LIC Market Capitalisation: ಎಲ್ಐಸಿ ಮಾರುಕಟ್ಟೆ ಮೌಲ್ಯ 23 ದಿನದಲ್ಲಿ 1.50 ಲಕ್ಷ ಕೋಟಿ ರೂಪಾಯಿ ಖಲ್ಲಾಸ್
ಎಲ್ಐಸಿ ಷೇರು ಮೇ 17ನೇ ತಾರೀಕಿನಂದು ಲಿಸ್ಟಿಂಗ್ ಆದ ನಂತರ 23 ದಿನದಲ್ಲಿ 1.50 ಲಕ್ಷ ಕೋಟಿ ರೂಪಾಯಿ ಕೊಚ್ಚಿಹೋಗಿದೆ. ಜೂನ್ 9ರಂದು ಮತ್ತೆ ಹೊಸ ಸಾರ್ವಕಾಲಿಕ ಕನಿಷ್ಠ ಮಟ್ಟದ ದಾಖಲೆ ಬರೆದಿದೆ.
ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಷೇರುಗಳ ಬೆಲೆ ಇಳಿಕೆ ಮುಂದುವರಿದಿದೆ. ಬಿಎಸ್ಇಯಲ್ಲಿ ಜೂನ್ 8ನೇ ತಾರೀಕಿನ ಮಧ್ಯಾಹ್ನದ ವಹಿವಾಟಿನಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 723 ರೂಪಾಯಿಗೆ ಕುಸಿದಿದೆ. ಐಪಿಒದಲ್ಲಿ ವಿತರಣೆ ಮಾಡಿದ್ದ 949 ರೂಪಾಯಿಗೆ ಹೋಲಿಸಿದಲ್ಲಿ ಶೇ 25ರಷ್ಟು ಬೆಲೆ ಇಳಿದಿದೆ. ದೇಶದ ಅತಿ ದೊಡ್ಡ ಇನ್ಷೂರೆನ್ಸ್ ಕಂಪೆನಿಯ ಮಾರುಕಟ್ಟೆ ಮೌಲ್ಯದಲ್ಲಿ ಅತಿ ದೊಡ್ಡ ಪ್ರಮಾಣದ ನಷ್ಟವಾಗಿದೆ. ಲಿಸ್ಟಿಂಗ್ ಆದ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ನಾಲ್ಕನೇ ಒಂದು ಭಾಗದಷ್ಟು ಮಾರುಕಟ್ಟೆ ಮೌಲ್ಯ ಕೊಚ್ಚಿ ಹೋಗಿದೆ. ವಿತರಣೆ ಬೆಲೆಯಾದ 949ರ ಲೆಕ್ಕಾಚಾರದಲ್ಲಿ ಎಲ್ಐಸಿಯ ಮಾರುಕಟ್ಟೆ ಮೌಲ್ಯ 6,00,242 ಕೋಟಿ ರೂಪಾಯಿ (6 ಲಕ್ಷ ಕೋಟಿ ರೂಪಾಯಿ). ಆದರೆ ಆ ಮೌಲ್ಯ ಈಗ 4,58,024 ಕೋಟಿ ರೂಪಾಯಿಗೆ ಕುಸಿದುಹೋಗಿದೆ. ಇದು ಬಿಎಸ್ಇಯಲ್ಲಿನ ಮಾಹಿತಿ.
ಲಿಸ್ಟಿಂಗ್ ಆದ ದಿನದಿಂದಲೂ ಸತತವಾಗಿಕುಸಿತ ಕಾಣುತ್ತಲೇ ಬರುತ್ತಿದೆ ಎಲ್ಐಸಿ ಕಂಪೆನಿ ಷೇರು. ಮೇ 17, 2022ರಂದು ಈ ಷೇರಿನ ಲಿಸ್ಟಿಂಗ್ ಆಯಿತು. ಷೇರು ಮಾರುಕಟ್ಟೆಯ ರಜಾದಿನಗಳನ್ನೂ ಒಳಗೊಂಡಂತೆ ಈ ತನಕ ಲಿಸ್ಟಿಂಗ್ ಆಗಿ 23 ದಿನಗಳು ಕಳೆದಿವೆ. ಈ ಅವಧಿಯಲ್ಲಿ 1.50 ಲಕ್ಷ ಕೋಟಿ ರೂಪಾಯಿ ಕರಗಿ ಹೋಗಿದೆ. ಅಂದರೆ ದಿನಕ್ಕೆ 6,500 ಕೋಟಿ ರೂಪಾಯಿ (ರಜಾ ದಿನಗಳಲ್ಲೂ) ಮಾರುಕಟ್ಟೆ ಮೌಲ್ಯ ನಷ್ಟ ಆದಂತಾಯಿತು. ಎಲ್ಐಸಿಯ ಷೇರು ಲಿಸ್ಟಿಂಗ್ ಆದ ಮೇಲೆ ಪೋಸ್ಟ್ ಮಾಡಲಾದ ಏಕೀಕೃತ ನಿವ್ವಳ ಲಾಭದಲ್ಲಿ ಶೇ 17ರಷ್ಟು ಕುಸಿದು, 2,409 ಕೋಟಿ ರೂಪಾಯಿ ಮುಟ್ಟಿತು. ವರ್ಷದ ಹಿಂದೆ ಇದೇ ಅವಧಿಯಲ್ಲಿ ಲಾಭ 2,917 ಕೋಟಿ ರೂಪಾಯಿ ಇತ್ತು.
ಎಲ್ಐಸಿ ಒಟ್ಟು ಆದಾಯ 2,12,230 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಈ ಹಿಂದಿನ ಹಣಕಾಸು ವರ್ಷದಲ್ಲಿ 1,90,098 ಕೋಟಿ ರೂಪಾಯಿ ಆಗಿತ್ತು. ಎಲ್ಐಸಿ ನಿವ್ವಳ ಪ್ರೀಮಿಯಂ ಆದಾಯ 1.44 ಲಕ್ಷ ಕೋಟಿ ರೂ. ಆಗಿದೆ. ವರ್ಷದ ಹಿಂದೆ 1.22 ಲಕ್ಷ ಕೋಟಿ ರೂಪಾಯಿ ಇತ್ತು. ಸರ್ಕಾರ ನಡೆಸುವ ಎಲ್‌ಐಸಿಯು ಭಾರತದಲ್ಲಿನ ಅತಿ ದೊಡ್ಡ ವಿಮಾ ಸಂಸ್ಥೆಯಾಗಿದೆ. ಮಾರ್ಚ್ 31, 2022ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ವೈಯಕ್ತಿಕ ಪಾಲಿಸಿಗಳಲ್ಲಿ ಕಂಪೆನಿಯ ಮಾರುಕಟ್ಟೆ ಪಾಲು ಶೇ 74.6 ಆಗಿತ್ತು. ಗುಂಪು ವ್ಯವಹಾರದಲ್ಲಿ ಮಾರ್ಚ್ 31, 2022ಕ್ಕೆ ಕೊನೆಗೊಂಡ ವರ್ಷದಲ್ಲಿ ಎಲ್ಐಸಿಯ ಮಾರುಕಟ್ಟೆ ಪಾಲು ಪಾಲಿಸಿಗಳು/ಸ್ಕೀಮ್‌ಗಳ ಸಂಖ್ಯೆಯಿಂದ ಮೊದಲ ವರ್ಷದ ಪ್ರೀಮಿಯಂ ಮೂಲಕ ಶೇ 89 ಮತ್ತು ಶೇ 76.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: LIC Share: 6 ಲಕ್ಷ ಕೋಟಿ ರೂಪಾಯಿಗಿಂತ ಕೆಳಗಿಳಿದ ಎಲ್ಐಸಿ ಮಾರುಕಟ್ಟೆ ಮೌಲ್ಯ