AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದ ಆರ್ಥಿಕ ಪತನ ಶುರುವಾಗಿದ್ದ ಕೋವಿಡ್​ನಿಂದಲ್ಲ; 15 ವರ್ಷದ ಹಿಂದೆಯೇ ಆರಂಭವಾಗಿದ್ದವಾ ಚೀನೀ ದುರ್ದಿನಗಳು?

China Debt Supercycle: ಚೀನಾದ ರಸ್ತೆ, ಕಟ್ಟಡ ಇತ್ಯಾದಿ ಇನ್​ಫ್ರಾಸ್ಟ್ರಕ್ಚರ್ ಮುಂದುವರಿದ ದೇಶಗಳ ಸೌಕರ್ಯವ್ಯವಸ್ಥೆಯನ್ನು ಮೀರಿಸುವಂತಿದೆ. ಇದಕ್ಕೆ ಕಾರಣವಾಗಿದ್ದು ರಿಯಲ್ ಎಸ್ಟೇಟ್ ಬೂಮ್. ಈಗ ಇದೇ ಸಂಗತಿಯು ಚೀನಾವನ್ನು ಆರ್ಥಿಕ ದುಃಸ್ಥಿತಿಗೆ ತಳ್ಳುತ್ತಿದೆ.

ಚೀನಾದ ಆರ್ಥಿಕ ಪತನ ಶುರುವಾಗಿದ್ದ ಕೋವಿಡ್​ನಿಂದಲ್ಲ; 15 ವರ್ಷದ ಹಿಂದೆಯೇ ಆರಂಭವಾಗಿದ್ದವಾ ಚೀನೀ ದುರ್ದಿನಗಳು?
ಚೀನಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 23, 2023 | 3:39 PM

ಇಡೀ ವಿಶ್ವವೇ ಅಚ್ಚರಿಪಡುವಷ್ಟು ವೇಗದಲ್ಲಿ ಚೀನಾ ಬೆಳವಣಿಗೆ ಹೊಂದಿದೆ. ಬೀಜಿಂಗ್, ಶಾಂಘೈ ಇತ್ಯಾದಿ ನಗರಗಳಲ್ಲಿ ನ್ಯೂಯಾರ್ಕ್, ಪ್ಯಾರಿಸ್ ಮೊದಲಾದ ಪಾಶ್ಚಿಮಾತ್ಯ ನಗರಗಳು ನಾಚುವಂತೆ ಐಷಾರಾಮಿ ಮತ್ತು ಗಗನಚುಂಬಿ ಕಟ್ಟಡಗಳನ್ನು ಕಾಣಬಹುದು. ಅಮೆರಿಕದ ಜಿಡಿಪಿಗೆ ಚೀನಾ ಬಹುತೇಕ ಸರಿಸಮಾನವಾಗಿ ನಿಂತಿದೆ. ಮಹಾಯುದ್ಧದ ಬಳಿಕ ಅಮೆರಿಕ ಎದುರು ರಷ್ಯಾ ಹೊಂದಿದ್ದ ಸ್ಥಾನವನ್ನು ಚೀನಾ ತುಂಬಿದೆ ಎಂದೇ ಎಲ್ಲರೂ ಭಾವಿಸಿದ್ದೇವೆ. ಇಂಥ ಸಂದರ್ಭದಲ್ಲಿ ಚೀನಾ ಆರ್ಥಿಕತೆ (China Economy) ಅಲುಗಾಡತೊಡಗಿದೆ. ಇದು ಕೋವಿಡ್ ಹಾಗೂ ನಂತರದ ಲಾಕ್​ಡೌನ್ ಕಾರಣದಿಂದ ಉದ್ಭವಿಸಿರುವ ತಾತ್ಕಾಲಿಕ ಹಿನ್ನಡೆ ಮಾತ್ರ. ಚೀನಾ ಭರ್ಜರಿಯಾಗಿ ಚೇತರಿಸಿಕೊಂಡು ವೇಗದ ಪ್ರಗತಿಯ ಟ್ರ್ಯಾಕ್​ಗೆ ಬರುತ್ತದೆ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ, ಕೆಲ ಆರ್ಥಿಕ ತಜ್ಞರ ಪ್ರಕಾರ, ಈ ಎಣಿಕೆ ಸುಳ್ಳಾಗುವಂತಿದೆ. ಈ ವಾದಕ್ಕೆ ಇಂಬುಕೊಡುವಂತೆ ಚೀನಾದಲ್ಲಿ ಒಂದೊಂದೇ ರಿಯಲ್ ಎಸ್ಟೇಟ್ ಕಂಪನಿಗಳು ಮುರುಟಿಬೀಳುತ್ತಿವೆ.

ಚೀನಾದ ಆರ್ಥಿಕ ಪತನದ ಆರಂಭ ಇತ್ತೀಚಿನದ್ದಲ್ಲ. ಇದಕ್ಕೆ ಮುನ್ನುಡಿ ಬರೆದದ್ದು 2008ರ ಜಾಗತಿಕ ಹಣಕಾಸು ಬಿಕ್ಕಟ್ಟು. ಹಾರ್ವರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞ ಕೆನೆತ್ ರಾಗಾಫ್ ಈ ಬಗ್ಗೆ ಕುತೂಹಲ ಎನಿಸುವ ವಿವರಣೆ ನೀಡಿದ್ದಾರೆ. ಅವರ ಪ್ರಕಾರ, ಚೀನಾದ ಬೆಳವಣಿಗೆಗೆ ಬಳಸಿದ ಅಪಾರ ಬಂಡವಾಳವು ಈಗ ಚೀನಾಗೆ ಮಗ್ಗುಲಮುಳ್ಳಾಗಿ ಪರಿಣಮಿಸಿದೆ. ಹಾರ್ವರ್ಡ್ ಪ್ರೊಫೆಸರ್ ಈ ವಿದ್ಯಮಾನಕ್ಕೆ ಡೆಟ್ ಸೂಪರ್​ಸೈಕಲ್ ಅಥವಾ ಸಾಲದ ಸಂಕೋಲೆ ಎಂದು ಬಣ್ಣಿಸಿದ್ದಾರೆ.

ಸಾಲದ ಸುಳಿ ಅಮೆರಿಕದಿಂದ ಶುರುವಾಗಿ ಯೂರೋಪ್ ಹಾದು, ಚೀನಾ ತಲುಪಿದೆಯಾ?

2008ರ ಹಣಕಾಸು ಬಿಕ್ಕಟ್ಟು ಪರಿಸ್ಥಿತಿಯಿಂದ ಡೆಟ್ ಸೂಪರ್​ಸೈಕಲ್ ಅಮೆರಿಕದಲ್ಲಿ ಶುರುವಾಯಿತು. 2010ರಲ್ಲಿ ಅದು ಯೂರೋಪ್​ಗೆ ಧಾವಿಸಿತು. ಅದಾದ ಬಳಿಕ ವಿಶ್ವದ ಇತರ ಮಧ್ಯಮ ಸ್ತರದ ಆರ್ಥಿಕತೆಯ ದೇಶಗಳನ್ನು ಸುತ್ತಿಕೊಂಡಿದೆ ಎಂದು ಕೆನೆತ್ ರಾಗಾಫ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಅದಾನಿ ಕಂಪನಿಗೆ ದಂಡ ವಿಧಿಸಿದ ಸ್ಟಾಕ್ ವಿನಿಮಯ ಕೇಂದ್ರಗಳು; ಕ್ರಮ ಒಪ್ಪದ ಅದಾನಿ ಎಂಟರ್ಪ್ರೈಸಸ್; ಏನು ಕಾರಣ?

ಚೀನಾಗೆ ಯಾವ ರೀತಿ ಪರಿಣಾಮ?

2008ರ ಹಣಕಾಸು ಬಿಕ್ಕಟ್ಟು ಉದ್ಭವಿಸಿದ ಬಳಿಕ ಚೀನಾ ಸಾಕಷ್ಟು ಹಣಕಾಸು ಉತ್ತೇಜಕ ಕ್ರಮಗಳನ್ನು ಕೈಗೊಂಡಿತು. ಇದರಲ್ಲಿ ಹೆಚ್ಚಿನ ಹಣವು ರಿಯಲ್ ಎಸ್ಟೇಟ್​ಗೆ ಹೋಯಿತು. ಪರಿಣಾಮವಾಗಿ ಚೀನಾದಲ್ಲಿ ಭರ್ಜರಿ ರೀತಿಯಲ್ಲಿ ಮನೆ ಮತ್ತು ಕಚೇರಿಗಳು ತಲೆ ಎತ್ತಿದವು. ಚೀನಾದ ಜಿಡಿಪಿಯಲ್ಲಿ ಅದರ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಪ್ರಮಾಣವೇ ಶೇ. 23ರಷ್ಟು ಇದೆ. ಅಷ್ಟರ ಮಟ್ಟಿಗೆ ಚೀನಾದಲ್ಲಿ ರಿಯಲ್ ಎಸ್ಟೇಟ್ ಬೂಮ್ ಆಗಿದೆ.

ಪಾಶ್ಚಿಮಾತ್ಯ ನಗರಿಗಳನ್ನೂ ನಾಚಿಸುವಷ್ಟು ಚೀನಾದಲ್ಲಿ ಗಗನಚುಂಬಿ ಕಟ್ಟಡಗಳು ತಲೆ ಎತ್ತಿವೆ. ಆದರೆ, ಇದು ಅಸಮತೋಲನದ ಬೆಳವಣಿಗೆ ಎಂಬುದು ಇದೀಗ ಸಾಬೀತಾಗಿದೆ. ಅಂದರೆ, ಅಮೆರಿಕದಂಥ ದೇಶಗಳಿಗೆ ಹೋಲಿಸಿದರೆ ಚೀನಾದಲ್ಲಿ ತಲಾದಾಯ ಬಹಳ ಕಡಿಮೆ. ಬಂಡವಾಳದ ಮೇಲೆ ಬಂಡವಾಳ ಪಡೆದು ತಲೆ ಎತ್ತಿದ ಕಟ್ಟಡಗಳನ್ನು ಕೊಳ್ಳುವವರೇ ಇಲ್ಲವಾಗಿದ್ದಾರೆ. ಇದರ ಪರಿಣಾಮವಾಗಿ ರಿಯಲ್ ಎಸ್ಟೇಟ್ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಹಾರ್ವರ್ಡ್ ಪ್ರೊಫೆಸರ್ ವಿವರಿಸಿದ್ದಾರೆ.

ಇದನ್ನೂ ಓದಿ: ಹಬ್ಬಕ್ಕೆ ಊರಿಗೆ ಹೋಗಬೇಕೆಂದು ರೈಲು ಟಿಕೆಟ್ ಬುಕಿಂಗ್ ವೇಳೆ ಯಡವಟ್ಟು ಬೇಡ; ದಳ್ಳಾಳಿಗಳ ಬಗ್ಗೆ ಹುಷಾರ್

ವಿಶ್ವದ ಅತಿದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆಗಳ ಪೈಕಿ ಇರುವ ಎವರ್​ಗ್ರಾಂಡ್ ಮತ್ತು ಕಂಟ್ರಿಗಾರ್ಡನ್ ಈಗ ದಿವಾಳಿ ಎದ್ದಿವೆ. ಇಂಥ ಬಲಿಷ್ಠ ಕಂಪನಿಗಳ ಕಥೆಯೆ ಹೀಗಾದಾಗ ಬೇರೆ ಸಂಸ್ಥೆಗಳಿಗೂ ಇದೇ ಹಣೆಬರಹ ಆಗುವ ಸಾಧ್ಯತೆ ದಟ್ಟವಾಗಿದೆ.

ಇನ್ನೂ ಕೆಲ ತಜ್ಞರು, ಚೀನಾದ ಈಗಿನ ಆರ್ಥಿಕ ಪರಿಸ್ಥಿತಿಯನ್ನು ತೊಂಬತ್ತರ ದಶಕದ ಜಪಾನ್ ಸ್ಥಿತಿಗೆ ತುಲನೆ ಮಾಡುವುದಿದೆ. 90ರ ದಶಕದಲ್ಲಿ ಜಪಅನ್ ಆರ್ಥಿಕತೆ ಬಹಳ ಮಂದಗೊಂಡಿತ್ತು. ಈಗ ಚೀನಾ ಅದೇ ಇಕ್ಕಟ್ಟಿಗೆ ಸಿಲುಕಿದೆ. ಚೀನಾದಲ್ಲಿ ಕೆಲಸ ಮಾಡುವ ಮಂದಿಯ ಸಂಖ್ಯೆ ಕಡಿಮೆ ಆಗಿರುವುದು ಮತ್ತು ಹಣಕಾಸು ಅಸಮತೋಲನ ಪರಿಸ್ಥಿತಿ ಇತ್ಯಾದಿ ಕಾರಣಗಳನ್ನು ಉಲ್ಲೇಖಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ