ಮುಂಬೈ, ಜುಲೈ 21: ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆಯ (Infosys Technologies) ಷೇರುಬೆಲೆ ಜುಲೈ 21ರಂದು ಪಲ್ಟಿ ಹೊಡೆಯುತ್ತಿದೆ. ನಿನ್ನೆ (ಜುಲೈ 20) ಇನ್ಫೋಸಿಸ್ನ ಮೊದಲ ತ್ರೈಮಾಸಿಕ ವರದಿ ಪ್ರಕಟವಾಗಿದ್ದು, ಶೇ. 10.9ರಷ್ಟು ನಿವ್ವಳ ಲಾಭ ಹೆಚ್ಚಳ ತೋರಿಸಿತ್ತು. ಆದರೂ ಕೂಡ ಷೇರುಬೆಲೆ ಗರಗರ ಸುತ್ತಿ ಬೀಳುತ್ತಿದೆ. ಭಾರತದ ಷೇರುಮಾರುಕಟ್ಟೆಗಳಲ್ಲಿ ಮಾತ್ರವಲ್ಲ, ಅದರ ಎಡಿಆರ್ಗಳೂ ಕೂಡ ಕುಸಿತ ಕಂಡಿವೆ. ಹಿಂದಿನ ಕ್ವಾರ್ಟರ್ನ ವರದಿ ಪ್ರಕಟವಾದಾಗಲೂ ಇನ್ಫೋಸಿಸ್ನ ಅಮೆರಿಕನ್ ಡೆಪಾಸಿಟರಿ ರಿಸಿಪ್ಟ್ಸ್ ಬೆಲೆ ಕುಸಿತವಾಗಿತ್ತು. ಎಡಿಆರ್ ಎಂಬುದು ಅಮೆರಿಕದಲ್ಲಿ ವಿದೇಶೀ ಕಂಪನಿಯ ಷೇರುಗಳಿಗೆ ಅಲ್ಲಿನ ಬ್ಯಾಂಕುಗಳು ನೀಡುವ ಸರ್ಟಿಫಿಕೇಟ್.
ಇನ್ಫೋಸಿಸ್ ಟೆಕ್ನಾಲಜೀಸ್ ಸಂಸ್ಥೆ 2023ರ ಏಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಶೇ. 10.9ರಷ್ಟು ಹೆಚ್ಚಳದೊಂದಿಗೆ 5,945 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ಆದರೆ, ಇನ್ಫೋಸಿಸ್ ಷೇರುಬೆಲೆ ಶುಕ್ರವಾರ ಬೆಳಗಿನ ವಹಿವಾಟಿನಲ್ಲಿ ಶೇ. 10ರವರೆಗೂ ಕುಸಿತ ಕಂಡಿದೆ. ಈ ವರದಿ ಬರೆಯುವಾಗ ಅದರ ಷೇರುಬೆಲೆಯಲ್ಲಿ 113 ರೂಗಳಷ್ಟು ಇಳಿಕೆಯಾಗಿ 1,335.75 ರೂ ತಲುಪಿದೆ. ಒಂದು ಹಂತದಲ್ಲಿ ಅದರ ಷೇರುಬೆಲೆ 1,305 ರೂಗೆ ಇಳಿದಿತ್ತು.
ಇದನ್ನೂ ಓದಿ: Q1 Results: ತ್ರೈಮಾಸಿಕ ವರದಿ: ಇನ್ಫೋಸಿಸ್ ಶೇ. 10.9, ಹೆಚ್ಯುಎಎಲ್ ಶೇ. 6.9ರಷ್ಟು ನಿವ್ವಳ ಲಾಭ ಹೆಚ್ಚಳ
ಇನ್ಫೋಸಿಸ್ನ ಈ ಪರಿ ಷೇರುಕುಸಿತಕ್ಕೆ ಕಾರಣವಾಗಿದ್ದು ಅದರ ಭವಿಷ್ಯದ ಆದಾಯ ಅಂದಾಜನ್ನು ತಗ್ಗಿಸಲಾಗಿದ್ದು. 2023-24ರ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ನ ಆದಾಯ ಶೇ. 1ರಿಂದ ಶೇ. 3.5 ಇರಬಹುದು ಎಂದು ಕಂಪನಿ ತನ್ನ ಫೈಲಿಂಗ್ನಲ್ಲಿ ತಿಳಿಸಿತ್ತು. ಇದು ಹೂಡಿಕೆದಾರರನ್ನು ನಿರಾಸೆಗೊಳಿಸಿದೆ. ಈ ಹಿಂದೆ ಅದು ಮಾಡಿದ ಅಂದಾಜು ಪ್ರಕಾರ ಈ ಹಣಕಾಸು ವರ್ಷದಲ್ಲಿ ಶೇ. 4ರಿಂದ 7ರಷ್ಟು ಆದಾಯವೃದ್ಧಿ ಅಗಬಹುದು ಎಂದು ನಿರೀಕ್ಷಿಸಲಾಗಿತ್ತು. ಈಗ ಈ ನಿರೀಕ್ಷೆ ಇನ್ನಷ್ಟು ತಗ್ಗಿಸಲಾಗಿದೆ. ಇದೇ ಕಾರಣಕ್ಕೆ ಇನ್ಫೋಸಿಸ್ ಷೇರುಗಳನ್ನು ಮಾರುವ ಭರಾಟೆಗೆ ನಿಂತಿದ್ದಾರೆ ಹೂಡಿಕೆದಾರರು.
ಇನ್ಫೋಸಿಸ್ ವಿಚಾರದಲ್ಲಿ ಷೇರುಪೇಟೆ ತಜ್ಞರು ಮತ್ತು ಬ್ರೋಕರೇಜ್ ಸಂಸ್ಥೆಗಳು ಎರಡು ವಿಷಯಗಳನ್ನು ಎತ್ತಿತೋರಿಸಿದ್ದಾರೆ. ಒಂದು, ಈಗಿನ ಟ್ರೆಂಡ್ ಗಮನಿಸಿದರೆ ಇನ್ಫೋಸಿಸ್ ಷೇರುಬೆಲೆ ಇನ್ನಷ್ಟು ಕಡಿಮೆ ಆಗಬಹುದು. ಇನ್ನೊಂದು, ಇನ್ಫೋಸಿಸ್ನ ಟಾರ್ಗೆಟ್ ಪ್ರೈಸ್ 1,600 ರೂ ಇಡಲಾಗಿದೆ. ಅಂದರೆ ಅದರ ಷೇರುಬೆಲೆ ಒಂದು ವರ್ಷದಲ್ಲಿ 1,600 ರೂವರೆಗೂ ಏರಬಹುದು. ಇವೆರಡು ಅಂಶಗಳನ್ನು ಗಮನಿಸಿದರೆ ಇನ್ಫೋಸಿಸ್ ಷೇರುಗಳನ್ನು ಕೊಳ್ಳಲು ಸಕಾಲ ಸಮಯ ಸಮೀಪಿಸಿದೆ. ಈಗಲೇ ಷೇರು ಖರೀದಿಸಿದರೂ ಲಾಭ ತರಬಹುದು ಎನ್ನುತ್ತಾರೆ ತಜ್ಞರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:29 pm, Fri, 21 July 23