ಎಪ್ಸಿಲಾನ್ ಗ್ರೂಪ್ನಿಂದ ಕರ್ನಾಟಕದಲ್ಲಿ 15,350 ಕೋಟಿ ರೂ ಬಂಡವಾಳ; ಇವಿ ಬ್ಯಾಟರಿ ಭಾಗಗಳ ತಯಾರಿಕೆಗೆ ಹೂಡಿಕೆ
Epsilon Group to manufacture EV battery materials in Karnataka: ಮುಂಬೈ ಮೂಲದ ಎಪ್ಸಿಲಾನ್ ಗ್ರೂಪ್ ಸಂಸ್ಥೆ ಕರ್ನಾಟಕದಲ್ಲಿ ಇವಿ ಬ್ಯಾಟರಿ ಭಾಗಗಳ ತಯಾರಿಕೆಗೆ ಘಟಕಗಳನ್ನು ಸ್ಥಾಪಿಸಲಿದೆ. ಆರ್ ಅಂಡ್ ಡಿ ಮತ್ತು ಟೆಸ್ಟಿಂಗ್ ಸೆಂಟರ್ಗಳನ್ನೂ ಸ್ಥಾಪಿಸಲಿದೆ. ಮುಂದಿನ 10 ವರ್ಷದಲ್ಲಿ ಒಟ್ಟು 15,350 ಕೋಟಿ ರೂ ಹೂಡಿಕೆಗೆ ಬದ್ಧವಾಗಿದೆ. ಭಾರತದ ಇವಿ ಉದ್ಯಮದ ಚೀನಾ ಅವಲಂಬನೆ ಕಡಿಮೆ ಮಾಡಲು ಇದು ಸಹಕಾರಿಯಾಗಬಹುದು.

ಬೆಂಗಳೂರು, ಫೆಬ್ರುವರಿ 13: ಬ್ಯಾಟರಿ ಬಿಡಿಭಾಗಗಳನ್ನು ತಯಾರಿಸುವುದರಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಎಪ್ಸಿಲಾನ್ ಗ್ರೂಪ್ ಇದೀಗ ಕರ್ನಾಟಕದಲ್ಲಿ ತನ್ನ ಉಪಸ್ಥಿತಿ ಹೆಚ್ಚಿಸಲಿದೆ. ರಾಜ್ಯದಲ್ಲಿ ಅದು 15,350 ಕೋಟಿ ರೂ ಹೂಡಿಕೆ ಮಾಡಲು ನಿರ್ಧರಿಸಿದೆ. ಬ್ಯಾಟರಿಯ ಪ್ರಮುಖ ಭಾಗಗಳ ತಯಾರಿಕೆ, ರಿಸರ್ಚ್ ಸೌಲಭ್ಯ, ಇವಿ ಬ್ಯಾಟರಿ ವಸ್ತುಗಳ ಪರೀಕ್ಷಾ ಘಟಕ ಇತ್ಯಾದಿಗಳನ್ನು ಸ್ಥಾಪಿಸಲಿದೆ. ಮುಂದಿನ ಹತ್ತು ವರ್ಷಗಳಲ್ಲಿ ಹಂತ ಹಂತವಾಗಿ ಈ ಯೋಜನೆಗಳು ಜಾರಿಗೆ ಬರಲಿವೆ. ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಎಪ್ಸಿಲಾನ್ ಗ್ರೂಪ್ ಕರ್ನಾಟಕ ಸರ್ಕಾರದೊಂದಿಗೆ ಈ ಸಂಬಂಧ ಎಂಒಯುಗೆ ಸಹಿ ಹಾಕಿದೆ.
ಎಪ್ಸಿಲಾನ್ ಗ್ರೂಪ್ನಿಂದ ಆಗುವ ಈ ಹೂಡಿಕೆಯು ಭಾರತದಲ್ಲಿ ಇವಿ ಇಕೋಸಿಸ್ಟಂಗೆ ಪುಷ್ಟಿ ಸಿಕ್ಕಂತಾಗುತ್ತದೆ. ಚೀನಾದ ಮೇಲಿನ ಆಮದು ಅವಲಂಬನೆ ಕಡಿಮೆ ಮಾಡಲು ಸಹಾಯವಾಗುತ್ತದೆ.
ಎಪ್ಸಿಲಾನ್ ಗ್ರೂಪ್ಗೆ ಸೇರಿದ ಎಪ್ಸಿಲಾನ್ ಅಡ್ವಾನ್ಸ್ಡ್ ಮೆಟೀರಿಯಲ್ಸ್, ಎಪ್ಸಿಲಾನ್ ಕ್ಯಾಮ್ ಪ್ರೈ ಲಿ, ಇನ್ಸ್ಪೈರ್ ಎನರ್ಜಿ ರಿಸರ್ಚ್ ಸೆಂಟರ್ ಪ್ರೈ ಲಿ ಸಂಸ್ಥೆಗಳು ರಾಜ್ಯದಲ್ಲಿ ವಿವಿಧ ಘಟಕಗಳನ್ನು ಸ್ಥಾಪಿಸಿ ಬ್ಯಾಟರಿ ನಿರ್ಮಾಣ ಕ್ಷೇತ್ರಕ್ಕೆ ಪುಷ್ಟಿ ಕೊಡುವ ಕಾರ್ಯ ಮಾಡಲಿವೆ.
ಇದನ್ನೂ ಓದಿ: Invest Karnataka: ಜಿಂದಾಲ್ ಗ್ರೂಪ್ಗೆ ‘ದಶಕದ ಹೂಡಿಕೆದಾರ’ ಪ್ರಶಸ್ತಿ ಕೊಟ್ಟ ಕರ್ನಾಟಕ ಸರ್ಕಾರ
ಎಪ್ಸಿಲಾನ್ ಅಡ್ವಾನ್ಸ್ಡ್ ಮೆಟೀರಿಯಲ್ಸ್ ಮತ್ತು ಎಪ್ಸಿಲಾನ್ ಕ್ಯಾಮ್ ಪ್ರೈ ಲಿ ಸಂಸ್ಥೆಗಳು ಗ್ರಾಫೈಟ್ ಆನೋಡ್ ಮತ್ತು ಎಲ್ಎಫ್ಪಿ ಕ್ಯಾಥೋಡ್ ಬ್ಯಾಟರಿ ವಸ್ತುಗಳನ್ನು ತಯಾರಿಸಲಿವೆ. ಇನ್ಸ್ಪೈರ್ ಎನರ್ಜಿ ರಿಸರ್ಚ್ ಸೆಂಟರ್ ಸಂಸ್ಥೆಯು ಆರ್ ಅಂಡ್ ಡಿ ಕಾರ್ಯದತ್ತ ಗಮನ ಕೊಡಲಿದೆ. ಹಾಗೆಯೇ, ಇವಿ ಬ್ಯಾಟರಿ ವಸ್ತುಗಳ ಪರೀಕ್ಷಾ ಸೌಲಭ್ಯ ನೀಡುತ್ತದೆ. ಬ್ಯಾಟರಿ ತಯಾರಕರಿಗೆ ತರಬೇತಿ ಕೊಡುತ್ತದೆ.
ಗ್ರಾಫೈಟ್ ಆನೋಡ್ ತಯಾರಕಾ ಘಟಕ ಸ್ಥಾಪನೆಗೆ 9,000 ಕೋಟಿ ರೂ, ಎಲ್ಎಫ್ಪಿ ಕ್ಯಾಥೋಡ್ ತಯಾರಕಾ ಘಟಕಕ್ಕೆ 6,000 ಕೋಟಿ ರೂ ಹೂಡಿಕೆ ಮಾಡಲಿದೆ. ಆರ್ ಅಂಡ್ ಡಿ, ಟೆಸ್ಟಿಂಗ್ ಸೆಂಟರ್ ಮತ್ತು ಟ್ರೈನಿಂಗ್ ಸೆಂಟರ್ಗೆ 350 ಕೋಟಿ ರೂ ಹೂಡಿಕೆ ಮಾಡಲಿದೆ.
ಎಪ್ಸಿಲಾನ್ ಗ್ರೂಪ್ ಮುಂಬೈ ಮೂಲದ್ದಾಗಿದ್ದು, ಕರ್ನಾಟಕದಲ್ಲಿ ಹೆಚ್ಚಿನ ಉಪಸ್ಥಿತಿ ಹೊಂದಿದೆ. ವಿಕ್ರಮ್ ಹಂಡಾ ಅವರು ಈ ಕಂಪನಿಯ ಸಂಸ್ಥಾಪಕರು ಮತ್ತು ಎಂಡಿಯೂ ಆಗಿದ್ದಾರೆ.
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಕಾದ ಬ್ಯಾಟರಿಯ ತಯಾರಿಕೆಗೆ ಗ್ರಾಫೈಟ್ ಆನೋಡ್ ಮತ್ತು ಎಲ್ಎಫ್ಪಿ ಕ್ಯಾತೋಡ್ ವಸ್ತುಗಳು ಬಹಳ ಅಗತ್ಯ. ಇವುಗಳನ್ನು ಚೀನಾದಿಂದ ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗುತ್ತದೆ. ಎಪ್ಸಿಲಾನ್ ಗ್ರೂಪ್ ಸ್ಥಳೀಯವಾಗಿ ಈ ವಸ್ತುಗಳನ್ನು ತಯಾರಿಸುತ್ತದೆ. ಇದರಿಂದ ಭಾರತದ ಇವಿ ಉದ್ಯಮವು ಚೀನಾದ ಮೇಲೆ ಹೊಂದಿರುವ ಅವಲಂಬನೆಯ ಭಾರ ಸಾಕಷ್ಟು ತಗ್ಗುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ