ಟೋಕಿಯೋ, ಮಾರ್ಚ್ 19: ಬ್ಯಾಂಕ್ ಆಫ್ ಜಪಾನ್ 2007ರ ಬಳಿಕ ಮೊದಲ ಬಾರಿಗೆ ತನ್ನ ಬಡ್ಡಿದರ (Interest rates) ಹೆಚ್ಚಿಸಿದೆ. ಅದರ ಕಿರು ಅವಧಿ ಬಡ್ಡಿದರ (short-term policy rate) ಸೊನ್ನೆಯಿಂದ ಶೇ. 0.1ರ ಶ್ರೇಣಿಗೆ ಪರಿಷ್ಕರಿಸಲಾಗಿದೆ. 2007ರಲ್ಲಿ ಬಡ್ಡಿದರವನ್ನು ಮೈನಸ್ ಶೇ. 0.1ಕ್ಕೆ ನಿಗದಿ ಮಾಡಲಾಗಿತ್ತು. ನೆಗಟಿವ್ ಬಡ್ಡಿದರ ಇರುವ ಏಕೈಕ ದೇಶವೆಂಬ ಪಟ್ಟವನ್ನು ಜಪಾನ್ ಪಕ್ಕಕ್ಕಿಟ್ಟಂತಾಗಿದೆ. ಹಣದುಬ್ಬರ ನಿರೀಕ್ಷಿತ ಮಟ್ಟ ತಲುಪುತ್ತಿರುವುದರಿಂದ ಜಪಾನ್ ಸೆಂಟ್ರಲ್ ಬ್ಯಾಂಕ್ ತನ್ನ ಬಡ್ಡಿದರವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಲು ನಿರ್ಧರಿಸಿದೆ.
ವಿಶ್ವದ ಹಲವು ರಾಷ್ಟ್ರಗಳಿಗೆ ಹಣದುಬ್ಬರದ ಕಾಟವಾದರೆ ಜಪಾನ್ ಮೊದಲಾದ ಕೆಲ ದೇಶಗಳಲ್ಲಿ ಹಣದುಬ್ಬರ ಕುಸಿತ ಅಥವಾ ಡೀಫ್ಲೇಶನ್ ಸಮಸ್ಯೆ ಕಾಡಿದೆ. ಹಣದುಬ್ಬರವನ್ನು ಶೇ. 2ಕ್ಕೆ ತರುವುದು ಸೆಂಟ್ರಲ್ ಬ್ಯಾಂಕ್ನ ಗುರಿಯಾಗಿತ್ತು. ಅದರಂತೆ ಬಡ್ಡಿದರವನ್ನು ಮೈನಸ್ನಲ್ಲಿ ಇಡಲಾಗಿತ್ತು. ಈಗ ಆ ಗುರಿ ಈಡೇರಿರುವ ಹಿನ್ನೆಲೆಯಲ್ಲಿ ಬಡ್ಡಿದರವನ್ನು ಶೂನ್ಯಕ್ಕಿಂತ ಮೇಲೆತ್ತಲಾಗಿದೆ.
ಇದನ್ನೂ ಓದಿ: ಟಾಟಾ ಸನ್ಸ್ನಿಂದ ಷೇರು ಮಾರಾಟ; ಟಿಸಿಎಸ್ ಷೇರುಕುಸಿತ; ಇದು ಖರೀದಿಸುವ ಸಮಯವಾ?
ಇನ್ನೊಂದು ಅಚ್ಚರಿಯ ಸಂಗತಿ ಎಂದರೆ, ಜಪಾನ್ ದೇಶದಲ್ಲಿ ಬೆಲೆ ಏರಿಕೆ ಬಹಳ ಮಂದಗತಿಯಲ್ಲಿ ಇರುವುದರಿಂದ ಕಾರ್ಮಿಕರಿಗೆ ವೇತನ ಹೆಚ್ಚಳ ಅಪರೂಪವಾಗಿದೆ. ಕಳೆದ 30 ವರ್ಷಗಳಿಂದ ವೇತನ ಹೆಚ್ಚಳ ತೀರಾ ನಗಣ್ಯವಾಗಿದೆ. ಒಂದೆರಡು ವಾರದ ಹಿಂದೆ ಜಪಾನ್ನ ದೊಡ್ಡ ಕಂಪನಿಗಳು ತಮ್ಮ ಉದ್ಯೋಗಿಗಳೀಗೆ ಶೇ. 5.28ರಷ್ಟು ವೇತನ ಹೆಚ್ಚಳ ಮಾಡಲು ಅಂಗೀಕರಿಸಿವೆ. ಮೂರು ದಶಕದಲ್ಲೇ ಅತಿದೊಡ್ಡ ವೇತನ ಹೆಚ್ಚಳ ಅದಾಗಲಿದೆ.
ಸೆಂಟ್ರಲ್ ಬ್ಯಾಂಕ್ನ ಬಡ್ಡಿದರ ಶೇ. 5ರಷ್ಟು ಇದೆ ಎಂದರೆ, ಕಮರ್ಷಿಯಲ್ ಬ್ಯಾಂಕುಗಳು ಇಲ್ಲಿ ಠೇವಣಿ ಇರಿಸಿದರೆ ಪಡೆಯುವ ಬಡ್ಡಿ ಅದು. ಒಂದು ವೇಳೆ ಇದು ಸೊನ್ನೆಗಿಂತ ಕಡಿಮೆ ಇದ್ದರೆ ಅಲ್ಲಿ ಠೇವಣಿ ಇಡಲು ಆಗುವುದಿಲ್ಲ. ಬ್ಯಾಂಕುಗಳು ಬಡ್ಡಿರಹಿತವಾಗಿ ಗ್ರಾಹಕರಿಗೆ ಸಾಲ ಕೊಡಬೇಕಾಗುತ್ತದೆ. ಅಥವಾ ಸಾಲ ಪಡೆಯುವ ಗ್ರಾಹಕರಿಗೆ ಬ್ಯಾಂಕ್ನವರೇ ಉತ್ತೇಜಕವಾಗಿ ಬಡ್ಡಿ ಸೇರಿಸಿಕೊಡುತ್ತದೆ.
ಇದನ್ನೂ ಓದಿ: ಚೀನಾ ಕಂಡಂತಹ ಆರ್ಥಿಕ ಬೆಳವಣಿಗೆಯ ವೇಗ ಭಾರತದಿಂದ ಅಸಾಧ್ಯ: ಮಾರ್ಗನ್ ಸ್ಟಾನ್ಲೀ
ಜನರು ಹಣವನ್ನು ಬ್ಯಾಂಕ್ನಲ್ಲಿ ಇಡುವುದನ್ನು ತಪ್ಪಿಸಲು ಮತ್ತು ಎಲ್ಲಾ ಹಣವನ್ನೂ ಖರ್ಚು ಮಾಡಿ ಆರ್ಥಿಕತೆಗೆ ಪುಷ್ಟಿ ಸಿಗಲಿ ಎಂಬ ಉದ್ದೇಶದಿಂದ ಬಡ್ಡಿದರ ಕಡಿಮೆ ಮಾಡಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ