ನವದೆಹಲಿ, ಆಗಸ್ಟ್ 27: ಷೇರು ಮಾರುಕಟ್ಟೆ ಇತ್ಯಾದಿ ವಿವಿಧ ಹೂಡಿಕೆ ಸ್ಥಳಗಳು ಅತಿಯಾಗಿ ಉಬ್ಬರ ಸ್ಥಿತಿಯಲ್ಲಿವೆ. ಇವು ಠುಸ್ ಆಗೋದು ನಿಶ್ಚಿತ. ಚಿನ್ನ, ಬೆಳ್ಳಿ ಇತ್ಯಾದಿ ಅಮೂಲ್ಯ ಲೋಹಗಳ ಮೇಲಿನ ಹೂಡಿಕೆ ಇದ್ದುದರಲ್ಲಿ ಸುರಕ್ಷಿತ ಎಂದು ಹೂಡಿಕೆ ತಜ್ಞ ಮತ್ತು ಬರಹಗಾರ ಮಾರ್ಕ್ ಫೇಬರ್ ಅಭಿಪ್ರಾಯಪಟ್ಟಿದ್ದಾರೆ. ಇಟಿ ನೌಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಮಾರ್ಕ್ ಫೇಬರ್, ಈ ಅಮೂಲ್ಯ ಲೋಹಗಳು ಹೂಡಿಕೆಗೆ ಅತ್ಯುತ್ತಮ ಅಲ್ಲವಾದರೂ ಸದ್ಯದ ಸಂದರ್ಭದಲ್ಲಿ ಬೇರೆ ಮೂಲಗಳಿಗೆ ಹೋಲಿಸಿದರೆ ಸುರಕ್ಷಿತ ಎನಿಸುತ್ತದೆ ಎಂದಿದ್ದಾರೆ.
ಬ್ಲೂಮ್, ಗ್ಲೂಮ್ ಅಂಡ್ ಡೂಮ್ ಎಂಬ ಖ್ಯಾತ ಪುಸ್ತಕದ ಕರ್ತೃ ಆಗಿರುವ ಮಾರ್ಕ್ ಫೇಬರ್ ಪ್ರಕಾರ ಅಮೆರಿಕದ ಷೇರು ಮಾರುಕಟ್ಟೆ ತೀರಾ ಅತಿಯಾಗಿ ಉಬ್ಬಿದೆ. ಅದರಲ್ಲೂ ಫ್ಯಾಂಗ್ ಸ್ಟಾಕ್ಗಳಂತೂ ಅತಿಹೆಚ್ಚು ಉಬ್ಬಿವೆ. ಈ ಬಬಲ್ ಸಿಡಿಯುವುದು ನಿಶ್ಚಿತ.
ಅಮೆರಿಕದ ಪ್ರಮುಖ ಟೆಕ್ನಾಲಜಿ ಸಂಸ್ಥೆಗಳ ಷೇರುಗಳನ್ನು ಸೇರಿಸಿ ಫ್ಯಾಂಗ್ ಸ್ಟಾಕ್ಸ್ ಎನ್ನುತ್ತಾರೆ. ಫೇಸ್ಬುಕ್, ಅಮೇಜಾನ್, ಆ್ಯಪಲ್, ನೆಟ್ಫ್ಲಿಕ್ಸ್ ಮತ್ತು ಗೂಗಲ್ ಕಂಪನಿಗಳ ಷೇರಿಗೆ FAANG ಎನ್ನುತ್ತಾರೆ. ಮೈಕ್ರೋಸಾಫ್ಟ್, ನಿವಿಡಿಯಾ ಮತ್ತು ಟೆಸ್ಲಾ ಸ್ಟಾಕ್ಗಳನ್ನೂ ಸೇರಿಸಿದರೆ ಇವು ಅಮೆರಿಕ ಷೇರು ಮಾರುಕಟ್ಟೆಯ ಮ್ಯಾಗ್ನಿಫಿಕೆಂಟ್ ಸೆವೆನ್ ಎನ್ನಲಾಗುತ್ತದೆ.
ಇದನ್ನೂ ಓದಿ: ಭಾರತ ಮೂಲದ ಕೇವನ್ ಪರೇಖ್ ಈಗ ಆ್ಯಪಲ್ ಸಿಎಫ್ಒ ಸ್ಥಾನಕ್ಕೆ ಬಡ್ತಿ; ಲೂಕಾ ಮೇಸ್ಟ್ರಿ ಸ್ಥಾನ ಭರ್ತಿ
ಈ ಮ್ಯಾಗ್ನಿಫಿಕೆಂಟ್ ಸೆವೆನ್ ಸ್ಟಾಕ್ಗಳಲ್ಲಿ ಮಾರುಕಟ್ಟೆ ಬಂಡವಾಳ ಬರೋಬ್ಬರಿ 15 ಟ್ರಿಲಿಯನ್ ಡಾಲರ್ಗೂ ಹೆಚ್ಚು. ಭಾರತದ ಜಿಡಿಪಿಯ ಮೂರ್ನಾಲ್ಕು ಪಟ್ಟು ದೊಡ್ಡದು. ಹಾಂಕಾಂಗ್ ಸೇರಿದಂತೆ ಚೀನೀ ಷೇರು ವಿನಿಮಯ ಕೇಂದ್ರಗಳಲ್ಲಿ ಲಿಸ್ಟ್ ಅಗಿರುವ ಎಲ್ಲಾ ಸ್ಟಾಕ್ಗಳ ಮಾರುಕಟ್ಟೆ ಸಂಪತ್ತು ಸೇರಿಸಿದರೂ ಈ ಮ್ಯಾಗ್ನಿಫಿಕೆಂಟ್ ಸೆವೆನ್ಗೆ ಸಾಟಿಯಾಗಲಾಗದು.
ಇಟಿ ನೌ ಸಂದರ್ಶನದಲ್ಲಿ ಮಾರ್ಕ್ ಫೇಬರ್ ಇನ್ನೊಂದು ಪ್ರಮುಖ ವಿಚಾರ ಪ್ರಸ್ತಾಪಿಸಿದ್ದಾರೆ. ಅವರ ಪ್ರಕಾರ ಮುಂದಿನ 10 ವರ್ಷ ಬಹಳ ಕಷ್ಟಕರವಾಗಲಿದೆ. ಪರ್ಚೇಸಿಂಗ್ ಪವರ್ ಅಥವಾ ಖರೀದಿ ಶಕ್ತಿಯನ್ನು ಈ ಹತ್ತು ವರ್ಷ ಯಾರು ಉಳಿಸಿಕೊಳ್ಳುತ್ತಾರೋ ಅವರೇ ಗೆದ್ದಂತೆ.
ತಮಗೆ ಯಾರಾದರು 10 ಮಿಲಿಯನ್ ಡಾಲರ್ ಕೊಟ್ಟು ಮುಂದಿನ ಮೂರು ವರ್ಷದಲ್ಲಿ ಶೇ. 40ರಿಂದ 50ರಷ್ಟು ರಿಟರ್ನ್ನೊಂದಿಗೆ ಮರಳಿಸಬೇಕು ಎಂದು ಹೇಳಿದರೆ ಏನು ಮಾಡುತ್ತೀರಿ, ಎಲ್ಲಿ ಹೂಡಿಕೆ ಮಾಡುತ್ತೀರಿ ಎಂದು ಮಾರ್ಕ್ ಫೇಬರ್ ಅವರನ್ನು ಕೇಳಲಾಯಿತು.
ಇದನ್ನೂ ಓದಿ: ಷೇರು ಗೋಲ್ಮಾಲ್ ಮಾಡಿದರಾ ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ? ಸೆಬಿಯಿಂದ ಶೋಕಾಸ್ ನೋಟೀಸ್
ಅದಕ್ಕವರು ತಾನು ಆ ಹಣವನ್ನು ಕೊಟ್ಟವರಿಗೆ ಮರಳಿಸುತ್ತೇನೆ. ಮುಂದಿನ ಮೂರು ವರ್ಷದಲ್ಲಿ ಅಷ್ಟೊಂದು ರಿಟರ್ನ್ ಕೊಡುವುದು ಸಾಧ್ಯವೇ ಇಲ್ಲ ಎಂದಿದ್ದಾರೆ.
ವಿಸ್ತೃತವಾಗಿ ಹೂಡಿಕೆ ಮಾಡಿದ್ದಾಗ ಮುಂದಿನ ಐದು ವರ್ಷದಲ್ಲಿ ವಾರ್ಷಿಕ ಶೇ. 10ರ ದರದ ಬೆಳವಣಿಗೆ ನಿರೀಕ್ಷಿಸುವುದೂ ಕಷ್ಟವಾಗುತ್ತದೆ ಎನ್ನುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ