Falcon scam: ಫಾಲ್ಕನ್ ಇನ್ವಾಯ್ಸ್ ಡಿಸ್ಕೌಂಟಿಂಗ್ ಹಗರಣ: ಸಾವಿರಾರು ಹೂಡಿಕೆದಾರರಲ್ಲಿ ಆತಂಕ
Falcon ID scam: ಹೈದರಾಬಾದ್ ಮೂಲದ ಫಾಲ್ಕನ್ ಇನ್ವಾಯ್ಸ್ ಡಿಸ್ಕೌಂಟಿಂಗ್ ಕಂಪನಿ ತನ್ನ ಕಚೇರಿಯ ಬಾಗಿಲು ಮುಚ್ಚಿದೆ. ನೂರಾರು ಹೂಡಿಕೆದಾರರ ಕೋಟಿ ಕೋಟಿ ರೂ ಹಣ ಇದರ ಬಿಸಿನೆಸ್ನಲ್ಲಿ ಹೂಡಿಕೆ ಆಗಿದೆ. ಬೆಂಗಳೂರು, ಹೈದರಾಬಾದ್ ಮೊದಲಾದ ಅನೇಕ ನಗರಗಳಲ್ಲಿ ಈ ಕಂಪನಿ ವಿರುದ್ಧ ದೂರು ದಾಖಲಾಗಿದೆ. ಸೈಬರಾಬಾದ್ ಪೊಲೀಸರು ಈ ಸಂಸ್ಥೆಯ ಮೇಲೆ ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ.

ಹೈದರಾಬಾದ್, ಫೆಬ್ರುವರಿ 13: ಫಾಲ್ಕನ್ ಇನ್ವಾಯ್ಸ್ ಡಿಸ್ಕೌಂಟಿಂಗ್ ಬಿಸಿನೆಸ್ ನಡೆಸುತ್ತಿದ್ದ ಫಾಲ್ಕನ್ ಸಂಸ್ಥೆ ಬಾಗಿಲು ಬಂದ್ ಮಾಡಿದೆ. ಹೈದರಾಬಾದ್ ಮೂಲದ ಫಾಲ್ಕನ್ ಇನ್ವಾಯ್ಸ್ ಡಿಸ್ಕೌಂಟಿಂಗ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದ ಸಾವಿರಾರು ಮಂದಿಗೆ ಈಗ ಆತಂಕ ಶುರುವಾಗಿದೆ. ಅಧಿಕ ರಿಟರ್ನ್ ಸಿಗುವ ಭರವಸೆಯಲ್ಲಿ ಜನರು ಸಾಕಷ್ಟು ಮೊತ್ತದ ಹೂಡಿಕೆ ಮಾಡಿದ್ದರೆನ್ನಲಾಗಿದೆ. ಹೈದರಾಬಾದ್ನ ಹೈಟೆಕ್ ಸಿಟಿಯಲ್ಲಿ ಐಷಾರಾಮ್ ಕಚೇರಿಯಲ್ಲಿ ಫಾಲ್ಕನ್ ಇತ್ತು. ಇದೀಗ ಬಾಗಿಲು ಮುಚ್ಚಿದೆ. ಕಂಪನಿಯ ಮಾಲೀಕರು, ಆಡಳಿತ ನಿರ್ವಾಹಕರು ಯಾರೂ ಸುಳಿವಿಲ್ಲದಂತೆ ತಪ್ಪಿಸಿಕೊಂಡಿದ್ದಾರೆ.
ಸೈಬರಾಬಾದ್ ಪೊಲೀಸರು ಕಂಪನಿಯ ಮ್ಯಾನೇಜ್ಮೆಂಟ್ ವಿರುದ್ಧ ಮೂರು ಕ್ರಿಮಿನಲ್ ಕೇಸ್ಗಳನ್ನು ದಾಖಲಿಸಿದ್ದಾರೆ. ಫಾಲ್ಕನ್ ಛೇರ್ಮನ್ ಅಮರದೀಪ್ ಕುಮಾರ್, ಮ್ಯಾನೇಜ್ಮೆಂಟ್ ಸಿಬ್ಬಂದಿಯವರಾದ ಯೋಗೇಂದರ್ ಸಿಂಗ್, ಆರ್ಯನ್ ಸಿಂಗ್, ಅನಿತಾ ಕುಮಾರ್ ಮೊದಲಾದ 20 ವ್ಯಕ್ತಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಶೇ. 24ರಷ್ಟು ಲಾಭದ ಆಸೆ ತೋರಿಸಿದ್ದ ಕಂಪನಿ
ಫಾಲ್ಕನ್ ಇನ್ವಾಯ್ಸ್ ಡಿಸ್ಕೌಂಟಿಂಗ್ ಕಂಪನಿ ತನ್ನ ಹೂಡಿಕೆದಾರರಿಗೆ ವರ್ಷಕ್ಕೆ ಶೇ. 24ರಷ್ಟು ರಿಟರ್ನ್ ಕೊಡುವ ಭರವಸೆ ನೀಡಿತ್ತೆನ್ನಲಾಗಿದೆ. ಅದರದ್ದೇ ಆದ ಮೊಬೈಲ್ ಆ್ಯಪ್ ಮತ್ತು ವೆಬ್ ಪ್ಲಾಟ್ಫಾರ್ಮ್ ಮೂಲಕ ಇದು ಹೂಡಿಕೆಗಳನ್ನು ಸಂಗ್ರಹಿಸುತ್ತಿತ್ತು. ಆಂಧ್ರ, ತೆಲಂಗಾಣ ಅಲ್ಲದೇ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮೊದಲಾದ ಬೇರೆ ಬೇರೆ ರಾಜ್ಯಗಳಿಂದಲೂ ಜನರು ಈ ಕಂಪನಿಯ ಸ್ಕೀಮ್ಗಳಲ್ಲಿ ಹಣ ತೊಡಗಿಸಿದ್ದರು. ದೂರದ ಹಿಮಾಚಲ, ಪಂಜಾಬ್, ಅರುಣಾಚಲ, ತ್ರಿಪುರಾ, ಲಡಾಖ್ ರಾಜ್ಯಗಳಿಂದಲು ಹೂಡಿಕೆದಾರರು ಆಕರ್ಷಿತರಾಗಿದ್ದರು.
ಇದನ್ನೂ ಓದಿ: SIP power: ಷೇರು ಮಾರುಕಟ್ಟೆಯನ್ನು ಕಾಪಾಡುತ್ತಿರುವ ಸಾಮಾನ್ಯ ಜನರ ಎಸ್ಐಪಿ
ಬೆಂಗಳೂರು ಮೊದಲಾದ ಹಲವು ನಗರಗಳಿಂದ ಹೂಡಿಕೆದಾರರು ಫಾಲ್ಕನ್ ವಿರುದ್ಧ ದೂರು ನೀಡಿದ್ದಾರೆ. ಮಾಹಿತಿ ಪ್ರಕಾರ ಈವರೆಗೆ 60 ದೂರುಗಳು ಬಂದಿವೆ. ಇವನ್ನು ಆಧರಿಸಿ, ಸೈಬರಾಬಾದ್ ಪೊಲೀಸರು ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ.
ಏನಿದು ಇನ್ವಾಯ್ಸ್ ಡಿಸ್ಕೌಂಟಿಂಗ್ ಬಿಸಿನೆಸ್?
ಒಂದು ಕಂಪನಿಯ ಇನ್ವಾಯ್ಸ್ ಅನ್ನು ಖರೀದಿಸಿ, ನಂತರದ ದಿನಗಳಲ್ಲಿ ಅದರಿಂದ ಹಣ ಮಾಡುವುದು ಇನ್ವಾಯ್ಸ್ ಡಿಸ್ಕೌಂಟಿಂಗ್ ಬಿಸಿನೆಸ್. ಉದಾಹರಣೆಗೆ, ಮ್ಯಾನುಫ್ಯಾಕ್ಚರಿಂಗ್ ಕಂಪನಿಯೊಂದು ಒಂದು ಉತ್ಪನ್ನದ ತಯಾರಿಕೆಗೆ ಗುತ್ತಿಗೆ ಪಡೆದಿದೆ ಎಂದಿಟ್ಟುಕೊಳ್ಳಿ. ಆ ಉತ್ಪನ್ನದ ತಯಾರಿಕೆಗೆ ಅಗತ್ಯವಾದ ಬಂಡವಾಳದ ಕೊರತೆ ಇದ್ದಾಗ ಆ ಕಂಪನಿಯು ಗುತ್ತಿಗೆ ಮೂಲಕ ಪಡೆದ ಇನ್ವಾಯ್ಸ್ ಅನ್ನು ಬೇರೊಂದು ಕಂಪನಿಗೆ ಮಾರಬಹುದು. ಇದಕ್ಕೆ ಇನ್ವಾಯ್ಸ್ ಡಿಸ್ಕೌಂಟಿಂಗ್ ಎನ್ನುವುದು. ಈ ಇನ್ವಾಯ್ಸ್ ಅನ್ನು ಖರೀದಿಸುವ ಸಂಸ್ಥೆಯು ಇದನ್ನು ಬಳಸಿ ಹೂಡಿಕೆದಾರರಿಂದ ಹಣ ಸಂಗ್ರಹಿಸಬಹುದು.
ಉದ್ಯಮ ವಲಯದಲ್ಲಿ ಈ ರೀತಿಯ ಇನ್ವಾಯ್ಸ್ ಡಿಸ್ಕೌಂಟಿಂಗ್ ವ್ಯವಹಾರಗಳು ಚಾಲ್ತಿಯಲ್ಲಿವೆ. ಕೆಲ ಸಂಸ್ಥೆಗಳು ಈ ಬಿಸಿನೆಸ್ನಲ್ಲಿ ನಷ್ಟ ಅನುಭವಿಸಿರುವುದುಂಟು. ಇನ್ನೂ ಹಲವು ಸಂಸ್ಥೆಗಳು ಇನ್ವಾಯ್ಸ್ ಡಿಸ್ಕೌಂಟಿಂಗ್ ಹೆಸರಿನಲ್ಲಿ ವಂಚನೆ ಎಸಗಿರುವುದುಂಟು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ