ಏಳು ಕೋಟಿಗೂ ಅಧಿಕ ರೈತರಿಗೆ ಕಿಸಾನ್ ಪೆಹಚಾನ್ ಪತ್ರ; ಏನಿದರ ವಿಶೇಷತೆ?

Kisan Pehchaan patra, multipurpose ID for farmers: ರೈತರ ರಾಷ್ಟ್ರೀಯ ನೊಂದಣಿ ರಚಿಸುತ್ತಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕಿಸಾನ್ ಪೆಹಚಾನ್ ಕಾರ್ಡ್ ಯೋಜನೆ ಜಾರಿ ತಂದಿದೆ. ಈಗಾಗಲೇ 16 ರಾಜ್ಯಗಳಿಂದ 7.4 ಕೋಟಿ ರೈತರಿಗೆ ಪೆಹಚಾನ್ ಕಾರ್ಡ್ ವಿತರಿಸಲಾಗಿದೆ. ಮತ್ತಷ್ಟು ರಾಜ್ಯಗಳಲ್ಲಿ ಈ ಅಭಿಯಾನ ನಡೆಯುತ್ತಿದೆ. ದೇಶಾದ್ಯಂತ ಅಂದಾಜು 14 ಕೋಟಿ ರೈತರಿದ್ದಾರೆ.

ಏಳು ಕೋಟಿಗೂ ಅಧಿಕ ರೈತರಿಗೆ ಕಿಸಾನ್ ಪೆಹಚಾನ್ ಪತ್ರ; ಏನಿದರ ವಿಶೇಷತೆ?
ರೈತ

Updated on: Nov 10, 2025 | 12:08 PM

ನವದೆಹಲಿ, ನವೆಂಬರ್ 10: ರೈತರಿಗೆ (farmer) ವಿಶೇಷ ಗುರುತಿನ ಚೀಟಿ ಕೊಡುವ ಕೇಂದ್ರ ಸರ್ಕಾರದ ಕಿಸಾನ್ ಪೆಹಚಾನ್ ಕಾರ್ಡ್ ಯೋಜನೆ (Kisan Pehchaan Patra) ಭರದಿಂದ ಸಾಗಿದೆ. ವರದಿಗಳ ಪ್ರಕಾರ 16 ರಾಜ್ಯಗಳಿಂದ 7.4 ಕೋಟಿ ರೈತರಿಗೆ ಈ ಐಡಿಯನ್ನು ನೀಡಲಾಗಿದೆ. ಈಗ ಪಂಜಾಬ್, ಹಿಮಾಚಲ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲೂ ಅಭಿಯಾನ ನಡೆಯುತ್ತಿದೆ. ಈ ಹಣಕಾಸು ವರ್ಷದೊಳಗೆ 9 ಕೋಟಿ ಕಿಸಾನ್ ಪೆಹಚಾನ್ ಕಾರ್ಡ್ ವಿತರಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ದೇಶಾದ್ಯಂತ ಒಂದು ಅಂದಾಜು ಪ್ರಕಾರ 14 ಕೋಟಿ ರೈತರಿದ್ದಾರೆ. ಇವರ ಪೈಕಿ ಶೇ. 30-40ರಷ್ಟು ಮಂದಿಗೆ ಸ್ವಂತ ಜಮೀನು ಇಲ್ಲ. ಇವರು ಗುತ್ತಿಗೆ ಪಡೆದು ಕೃಷಿಗಾರಿಕೆ ಮಾಡುತ್ತಿದ್ದಾರೆ. ಸ್ವಂತ ಜಮೀನು ಹೊಂದಿರುವ ರೈತರಿಗೆ ಪೆಹಚಾನ್ ಕಾರ್ಡ್ ಕೊಡಲಾಗುತ್ತದೆ.

ಇದನ್ನೂ ಓದಿ: ನಿರೀಕ್ಷೆಮೀರಿಸುತ್ತದಾ ಭಾರತದ ಈ ವರ್ಷದ ಆರ್ಥಿಕ ಬೆಳವಣಿಗೆ?; ವಿ ಅನಂತನಾಗೇಶ್ವರನ್ ವಿಶ್ವಾಸ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ 11.2 ಕೋಟಿ ಮಂದಿ ನೊಂದಾಯಿಸಿಕೊಂಡಿದ್ದಾರೆ. ಇವರೆಲ್ಲರೂ ಕೂಡ ಕಿಸಾನ್ ಪೆಹಚಾನ್ ಕಾರ್ಡ್​ಗಳನ್ನು ಪಡೆಯಲು ಅರ್ಹರಾಗಿರಬಹುದು. 2026-27ರ ವರ್ಷದೊಳಗೆ 11 ಕೋಟಿ ಕಿಸಾನ್ ಪೆಹಚಾನ್ ಕಾರ್ಡ್ ವಿತರಿಸುವ ಗುರಿ ಇಡಲಾಗಿದೆ.

ಕಿಸಾನ್ ಪೆಹಚಾನ್ ಕಾರ್ಡ್ ಮೂಲಕ ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ರೈತರ ಡಿಜಿಟಲ್ ರಿಜಿಸ್ಟ್ರಿಯನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ. ಡಿಜಿಟಲ್ ಅಗ್ರಿಕಲ್ಚರ್ ಮಿಷನ್ ಅಡಿಯಲ್ಲಿ ಈ ಹೆಜ್ಜೆ ಇಡಲಾಗುತ್ತಿದೆ. ಈ ಡಿಜಿಟಲ್ ಅಗ್ರಿಕಲ್ಚರ್ ಮಿಷನ್ ಅಡಿಯಲ್ಲಿ ರೈತರಿಗೆ ಹಲವ ಯೋಜನೆಗಳನ್ನು ವಿತರಿಸಲು ಅನುಕೂಲವಾಗುತ್ತದೆ. ಹೀಗಾಗಿ, ರೈತರನ್ನು ಗುರುತಿಸಿ ಕಿಸಾನ್ ಪೆಹಚಾನ್ ಕಾರ್ಡ್​ಗಳನ್ನು ವಿತರಿಸುವುದು ಬಹಳ ಮುಖ್ಯ ಹೆಜ್ಜೆ ಎನ್ನಲಾಗಿದೆ. ಪಿಎಂ ಕಿಸಾನ್ ಸೇರಿದಂತೆ ರೈತರಿಗೆ ಸರ್ಕಾರ ರೂಪಿಸುವ ವಿವಿಧ ಯೋಜನೆಗಳಿಗೆ ಈ ಕಾರ್ಡ್ ಮುಖ್ಯ ದಾಖಲೆಯಾಗಿ ಅಥವಾ ಆಧಾರವಾಗಿ ಇರುತ್ತದೆ.

ಇದನ್ನೂ ಓದಿ: ಸ್ಕ್ರ್ಯಾಪ್​ಗಳನ್ನು ಮಾರಿ ಒಂದೇ ತಿಂಗಳಲ್ಲಿ 800 ಕೋಟಿ ರೂ ಗಳಿಸಿದ ಸರ್ಕಾರ; 4 ವರ್ಷದಲ್ಲಿ ಬಂದ ಆದಾಯ 4,000 ಕೋಟಿ ರೂಗೂ ಹೆಚ್ಚು

ಅತಿಹೆಚ್ಚು ರೈತರಿಗೆ ಈ ಗುರುತಿನ ಕಾರ್ಡ್ ವಿತರಿಸಿರುವುದು ಉತ್ತರ ಪ್ರದೇಶ ರಾಜ್ಯ. ಇಲ್ಲಿ 1.56 ಕೋಟಿ ರೈತರಿಗೆ ಪೆಹಚಾನ್ ಕಾರ್ಡ್ ಕೊಡಲಾಗಿದೆ. ಮಹಾರಾಷ್ಟ್ರದಲ್ಲೂ ಕೋಟಿಗಿಂತ ಹೆಚ್ಚು ರೈತರಿಗೆ ಕಾರ್ಡ್ ಕೊಡಲಾಗಿದೆ. ಮಧ್ಯಪ್ರದೇಶ ರಾಜಸ್ಥಾನ್, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲೂ ಸಾಕಷ್ಟು ಪೆಹಚಾನ್ ಕಾರ್ಡ್​ಗಳನ್ನು ವಿತರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us