ನವದೆಹಲಿ, ಮಾರ್ಚ್ 29: ಗೌತಮ್ ಅಂಬಾನಿ ಮಾಲಕತ್ವದ ಅದಾನಿ ಪವರ್ನ ಒಂದು ಘಟಕವಾದ ಮಹಾನ್ ಎನರ್ಜೆನ್ ಲಿ (Mahan Energen Ltd) ಸಂಸ್ಥೆಯಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ಹೂಡಿಕೆ ಮಾಡುತ್ತಿದೆ. ವರದಿಗಳ ಪ್ರಕಾರ ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಇಂಡಸ್ಟ್ರೀಸ್ (RIL) ಸಂಸ್ಥೆಯು ಮಹಾನ್ ಎನರ್ಜೆನ್ನ ಒಂದು ಘಟಕದಲ್ಲಿ 50 ಕೋಟಿ ರೂ ಹೂಡಿಕೆ ಮಾಡಲಿದೆ. ಇದಕ್ಕೆ ಬದಲಾಗಿ ಆ ಘಟಕದ ಶೇ. 26ರಷ್ಟು ಪಾಲು ಪಡೆಯಲಿದೆ. ಮಹಾನ್ ಎನರ್ಜೆನ್ನ 10 ರೂ ಫೇಸ್ ವ್ಯಾಲ್ಯೂ ಇರುವ 5 ಕೋಟಿ ಈಕ್ವಿಟಿ ಷೇರುಗಳನ್ನು ಆರ್ಐಎಲ್ಗೆ ವರ್ಗಾವಣೆ ಆಗಲಿದೆ. ಈ ಸಂಗತಿಯನ್ನು ರಿಲಾಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ತನ್ನ ರೆಗ್ಯುಲೇಟರಿ ಫೈಲಿಂಗ್ನಲ್ಲಿ ತಿಳಿಸಿದೆ.
ಮಹಾನ್ ಎನರ್ಜೆನ್ ಥರ್ಮಲ್ ಪವರ್ ಪ್ಲಾಂಟ್ ವಿವಿಧೆಡೆ ವಿದ್ಯುತ್ ಉತ್ಪಾದನಾ ಘಟಕಗಳನ್ನು ಹೊಂದಿದೆ. ಇದರಲ್ಲಿ ಮಧ್ಯಪ್ರದೇಶದಲ್ಲಿರುವ ಒಂದು ಘಟಕದಲ್ಲಿ ಆರ್ಐಎಲ್ ಹೂಡಿಕೆ ಮಾಡಿದೆ. ಈ ಘಟಕದಲ್ಲಿ 500 ಮೆಗಾವ್ಯಾಟ್ ವಿದ್ಯುತ್ ತಯಾರಾಗುತ್ತದೆ. ಅಷ್ಟೂ ವಿದ್ಯುತ್ ಅನ್ನು ರಿಲಾಯನ್ಸ್ ಬಳಕೆ ಮಾಡಿಕೊಳ್ಳಲು ಈ ಒಪ್ಪಂದ ಮಾಡಿಕೊಂಡಿದೆ. ಈ ಘಟಕದಲ್ಲಿ ತಯಾರಾಗುವ ವಿದ್ಯುತ್ ಅನ್ನು ರಿಲಾಯನ್ಸ್ ಇಂಡಸ್ಟ್ರೀಸ್ ಮಾತ್ರವೇ (captive use) ಪಡೆಯಲಿದೆ. ಯಾವ ಉದ್ದೇಶಕ್ಕೆ ರಿಲಾಯನ್ಸ್ ಇಂಡಸ್ಟ್ರೀಸ್ ಈ ವಿದ್ಯುತ್ ಸರಬರಾಜು ಪಡೆಯುತ್ತಿದೆ ಎಂಬುದು ಬಹಿರಂಗಗೊಂಡಿಲ್ಲ. ಹಾಗೆಯೇ ಎಷ್ಟು ವರ್ಷಕ್ಕೆ ಈ ಒಪ್ಪಂದ ಆಗಿದೆ ಎಂಬುದು ಗೊತ್ತಾಗಬೇಕು.
ಇದನ್ನೂ ಓದಿ: ಭಾರತದ ಆರ್ಥಿಕತೆ 2047ರವರೆಗೆ ಸತತ ಎಂಟು ಪ್ರತಿಶತ ವೇಗದಲ್ಲಿ ಬೆಳೆಯಲು ಸಾಧ್ಯ: ಕೆವಿ ಸುಬ್ರಮಣಿಯನ್
ಮಹಾನ್ ಥರ್ಮಲ್ ಪವರ್ ಪ್ಲಾಂಟ್ ಒಟ್ಟಾರೆ 1,200 ಮೆಗಾವ್ಯಾಟ್ ವಿದ್ಯುತ್ ತಯಾರಿಸುವ ಸಾಮರ್ಥ್ಯ ಹೊಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು 1,600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಹೆಚ್ಚಿಸಲಿದೆ. ಅಂದರೆ ಒಟ್ಟಾರೆ 2,800 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯಕ್ಕೆ ಹೆಚ್ಚಿಸುವ ಗುರಿ ಇದೆ.
ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಇಬ್ಬರೂ ಗುಜರಾತ್ ಮೂಲದ ಉದ್ಯಮಿಗಳೇ ಆಗಿದ್ದು, ಅವರವರ ಉದ್ಯಮ ಕ್ಷೇತ್ರ ಬೇರೆ ಬೇರೆಯೇ ಆಗಿದೆ. ಅಂಬಾನಿ ಉದ್ಯಮಗಳು ತೈಲ ಮತ್ತು ಅನಿಲ ಕ್ಷೇತ್ರದಿಂದ ಹಿಡಿದು ಟೆಲಿಕಾಂ, ರೀಟೇಲ್ ಮಾರುಕಟ್ಟೆಯವರೆಗೆ ಹರಡಿದೆ. ಅದಾನಿ ಉದ್ಯಮಗಳು ಪ್ರಮುಖವಾಗಿ ಏರ್ಪೋರ್ಟ್, ಬಂದರು ಇತ್ಯಾದಿ ಇನ್ಫ್ರಾಸ್ಟ್ರಕ್ಚರ್ ಕ್ಷೇತ್ರಗಳು, ಮೈನಿಂಗ್ ಮೊದಲಾದ ಕ್ಷೇತ್ರಗಳಲ್ಲಿ ಹರಡಿವೆ. ಅಲಿಖಿತ ಒಪ್ಪಂದವೋ ಎಂದು ಅನುಮಾನ ಮೂಡುವಷ್ಟು ಅವರಿಬ್ಬರು ಪರಸ್ಪರ ಪ್ರತಿಸ್ಪರ್ಧಿಗಳಾಗುವುದನ್ನು ಸಾಧ್ಯವಾದಷ್ಟೂ ತಪ್ಪಿಸುತ್ತಿರುವಂತಿದೆ.
ಇದನ್ನೂ ಓದಿ: ಸೊನಾಟ ಫೈನಾನ್ಸ್ ಅನ್ನು 537 ಕೋಟಿ ರೂಗೆ ಖರೀದಿಸಿದ ಕೋಟಕ್ ಮಹೀಂದ್ರ ಬ್ಯಾಂಕ್
ಇದಕ್ಕೆ ಅಪವಾದ ಎಂಬಂತೆ ಇಬ್ಬರೂ ಕೂಡ ರಿನಿವಬಲ್ ಎನರ್ಜಿ ಅಥವಾ ಮರುಬಳಕೆ ಇಂಧನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಗುಜರಾತ್ನ ಜಾಮ್ನಗರದಲ್ಲಿ ಸೋಲಾರ್ ಪ್ಯಾನಲ್, ಬ್ಯಾಟರಿ, ಗ್ರೀನ್ ಹೈಡ್ರೋಜನ್, ಫುಯೆಲ್ ಸೆಲ್ಗಳ ತಯಾರಿಕೆಗಾಗಿ ತಲಾ ಒಂದರಂತೆ ನಾಲ್ಕು ಗೀಗಾ ಫ್ಯಾಕ್ಟರಿಗಳನ್ನು ಮುಕೇಶ್ ಅಂಬಾನಿ ನಿರ್ಮಿಸುತ್ತಿದ್ದಾರೆ.
ಗೌತಮ್ ಅದಾನಿ ಅವರು ಸೋಲಾರ್ ಮಾಡ್ಯೂಲ್, ವಿಂಡ್ ಟರ್ಬೈನ್, ಹೈಡ್ರೋಜನ್ ಎಲೆಕ್ಟ್ರೋಲೈಸರ್ಗಳ ತಯಾರಿಕೆಗಾಗಿ ಮೂರು ಗಿಗಾಫ್ಯಾಕ್ಟರಿಗಳನ್ನು ನಿರ್ಮಿಸುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ