AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್​ಪಿಜಿ ಸಬ್ಸಿಡಿ ರದ್ದುಪಡಿಸಿದ ಕೇಂದ್ರ ಸರ್ಕಾರ: ಉಜ್ವಲಾ ಯೋಜನೆ ಫಲಾನುಭವಿಗಳಿಗೆ ಮಾತ್ರ ಸಹಾಯಧನ

ಈಗಾಗಲೇ ಹಣದುಬ್ಬರದಿಂದ ತತ್ತರಿಸಿರುವ ಮಧ್ಯಮ ವರ್ಗಕ್ಕೆ ಎಲ್​ಪಿಜಿ ಬೆಲೆ ಏರಿಕೆ ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡಲಿದೆ.

ಎಲ್​ಪಿಜಿ ಸಬ್ಸಿಡಿ ರದ್ದುಪಡಿಸಿದ ಕೇಂದ್ರ ಸರ್ಕಾರ: ಉಜ್ವಲಾ ಯೋಜನೆ ಫಲಾನುಭವಿಗಳಿಗೆ ಮಾತ್ರ ಸಹಾಯಧನ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jun 03, 2022 | 9:26 AM

Share

ದೆಹಲಿ: ಕೇಂದ್ರ ಸರ್ಕಾರವು ಅಡುಗೆ ಅನಿಲ ಸಿಲಿಂಡರ್​ಗಳಿಗೆ (Liquid Petrolium Gas – LPG) ನೀಡುತ್ತಿದ್ದ ಸಹಾಯಧನವನ್ನು ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಹೇಳಿದೆ. ಕಡುಬಡವರಿಗೆಂದು ಕೇಂದ್ರ ಸರ್ಕಾರವು ರೂಪಿಸಿರುವ ‘ಉಜ್ವಲಾ’ ಯೋಜನೆಯ ಫಲಾನುಭವಿಗಳಿಗೆ ಮಾತ್ರ ಮುಂದಿನ ದಿನಗಳಲ್ಲಿ ಸರ್ಕಾರದ ಸಹಾಯಧನ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಎಲ್​ಪಿಜಿ ಸಿಲಿಂಡರ್ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂದು ವಿಶ್ಲೇಷಿಸಲಾಗಿದ್ದು, ಈಗಾಗಲೇ ಹಣದುಬ್ಬರದಿಂದ ತತ್ತರಿಸಿರುವ ಮಧ್ಯಮ ವರ್ಗಕ್ಕೆ ಎಲ್​ಪಿಜಿ ಬೆಲೆ ಏರಿಕೆ ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡಲಿದೆ.

ಬಹುದೀರ್ಘ ಅವಧಿಗೆ ಸಬ್ಸಿಡಿಗಳನ್ನು ಮುಂದುವರಿಸಲು ಆಗುವುದಿಲ್ಲ. ಶಾಶ್ವತವಾಗಿ ಅವುಗಳನ್ನು ಉಳಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಪೆಟ್ರೋಲಿಯಂ ಖಾತೆ ಸಚಿವ ಹರ್​ದೀಪ್ ಸಿಂಗ್ ಪುರಿ ಹೇಳಿದರು. ಜೂನ್ 2020ರಿಂದಲೂ ಅಡುಗೆ ಅನಿಲಕ್ಕೆ ಯಾವುದೇ ಸಬ್ಸಿಡಿ ಸಿಗುತ್ತಿಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇ 21ರಂದು ಘೋಷಿಸಿದ ವಿಶೇಷ ರಿಯಾಯ್ತಿಗಳು ಮಾತ್ರ ಅನ್ವಯವಾಗುತ್ತಿವೆ ಎಂದು ಪೆಟ್ರೋಲಿಯಂ ಇಲಾಖೆ ಕಾರ್ಯದರ್ಶಿ ಪಂಕಜ್ ಜೈನ್ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ₹ 200ರ ತೆರಿಗೆ ಕಡಿತ ಘೋಷಿಸಿದ್ದರು. ಸಾಮಾನ್ಯ ವರ್ಗದ ಎಲ್​ಪಿಜಿ ಬಳಕೆದಾರರಿಗೂ ರಿಯಾಯ್ತಿ ಸಿಗಬಹುದು ಎಂಬ ನಿರೀಕ್ಷೆಗಳನ್ನು ಇದು ಹುಟ್ಟುಹಾಕಿತ್ತು. ದೇಶದ 21.5 ಕೋಟಿ ಸಾಮಾನ್ಯ ವರ್ಗದ ಗ್ರಾಹಕರು ಸಿಲಿಂಡರ್ ಖರೀದಿಸಲು ತಿಂಗಳಿಗೆ ₹ 1,000ಕ್ಕೂ ಹೆಚ್ಚು ಹಣ ತೆರಬೇಕಾಗಿದೆ.

ಉಜ್ವಲಾ ಯೋಜನೆಯಡಿ ದೇಶದ ಸುಮಾರು 9 ಕೋಟಿ ಬಡ ಕುಟುಂಬಗಳಿಗೆ ಕೇಂದ್ರ ಸರ್ಕಾರವು ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಿದೆ. ಈ ಯೋಜನೆಯಡಿ ಸಿಗುವ ಸಬ್ಸಿಡಿಯನ್ನು ಗ್ಯಾಸ್ ಬುಕ್ ಮಾಡಿದಾಗ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ. ಆದರೆ ಪ್ರಸ್ತುತ ಅಡುಗೆ ಅನಿಲ ಸಿಲಿಂಡರ್​ನ ಬೆಲೆಯು ದೇಶಾದ್ಯಂತ ₹ 1,000 ದಾಟಿರುವುದರಿಂದ ಫಲಾನುಭವಿಗಳಿಗೆ ಸಿಗುತ್ತಿರುವ ಸಬ್ಸಿಡಿ ಮೊತ್ತವು ಕಡಿಮೆ ಎನಿಸಿದೆ. ದೇಶದಲ್ಲಿ ಹೊಗೆರಹಿತ ಇಂಧನ ಬಳಕೆಗೆ ಉತ್ತೇಜನ ನೀಡಬೇಕು ಎಂಬುದು ಉಜ್ವಲಾ ಯೋಜನೆಯ ಮುಖ್ಯ ಉದ್ದೇಶವಾಗಿತ್ತು.

ಉಜ್ವಲಾ ಯೋಜನೆ ಫಲಾನುಭವಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವುದನ್ನು ಕೇಂದ್ರ ಸಚಿವ ಪುರಿ ಒಪ್ಪಲಿಲ್ಲ. 2021-22ರಲ್ಲಿ ಪ್ರತಿ ಫಲಾನುಭವಿಯೂ ಸರಾಸರಿ 3.68ರಷ್ಟು ಸಿಲಿಂಡರ್​ಗಳನ್ನು ಪಡೆದುಕೊಂಡಿದ್ದಾರೆ. ಒಂದಾದರೂ ಸಿಲಿಂಡರ್ ಖರೀದಿಸದಿರುವ ಫಲಾನುಭವಿಗಳ ಸಂಖ್ಯೆಯು 2019-20ರಲ್ಲಿ 1.8 ಕೋಟಿಯಿತ್ತು. ಆ ಪ್ರಮಾಣವು 2021-22ರಲ್ಲಿ 1.08 ಕೋಟಿಗೆ ಇಳಿಕೆಯಾಗಿದೆ ಎಂದು ವಿವರಿಸಿದರು.

ಇದನ್ನು ಓದಿ: LPG Price: ವಾಣಿಜ್ಯ ಸಿಲಿಂಡರ್ ಬೆಲೆ 135 ರೂಪಾಯಿ ಇಳಿಕೆ

ಕಳೆದ ಆರು ತಿಂಗಳಲ್ಲಿ ಅಡುಗೆ ಅನಿಲದ ಬೆಲೆಯು ಶೇ 7ರಷ್ಟು ಹೆಚ್ಚಾಗಿದೆ. ಬೆಂಚ್​ಮಾರ್ಕ್ ಆಗಿರುವ ಸೌದಿ ಸಿಪಿಯ ಬೆಲೆಯು ಶೇ 43ರಷ್ಟು ಹೆಚ್ಚಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಕುರಿತು ಪ್ರತಿಕ್ರಿಯಿಸಿದ ಅವರು, ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ತೈಲ ಸಂಸ್ಕರಣಾ ಕಂಪನಿಗಳೇ ನಿರ್ಧರಿಸುತ್ತವೆ. ಈ ಸ್ವಾತಂತ್ರ್ಯವನ್ನು ಅವುಗಳಿಗೆ ನೀಡಲಾಗಿದೆ ಎಂದು ಹೇಳಿದರು. ಮರ್ಚ್ 22ರಿಂದ ಈವರೆಗೆ ಇಂಧನ ಬೆಲೆಗಳನ್ನು ಹೆಚ್ಚಿಸಿಲ್ಲ. ಆದರೆ ಅಬಕಾರಿ ಸುಂಕವನ್ನು ಪೆಟ್ರೋಲ್ ಮೇಲೆ ₹ 8 ಹಾಗೂ ಡೀಸೆಲ್ ಮೇಲೆ ₹ 6 ಕಡಿತಗೊಳಿಸಿದ್ದೇವೆ ಎಂದು ವಿವರಿಸಿದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ