ನವದೆಹಲಿ, ಸೆಪ್ಟೆಂಬರ್ 3: ಜೆಟ್ ಏರ್ವೇಸ್ ಸಂಸ್ಥಾಪಕ 70 ವರ್ಷದ ನರೇಶ್ ಗೋಯಲ್ (Naresh Goyal) ಅವರನ್ನು ಜಾರಿ ನಿರ್ದೇಶನಾಲಯ ಮೊನ್ನೆ ಶುಕ್ರವಾರ ರಾತ್ರಿ (ಸೆ. 1) ಬಂಧಿಸಿತ್ತು. 538 ಕೋಟಿ ರೂ ಮೊತ್ತದ ಅಕ್ರಮ ಹಣ ವರ್ಗಾವಣೆ (Money Laundering) ಪ್ರಕರಣದಲ್ಲಿ ಅವರು ಸಿಲುಕಿಕೊಂಡಿದ್ದಾರೆ. ಕೆನರಾ ಬ್ಯಾಂಕ್ನಿಂದ ಜೆಟ್ ಏರ್ವೇಸ್ ಪಡೆದ ಸಾಲಗಳಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಗೋಯಲ್ ಅವರನ್ನು ಸೆಪ್ಟೆಂಬರ್ 11ರವರೆಗೂ ಇಡಿ ಕಸ್ಟಡಿಗೆ (ED Custody) ಒಪ್ಪಿಸಲಾಗಿದೆ. ಮನಿ ಲಾಂಡರಿಂಗ್ ಆ್ಯಕ್ಟ್ ಅಡಿಯಲ್ಲಿ ಗೋಯಲ್ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕೆನರಾ ಬ್ಯಾಂಕ್ ದೂರಿನ ಮೇರೆಗೆ ಜೆಟ್ ಏರ್ವೇಸ್ ಸಂಸ್ಥೆಯ (Jet Airways) ನರೇಶ್ ಗೋಯಲ್, ಅವರ ಪತ್ನಿ ಅನಿತಾ ಹಾಗು ಸಂಸ್ಥೆಯ ಕೆಲ ಮಾಜಿ ಎಕ್ಸಿಕ್ಯೂಟಿವ್ಗಳ ವಿರುದ್ಧ ಸಿಬಿಐ 2023ರ ಮೇ 3ರಂದು ಎಫ್ಐಆರ್ ದಾಖಲಿಸಿತ್ತು. ಇದರ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಒಂದು ಸಮಯದಲ್ಲಿ ಭಾರತದ ಅತಿದೊಡ್ಡ ಖಾಸಗಿ ವೈಮಾನಿಕ ಸಂಸ್ಥೆ ಎನಿಸಿದ್ದ ಜೆಟ್ ಏರ್ವೇಸ್ ಸಾಕಷ್ಟು ಸಾಲದ ಸಮಸ್ಯೆಗೆ ಸಿಲುಕಿ 2019ರಲ್ಲಿ ಕಾರ್ಯಾಚರಣೆ ನಿಲ್ಲಿಸಿತು. ಅದಾದ ಬಳಿಕ ಸಾಲ ಮರುರಚನೆಯ ಪ್ರಕ್ರಿಯೆ ನಡೆಯಿತು. 2021ರ ಜೂನ್ನಲ್ಲಿ ಯುಎಐ ಮೂಲದ ಉದ್ಯಮಿ ಮುರಾರಿ ಲಾಲ್ ಜಲನ್ ಮತ್ತು ಲಂಡನ್ ಮೂಲದ ಕಲ್ರಾಕ್ ಕ್ಯಾಪಿಟಲ್ ಸಂಸ್ಥೆಗಳು ಜಂಟಿಯಾಗಿ ಜೆಟ್ ಏರ್ವೇಸ್ ಅನ್ನು ಖರೀದಿಸಿದವು.
ಇದನ್ನೂ ಓದಿ: ಕೋಟಕ್ ಮಹೀಂದ್ರಾ ಬ್ಯಾಂಕ್ ಎಂಡಿ ಮತ್ತು ಸಿಇಒ ಸ್ಥಾನಕ್ಕೆ ಉದಯ್ ಕೋಟಕ್ ರಾಜೀನಾಮೆ
ಕೆನರಾ ಬ್ಯಾಂಕ್ ಜೆಟ್ ಏರ್ವೇಸ್ ಲಿ ಸಂಸ್ಥೆಗೆ (ಜೆಐಎಲ್) 848.86 ಕೋಟಿ ರೂ ಮೊತ್ತದಷ್ಟು ಸಾಲ ಮತ್ತು ಕ್ರೆಡಿಟ್ ಲಿಮಿಟ್ ಕೊಟ್ಟಿತ್ತು. ಈ ಪೈಕಿ 538.62 ಕೋಟಿ ರೂ ಹಣವನ್ನು ಮರುಪಾವತಿಸಲಾಗಿಲ್ಲ ಎಂಬುದು ಕೆನರಾ ಬ್ಯಾಂಕ್ ಆರೋಪ.
ಬ್ಯಾಂಕ್ನಿಂದ ಪಡೆದ ಸಾಲದಲ್ಲಿ ಬಹಳಷ್ಟು ಹಣವನ್ನು ಗೋಯಲ್ ಕುಟುಂಬದ ಖಾಸಗಿ ವೆಚ್ಚಕ್ಕೆ ಬಳಸಿಕೊಳ್ಳಲಾಗಿದೆ. ಅಂದರೆ ಗೋಯಲ್ ಕುಟುಂಬದ ಮನೆ ನಿರ್ವಹಣೆ ವೆಚ್ಚಗಳು, ಒಡವೆ, ಪೀಠೋಕರಣ, ಬಟ್ಟೆಬರೆ ಇತ್ಯಾದಿಗಳಿಗೆ ವ್ಯಯಿಸಲಾಗಿದೆ. 538 ಕೋಟಿ ರೂ ಮೊತ್ತದ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬುದು ಕೆನರಾ ಬ್ಯಾಂಕ್ ನೀಡಿದ ದೂರಿನ ಪ್ರಮುಖ ಅಂಶ.
ಕೆನರಾ ಬ್ಯಾಂಕ್ ಮಾತ್ರವಲ್ಲ, ಎಸ್ಬಿಐ ಸೇರಿ ಇನ್ನೂ ಹಲವು ಬ್ಯಾಂಕುಗಳಿಂದ ಜೆಟ್ ಏರ್ವೇಸ್ ಸಂಸ್ಥೆ 6,000 ಕೋಟಿ ರೂಗಳಷ್ಟು ಸಾಲ ಪಡೆದು ತೀರಿಸಿಲ್ಲ. ಕೆನರಾ ಬ್ಯಾಂಕ್ ಅರ್ನ್ಸ್ಟ್ ಅಂಡ್ ಯಂಗ್ (ಇವೈ) ಎಂಬ ಆಡಿಟಿಂಗ್ ಕಂಪನಿ ವತಿಯಿಂದ ಜೆಟ್ ಏರ್ವೇಸ್ ಸಂಸ್ಥೆಯ ಲೆಕ್ಕಪತ್ರಗಳ ಆಡಿಟ್ ಮಾಡಿಸಿತು. ಆಗ ಅಕ್ರಮ ಹಣ ವರ್ಗಾವಣೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ