ವಿಜಯನಗರದ ಉಕ್ಕು ಕಾರ್ಖಾನೆ ವಿಶ್ವದಲ್ಲೇ ಅತಿದೊಡ್ಡದಾಗಿ ಅಭಿವೃದ್ಧಿ; ಜೆಎಸ್ಡಬ್ಲ್ಯುನಿಂದ ಕರ್ನಾಟಕದಲ್ಲಿ ಏನೆಲ್ಲಾ ಯೋಜನೆಗಳು.. ಇಲ್ಲಿದೆ ಡೀಟೇಲ್ಸ್
JSW investments in Karnataka: ಕರ್ನಾಟಕದ ವಿಜಯನಗರ ಉಕ್ಕು ಕಾರ್ಖಾನೆಯನ್ನು ವಿಶ್ವದ ಅತಿದೊಡ್ಡ ಉಕ್ಕು ಕಾರ್ಖಾನೆಯಾಗಿ ಅಭಿವೃದ್ಧಿಗೊಳಿಸುವುದಾಗಿ ಜೆಎಸ್ಡಬ್ಲ್ಯು ಗ್ರೂಪ್ ಹೇಳಿದೆ. ರಾಜ್ಯದಲ್ಲಿ ಒಟ್ಟು 1.2 ಲಕ್ಷ ಕೋಟಿ ರೂ ಹೂಡಿಕೆಯಲ್ಲಿ ವಿವಿಧ ಯೋಜನೆಗಳನ್ನು ಈ ಸಂಸ್ಥೆ ಹಮ್ಮಿಕೊಂಡಿದೆ. ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದ್ದು, ಜೆಎಸ್ಡಬ್ಲ್ಯು ಗ್ರೂಪ್ ಮುಖ್ಯಸ್ಥರು ತಮ್ಮದು ಕರ್ನಾಟಕ ಕರ್ಮಭೂಮಿ ಎಂದು ಬಣ್ಣಿಸಿದ್ದಾರೆ.

ಬೆಂಗಳೂರು, ಫೆಬ್ರುವರಿ 13: ಭಾರತದ ಅತಿದೊಡ್ಡ ಉದ್ಯಮ ಸಮೂಹಗಳಲ್ಲಿ ಒಂದೆನಿಸಿದ ಜೆಎಸ್ಡಬ್ಲ್ಯು ಮುಂಬೈ ಮೂಲದ್ದಾದರೂ ಕರ್ನಾಟಕದಲ್ಲಿ ಹೆಚ್ಚಿನ ಬಿಸಿನೆಸ್ಗಳನ್ನು ಹೊಂದಿದೆ. ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿರುವ ಜೆಎಸ್ಡಬ್ಲ್ಯು ಗ್ರೂಪ್ ಕರ್ನಾಟಕದಲ್ಲಿ ಮುಂದಿನ ಕೆಲ ವರ್ಷಗಳಲ್ಲಿ 1.2 ಲಕ್ಷ ಕೋಟಿ ರೂಗೂ ಅಧಿಕ ಹೂಡಿಕೆ ಮಾಡಲು ನಿರ್ಧರಿಸಿದೆ. ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಸಂಸ್ಥೆಯು ಕರ್ನಾಟಕ ಸರ್ಕಾರದೊಂದಿಗೆ ಎಂಒಯುಗೆ ಸಹಿಹಾಕಿದೆ.
ವಿಜಯನಗರದಲ್ಲಿರುವ ತನ್ನ ಉಕ್ಕು ಕಾರ್ಖಾನೆಯನ್ನು ಅತ್ಯಾಧುನಿಕ ರೀತಿಯಲ್ಲಿ ಸಜ್ಜುಗೊಳಿಸಲಿದೆ. ವಿಶ್ವದಲ್ಲೇ ಅತಿದೊಡ್ಡ ಮತ್ತು ಅತಿ ಆಧುನಿಕ ಉಕ್ಕು ಕಾರ್ಖಾನೆಯಾಗಿ ಇದು ಪರಿವರ್ತನೆಯಾಗಲಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ರೋಬೋಟಿಕ್ಸ್ಗಳನ್ನು ಬಳಸಲಾಗುತ್ತದೆ. ಅತ್ಯುನ್ನತ ಮಟ್ಟದ ಎಲೆಕ್ಟ್ರಿಕಲ್ ಸ್ಟೀಲ್ ಉತ್ಪಾದನೆ ಇಲ್ಲಿ ನಡೆಯಲಿದೆ. ಈ ಸ್ಟೀಲ್ ಘಟಕ ಅಭಿವೃದ್ಧಿಗೆ ಜೆಎಸ್ಡಬ್ಲ್ಯು 43,000 ಕೋಟಿ ರೂ ಹೂಡಿಕೆ ಮಾಡಲಿದೆ.
ಇದನ್ನೂ ಓದಿ: ಇನ್ವೆಸ್ಟ್ ಕರ್ನಾಟಕ: ವೋಲ್ವೋ ಕಂಪನಿಯಿಂದ 1,400 ಕೋಟಿ ರೂ ಹೂಡಿಕೆ, ಸಿಎಂ ಸಮ್ಮುಖದಲ್ಲಿ ಒಡಂಬಡಿಕೆಗೆ ಸಹಿ
ಮೇಕ್ ಇನ್ ಇಂಡಿಯಾ ಜೊತೆಗೆ ಮೇಕ್ ಇನ್ ಕರ್ನಾಟಕ ಮತ್ತು ಮೇಕ್ ಫಾರ್ ದಿ ವರ್ಲ್ಡ್ ಮಂತ್ರ ಅಳವಡಿಸಿಕೊಂಡಿರುವ ಜೆಎಸ್ಡಬ್ಲ್ಯು ಗ್ರೂಪ್ ಸಂಸ್ಥೆಯ ಛೇರ್ಮನ್ ಸಜ್ಜನ್ ಜಿಂದಾಲ್ ಅವರು ಕರ್ನಾಟಕವನ್ನು ತಮ್ಮ ಕರ್ಮಭೂಮಿ ಎಂದು ಕರೆದಿದ್ದಾರೆ. ರಾಜ್ಯದಲ್ಲಿ ಇರುವ ಹೂಡಿಕೆ ಸ್ನೇಹಿ ವಾತಾವರಣ, ಉತ್ತಮ ಆಡಳಿತ ನೀತಿ, ಕೌಶಲ್ಯವಂತ ಕೆಲಸಗಾರರ ಸಮೂಹ ಇವೆಲ್ಲವನ್ನೂ ಅವರು ಪ್ರಶಂಸಿಸಿದ್ದಾರೆ.
ಕರ್ನಾಟಕದಲ್ಲಿ ಜೆಎಸ್ಡಬ್ಲ್ಯೂ ಹೂಡಿಕೆ ಮಾಡಲಿರುವ ಯೋಜನೆಗಳಿವು…
- ವಿಜಯನಗರದ ಉಕ್ಕು ಕಾರ್ಖಾನೆಗೆ ಆಧುನಿಕ ಸ್ಪರ್ಶ: 43,000 ಕೋಟಿ ರೂ ಹೂಡಿಕೆ
- ಸೌರಶಕ್ತಿ, ವಾಯು ಶಕ್ತಿ, ಹೈಡ್ರೋಜನ್ ಶಕ್ತಿ ಉತ್ಪಾದನೆಗೆ 56,000 ಕೋಟಿ ರೂ ಹೂಡಿಕೆ
- ಮಂಗಳೂರು ಬಂದರು ಸಾಮರ್ಥ್ಯ ವೃದ್ಧಿಗೆ ಮತ್ತು ಕೇನಿ ಗ್ರಾಮದಲ್ಲಿ 30 ಎಂಟಿಪಿಎ ಪೋರ್ಟ್ ಸ್ಥಾಪನೆಗೆ 4,350 ಕೋಟಿ ರೂ ಹೂಡಿಕೆ
- ಜೆಎಸ್ಡಬ್ಲ್ಯು ಸಿಮೆಂಟ್ನ ಸಾಮರ್ಥ್ಯವನ್ನು 4 ಎಂಟಿಪಿಎಗೆ ಏರಿಸಲು ಮತ್ತು ಪರಿಸರಸ್ನೇಹಿ ಮತ್ತು ಸದೃಢ ಸಿಮೆಂಟ್ನ ಉತ್ಪಾದನೆಗೆ 950 ಕೋಟಿ ರೂ ಹೂಡಿಕೆ
- ಜೆಎಸ್ಡಬ್ಲ್ಯು ಪೇಂಟ್ಸ್ನ ಕರ್ನಾಟಕ ಫ್ಯಾಕ್ಟರಿಯ ಉತ್ಪಾದನಾ ಸಾಮರ್ಥ್ಯವನ್ನು 1.6 ಲಕ್ಷ ಕೆಎಲ್ನಿಂದ 3 ಲಕ್ಷ ಕೆಎಲ್ಗೆ ಹೆಚ್ಚಿಸಲು 500 ಕೋಟಿ ರೂ ಹೂಡಿಕೆ.
ಇದನ್ನೂ ಓದಿ: ಎಪ್ಸಿಲಾನ್ ಗ್ರೂಪ್ನಿಂದ ಕರ್ನಾಟಕದಲ್ಲಿ 15,350 ಕೋಟಿ ರೂ ಬಂಡವಾಳ; ಇವಿ ಬ್ಯಾಟರಿ ಭಾಗಗಳ ತಯಾರಿಕೆಗೆ ಹೂಡಿಕೆ
ಈ ಮೇಲಿನ ಬಿಸಿನೆಸ್ಗಳಲ್ಲಿ ಹೂಡಿಕೆ ಮಾಡುವುದಷ್ಟೇ ಅಲ್ಲ, ಬೇರೆ ಬೇರೆ ರೀತಿಯ ಸಾಮಾಜಿಕ, ಆರೋಗ್ಯ ಮತ್ತಿತರ ಸಮಾಜಮುಖಿ ಕೈಂಕರ್ಯಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ಜೆಎಸ್ಡಬ್ಲ್ಯು ಗ್ರೂಪ್ ಸ್ಪಷ್ಟಪಡಿಸಿದೆ. ಕ್ರೀಡೆ, ಪಾರಂಪರಿಕ ಸಂರಕ್ಷಣೆ, ಸಾಮುದಾಯಕ ಕಲ್ಯಾಣ ಕ್ಷೇತ್ರದ ಯೋಜನೆಗಳು, ಶಿಕ್ಷಣ, ಆರೋಗ್ಯ, ಕೌಶಲ್ಯಾಭಿವೃದ್ಧಿ, ಪರಿಸರ ಇತ್ಯಾದಿ ಕ್ಷೇತ್ರಗಳ ಜೆಎಸ್ಡಬ್ಲ್ಯು ವಿವಿಧ ಯೋಜನೆಗಳನ್ನು ನಡೆಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ