Fake Notes: 2020ರಲ್ಲಿ 92 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಭಾರತೀಯ ನಕಲಿ ನೋಟುಗಳು ವಶಕ್ಕೆ
2020ನೇ ಇಸವಿಯಲ್ಲಿ 92 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ನಕಲಿ ನೋಟನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯುರೋ ತಿಳಿಸಿದೆ.
92 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು (FICN) 2020ನೇ ಇಸವಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯುರೋದ ಭಾರತದಲ್ಲಿ ಅಪರಾಧ 2020 ಎಂಬ ವರದಿಯಿಂದ ಗೊತ್ತಾಗಿದೆ. 2019ರಲ್ಲಿ ವಶಪಡಿಸಿಕೊಂಡಿದ್ದ 2,87,404 ನೋಟುಗಳ ಪ್ರಮಾಣ, ಅಂದರೆ 25 ಕೋಟಿ ಮೌಲ್ಯಕ್ಕೆ ಹೋಲಿಸಿದರೆ, 2020ರಲ್ಲಿ ಶೇ 190.5ರಷ್ಟು ಹೆಚ್ಚಳವಾಗಿ 8,34,947 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂದರೆ ಒಂದೇ ವರ್ಷದಲ್ಲಿ 3.6 ಪಟ್ಟು ಹೆಚ್ಚು ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಮಹತ್ವದ ಏರಿಕೆಯಲ್ಲಿ, ನಕಲಿ ನೋಟುಗಳಿಗೆ ಸಂಬಂಧಿಸಿದಂತೆ 385 ಪ್ರಕರಣ ಆಗಿದ್ದು, 633 ಆರೋಪಿಗಳ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ.
ವಶಪಡಿಸಿಕೊಂಡ ನಕಲಿ ನೋಟಿನ ಮೌಲ್ಯಗಳು ಹಾಗೂ ಪ್ರಮಾಣದ ವಿವರ ಹೀಗಿದೆ: 1000 ರೂ. – 3,18,143 2000 ರೂ. – 2,44,834 500 ರೂ. (ಹೊಸದು)- 2,09,685 100- 33,443 200- 11,341 50(ಹೊಸದು)- 8599 50 (ಹಳೆಯದು)- 1589 10- 990 20- 34
ಅತಿಹೆಚ್ಚಿನ ಪ್ರಮಾಣದಲ್ಲಿ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವುದು ಮಹಾರಾಷ್ಟ್ರದಲ್ಲಿ. 6,99,495 ನಕಲಿ ನೋಟುಗಳು, ಅದರ ಮೌಲ್ಯ 83.6 ಕೋಟಿ ರೂಪಾಯಿ. 2020ರಲ್ಲಿ ವಶಕ್ಕೆ ಪಡೆಯಲಾಗಿದೆ. ದೇಶದಲ್ಲಿ ವಶಪಡಿಸಿಕೊಂಡ ಒಟ್ಟು ನಕಲಿ ನೋಟಿನ ಸಂಖ್ಯೆಯ ಶೇ 84 ಮತ್ತು ಮೌಲ್ಯದ ದೃಷ್ಟಿಯಿಂದ ಶೇ 91ರಷ್ಟಾಗುತ್ತದೆ. ನಕಲಿ ನೋಟುಗಳು ವಶಕ್ಕೆ ಪಡೆದ ಇತರ ಪ್ರಮುಖ ರಾಜ್ಯಗಳೆಂದರೆ, ಪಶ್ಚಿಮ ಬಂಗಾಲ (24,227), ಗುಜರಾತ್ (20,360), ಆಂಧ್ರಪ್ರದೇಶ (17,705) ಮತ್ತು ಉತ್ತರಪ್ರದೇಶ (17,078). ಈ ರೀತಿ ದೊಡ್ಡ ಪ್ರಮಾಣದಲ್ಲಿ ನಕಲಿ ನೋಟುಗಳನ್ನು ವಶಕ್ಕೆ ಪಡೆದದ್ದರ ಮುಖ್ಯ ಕಾರಣಗಳಲ್ಲಿ ಒಂದು, ನಿಗಾ ವ್ಯವಸ್ಥೆ ಉತ್ತಮಗೊಂಡಿರುವುದು ಇರಬಹುದು ಎನ್ನಲಾಗುತ್ತಿದೆ.
ಎನ್ಸಿಆರ್ಬಿ ತನ್ನ ವರದಿಯಲ್ಲಿ ಎಚ್ಚರಿಕೆಯ ಮಾತುಗಳನ್ನು ಸೇರಿಸಿದೆ. ಅಪರಾಧದಲ್ಲಿ ಹೆಚ್ಚಳ ಹಾಗೂ ಪೊಲೀಸರಿಂದ ಅಪರಾಧ ದಾಖಲು ಮಾಡುವುದರಲ್ಲಿನ ಹೆಚ್ಚಳ ಸ್ಪಷ್ಟವಾಗಿ ಎರಡೂ ಬೇರೆಯಾಗಿರುತ್ತದೆ. ಈ ವಾಸ್ತವವನ್ನು ಗೊಂದಲ ಮಾಡಿಕೊಳ್ಳುವುದುಂಟು. ಒಟ್ಟಾರೆಯಾಗೊ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಂಡುಬರುವ ನಕಲಿ ನೋಟಿನ ಪ್ರಮಾಣ ಶೇ 30ರಷ್ಟು ಕಡಿಮೆ ಆಗಿದೆ. 2019-20ರಲ್ಲಿ 2,96,695 ನೋಟುಗಳು ಇದ್ದದ್ದು 2020-21ರಲ್ಲಿ 2,08,625 ಆಗಿದೆ.
ಈಚೆಗೆ ನಕಲಿ ನೋಟುಗಳ ದಂಧೆಯನ್ನು ನಡೆಸುತ್ತಿದ್ದ ಮಹಿಳೆಯನ್ನು ಬಂಧಿಸಲಾಗಿತ್ತು/ ಆಕೆ ಹೆಸರು ಮಮ್ತಾಜ್ ಬಾನೋ. ಈ ನಕಲಿ ನೋಟುಗಳು ಬಾಂಗ್ಲಾದೇಶ್ನಿಂದ ಭಾರತಕ್ಕೆ ಬರುತ್ತಿವೆ. ಉತ್ತರಪ್ರದೇಶ, ಪಂಜಾಬ್ ಮತ್ತು ಹರ್ಯಾಣಗಳಲ್ಲಿ ವಿತರಣೆ ಆಗುತ್ತದೆ. ಈ ರಾಜ್ಯಗಳಲ್ಲಿ ತನ್ನ ಆಪರೇಟಿವ್ಸ್ಗಳ ಮೂಲಕ ಆಕೆ ದಂಧೆ ನಡೆಸುತ್ತಿದ್ದಳು ಎನ್ನಲಾಗಿದೆ.
ಇದನ್ನೂ ಓದಿ: Fake Currency: 500 ರೂಪಾಯಿ ನಕಲಿ ನೋಟುಗಳ ಪ್ರಮಾಣ ಒಂದು ವರ್ಷದಲ್ಲಿ ಶೇ 31ರಷ್ಟು ಹೆಚ್ಚಳ
(More Than Rs 92 Crore Worth Of Fake Indian Currency Notes Seized In 2020 According To NCRB Report)