ಅಮೆರಿಕಕ್ಕೆ ಹೋಗಿ ಭೂಮಿತ್ರ ಮೂಲಕ ರೈತರಿಗೆ ಡಬಲ್ ಧಮಾಕ ಸೃಷ್ಟಿಸುತ್ತಿರುವ ಕನ್ನಡಿಗ ಆದಿತ್ ಮೂರ್ತಿ

US Kannadiga Aadith Murthy CEO of Boomithra: ಕನ್ನಡಿಗ ಆದಿತ್ ಮೂರ್ತಿ 2016ರಲ್ಲಿ ಅಮೆರಿಕದಲ್ಲಿ ಸ್ಥಾಪಿಸಿದ ಭೂಮಿತ್ರ ಎಂಬ ಕಂಪನಿ ಈಗ ವಿಶ್ವದ ಅತ್ಯಂತ ಪ್ರಭಾವಿ ಕಂಪನಿಗಳಲ್ಲಿ ಒಂದಾಗಿದೆ. ರೈತರ ಜೀವನ ಹಸನುಗೊಳಿಸುವ ಮತ್ತು ಪರಿಸರ ರಕ್ಷಣೆ ಮಾಡುವ ಕೆಲಸವನ್ನು ಭೂಮಿತ್ರ ಮಾಡುತ್ತದೆ. ಮಣ್ಣಿನ ಫಲವತ್ತತೆ ಉಳಿಸಲು ಕಾರ್ಬನ್ ಬೇಕು. ವಾತಾವರಣದಿಂದ ಕಾರ್ಬನ್ ನೀಗಬೇಕು. ಉನ್ನತ ತಂತ್ರಜ್ಞಾನ ಬಳಸಿ ಈ ಎರಡನ್ನೂ ಒಂದೇ ಏಟಿಗೆ ಮಾಡುತ್ತದೆ ಭೂಮಿತ್ರ.

ಅಮೆರಿಕಕ್ಕೆ ಹೋಗಿ ಭೂಮಿತ್ರ ಮೂಲಕ ರೈತರಿಗೆ ಡಬಲ್ ಧಮಾಕ ಸೃಷ್ಟಿಸುತ್ತಿರುವ ಕನ್ನಡಿಗ ಆದಿತ್ ಮೂರ್ತಿ
ಆದಿತ್ ಮೂರ್ತಿ
Follow us
|

Updated on: May 31, 2024 | 12:12 PM

ಬೆಂಗಳೂರು, ಮೇ 31: ಅಮೆರಿಕದ ಭೂಮಿತ್ರ ಎಂಬ ಸಂಸ್ಥೆ ಟೈಮ್ಸ್ ಮ್ಯಾಗಝಿನ್​ನ ವಿಶ್ವದ ನೂರು ಅತ್ಯಂತ ಪ್ರಭಾವಿ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕರ್ನಾಟಕದ ಮೂಲದ ಆದಿತ್ ಮೂರ್ತಿ (Aadith Murthy) ಎಂಬುವವರು ಸ್ಥಾಪಿಸಿದ ಕಂಪನಿ ಇದು. ಆಫ್ರಿಕಾ, ಏಷ್ಯಾ ಮತ್ತು ದಕ್ಷಿಣ ಅಮೆರಿಕದ ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿನ ರೈತರ ಬಾಳಿಗೆ ಮತ್ತು ಒಟ್ಟಾರೆ ಪರಿಸರಕ್ಕೆ ಭೂಮಿತ್ರ (Boomitra) ಬೆಳಕಾಗಿದೆ. ಮಣ್ಣಿನ ಫಲವತ್ತತೆಗೆ ಕಾರ್ಬನ್ ಅಥವಾ ಇಂಗಾಲ ಅಗತ್ಯ. ರೈತರು ತಮ್ಮ ಜಮೀನಿನ ಮಣ್ಣಿನಲ್ಲಿ ಹೆಚ್ಚು ಕಾರ್ಬನ್ ಹಿಡಿದಿಟ್ಟುಕೊಳ್ಳಲು (carbon) ಭೂಮಿತ್ರ ಸಹಾಯ ಮಾಡುತ್ತದೆ. ಇದರಿಂದ ಪರಿಸರದಲ್ಲಿರುವ ಇಂಗಾಲ ಪ್ರಮಾಣ ಕಡಿಮೆಯೂ ಆಗುತ್ತದೆ. ಜೊತೆಗೆ, ಕೈಗಾರಿಕೆಗಳಿಗೆ ಅಗತ್ಯ ಇರುವ ಕಾರ್ಬನ್ ಕ್ರೆಡಿಟ್ (carbon credit) ಅನ್ನು ರೈತರು ಮಾರುವ ಅವಕಾಶ ಸಿಗುತ್ತದೆ. ಇದರಿಂದ ರೈತರಿಗೆ ಹೆಚ್ಚುವರಿ ಆದಾಯವೂ ಸಿಗುತ್ತದೆ. ರೈತರಿಗೆ ಒಂದೇ ಕಲ್ಲಿಗೆ ಐದಾರು ಹಣ್ಣು ಬಿದ್ದಂತಾಗುತ್ತದೆ. ಇದುವೇ ಕನ್ನಡಿಗ ಕಟ್ಟಿದ ಭೂಮಿತ್ರ ಮಾಡುತ್ತಿರುವ ಮ್ಯಾಜಿಕ್.

ಇಳುವರಿ ಕಡಿಮೆ ಆಯ್ತೆಂದು ರೈತನ ಆತ್ಮಹತ್ಯೆ; ಅದಿತ್ ಆಲೋಚನೆಯಲ್ಲಿ ತಿರುವು

ಕರ್ನಾಟಕ ಮೂಲದ ಆದಿತ್ ಮೂರ್ತಿ ತಮ್ಮೂರಿಗೆ ಬಂದ ಸಂದರ್ಭದಲ್ಲಿ ಸಮೀಪದ ಹಳ್ಳಿಯೊಂದರಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಳೆ ಇಳುವರಿ ಕಡಿಮೆ ಆದ ಕಾರಣ ರೈತ ಜೀವ ಕೊನೆಗಾಣಿಸಿದ್ದರು. ಆ ಘಟನೆಯು ಅದಿತ್ ಮೂರ್ತಿ ಅವರನ್ನು ಚಿಂತನೆಗೆ ಹಚ್ಚಿತು. ರೈತರ ಕಷ್ಟಗಳನ್ನು ನೀಗಿಸುವ ಮಾರ್ಗ ಹುಡುಕಿದರು. ಅದುವೇ ಭೂಮಿತ್ರ. ಮಣ್ಣಿನ ಸಾರ ಮತ್ತು ಫಲವತ್ತತೆ ಹೆಚ್ಚಿಸುವುದು ಭೂಮಿತ್ರದ ಗುರಿ.

‘ನಾವು ತಿನ್ನುವ ಆಹಾರವನ್ನು ತಯಾರಿಸುವ ರೈತರ ಬೆಂಬಲ ಇಲ್ಲದೇ ನಾವು ಭೂಮಿಯನ್ನು ಸಂರಕ್ಷಿಸಲು ಸಾಧ್ಯವಿಲ್ಲ. ಮಣ್ಣಿನ ಫಲವತ್ತತೆ ಹೆಚ್ಚಿಸಿ, ಬೆಳೆಯ ಇಳುವರಿ ಹೆಚ್ಚಿಸಲು ಅಗತ್ಯ ಇರುವ ತಂತ್ರಜ್ಞಾನ ನೆರವನ್ನು ನಮ್ಮ ಸಂಸ್ಥೆಯು ರೈತರಿಗೆ ನೀಡುತ್ತದೆ. ಜೊತೆಗೆ ಕಾರ್ಬನ್ ಸಂಗ್ರಹವೂ ಆಗುತ್ತದೆ,’ ಎಂದು ಅದಿತ್ ಮೂರ್ತಿ ಹೇಳುತ್ತಾರೆ.

ಇದನ್ನೂ ಓದಿ: ಟೈಮ್ಸ್-100, ವಿಶ್ವದ ಅತ್ಯಂತ ಪ್ರಭಾವಿ ಕಂಪನಿಗಳ ಪಟ್ಟಿಯಲ್ಲಿ ಮೂರು ಭಾರತೀಯ ಸಂಸ್ಥೆಗಳು

ಪರಿಸರ ಆಸ್ಕರ್ ಎಂದೇ ಖ್ಯಾತವಾಗಿರುವ ಅರ್ಥ್​ಶಾಟ್ ಪ್ರಶಸ್ತಿಯನ್ನು ಭೂಮಿತ್ರ ಸಂಸ್ಥೆ ಕಳೆದ ವರ್ಷ (2023) ಪಡೆದಿತ್ತು. ಈ ವರ್ಷ ಟೈಮ್ಸ್ ಮ್ಯಾಗಝಿನ್​ನ ಅತ್ಯಂತ ಪ್ರಭಾವಿ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಭೂಮಿತ್ರ ತಂತ್ರಜ್ಞಾನ ಹೇಗಿರುತ್ತೆ ನೋಡಿ…

ಮಣ್ಣಿನ ಫಲವತ್ತತೆ ಹೇಗಿದೆ ಎನ್ನುವುದನ್ನು ಮಣ್ಣಿನ ಪರೀಕ್ಷೆ ಇಲ್ಲದೇ ಮಾಡುವ ಸೆಟಿಲೈಟ್ ತಂತ್ರಜ್ಞಾನವನ್ನು ಭೂಮಿತ್ರ ಬಳಸುತ್ತದೆ. ಮಣ್ಣನ್ನು ಲ್ಯಾಬ್​ಗೆ ತೆಗೆದುಕೊಂಡು ಹೋಗಿ ಪರೀಕ್ಷಿಸುವ ಅಗತ್ಯ ಇಲ್ಲ. ಹೈ ರೆಸಲ್ಯೂಶನ್ ಸೆಟಿಲೈಟ್ ಇಮೇಜ್ ಮೂಲಕ ಮಣ್ಣಿನ ಸಾರ ಪತ್ತೆ ಮಾಡುವ ವಿನೂತನ ವಿಧಾನವನ್ನು ಭೂಮಿತ್ರ ಆವಿಷ್ಕರಿಸಿದೆ.

ಮಣ್ಣಿನಲ್ಲಿ ಕಾರ್ಬನ್ ಅನ್ನು ಹಿಡಿದಿಡಲು ಏನು ಮಾಡಬೇಕು, ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ರೈತರಿಗೆ ಭೂಮಿತ್ರ ಮಾರ್ಗದರ್ಶನ ನೀಡುತ್ತದೆ. ರೈತರ ಜಮೀನಿನಲ್ಲಿರುವ ಮಣ್ಣು ಪರಿಸರದಿಂದ ಎಷ್ಟು ಕಾರ್ಬನ್ ಅನ್ನು ಹೀರಿಕೊಂಡಿದೆ ಎಂಬುದನ್ನು ಅಧಿಕೃತ ಥರ್ಡ್ ಪಾರ್ಟಿ ಸಂಸ್ಥೆಯೊಂದು ಪರಿಶೀಲಿಸುತ್ತದೆ. ಈ ರೀತಿ ಕಾರ್ಬನ್ ಅನ್ನು ಹೀರಿಕೊಂಡರೆ ಅಷ್ಟು ಕಾರ್ಬನ್ ಕ್ರೆಡಿಟ್ ಸೃಷ್ಟಿಯಾಗುತ್ತದೆ.

ಇದನ್ನೂ ಓದಿ: ಪಿಪಿಎಫ್​ನಿಂದ ಟ್ರಿಪಲ್ ಲಾಭ; ಉಳಿತಾಯ, ದೀರ್ಘಾವಧಿ ಹೂಡಿಕೆ, ತೆರಿಗೆ ಲಾಭ

ಕಾರ್ಬನ್ ಕ್ರೆಡಿಟ್​ನಿಂದ ಆದಾಯ

ವಿಶ್ವ ಸಂಸ್ಥೆ ನಿಯಮದ ಪ್ರಕಾರ ಪರಿಸರಕ್ಕೆ ಮಾರಕವಾಗುವ ಕೈಗಾರಿಕೆಗಳು ಕಾರ್ಬನ್ ಕ್ರೆಡಿಟ್ ಖರೀದಿಸಬೇಕು. ಹೀಗಾಗಿ, ಅಮೆರಿಕ ಮೊದಲಾದೆಡೆ ಕಾರ್ಬನ್ ಕ್ರೆಡಿಟ್ ಒಳ್ಳೆಯ ಬಿಸಿನೆಸ್ ಆಗಿದೆ. ಭೂಮಿತ್ರ ಸಂಸ್ಥೆ ರೈತರ ಮಣ್ಣಿನಲ್ಲಿ ಸೃಷ್ಟಿಯಾದ ಕಾರ್ಬನ್ ಕ್ರೆಡಿಟ್ ಅನ್ನು ಕೈಗಾರಿಕೆಗಳಿಗೆ ಮಾರುತ್ತದೆ. ಇದರಲ್ಲಿ ಬಂದ ಆದಾಯದಲ್ಲಿ ಬಹುಪಾಲನ್ನು ರೈತರಿಗೆ ವರ್ಗಾಯಿಸುತ್ತದೆ.

ಇದು ರೈತರಿಗೆ ಬಹುವಿಧದ ಲಾಭ ಸೃಷ್ಟಿಸಿಕೊಡುತ್ತದೆ. ಮಣ್ಣಿನ ಸಾರ ಹೆಚ್ಚಾಗಿ ಬೆಳೆಯ ಇಳುವರಿಯೂ ಹೆಚ್ಚುತ್ತದೆ. ಕಾರ್ಬನ್ ಕ್ರೆಡಿಟ್ ಮೂಲಕ ಹೆಚ್ಚುವರಿ ಆದಾಯವೂ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ