ನಾರಾಯಣಮೂರ್ತಿ ಹೇಳಿದ್ದು ಹಂಗಲ್ಲ, ಹಿಂಗೆ: 70 ಗಂಟೆ ಕೆಲಸವನ್ನು ಬಿಡಿಸಿ ವಿವರಿಸಿದ ಟೆಕ್ ಮಹೀಂದ್ರ ಸಿಇಒ ಗುರ್ನಾನಿ
Tech Mahindra CEO CP Gurnani Statement: ಐಟಿ ಸಂಸ್ಥೆ ಇನ್ಫೋಸಿಸ್ನ ಮಾಜಿ ಮುಖ್ಯಸ್ಥ ಎನ್ ಆರ್ ನಾರಾಯಣಮೂರ್ತಿ ಅವರ ವಾರದ 70 ಗಂಟೆ ಕೆಲಸದ ಹೇಳಿಕೆ ಬಗ್ಗೆ ಚರ್ಚೆ ನಡೆಯುವುದು ನಿಲ್ಲುತ್ತಿಲ್ಲ. ಜನಸಾಮಾನ್ಯರಿಂದ ಹಿಡಿದು ಉದ್ಯಮಿಗಳವರೆಗೆ ಬಹಳ ಜನರು ತಮ್ಮ ಅನಿಸಿಕೆಗಳನ್ನು ತೋರ್ಪಡಿಸುತ್ತಲೇ ಇದ್ದಾರೆ. ಟೆಕ್ ಮಹೀಂದ್ರ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಸಿಪಿ ಗುರ್ನಾನಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾರಾಯಣಮೂರ್ತಿ ಅವರು 70 ಗಂಟೆ ಕೆಲಸ ಮಾಡಬೇಕೆಂದು ಹೇಳಿದ್ದು ನಿಮಗಾಗಿ, ಕಂಪನಿಗಾಗಿ ಮತ್ತು ದೇಶಕ್ಕಾಗಿ ಎಂಬ ಹೊಸ ವಿವರಣೆ ನೀಡಿದ್ದಾರೆ.
ನವದೆಹಲಿ, ಅಕ್ಟೋಬರ್ 31: ಐಟಿ ಸಂಸ್ಥೆ ಇನ್ಫೋಸಿಸ್ನ ಮಾಜಿ ಮುಖ್ಯಸ್ಥ ಎನ್ ಆರ್ ನಾರಾಯಣಮೂರ್ತಿ ಅವರ ವಾರದ 70 ಗಂಟೆ ಕೆಲಸದ (70 hours work) ಹೇಳಿಕೆ ಬಗ್ಗೆ ಚರ್ಚೆ ನಡೆಯುವುದು ನಿಲ್ಲುತ್ತಿಲ್ಲ. ಜನಸಾಮಾನ್ಯರಿಂದ ಹಿಡಿದು ಉದ್ಯಮಿಗಳವರೆಗೆ ಬಹಳ ಜನರು ತಮ್ಮ ಅನಿಸಿಕೆಗಳನ್ನು ತೋರ್ಪಡಿಸುತ್ತಲೇ ಇದ್ದಾರೆ. ಕೆಲವರು ಸಹಮತ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ವಿರೋಧಿಸುತ್ತಿದ್ದಾರೆ. ಮತ್ತಿನ್ನೂ ಕೆಲವರು ಬೇರೆ ಸಂಗತಿಗಳನ್ನು ಇದಕ್ಕೆ ಜೋಡಿಸುತ್ತಿದ್ದಾರೆ. ಟೆಕ್ ಮಹೀಂದ್ರ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಸಿಪಿ ಗುರ್ನಾನಿ (Tech Mahindra CEO CP Gurnani) ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾರಾಯಣಮೂರ್ತಿ ಅವರು 70 ಗಂಟೆ ಕೆಲಸ ಮಾಡಬೇಕೆಂದು ಹೇಳಿದ್ದು ನಿಮಗಾಗಿ, ಕಂಪನಿಗಾಗಿ ಮತ್ತು ದೇಶಕ್ಕಾಗಿ ಎಂಬ ಹೊಸ ವಿವರಣೆ ನೀಡಿದ್ದಾರೆ.
‘ಅವರು ಕೆಲಸದ ಬಗ್ಗೆ ಮಾತನಾಡಿದ್ದು, ಕಂಪನಿಗೆ ಸೀಮಿತವಾಗಿ ಅಲ್ಲ ಎಂಬುದು ನನ್ನ ಭಾವನೆ. ನಿಮಗೋಸ್ಕರ ಮತ್ತು ನಿಮ್ಮ ದೇಶಕ್ಕೋಸ್ಕರ ಕೆಲಸ ಮಾಡಿ ಎಂದಿರಬೇಕು. ಕಂಪನಿಗೆ 70 ಗಂಟೆ ಕೆಲಸ ಮಾಡಿ ಎಂದು ಅವರು ಹೇಳಿಲ್ಲ. ಸಂಸ್ಥೆಗೆ 40 ಗಂಟೆ ಕೆಲಸ ಮಾಡಿ. ನಿಮಗಾಗಿ 30 ಗಂಟೆ ಕೆಲಸ ಮಾಡಿ ಎಂದು ಹೇಳಿರಬೇಕು.
‘ನಿಮ್ಮ ಕ್ಷೇತ್ರದಲ್ಲಿ ನೈಪುಣ್ಯತೆ ಹೊಂದಲು 10,000 ಗಂಟೆಗಳನ್ನು ವಿನಿಯೋಗಿಸಿ. ರಾತ್ರಿ ಹಗಲು ಕಷ್ಟಪಟ್ಟು ನಿಮ್ಮ ಕ್ಷೇತ್ರದಲ್ಲಿ ಪರಿಣತಿ ಸಾಧಿಸಿ.
ಇದನ್ನೂ ಓದಿ: 70 ಗಂಟೆ ಕೆಲಸ ಮಾಡಬೇಕೆಂದು ಹೇಳುವ ನಾರಾಯಣಮೂರ್ತಿ ನಿಜಜೀವನದಲ್ಲಿ ಹೇಗೆ? ಪತ್ನಿ ಸುಧಾಮೂರ್ತಿ ಹೇಳಿದ್ದಿದು
‘ಈ 70 ಗಂಟೆ ಕೆಲಸವು ನಿಮ್ಮನ್ನು ಬೇರೆಯವರಿಗಿಂತ ವಿಭಿನ್ನವಾಗಿಸುತ್ತದೆ. ನಿಮ್ಮ ದೇಶವನ್ನೂ ಬದಲಿಸುತ್ತದೆ’ ಎಂದು ಸಿಪಿ ಗುರ್ನಾನಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
Have been reading about the outrage to Narayana Murthy’s 70 hour work statement..
I believe when he talks of work, it’s not limited to the company.. it extends to your self and to your country.. He hasn’t said work 70 hours for the company – work 40 hours for the company but…
— CP Gurnani (@C_P_Gurnani) October 29, 2023
ಈ ಪೋಸ್ಟ್ನಲ್ಲಿ ಕೆಲವರು ಖಾರವಾಗಿ ಪ್ರತಿಕ್ರಿಯಿಸಿರುವುದುಂಟು. ಹೆಚ್ಚು ಅವಧಿ ಕೆಲಸ ಮಾಡಬೇಕೆಂದು ಹೇಳುವ ಸಿಇಒಗಳು ತಮ್ಮ ಉದ್ಯೋಗಿ ಬೇರೆ ಪಾರ್ಟ್ಟೈಮ್ ಕೆಲಸ ಮಾಡುವುದಕ್ಕೆ ಆಕ್ಷೇಪಿಸುತ್ತಾರೆ. ಇದು ಹಿಪೋಕ್ರೆಸಿ ಎಂದು ಟೀಕಿಸಿದ್ದಾರೆ.
ಕಳೆದ ಒಂದು ದಶಕದಲ್ಲಿ ಐಟಿ ಕಂಪನಿಗಳಲ್ಲಿ ಹೊಸಬರಿಗೆ ಸಿಗುವ ಸಂಬಳ ಮತ್ತು ಸಿಇಒಗಳಿಗೆ ಸಿಗುವ ಸಂಬಳ ಎಷ್ಟೆಷ್ಟು ಏರಿಕೆ ಆಗಿದೆ ಎಂಬುದನ್ನು ಹೋಲಿಕೆ ಮಾಡಿದ್ದಾರೆ.
ಕಳೆದ ವಾರ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ಮೋಹನ್ ದಾಸ್ ಪೈ ಜೊತೆಗಿನ ಪಾಡ್ಕ್ಯಾಸ್ಟ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಭಾರತೀಯ ಉದ್ಯೋಗಿಗಳ ಉತ್ಪನ್ನಶೀಲತೆ ಬಹಳ ಕಡಿಮೆ ಇದೆ. ಚೀನಾದಂತಹ ದೇಶಗಳ ಜೊತೆ ಪೈಪೋಟಿ ನಡೆಸಬೇಕಾದರೆ ಭಾರತೀಯರ ಉತ್ಪನ್ನಶೀಲತೆ ಹೆಚ್ಚಬೇಕು. ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು. ಎರಡನೇ ವಿಶ್ವ ಮಹಾಯುದ್ಧದ ಬಳಿಕ ಜರ್ಮನಿ ಮತ್ತು ಜಪಾನೀಯರು ಹಾಕಿದ ರೀತಿಯಲ್ಲಿ ಭಾರತೀಯರು ಶ್ರಮ ಹಾಕಬೇಕು ಎಂದು ಮೂರ್ತಿ ಹೇಳಿದ್ದರು.
ನಾರಾಯಣಮೂರ್ತಿ ಪತ್ನಿ ಸುಧಾಮೂರ್ತಿ ಈ ಬಗ್ಗೆ ಪ್ರತಿಕ್ರಿಯಿಸಿ, ತಮ್ಮ ಪತಿ ವಾರಕ್ಕೆ 80-90 ಗಂಟೆ ಕೆಲಸ ಮಾಡುವವರು. ಅದಕ್ಕಿಂತ ಕಡಿಮೆ ಕೆಲಸ ಮಾಡಿಯೇ ಗೊತ್ತಿಲ್ಲ. ಅವರಿಗೆ ಅನಿಸಿದ್ದನ್ನು ಹೇಳಿದ್ದಾರೆ ಎಂದಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ