವರ್ಷ (2023) ಐಪಿಒಗಳ ಸುಗ್ಗಿ ಆಗಿತ್ತು. ಅತಿಹೆಚ್ಚು ಐಪಿಒಗಳ ಆಫರ್ ಇತ್ತು. ಅನೇಕ ಐಪಿಒಗಳು ಸಮಾಧಾನಕರ ರೀತಿಯಲ್ಲಿ ಯಶಸ್ಸೂ ಕೂಡ ಪಡೆದವು. ಈ ವರ್ಷವೂ ಸಾಲು ಸಾಲು ಐಪಿಒಗಳನ್ನು ನಿರೀಕ್ಷಿಸಬಹುದು. ಬಹಳಷ್ಟು ಸಂಸ್ಥೆಗಳು ಬಂಡವಾಳ ಸಂಗ್ರಹಣೆಗೆ ಸಾರ್ವಜನಿಕರಿಗೆ ಷೇರು ಮಾರಾಟ ಮಾಡಲು ಸರದಿಯಲ್ಲಿವೆ. ಈ ವರ್ಷದ ಮೊದಲ ತಿಂಗಳು ಐದು ಕಂಪನಿಗಳ ಐಪಿಒ (IPO- Initial Public Offering) ಬಿಡುಗಡೆ ಆಗುವ ಸಾಧ್ಯತೆ ಇದೆ. ಜ್ಯೋತಿ ಸಿಎನ್ಸಿ ಆಟೊಮೇಶನ್ ಸಂಸ್ಥೆಯ ಐಪಿಒ ದೃಢಪಟ್ಟಿದೆ. ಹಾಗೆಯೇ, ಮೆಡಿ ಅಸಿಸ್ಟ್ ಸೇರಿದಂತೆ ಇನ್ನೂ ನಾಲ್ಕು ಸಂಸ್ಥೆಗಳ ಐಪಿಒ ರಿಲೀಸ್ ಆಗಬಹುದು ಎನ್ನಲಾಗಿದೆ.
ಜ್ಯೋತಿ ಸಿಎನ್ಸಿ ಆಟೊಮೇಶನ್ ಐಪಿಒ
ಜ್ಯೋತಿ ಸಿಎನ್ಸಿ ಆಟೊಮೇಶನ್ ಸಂಸ್ಥೆಯ (Jyoti CNC Automation) ಆರಂಭಿಕ ಸಾರ್ವಜನಿಕ ಕೊಡುಗೆ ಜನವರಿ 9ರಿಂದ 11ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಅದರ ಬೆಲೆ ಪ್ರತೀ ಷೇರಿಗೆ 315-331 ರೂ ಎಂದು ನಿಗದಿ ಮಾಡಲಾಗಿದೆ. ಕನಿಷ್ಠ ಖರೀದಿ 45 ಷೇರುಗಳಾಗಿರುತ್ತದೆ. ಇದರ ಷೇರು ಖರೀದಿಸಲು ಬೇಕಾದ ಕನಿಷ್ಠ ಹೂಡಿಕೆ 14,895 ರೂ ಆಗಿರುತ್ತದೆ.
ಮೆಡಿ ಅಸಿಸ್ಟ್ ಹೆಲ್ತ್ಕೇರ್ ಐಪಿಒ
ಜನವರಿ ಎರಡನೇ ವಾರದಲ್ಲಿ ಇದರ (Medi Assist Healthcare) ಐಪಿಒ ಆಫರ್ ಬರಬಹುದು. 2.8 ಕೋಟಿ ಷೇರುಗಳನ್ನು ಸಾರ್ವಜನಿಕರಿಗೆ ಹಂಚಬಹುದು. ಆದರೆ, ಅದರ ಬೆಲೆಯನ್ನು ಇನ್ನೂ ಬಹಿರಂಗಗೊಳಿಸಲಾಗಿಲ್ಲ.
ಮುಕ್ಕ ಪ್ರೋಟೀನ್ಸ್ ಐಪಿಒ
ಮುಕ್ಕ ಪ್ರೋಟೀನ್ಸ್ ಸಂಸ್ಥೆ (Mukka Proteins) ಕಳೆದ ವರ್ಷ ನವೆಂಬರ್ನಲ್ಲೇ ಐಪಿಒಗಾಗಿ ಸೆಬಿ ಅನುಮತಿ ಪಡೆದಿದೆ. ಜನವರಿ ಕೊನೆಯ ವಾರದಲ್ಲಿ ಇದು ನಡೆಯಬಹುದು. 8 ಕೋಟಿ ಷೇರುಗಳನ್ನು ಹಂಚಲಾಗುತ್ತದೆ. ಇದರ ಬೆಲೆ ಇನ್ನೂ ನಿರ್ಧಾರವಾಗಿಲ್ಲ.
ಎಸ್ಪಿಸಿ ಲೈಫ್ ಸೈನ್ಸಸ್ ಐಪಿಒ
ಎಸ್ಪಿಸಿ ಲೈಫ್ ಸೈನ್ಸಸ್ (SPC Life Sciences) ಫಾರ್ಮಾ ಕಂಪನಿಯಾಗಿದ್ದು, ಇದೂ ಕೂಡ ಜನವರಿ ಕೊನೆಯ ವಾರದಲ್ಲಿ ಐಪಿಒ ಬಿಡುಗಡೆ ಮಾಡಬಹುದು. ಒಟ್ಟು 300 ಕೋಟಿ ರೂ ಮೊತ್ತದ 89.39 ಲಕ್ಷ ಷೇರುಗಳನ್ನು ಈ ವೇಳೆ ಸಾರ್ವಜನಿಕರಿಗೆ ಮಾರಲಾಗುತ್ತದೆ.
ಅಲೈಡ್ ಬ್ಲೆಂಡರ್ಸ್ ಐಪಿಒ
ಅಲೈಡ್ ಬ್ಲೆಂಡರ್ಸ್ ಸಂಸ್ಥೆ (Allied Blenders) ಐಪಿಒ ಮೂಲಕ ಸಾರ್ವಜನಿಕವಾಗಿ 1,000 ಕೋಟಿ ರೂ ಬಂಡವಾಳ ಸಂಗ್ರಹಣೆಯ ಗುರಿ ಹೊಂದಿದೆ. ಜನವರಿ ತಿಂಗಳಲ್ಲೇ ಇದರ ಐಪಿಒ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: LPG Users: ಎಲ್ಪಿಜಿ ಗ್ರಾಹಕರಿಗೆ ಉಚಿತ 50 ಲಕ್ಷ ವಿಮೆ; ಕ್ಲೈಮ್ ಮಾಡುವುದು ಹೇಗೆ?
ಐಪಿಒ ಬಿಡುಗಡೆ ಬಳಿಕ ಏನು?
ಸಾರ್ವನಿಕವಾಗಿ ಬಂಡವಾಳ ಸಂಗ್ರಹಿಸಲು ಕಂಪನಿಗಳು ತಮ್ಮ ಷೇರುಪಾಲನ್ನು ಸಾರ್ವಜನಿಕರಿಗೆ ಮಾರುತ್ತವೆ. ಹೀಗೆ ಮಾರಲಾದ ಷೇರುಗಳನ್ನು ವಹಿವಾಟು ನಡೆಸಲು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡಲಾಗುತ್ತದೆ. ಐಪಿಒ ಆಗಿ ಕೆಲ ದಿನಗಳ ಬಳಿಕ ಬಿಎಸ್ಇ ಅಥವಾ ಎನ್ಎಸ್ಇನಲ್ಲಿ ಷೇರು ಲಿಸ್ಟ್ ಆಗುತ್ತದೆ. ಯಾರು ಬೇಕಾದರೂ ಈ ವಿನಿಮಯ ಕೇಂದ್ರದಲ್ಲಿ ಷೇರು ಮಾರಾಟ ಅಥವಾ ಖರೀದಿ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ