ಮೋದಿಕೇರ್ ಮುಖ್ಯಸ್ಥ ಸಮೀರ್ ಕೈಬೆರಳು ಮುರಿದುಹಾಕಿಸಿದ್ರಾ ಹೆತ್ತ ತಾಯಿ? ಮತ್ತೊಂದು ಬಿಸಿನೆಸ್ ಫ್ಯಾಮಿಲಿ ಹಾದಿರಂಪ, ಬೀದಿರಂಪ; ಏನಿದು ವ್ಯಾಜ್ಯ?

|

Updated on: Jun 02, 2024 | 12:19 PM

Samir Modi's index finger broken into 2 pieces: ಗಾಡ್​ಫ್ರೇ ಫಿಲಿಪ್ಸ್ ಎಂಬ ತಂಬಾಕು ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸಮೀರ್ ಮೋದಿ ತಮ್ಮ ಸಂಸ್ಥೆಯ ಮಂಡಳಿ ಸಭೆಗೆ ಹೋಗಿದ್ದಾಗ ಹಲ್ಲೆಯಾಗಿದೆ. ಅವರ ತಾಯಿಯ ಸೆಕ್ಯೂರಿಟಿ ತಂಡದವರು ಸಮೀರ್ ಕೈಬೆರಳೊಂದನ್ನು ಮುರಿದಿರುವುದು ಬೆಳಕಿಗೆ ಬಂದಿದೆ. ತನ್ನ ತಾಯಿಯೇ ಪೂರ್ವಯೋಜಿತವಾಗಿ ಈ ಹಲ್ಲೆ ಮಾಡಿಸಿದ್ದಾರೆ ಎಂದು ಸಮೀರ್ ಆರೋಪಿಸಿದ್ದಾರೆ. 11,000 ಕೋಟಿ ರೂ ಷೇರುಸಂಪತ್ತಿನ ಗಾಡ್​ಫ್ರೇ ಫಿಲಿಪ್ಸ್ ಕಂಪನಿಯ ಮಾಲೀಕರ ಕುಟುಂಬದಲ್ಲಿ ನಡೆದಿರುವ ಕಲಹದ ಒಂದು ಭಾಗ ಇದು.

ಮೋದಿಕೇರ್ ಮುಖ್ಯಸ್ಥ ಸಮೀರ್ ಕೈಬೆರಳು ಮುರಿದುಹಾಕಿಸಿದ್ರಾ ಹೆತ್ತ ತಾಯಿ? ಮತ್ತೊಂದು ಬಿಸಿನೆಸ್ ಫ್ಯಾಮಿಲಿ ಹಾದಿರಂಪ, ಬೀದಿರಂಪ; ಏನಿದು ವ್ಯಾಜ್ಯ?
ಸಮೀರ್ ಮೋದಿ
Follow us on

ನವದೆಹಲಿ, ಜೂನ್ 2: ಆಸ್ತಿ ವ್ಯಾಜ್ಯ ಬಡವರು, ಶ್ರೀಮಂತರು ಎನ್ನದೆ ಎಲ್ಲರೊಳಗೂ ಇರುವ ಬಾಧೆ. ಕೆಲವರು ತಾಳ್ಮೆ, ಶಾಂತಿಯಿಂದ ಬಗೆಹರಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ಹಾದಿರಂಪ, ಬೀದಿರಂಪ ಮಾಡಿಕೊಳ್ಳುತ್ತಾರೆ. ಕೆಲ ಲಕ್ಷ ರೂ ಬೆಲೆ ಬಾಳುವ ಆಸ್ತಿಗೆಯೇ ಕಚ್ಚಾಡಿಕೊಳ್ಳುವವರಿರುವಾಗ ಸಾವಿರಾರು ಕೋಟಿ ರೂ ಆಸ್ತಿ ಇರುವ ದೊಡ್ಡದೊಡ್ಡ ಬಿಸಿನೆಸ್ ಫ್ಯಾಮಿಲಿಗಳು ಹೇಗಿರಬೇಡ? ಇತ್ತೀಚಿನ ದಿನಗಳಲ್ಲಿ ಕೆಲ ಬಿಸಿನೆಸ್ ಫ್ಯಾಮಿಲಿಯೊಳಗಿನ ಒಡಕು ಬಹಿರಂಗವಾಗಿದೆ. ಈ ಪಟ್ಟಿಗೆ ಈಗ ಮೋದಿ ಕುಟುಂಬ ಸೇರಿದೆ. ದೇಶ ಬಿಟ್ಟು ಹೋಗಿರುವ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ (Lalit Modi) ಅವರ ಕುಟುಂಬ ಇದು. ಗಾಡ್​ಫ್ರೇ ಫಿಲಿಪ್ಸ್ (Godfrey Phillips) ಎಂಬ ತಂಬಾಕು ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸಮೀರ್ ಮೋದಿ (Samir Modi) ಅವರ ಮೇಲೆ ಹಲ್ಲೆಯಾಗಿರುವುದು ನಿನ್ನೆ ಬೆಳಕಿಗೆ ಬಂದಿದೆ. ಸಮೀರ್ ಅವರ ತೋರು ಬೆರಳು ಎರಡಾಗಿ ತುಂಡಾಗಿದೆ. ಹೆತ್ತ ತಾಯಿಯೇ ಈ ಹಲ್ಲೆ ಮಾಡಿಸಿದ್ದಾಳೆ ಎಂದು ಸಮೀರ್ ಮೋದಿ ಆರೋಪಿಸಿದ್ದಾರೆ. ವಿದೇಶದಲ್ಲಿರುವ ಲಲಿತ್ ಮೋದಿ ಕೂಡ ತನ್ನ ಸಹೋದರಿನಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

ಸಮೀರ್ ಮೋದಿ ಮತ್ತು ತಾಯಿ ನಡುವಿನ ವ್ಯಾಜ್ಯ ಏನು?

ಮೋದಿ ಕೇರ್, ಗಾಡ್​ಫ್ರೇ ಫಿಲಿಪ್ಸ್ ಇತ್ಯಾದಿ ಕಂಪನಿಗಳನ್ನು ಕಟ್ಟಿ ಬೆಳೆಸಿದ ಹಿರಿಯ ಉದ್ಯಮಿ ಕೃಷ್ಣಕುಮಾರ್ ಮೋದಿ ಅಥವಾ ಕೆಕೆ ಮೋದಿ 2019ರಲ್ಲಿ ಅಸುನೀಗುತ್ತಾರೆ. ಗಾಡ್​ಫ್ರೇ ಫಿಲಿಪ್ಸ್ ಒಂದು ತಂಬಾಕು ಕಂಪನಿಯಾಗಿದ್ದು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿದೆ. ಇದರಲ್ಲಿ ಮೋದಿ ಕುಟುಂಬದ ಪಾಲು ಶೇ. 50ರಷ್ಟಿದೆ.

ಕೆಕೆ ಮೋದಿ ನಿಧನರಾಗುವ ಮುನ್ನವೇ ಫ್ಯಾಮಿಲಿ ಟ್ರಸ್ಟ್ ಒಪ್ಪಂದ ಮಾಡಿರುತ್ತಾರೆ. ಅದರ ಪ್ರಕಾರ ತಾನು ನಿಧನರಾದ ಬಳಿಕ ಮಕ್ಕಳಲ್ಲಿ ಯಾರೇ ಆದರೂ ಬಯಸಿದಲ್ಲಿ ಕುಟುಂಬದ ಆಸ್ತಿಯನ್ನು ಹಂಚಿಕೆ ಮಾಡಬೇಕು ಎಂದಿರುತ್ತದೆ. ಪತ್ನಿ ಹಾಗೂ ಮೂವರು ಮಕ್ಕಳಿಗೆ ಸಮಾನವಾಗಿ ಆಸ್ತಿ ಹಂಚಿಕೆ ಆಗಬೇಕು ಎಂದು ಹೇಳಿರುತ್ತಾರೆ. ಇಲ್ಲಿ ಕೆಕೆ ಮೋದಿ ಅವರಿಗೆ ಪತ್ನಿ ಬೀನಾ ಮೋದಿ ಇದ್ದಾರೆ. ಲಲಿತ್ ಮೋದಿ, ಸಮೀರ್ ಮೋದಿ ಮತ್ತು ಮಗಳು ಚಾರು ಈ ಮೂವರು ಮಕ್ಕಳಿದ್ದಾರೆ.

ಇದನ್ನೂ ಓದಿ: ಅಮೆರಿಕಕ್ಕೆ ಹೋಗಿ ಭೂಮಿತ್ರ ಮೂಲಕ ರೈತರಿಗೆ ಡಬಲ್ ಧಮಾಕ ಸೃಷ್ಟಿಸುತ್ತಿರುವ ಕನ್ನಡಿಗ ಆದಿತ್ ಮೂರ್ತಿ

ನಾಲ್ವರಿಗೆ ಸಮಾನವಾಗಿ ಆಸ್ತಿ ಹಂಚಿಕೆ ಆಗಬೇಕು. ಕೆಕೆ ಮೋದಿ ನಿಧನ ಹೊಂದಿದ್ದಾಗಲೇ ಲಲಿತ್ ಮೋದಿ ಆಸ್ತಿ ಪಾಲಿಗೆ ಕೋರಿಕೆ ಸಲ್ಲಿಸಿದ್ದರು. ಇದಕ್ಕೆ ತಾಯಿ ಬೀನಾ ಒಪ್ಪಿರಲಿಲ್ಲ. 11,000 ಕೋಟಿ ರೂಗೂ ಹೆಚ್ಚಿನ ಷೇರು ಸಂಪತ್ತಿರುವ ಗಾಡ್​ಫ್ರೇ ಫಿಲಿಪ್ಸ್​ನಲ್ಲಿ ಹೆಚ್ಚೂಕಡಿಮೆ 6,000 ಕೋಟಿ ರೂನಷ್ಟು ಷೇರುಸಂಪತ್ತು ಮೋದಿ ಕುಟುಂಬಕ್ಕೆ ಸೇರುತ್ತದೆ. ಇದರಲ್ಲಿ ಪಾಲು ಹಂಚಿಕೆ ಆಗಬೇಕು ಎಂಬುದು ಬೇಡಿಕೆ.

2019ರಲ್ಲಿ ಲಲಿತ್ ಮೋದಿ ಆಸ್ತಿ ಹಂಚಿಕೆಗೆ ಧ್ವನಿ ಏರಿಸಿದಾಗ ಸಮೀರ್ ಮತ್ತು ಚಾರು ಇಬ್ಬರೂ ಆಗ ತಾಯಿ ಪರವಾಗಿದ್ದರು. ಈಗ ಮೂರೂ ಮಕ್ಕಳು ಕೂಡ ಆಸ್ತಿ ಹಂಚಿಕೆ ವಿಚಾರದಲ್ಲಿ ತಾಯಿಯ ನಿಲುವನ್ನು ವಿರೋಧಿಸುತ್ತಿದ್ದಾರೆ. ಲಲಿತ್ ಮೋದಿ ಸಿಂಗಾಪುರ ಕೋರ್ಟ್​ನಲ್ಲಿ ಕೇಸ್ ನಡೆಸುತ್ತಿದ್ದಾರೆ. ಸಮೀರ್ ಮೋದಿ ಸುಪ್ರೀಂಕೋರ್ಟ್​ನಲ್ಲಿ ಕೇಸ್ ಹಾಕಿದ್ದಾರೆ.

ಸಮೀರ್ ಕೈಬೆರಳು ಮುರಿದು ಹಾಕಿಸಿದರಾ ತಾಯಿ?

ಗಾಡ್​ಫ್ರೇ ಫಿಲಿಪ್ಸ್ ಕಂಪನಿಯ ಬೋರ್ಡ್ ಮೀಟಿಂಗ್​ನಲ್ಲಿ ಪಾಲ್ಗೊಳ್ಳಲು ಸಮೀರ್ ಮೋದಿ ಪ್ರಯತ್ನಿಸಿದಾಗ ಬೀನಾ ಅವರ ಖಾಸಗಿ ಸೆಕ್ಯೂರಿಟಿ ತಂಡದವರು ತಡೆದಿದ್ದಾರೆ. ಈ ವೇಳೆ ನಡೆದ ಗಲಾಟೆಯಲ್ಲಿ ಸಮೀರ್ ಅವರ ತೋರು ಬೆರಳು ಎರಡಾಗಿ ತುಂಡಾಗಿದೆ.

ಇದನ್ನೂ ಓದಿ: ಏರ್ಟೆಲ್ ಪತನ ತಪ್ಪಿಸಿತು ಪಿಎಂ ಜೊತೆಗಿನ ಆ ಒಂದು ಭೇಟಿ..! ಮಿಟ್ಟಲ್​ಗೆ ಮೋದಿ ಹೇಳಿದ ಆ ಮಾತೇನು?

ತನ್ನನ್ನು ಗಾಡ್​ಫ್ರೇ ಫಿಲಿಪ್ಸ್ ಕಂಪನಿಯಿಂದ ಹೊರಹಾಕಲು ಚಿತಾವಣೆ ನಡೆದಿದೆ. ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ತನ್ನನ್ನು ಇದೇ ಕಾರಣಕ್ಕೆ ಬೋರ್ಡ್ ಮೀಟಿಂಗ್​ನಲ್ಲಿ ಪಾಲ್ಗೊಳ್ಳಲು ತಡೆಯಲಾಗಿದೆ. ತನ್ನ ಮೇಲೆ ನಡೆದಿರುವುದು ಪೂರ್ವಯೋಜಿತ ಹಲ್ಲೆಯಾಗಿದೆ. ತಾಯಿ ಬೀನಾ ಅವರೇ ಈ ಕೆಲಸ ಮಾಡಿಸಿದ್ದಾರೆ ಎಂದು ಸಮೀರ್ ಮೋದಿ ಹೇಳಿದ್ದಾರೆ.

ಕೈ ಬೆರಳು ತುಂಡಾಗಿದ್ದರೂ ಸಮೀರ್ ಅವರು ಮೀಟಿಂಗ್ ಅಟೆಂಡ್ ಮಾಡಿದ್ದರು. ಬಳಿಕ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದಾರೆ. ತುಂಡಾಗಿರುವ ಅವರ ಬೆರಳನ್ನು ಸ್ಕ್ರೂ ಮೂಲಕ ಜೋಡಿಸಲಾಗಿದೆ. ಆದರೆ, ಬೆರಳು ಸಹಜ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಲಾಗದು.

ಲಲಿತ್ ಮೋದಿ ಮಾಡಿರುವ ಟ್ವೀಟ್

ಮಾಜಿ ಐಪಿಎಲ್ ಕಮಿಷನರ್ ಲಲಿತ್ ಮೋದಿ ವಿದೇಶದಿಂದಲೇ ತಮ್ಮ ಸೋದರನಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ತಾಯಿಯೇ ತನ್ನ ಸೆಕ್ಯೂರಿಟಿ ಕೈಯಿಂದ ಮಗನ ಬೆರಳು ಮುರಿಸಿರುವುದು ನಿಜಕ್ಕೂ ಆಘಾತಕಾರಿ ಎನಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ