ಮಾರುತಿ ಸುಜುಕಿ ಕಂಪೆನಿಗೆ ನಾಲ್ಕನೇ ತ್ರೈಮಾಸಿಕದಲ್ಲಿ 1,166 ಕೋಟಿ ರೂ. ಲಾಭ; 45 ರೂ. ಡಿವಿಡೆಂಡ್ ಘೋಷಣೆ
ಮಾರುತಿ ಸುಜುಕಿ ಕಂಪೆನಿಗೆ 2020-21ರ ಜನವರಿಯಿಂದ ಮಾರ್ಚ್ ತ್ರೈಮಾಸಿಕಕ್ಕೆ 1,166 ಕೋಟಿ ರೂಪಾಯಿ ನಿವ್ವಳ ಲಾಭ ಬಂದಿದೆ. ಕಂಪೆನಿಯಿಂದ ಪ್ರತಿ ಷೇರಿಗೆ 45 ರೂಪಾಯಿ ಡಿವಿಡೆಂಡ್ ಘೋಷಿಸಲಾಗಿದೆ.
ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪೆನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ನಿಂದ 2021 ಜನವರಿಯಿಂದ ಮಾರ್ಚ್ ತ್ರೈಮಾಸಿಕದ ಫಲಿತಾಂಶವನ್ನು ಮಂಗಳವಾರ ಘೋಷಣೆ ಮಾಡಿದ್ದು, ನಿವ್ವಳ ಲಾಭ 1,166 ಕೋಟಿ ರೂಪಾಯಿ ವರದಿ ಆಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಲಾಭದ ಪ್ರಮಾಣವು ಶೇ 9.7ರಷ್ಟು ಇಳಿಕೆ ಆಗಿದೆ. ಹೆಚ್ಚುವರಿಯಾಗಿ ಹೂಡಿಕೆ ಮಾಡಿದ್ದರಿಂದ ಮಾರ್ಕ್-ಟು-ಮಾರ್ಕೆಟ್ ನಷ್ಟದಿಂದಾಗಿ ಕಾರ್ಯನಿರ್ವಹಣೆಯ ಆದಾಯ ಕಡಿಮೆ ಆಗಿದೆ. ಈ ತ್ರೈಮಾಸಿಕದಲ್ಲಿ ಮಾರುತಿ ಕಂಪೆನಿಯ ನಿವ್ವಳ ಮಾರಾಟ 2,295.86 ಕೋಟಿ ರೂಪಾಯಿಯಷ್ಟಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಶೇ 33.6ರಷ್ಟು ಹೆಚ್ಚಳವಾಗಿದೆ.
ಮಾರುತಿ ಹೇಳಿರುವ ಪ್ರಕಾರ, ಕಳೆದ ವರ್ಷ (ಹಣಕಾಸು ವರ್ಷ 2019-20) ನಾಲ್ಕನೇ ತ್ರೈಮಾಸಿಕದಲ್ಲಿ ಕೋವಿಡ್ ಲಾಕ್ಡೌನ್ ಕಾರಣಕ್ಕೆ ದೊಡ್ಡ ಪ್ರಮಾಣದಲ್ಲಿ ಮಾರಾಟ ಪ್ರಮಾಣ ಕಡಿಮೆ ಆಗಿತ್ತು. ಮಾರ್ಚ್ 31, 2021ಕ್ಕೆ ಕೊನೆಯಾದ ನಾಲ್ಕನೇ ತ್ರೈಮಾಸಿಕಕ್ಕೆ ಮಾರುತಿಯಿಂದ 4,92,235 ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಶೇ 27.8ರಷ್ಟು ಹೆಚ್ಚಳವಾಗುತ್ತದೆ. ದೇಶೀಯ ಮಾರುಕಟ್ಟೆಯಲ್ಲಿನ ಮಾರಾಟ 456,707 ಯೂನಿಟ್ ಆಗಿ, ಶೇ 26.7ರಷ್ಟು ಬೆಳವಣಿಗೆ ಸಾಧಿಸಿದೆ. ಇನ್ನು ರಫ್ತು 35,528 ಯೂನಿಟ್ ಆಗಿ, ಶೇ 44.4ರಷ್ಟು ಹೆಚ್ಚಳವಾಗಿದೆ.
ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಆಪರೇಟಿಂಗ್ ಲಾಭ ರೂ. 1250 ಕೋಟಿ ಆಗಿ, ಕಳೆದ ಅವಧಿಗಿಂತ ಶೇ 72.8ರಷ್ಟು ಬೆಳವಣಿಗೆ ಆಗಿದೆ. ಮಾರಾಟ ಸಂಖ್ಯೆಯಲ್ಲಿನ ಹೆಚ್ಚಳ, ಪದಾರ್ಥಗಳ ಬೆಲೆ ಏರಿಕೆ ಹೊರತಾಗಿಯೂ ವೆಚ್ಚ ಕಡಿಮೆ ಪರಿಣಾಮದಿಂದಾಗಿ ಇಂಥದ್ದೊಂದು ಬೆಳವಣಿಗೆ ಆಗಿದೆ ಎಂದು ಕಂಪೆನಿ ಹೇಳಿದೆ. ಸಾಮರ್ಥ್ಯದ ಪೂರ್ಣ ಬಳಕೆಯಲ್ಲಿ ಚೇತರಿಕೆ, ಮಾರಾಟ ಪ್ರಚಾರದ ವೆಚ್ಚದಲ್ಲಿನ ಇಳಿಕೆ ಮತ್ತು ಮಾರಾಟ ಬೆಲೆ ಏರಿಕೆ ಹಾಗೂ ವೆಚ್ಚ ತಗ್ಗಿಸಲು ಹಾಕಿದ ಶ್ರಮದಿಂದಾಗಿ ಇದು ಸಾಧ್ಯವಾಗಿದೆ. ಅಂದಹಾಗೆ ಮಾರುತಿ ಕಂಪೆನಿಯು ಪ್ರತಿ ಷೇರಿಗೆ 45 ರೂಪಾಯಿಯಂತೆ ಡಿವಿಡೆಂಡ್ ಘೋಷಣೆ ಮಾಡಿದೆ.
ಇದನ್ನೂ ಓದಿ: ಮಾರುತಿ ಸುಜುಕಿ ಆಯ್ದ ಕಾರಿನ ಮಾಡೆಲ್ಗಳ ಬೆಲೆಯಲ್ಲಿ ತಕ್ಷಣದಿಂದಲೇ ರೂ. 22,500 ತನಕ ಹೆಚ್ಚಳ
(Maruti Suzuki India Limited (MSIL) announced FY21 Q4 results with net profit of Rs 1166 crores. Declared dividend of Rs 45 per share)