ಬೆಂಗಳೂರು, ಮಾರ್ಚ್ 20: ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ಗಾದೆ ಮಾತು ಕೇಳಿರಬಹುದು. ಸಮಾಜದಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಂಡ ವ್ಯಕ್ತಿಗಳು, ಆ ಋಣ ತೀರಿಸಲು ಸಮಾಜಕ್ಕೆ ಏನಾದರೂ ಕೊಡುಗೆ ಕೊಡುವುದು ಈ ಗಾದೆ ಮಾತಿನ ಅರ್ಥ. ಅಂತೆಯೇ ಬಹಳಷ್ಟು ಉದ್ಯಮಿಗಳು ತಮ್ಮ ಸಂಪಾದನೆಯಲ್ಲಿ ಒಂದಷ್ಟು ಹಣವನ್ನು ದಾನ ಧರ್ಮಕ್ಕೆ (philanthropy) ಉಪಯೋಗಿಸುತ್ತಾರೆ. ಇನ್ನೂ ಕೆಲವರು ಹೊಸಬರನ್ನು ಪ್ರೋತ್ಸಾಹಿಸುತ್ತಾರೆ. ಇವತ್ತಿನ ಹಲವು ಯುವ ಉದ್ದಿಮೆದಾರರು ಹೆಚ್ಚು ಸಮಾಜಮುಖಿಯಾಗುತ್ತಿದ್ದಾರೆ. ಇಂಥವರಲ್ಲಿ ಓಯೋ ಸಿಇಒ ರಿತೇಶ್ ಅಗರ್ವಾಲ್ (OYO CEO Ritesh Agarwal) ಒಬ್ಬರು. ಸೋಷಿಯಲ್ ಮೀಡಿಯಾದಲ್ಲಿ ಇವರು ಹಾಕಿರುವ ಒಂದು ಪೋಸ್ಟ್ ಸಾಕಷ್ಟು ಗಮನ ಸೆಳೆದಿದೆ. ಯುವಕರು ತಪ್ಪು ಮಾಡುತ್ತೇವೆಂದು ಹಿಂಜರಿಯಬಾರದು. ತಪ್ಪು ತಿದ್ದುಕೊಂಡು ಹೋಗುವುದು ಮುಖ್ಯ ಎಂದು ಸಲಹೆ ನೀಡಿದ್ದಾರೆ.
‘ಪದೇ ಪದೇ ತಪ್ಪುಗಳನ್ನು ಮಾಡಿ. ಆದರೆ, ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಬೇಡಿ. ಯುವ ಉದ್ಯಮಿಗಳಿಗೆ ನಾನು ಈ ಸಲಹೆಯನ್ನೇ ನೀಡುತ್ತೇನೆ,’ ಎಂದು ರಿತೇಶ್ ಅಗರ್ವಾಲ್ ಮೊನ್ನೆಯ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಹಣ ಮಾಡುವ ಆಸೆಯಿಂದ ಉದ್ದಿಮೆ ಸ್ಥಾಪಿಸಿದರೆ ಸೋಲುತ್ತೀರಿ: ಜೊಮಾಟೊ ಸಿಇಒ ದೀಪಿಂದರ್ ಗೋಯಲ್
‘ಯುವ ಉದ್ಯಮಿಗಳಿಗೆ ಮಾರ್ಗದರ್ಶನ ನೀಡುವುದೆಂದರೆ ನನಗಿಷ್ಟ. ಯಾವ ಸಂಪನ್ಮೂಲ ಇಲ್ಲದೇ ಸ್ಟಾರ್ಟಪ್ ಮಾಡುವ ನನ್ನ ಅನುಭವ ಬಳಸಿ ಅವರು ಬಹಳ ಬೇಗ ಕಲಿಯಬಹುದು. ಸ್ಟಾರ್ಟಪ್ ಸಮುದಾಯಕ್ಕೆ ಮರಳಿ ಕೊಡಲು ಇಷ್ಟಪಡುತ್ತೇನೆ,’ ಎಂದಿದ್ದಾರೆ ಓಯೋ ಸಿಇಒ.
ರಿತೇಶ್ ಮಾಡಿದ ಟ್ವೀಟ್
Make mistakes often but don’t repeat the same mistakes often is what I tell young founders.
I am always so enthused to mentor and guide young founders since they can quickly learn from my experience of starting up with no resources and I am always happy to give back more to the… pic.twitter.com/zlyKuuTAQV
— Ritesh Agarwal (@riteshagar) March 18, 2024
ತಮ್ಮ ಪೋಸ್ಟ್ನಲ್ಲಿ ರಿತೇಶ್ ಒಂದು ವಿಡಿಯೋ ತುಣುಕು ಹಂಚಿಕೊಂಡಿದ್ದಾರೆ. ಅದರಲ್ಲಿ ಮೂರನೇ ಸೀಸನ್ನ ಶಾರ್ಕ್ ಟ್ಯಾಂಕ್ ಇಂಡಿಯಾ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದ ಇಬ್ಬರು ಯುವ ಉದ್ಯಮಿಗಳ ಬಗ್ಗೆ ವಿಡಿಯೋದಲ್ಲಿ ಅವರು ಮಾತನಾಡಿದ್ದಾರೆ. ಆ ಇಬ್ಬರು ಯುವಕರನ್ನು ನೋಡಿದರೆ ಅವರ ವಯಸ್ಸಿನಲ್ಲಿ ತಾನು ಇದ್ದದ್ದು ನೆನಪಿಗೆ ಬರುತ್ತದೆ ಎಂದು ಹೇಳುವ ಸಿಇಒ, ಆ ಇಬ್ಬರೊಂದಿಗೆ ಕೆಲಸ ಮಾಡಲು ತನಗಿರುವ ಆಸಕ್ತಿಯನ್ನು ವ್ಯಕ್ತಪಡಿಸುತ್ತಾರೆ.
ಚಂಡೀಗಡ ಮೂಲದ ಓಯೋ ಸಂಸ್ಥೆ ಆನ್ಲೈನ್ನಲ್ಲಿ ಹೋಟೆಲ್ ರೂಮು, ಇತರ ಸ್ಥಳಗಳನ್ನು ಬಾಡಿಗೆಗೆ ಬುಕ್ ಮಾಡಲು ಅವಕಾಶ ಕೊಡುತ್ತದೆ. ಭಾರತದಲ್ಲಿ ಮಾತ್ರವಲ್ಲ, ಇದರ ಬಿಸಿನೆಸ್ 80 ದೇಶಗಳಲ್ಲಿ ಇದೆ. ಕಡಿಮೆ ಬೆಲೆಗೆ ಬಾಡಿಗೆಗೆ ಸಿಗುವುದರಿಂದ ಓಯೋ ಬಿಸಿನೆಸ್ ಯಶಸ್ವಿಯಾಗಿದೆ. 2022-23ರ ಹಣಕಾಸು ವರ್ಷದಲ್ಲಿ 1,287 ಕೋಟಿ ರೂ ನಷ್ಟ ಅನುಭವಿಸಿದರೂ ಐದು ಸಾವಿರ ಕೋಟಿ ರೂಗೂ ಹೆಚ್ಚು ಆದಾಯ ಸೃಷ್ಟಿಸಲು ಯಶಸ್ವಿಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ