Hitachi Rail STS: ಬೆಂಗಳೂರಿನಲ್ಲಿ ಹಿಟಾಚಿ ರೈಲ್ ಎಸ್​ಟಿಎಸ್​ನ ಹೊಸ ಘಟಕ; ಸಂತೋಷ್ ಲಾಡ್​ರಿಂದ ಉದ್ಘಾಟನೆ

Minister Santosh Lad Inaugurates Hitachi Rail STS Unit: 1996ರಿಂದ ಹಿಟಾಚಿ ಇಂಡಿಯಾ ಎಸ್‌ಟಿಎಸ್ ಪಯಣ ಕೇವಲ ಸ್ಮರಣೀಯ ಮಾತ್ರವಲ್ಲದೆ, ಐತಿಹಾಸಿಕವಾಗಿಯೂ ಮುಖ್ಯವಾಗಿದ್ದು, ಸಂಸ್ಥೆಯನ್ನು ಅತ್ಯಂತ ನಂಬಿಕಾರ್ಹ ಮತ್ತು ಮುಂಚೂಣಿಯ ಸಂಸ್ಥೆಯನ್ನಾಗಿಸಿದೆ. (ವರದಿ: ಗಿರೀಶ್ ಲಿಂಗಣ್ಣ)

Hitachi Rail STS: ಬೆಂಗಳೂರಿನಲ್ಲಿ ಹಿಟಾಚಿ ರೈಲ್ ಎಸ್​ಟಿಎಸ್​ನ ಹೊಸ ಘಟಕ; ಸಂತೋಷ್ ಲಾಡ್​ರಿಂದ ಉದ್ಘಾಟನೆ
ಹಿಟಾಚಿ ರೈಲ್ ಎಸ್‌ಟಿಎಸ್ ಘಟಕದ ಉದ್ಘಾಟನೆ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Jul 21, 2023 | 3:09 PM

ಬೆಂಗಳೂರು, ಜುಲೈ 21: ಸಿಗ್ನಲಿಂಗ್ ಕಂಟ್ರೋಲ್ ಮತ್ತು ಸ್ವಯಂಚಾಲಿತ ವ್ಯವಸ್ಥೆಗಳನ್ನು ಒದಗಿಸುವ ಹಿಟಾಚಿ ರೈಲ್ ಎಸ್​ಟಿಎಸ್ ಇಂಡಿಯಾ ಪ್ರೈ ಲಿ (Hitachi Rail STS India) ಸಂಸ್ಥೆಯ ನೂತನ ಕಚೇರಿ ಉದ್ಯಾನನಗರಿಯಲ್ಲಿ ಸ್ಥಾಪನೆಯಾಗಿದೆ. ದೊಮ್ಮಲೂರಿನ ಅಮರಜ್ಯೋತಿ ಲೇಔಟ್​ನ ಮಾರುತಿ ಇನ್ಫೋಟೆಕ್ ಸೆಂಟರ್​ನಲ್ಲಿ ಶುಕ್ರವಾರ ಹಿಟಾಚಿ ರೈಲ್ ಎಸ್​ಟಿಎಸ್ ಸಂಸ್ಥೆಯ ನೂತನ ಕಚೇರಿಯ ಉದ್ಘಾಟನೆ ನಡೆದಿದೆ. ಹಿಟಾಚಿ ಎಸ್​ಟಿಎಸ್​ನ ನೂತನ ಘಟಕದ ಉದ್ಘಾಟನಾ ಸಮಾರಂಭವನ್ನು ಕರ್ನಾಟಕ ಸರ್ಕಾರದ ಮಾನ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ (Santosh Lad) ಅವರು ಉದ್ಘಾಟಿಸಿದರು. ಸಮಾರಂಭದಲ್ಲಿ ಹಿಟಾಚಿ ರೈಲ್ ಎಸ್‌ಟಿಎಸ್ ಸಂಸ್ಥೆಯ ಪೂರ್ಣಾವಧಿ ನಿರ್ದೇಶಕರು, ಮತ್ತು ರೈಲ್ ಕಂಟ್ರೋಲ್ ಮುಖ್ಯಸ್ಥರಾದ ಮನೋಜ್ ಕುಮಾರ್ ಎನ್, ಹಿಟಾಚಿ ಇಂಡಿಯಾ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಭರತ್ ಕೌಶಲ್, ಹಿಟಾಚಿ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿನಿಚಿ ಸಕಾಯ್ ಅವರು ಉಪಸ್ಥಿತರಿದ್ದರು.

ಸುಮಾರು 3 ದಶಕಗಳಿಂದ ಅಸ್ತಿತ್ವದಲ್ಲಿರುವ ಹಿಟಾಚಿ ರೈಲ್ ಎಸ್​ಟಿಎಸ್ ಇಂಡಿಯಾ ಸಂಸ್ಥೆ ದಕ್ಷಿಣ ಏಷ್ಯಾದ ಮಾರುಕಟ್ಟೆಗೆ ಸಿಗ್ನಲಿಂಗ್ ಕಂಟ್ರೋಲ್ ಮತ್ತು ಸ್ವಯಂಚಾಲಿತ ವ್ಯವಸ್ಥೆಗಳನ್ನು ಒದಗಿಸುತ್ತದೆ. ಜೊತೆಗೆ, ಕಡಿಮೆ ವೆಚ್ಚದಲ್ಲಿ ಸಿಗ್ನಲಿಂಗ್ ಮತ್ತು ಸಾಫ್ಟ್‌ವೇರ್ ಇಂಜಿನಿಯರಿಂಗ್ ಬೆಂಬಲವನ್ನೂ ಒದಗಿಸುತ್ತದೆ.

ಭಾರತೀಯ ರೈಲ್ವೇ ಮತ್ತು ಮೆಟ್ರೋ ರೈಲ್ವೆಯೊಡನೆ ಹಿಟಾಚಿ ರೈಲ್ ಎಸ್‌ಟಿಎಸ್ ಸಂಸ್ಥೆಯ ಸಹಯೋಗ ಈಗ 25 ವರ್ಷಗಳನ್ನು ಪೂರೈಸಿದೆ. ಹಿಟಾಚಿ ರೈಲ್ ಎಸ್‌ಟಿಎಸ್ ಭಾರತದ ರೈಲ್ ಟ್ರಾಫಿಕ್ ನೆಟ್‌ವರ್ಕ್ ವ್ಯವಸ್ಥೆಯಲ್ಲಿ ಹಲವು ಪ್ರಥಮಗಳನ್ನು ಜಾರಿಗೆ ತಂದಿರುವುದಕ್ಕೆ ಹೆಮ್ಮೆ ಪಡುತ್ತದೆ. ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುವ 8 ಬಿಲಿಯನ್ ಪ್ರಯಾಣಿಕರಲ್ಲಿ, 2 ಬಿಲಿಯನ್ ಪ್ರಯಾಣಿಕರು ಹಿಟಾಚಿ ರೈಲ್ ಎಸ್‌ಟಿಎಸ್ ನಿರ್ವಹಿಸುವ ಸ್ಟೇಷನ್ನುಗಳು ಮತ್ತು ಮಾರ್ಗಗಳಲ್ಲಿ ಸಂಚರಿಸುತ್ತಾರೆ.

ಇದನ್ನೂ ಓದಿ26 ಮರೀನ್ ರಫೇಲ್ ಮತ್ತು ಸ್ಕಾರ್ಪೀನ್ ಸಬ್‌ಮರೀನ್ ಖರೀದಿಗಿಂತಲೂ ಹೆಚ್ಚಾಗಿ ಬೆಳೆಯಬೇಕಿದೆ ಭಾರತ-ಫ್ರಾನ್ಸ್ ಸಂಬಂಧ

ಹಿಟಾಚಿ ಸಂಸ್ಥೆ ಈ ಸಾಧನೆಯನ್ನು ಸಾಕಾರಗೊಳಿಸಿದ ತಂತ್ರಜ್ಞಾನದ ಕುರಿತು ಮತ್ತು ಭಾರತದ ರಾಪಿಡ್ ಟ್ರಾನ್ಸಿಟ್ ವ್ಯವಸ್ಥೆಯಲ್ಲಿ (ಆರ್‌ಟಿಎಸ್) ಬದಲಾವಣೆ ತರಲು ಸಾಧ್ಯವಾದ ಕುರಿತು ಹೆಮ್ಮೆ ಹೊಂದಿದೆ. ಕಳೆದ ಹತ್ತು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ 312 ಉದ್ಯೋಗಿಗಳು ಮತ್ತು 300 ಗುತ್ತಿಗೆ ಆಧಾರಿತ ನೌಕರರು ಹಿಟಾಚಿ ರೈಲ್ ಎಸ್‌ಟಿಎಸ್ ಸಂಸ್ಥೆಯ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ನಿಷ್ಠಾವಂತ ಮತ್ತು ಅನುಭವಿ ಉದ್ಯೋಗಿಗಳು ಸಂಸ್ಥೆಯ ಯಶಸ್ಸಿಗೆ ಕಾರಣರಾಗಿದ್ದಾರೆ.

ಸಂಸ್ಥೆಯು ಅನುಭವಿ ಉದ್ಯೋಗಿಗಳೊಡನೆ, ಪ್ರತಿಭಾವಂತ ಯುವ ಇಂಜಿನಿಯರ್‌ಗಳನ್ನೂ ಹೊಂದಿದ್ದು, ಹೆಚ್ಚಿನ ತಾಂತ್ರಿಕ ದಕ್ಷತೆಯನ್ನು ಸಾಧಿಸಲು ಸಾಧ್ಯವಾಗಿದೆ. ಅದರೊಡನೆ, ಭಾರತದಲ್ಲಿರುವ ಅಪಾರ ಪ್ರಮಾಣದ ಪ್ರತಿಭಾವಂತ ಸಿಗ್ನಲಿಂಗ್ ಮತ್ತು ಸಾಫ್ಟ್‌ವೇರ್ ಇಂಜಿನಿಯರ್‌ಗಳ ಲಭ್ಯತೆಯೂ ಸಂಸ್ಥೆಗೆ ನೆರವಾಗಿದೆ.

ಹಿಟಾಚಿ ರೈಲ್ ಎಸ್‌ಟಿಎಸ್ ಮೊತ್ತಮೊದಲ ಬಾರಿಗೆ 2002ರಲ್ಲಿ ಆಗ್ನೇಯ ರೈಲ್ವೇಯ, ಜಾರ್ಖಂಡ್ ರಾಜ್ಯದ, ಪೂರ್ವ ಸಿಂಘ್‌ಭೂಮ್ ಜಿಲ್ಲೆಯ, ಚೌಕೀಲಾ ರೈಲ್ವೇ ನಿಲ್ದಾಣದಲ್ಲಿ ಕಂಪ್ಯೂಟರ್ ಆಧಾರಿತ ಇಂಟರ್‌ಲಾಕಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿತು. ಹಿಟಾಚಿ ರೈಲ್ ಎಸ್‌ಟಿಎಸ್ ಕಾನ್‌ಪುರ್ ಮತ್ತು ಮುಘಲ್‌ಸರಾಯ್ ಮಧ್ಯದ 400 ಕಿಲೋಮೀಟರ್‌ಗೂ ಹೆಚ್ಚಿನ ರೈಲ್ವೇ ಮಾರ್ಗದಲ್ಲಿ ಆಟೋ ಬ್ಲಾಕ್ ಸಿಗ್ನಲಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿತು. ಹಿಟಾಚಿ ಸಂಸ್ಥೆ ಭಾರತೀಯ ರೈಲ್ವೆಯ ಸರಕು ಮತ್ತು ಪ್ರಯಾಣಿಕರ ಸಾಗಾಟ ಕಾರ್ಯಾಚರಣಾ ಸಾಮರ್ಥ್ಯ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದು, ಉತ್ತರ ಪ್ರದೇಶದ ತುಂಡ್ಲಾದಲ್ಲಿರುವ ತನ್ನ ಸೆಂಟ್ರಲೈಸ್ಡ್ ಟ್ರಾಫಿಕ್ ಕಂಟ್ರೋಲ್ (ಸಿಟಿಸಿ) ಮೂಲಕ ಪೂರ್ಣ ಸುರಕ್ಷತೆಯನ್ನು ಒದಗಿಸಿದೆ.

ಹಿಟಾಚಿ ರೈಲ್ ಎಸ್‌ಟಿಎಸ್ ಸಂಸ್ಥೆ ಮೊತ್ತಮೊದಲ ಬಾರಿಗೆ ಇಟಿಸಿಎಸ್ ಲೆವೆಲ್ 1 ಟ್ರೈನ್ ಪ್ರೊಟೆಕ್ಷನ್ ವಾರ್ನಿಂಗ್ ವ್ಯವಸ್ಥೆಯನ್ನು ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಒದಗಿಸಿದ್ದು, ಇದು ಪ್ರತಿ ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಚಲಿಸುವ ಭಾರತದ ಅತಿವೇಗದ ರೈಲು ಗಟಿಮಾನ್ ಎಕ್ಸ್‌ಪ್ರೆಸ್‌ನಲ್ಲಿ ಕಾರ್ಯಾಚರಿಸುತ್ತದೆ.

ಇದನ್ನೂ ಓದಿChandrayaan-3 Mission: ಚಂದ್ರಯಾನ ಯೋಜನೆಗಳು: ಭಾರತದ ಚಂದ್ರ ಅನ್ವೇಷಣೆ ಮತ್ತು ಸಾಧನೆಗಳು

ಹಿಟಾಚಿ ಸಂಸ್ಥೆ ನವಿ ಮುಂಬೈ ಮೆಟ್ರೋದ ಮೊದಲ ಟರ್ನ್ ಕೀ ಮೆಟ್ರೋ ಪ್ರಾಜೆಕ್ಟ್ ರೋಲಿಂಗ್ ಸ್ಟಾಕ್, ಸಿಗ್ನಲಿಂಗ್, ದೂರ ಸಂಪರ್ಕ, ಹಳಿಯ ಕೆಲಸ, ವಿದ್ಯುದೀಕರಣ, ಸ್ವಯಂಚಾಲಿತ ಹಣ ಸಂಗ್ರಹ, ಹಾಗೂ ಭಾರತದ ಮೊದಲ ನೀರಿನಾಳದ ಮೆಟ್ರೋ ಆದ ಕೋಲ್ಕತ್ತಾದ ರೈಲ್ ಸಿಬಿಟಿಸಿ ಸಿಗ್ನಲಿಂಗ್ ಮತ್ತು ಟೆಲಿಕಮ್ಯುನಿಕೇಶನ್ ವ್ಯವಸ್ಥೆ, ಮತ್ತು 24 ತಿಂಗಳುಗಳಲ್ಲಿ ನೋಯ್ಡಾ ಮೆಟ್ರೋದ ಸಿಗ್ನಲಿಂಗ್ ಮತ್ತು ಟೆಲಿಕಮ್ಯುನಿಕೇಶನ್ ವ್ಯವಸ್ಥೆಯನ್ನು ಪೂರ್ಣಗೊಳಿಸಿದೆ. ಇತ್ತೀಚೆಗೆ ಸಂಸ್ಥೆಗೆ ಚೆನ್ನೈಯಲ್ಲಿ ಸಿಬಿಟಿಸಿ ಸಿಗ್ನಲಿಂಗ್ ವ್ಯವಸ್ಥೆಯನ್ನು ಜಾರಿಗೆ ತರುವ ಅತಿದೊಡ್ಡ ಗುತ್ತಿಗೆಯೂ ಲಭ್ಯವಾಗಿದೆ.

ನಾವೀನ್ಯತೆ ಸದಾ ಅಭಿವೃದ್ಧಿಗೆ ಮಾರ್ಗವಾಗಿದೆ

ಅಭಿವೃದ್ಧಿ ಸಾಧಿಸಲು ನಾವೀನ್ಯತೆ ಅತ್ಯಂತ ಪ್ರಮುಖವಾಗಿದೆ. ನಾವು ರೈಲ್ವೆ ಮತ್ತು ಮಾಸ್ ಟ್ರಾನ್ಸಿಟ್ ಸಿಸ್ಟಮ್‌ಗೆ ಹೊಸ ತಂತ್ರಜ್ಞಾನಗಳನ್ನು ಒದಗಿಸಿ, ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ನಗರೀಕರಣದ ಸವಾಲುಗಳನ್ನು ಎದುರಿಸಲು ಸಹಾಯ ಮಾಡಿದ್ದೇವೆ. ನಮ್ಮ ಗುರಿಯೆಂದರೆ, ಭಾರತದ ಸಾಗಾಣಿಕಾ ವ್ಯವಸ್ಥೆಗೆ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುವುದು ಮತ್ತು ರೈಲ್ವೇ ಮತ್ತು ಮಾಸ್ ಟ್ರಾನ್ಸಿಟ್ ಸಂಸ್ಥೆಗಳಿಗೆ ಪ್ರಥಮ ಆಯ್ಕೆಯ ಪೂರೈಕೆದಾರನಾಗುವುದುಎಂದು ಹಿಟಾಚಿ ಎಸ್‌ಟಿಎಸ್ ಇಂಡಿಯಾ ಸಂಸ್ಥೆಯ ಪೂರ್ಣಾವಧಿ ನಿರ್ದೇಶಕ ಮತ್ತು ರೈಲ್ ಕಂಟ್ರೋಲ್ ಮುಖ್ಯಸ್ಥ ಮನೋಜ್ ಕುಮಾರ್ ಕೆ ಹೇಳುತ್ತಾರೆ.

ಹಿಟಾಚಿ ರೈಲ್ ಎಸ್‌ಟಿಎಸ್ (ಮೊದಲು ಅನ್ಸಾಲ್ಡೋ ಎಸ್‌ಟಿಎಸ್ ಎಂದು ಹೆಸರಾದ ಸಂಸ್ಥೆ) ಒಂದು ಜಾಗತಿಕ ಸಂಸ್ಥೆಯಾಗಿದ್ದು, ಕಳೆದ ಕೆಲ ದಶಕಗಳಿಂದ ರೈಲ್ವೇ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಪ್ರಮುಖವಾಗಿ ಒದಗಿಸುತ್ತಾ ಬಂದಿದೆ. ಸಂಸ್ಥೆಯು ಮೆಟ್ರೋ ರೈಲು, ಪ್ರಯಾಣಿಕ ರೈಲು ಮತ್ತು ಹೈಸ್ಪೀಡ್ ರೋಲಿಂಗ್ ಸ್ಟಾಕ್ ಗಳಿಗೆ ಟ್ರಾಫಿಕ್ ನಿರ್ವಹಣೆ, ಟ್ರ್ಯಾಕ್ಷನ್ ಮತ್ತು ಸಿಗ್ನಲಿಂಗ್ ವ್ಯವಸ್ಥೆಗಳನ್ನು ಒದಗಿಸುತ್ತದೆ. ಭಾರತದಲ್ಲಿ ಸಂಸ್ಥೆ 1,100ಕ್ಕೂ ಹೆಚ್ಚು ಮುಖ್ಯ ರೈಲ್ವೇ ನಿಲ್ದಾಣಗಳಿಗೆ ಸೇವೆ ಒದಗಿಸಿದ್ದು, ಅತ್ಯಾಧುನಿಕ ಗುಣಮಟ್ಟದ ಇಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆಗಳನ್ನು ಒದಗಿಸುತ್ತದೆ.

Girish Linganna

ವರದಿ: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು

ಈ ವಿಭಾಗದಲ್ಲಿ ಇನ್ನಷ್ಟು ಸುದ್ದಿಗಳು