Sukanya Samruddhi Yojana: ಹೆಣ್ಣುಮಕ್ಕಳಿಗಾಗಿಯೇ ಇರುವ ಸರ್ಕಾರದ ಈ ಸ್ಕೀಮ್ನಲ್ಲಿ ಹಣ ತೊಡಗಿಸಿದರೆ ಒಳ್ಳೆ ರಿಟರ್ನ್ ಪಕ್ಕಾ
ಹೆಣ್ಣುಮಕ್ಕಳಿಗಾಗಿ ಇರುವ, ಸರ್ಕಾರದ ಬೆಂಬಲವಿರುವ ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ಸುಕನ್ಯಾ ಸಮೃದ್ಧಿ ಯೋಜನೆಯು (Sukanya Samruddhi Yojana) ಜನಪ್ರಿಯ ಸಣ್ಣ ಠೇವಣಿ ಯೋಜನೆಗಳ ಪೈಕಿ ಒಂದಾಗಿದ್ದು, “ಹೆಣ್ಣು ಮಗುವನ್ನು ಉಳಿಸಿ” ಅಥವಾ “ಬೇಟಿ ಬಚಾವೋ ಬೇಟಿ ಪಢಾವೋ” ಅಭಿಯಾನದ ಭಾಗವಾಗಿ ಇದನ್ನು ಸರ್ಕಾರವು ಪ್ರಾರಂಭಿಸಿದೆ. ಈ ಯೋಜನೆ ಅಡಿಯಲ್ಲಿ ಶೇಕಡಾ 7.6ರ ಬಡ್ಡಿದರವನ್ನು ನೀಡುತ್ತದೆ ಮತ್ತು ಇದರ ಜತೆಗೆ ಬಹಳಷ್ಟು ಆದಾಯ ತೆರಿಗೆ ಪ್ರಯೋಜನಗಳು ಸಹ ಇವೆ. ಇದಕ್ಕೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80C ಅಡಿಯಲ್ಲಿ ಆದಾಯ ತೆರಿಗೆ ರಿಯಾಯಿತಿಯನ್ನು ನೀಡುತ್ತದೆ. ಈ ಯೋಜನೆಯ ಅಡಿಯಲ್ಲಿ ರಿಟರ್ನ್ಸ್ ಮತ್ತು ಮೆಚ್ಯೂರಿಟಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. ಹೆಣ್ಣು ಮಗು ಜನಿಸಿದ ನಂತರ ಆಕೆಗೆ 10 ವರ್ಷ ತುಂಬುವ ಅವಧಿಯ ಮಧ್ಯೆ ಯಾವಾಗ ಬೇಕಾದರೂ ಪಾಲಕರು ಸುಕನ್ಯಾ ಸಮೃದ್ಧಿ ಯೋಜನಾ ಖಾತೆಯನ್ನು ತೆರೆಯಬಹುದು. ಯಾವುದೇ ಅಂಚೆ ಕಚೇರಿ ಅಥವಾ ವಾಣಿಜ್ಯ ಬ್ಯಾಂಕ್‌ಗಳ ಅಧಿಕೃತ ಶಾಖೆಗಳಲ್ಲಿ ಖಾತೆಯನ್ನು ತೆರೆಯಬಹುದು.
ಸುಕನ್ಯಾ ಸಮೃದ್ಧಿ ಖಾತೆಯನ್ನು ಹೇಗೆ ತೆರೆಯುವುದು
2019ರ ಡಿಸೆಂಬರ್‌ನಲ್ಲಿ ಅಧಿಸೂಚನೆಯ ಮೂಲಕ ಯೋಜನೆಗೆ ಸಂಬಂಧಿಸಿದ ನಿಯಮಗಳನ್ನು ಸರ್ಕಾರವು ಸೂಚಿಸಿದೆ. ಇದರ ಅಡಿಯಲ್ಲಿ, ಸುಕನ್ಯಾ ಸಮೃದ್ಧಿ ಖಾತೆಯನ್ನು ಹೆಣ್ಣುಮಗು ಹುಟ್ಟಿದಾಗಿನಿಂದ 10 ವರ್ಷ ತುಂಬುವವರೆಗೆ ನೈಸರ್ಗಿಕ ಅಥವಾ ಕಾನೂನುಬದ್ಧ ಪಾಲಕರು ಆ ಹೆಣ್ಣುಮಗು ಹೆಸರಿನಲ್ಲಿ ತೆರೆಯಬಹುದು. ಅಲ್ಲದೆ ಈ ಯೋಜನೆಯಡಿ ಹೆಣ್ಣು ಮಗುವಿಗೆ ಒಂದು ಖಾತೆಯನ್ನು ಮಾತ್ರ ತೆರೆಯಬಹುದಾಗಿದೆ. ನಿಯಮಗಳ ಪ್ರಕಾರ, ಒಂದು ಕುಟುಂಬದಲ್ಲಿ ಎರಡು ಹೆಣ್ಣುಮಕ್ಕಳಿಗೆ ಗರಿಷ್ಠ ಎರಡು ಖಾತೆಗಳನ್ನು ತೆರೆಯಬಹುದು.
ಠೇವಣಿದಾರರ ಗುರುತು ಮತ್ತು ನಿವಾಸದ ಪುರಾವೆಗೆ ಸಂಬಂಧಿಸಿದ ಇತರ ದಾಖಲೆಗಳೊಂದಿಗೆ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್‌ನಲ್ಲಿ ಖಾತೆ ತೆರೆಯುವ ಸಮಯದಲ್ಲಿ ಪಾಲಕರು ಯಾರ ಹೆಸರಿನಲ್ಲಿ ಖಾತೆಯನ್ನು ತೆರೆಯಲಾಗಿದೆಯೋ ಅವರ ಜನ್ಮ ಪ್ರಮಾಣಪತ್ರವನ್ನು ಸಲ್ಲಿಸಬೇಕು.
ಖಾತೆಗೆ ಕನಿಷ್ಠ ಮತ್ತು ಗರಿಷ್ಠ ಬ್ಯಾಲೆನ್ಸ್ ಅಗತ್ಯ
ರೂ. 250ರ ಆರಂಭಿಕ ಠೇವಣಿಯೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ನಂತರ, ರೂ. 50ರ ಗುಣಕದಲ್ಲಿ ಯಾವುದೇ ಮೊತ್ತವನ್ನು ಠೇವಣಿ ಮಾಡಬಹುದು. ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ ರೂ. 250 ಠೇವಣಿ ಮಾಡಬಹುದು. ಆದರೆ ಒಟ್ಟು ಹಣವನ್ನು ಠೇವಣಿ ಲೆಕ್ಕ ನೋಡುವುದಾದರೆ ಒಂದೇ ಸಂದರ್ಭದಲ್ಲಿ ಅಥವಾ ವಿವಿಧ ಸಂದರ್ಭಗಳಲ್ಲಿ ಸೇರಿ ಖಾತೆಯು ಆರ್ಥಿಕ ವರ್ಷದಲ್ಲಿ ರೂ. 1,50,000 ಮೀರುವಂತಿಲ್ಲ. ಖಾತೆಯನ್ನು ತೆರೆದ ದಿನಾಂಕದಿಂದ 15 ವರ್ಷಗಳ ಅವಧಿಯವರೆಗೆ ಖಾತೆಯಲ್ಲಿ ಠೇವಣಿ ಮಾಡಬಹುದು. ಆದ್ದರಿಂದ ಒಂಬತ್ತು ವರ್ಷದ ಹೆಣ್ಣುಮಗುವಿಗೆ 24 ವರ್ಷ ವಯಸ್ಸಾಗುವವರೆಗೆ ಠೇವಣಿಗಳನ್ನು ಮುಂದುವರಿಸಬೇಕು.
ಸುಕನ್ಯಾ ಸಮೃದ್ಧಿ ಹೂಡಿಕೆಯು 21 ವರ್ಷಗಳಲ್ಲಿ ಮೆಚ್ಯೂರ್ (ಪಕ್ವ) ಆಗುತ್ತದೆ. ಆದರೆ ಠೇವಣಿಗಳನ್ನು 15 ವರ್ಷಗಳವರೆಗೆ ಮಾತ್ರ ಮಾಡಲಾಗುತ್ತದೆ. ಆದ್ದರಿಂದ ಹೆಣ್ಣು ಮಗುವಿಗೆ ಒಂಬತ್ತು ವರ್ಷವಾದಾಗ ಖಾತೆಯನ್ನು ತೆರೆದಿದ್ದರೆ, ಆಕೆಗೆ 30 ವರ್ಷ ಆದಾಗ ಖಾತೆ ಮೆಚ್ಯೂರ್ ಆಗುತ್ತದೆ. ಆದ್ದರಿಂದ 24 ಮತ್ತು 30 ವಯಸ್ಸಿನ ನಡುವೆ (ಖಾತೆ ಮೆಚ್ಯೂರ್ ಆದಾಗ) ಖಾತೆಯು ಬಾಕಿ ಮೇಲೆ ಬಡ್ಡಿಯನ್ನು ಗಳಿಸುತ್ತಲೇ ಇರುತ್ತದೆ. ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ ರೂ. 250 ಠೇವಣಿ ಮಾಡದಿದ್ದರೆ ಅದು ಡೀಫಾಲ್ಟ್ ಖಾತೆಯಾಗುತ್ತದೆ. ರೂ. 250ರ ಕನಿಷ್ಠ ಠೇವಣಿ ಮತ್ತು ಪ್ರತಿ ವರ್ಷಕ್ಕೆ ಹೆಚ್ಚುವರಿ ರೂ. 50ರ ದಂಡದ ಮೊತ್ತವನ್ನು ಪಾವತಿಸುವ ಮೂಲಕ 15 ವರ್ಷಗಳು ಪೂರ್ಣಗೊಳ್ಳುವ ಮೊದಲು ಡೀಫಾಲ್ಟ್ ಮೊತ್ತವನ್ನು ಪುನರುಜ್ಜೀವನಗೊಳಿಸಬಹುದು.
ಡೀಫಾಲ್ಟ್ ಖಾತೆಯನ್ನು ಸಕ್ರಿಯಗೊಳಿಸದಿದ್ದರೂ ಅದರಲ್ಲಿರುವ ಎಲ್ಲ ಠೇವಣಿಗಳು ಖಾತೆಯನ್ನು ಕ್ಲೋಸ್ ಮಾಡುವವರೆಗೆ ಯೋಜನೆಗೆ ಅನ್ವಯಿಸುವ ಬಡ್ಡಿ ದರವನ್ನು ಗಳಿಸುತ್ತಲೇ ಇರುತ್ತವೆ.