AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಂ ಕಿಸಾನ್ ಸ್ಕೀಮ್; ಕೃಷಿಕರು ಇರುವುದೆಷ್ಟು? ಈ ಯೋಜನೆಯಿಂದ ವಂಚಿತರಾಗಿರುವುದು ಎಷ್ಟು ಮಂದಿ?

PM Kisan Scheme Updates: ಯೋಜನೆಯ ಫಲ ಪಡೆಯಲು ಅರ್ಹರಾಗಿದ್ದೂ ಸಿಗದವರ ಸಂಖ್ಯೆ ಕೋಟಿಗೂ ಹೆಚ್ಚಿರಬಹುದು ಎನ್ನಲಾಗಿದೆ. ಇವರನ್ನು ತಲುಪಲು ಸರ್ಕಾರ ವಿವಿಧ ಕ್ರಮ ಕೈಗೊಳ್ಳುವ ಉದ್ದೇಶ ಹೊಂದಿದೆ. ಅದಕ್ಕಾಗಿ ಒಂದು ಐಟಿ ವ್ಯವಸ್ಥೆಯನ್ನು ಸರ್ಕಾರ ರೂಪಿಸಿದೆ. ಯೋಜನೆಯಲ್ಲಿ ಯಾವುದೇ ಫಲಾನುಭವಿ ಕೈತಪ್ಪಿ ಹೋಗದಂತೆ ನೋಡಿಕೊಳ್ಳುವತ್ತ ಗಮನ ಹರಿಸಲಾಗಿದೆ.

ಪಿಎಂ ಕಿಸಾನ್ ಸ್ಕೀಮ್; ಕೃಷಿಕರು ಇರುವುದೆಷ್ಟು? ಈ ಯೋಜನೆಯಿಂದ ವಂಚಿತರಾಗಿರುವುದು ಎಷ್ಟು ಮಂದಿ?
ಪಿಎಂ ಕಿಸಾನ್ ಸ್ಕೀಮ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 31, 2023 | 4:08 PM

Share

ನವದೆಹಲಿ, ಅಕ್ಟೋಬರ್ 30: ಪಿಎಂ ಕಿಸಾನ್ ಯೋಜನೆಯ (PM Kisan Samman Nidhi Yojana) 15ನೇ ಕಂತಿನ ಹಣ ಬಿಡುಗಡೆಗೆ ಕೋಟ್ಯಂತರ ರೈತರು ಕಾಯುತ್ತಿದ್ದಾರೆ. ಇನ್ನೊಂದು ತಿಂಗಳಲ್ಲಿ ರೈತರ ಖಾತೆಗಳಿಗೆ 2,000 ರೂ ಜಮೆಯಾಗಬಹುದು. ನವೆಂಬರ್ ಕೊನೆಯ ವಾರದಲ್ಲಿ ಹಣ ಬಿಡುಗಡೆ ಆಗಬಹುದು ಎಂದು ಹೇಳಲಾಗುತ್ತಿದೆ. ಇದೇ ವೇಳೆ, ಬಹಳಷ್ಟು ರೈತರು ತಮಗೆ ಯೋಜನೆಯ ಹಣ ಸಿಗುತ್ತಿಲ್ಲವೆಂದು ದೂರುತ್ತಿರುವುದು ವರದಿಯಾಗಿದೆ. ಯಾವುದೇ ಅರ್ಹ ಫಲಾನುಭವಿಗೆ ಲಾಭ ಕೈತಪ್ಪಬಾರದು ಎಂದು ಸರ್ಕಾರವೂ ವಿವಿಧ ಮಾರ್ಗೋಪಾಯಗಳನ್ನು ಹುಡುಕುತ್ತಿದೆ. ಇಕೆವೈಸಿಗೆ ಸುಲಭ ದಾರಿಗಳ ಆಯ್ಕೆಯನ್ನು ರೈತರಿಗೆ ಒದಗಿಸುತ್ತಿದೆ. ಆದರೂ ಬಹಳಷ್ಟು ರೈತರನ್ನು ಪಿಎಂ ಕಿಸಾನ್ ಸ್ಕೀಮ್ ತಲುಪಿಲ್ಲ.

ಪಿಎಂ ಕಿಸಾನ್ ಸ್ಕೀಮ್​ನಲ್ಲಿ ಅನರ್ಹ ಫಲಾನುಭವಿಗಳನ್ನು ಕೈಬಿಟ್ಟು ಅರ್ಹರನ್ನು ಗುರುತಿಸಿ ಅವರನ್ನು ತಲುಪಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಒಂದು ಅಂದಾಜು ಪ್ರಕಾರ ದೇಶದಲ್ಲಿ 13ರಿಂದ 14 ಕೋಟಿಯಷ್ಟು ಕೃಷಿ ಜಮೀನು ಮಾಲೀಕರಿದ್ದಾರೆ. ಆಗಸ್ಟ್​ನಲ್ಲಿ ಸರ್ಕಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಸಂಖ್ಯೆ 8,56,62,473 (8.56 ಕೋಟಿ) ಇದೆ.

2023-24ರ ಏಪ್ರಿಲ್​ನಿಂದ ಜುಲೈವರೆಗಿನ ಅವಧಿಯ ಕಂತಿನ ಹಣವನ್ನು ಪಡೆದ ಫಲಾನುಭವಿಗಳ ಸಂಖ್ಯೆ 9,53,58,300 ಇದೆ. ಇದು ಪಿಎಂ ಕಿಸಾನ್ ಯೋಜನೆಯ ವೆಬ್​ಸೈಟ್​ನಲ್ಲಿ ಇರುವ ಮಾಹಿತಿ. ಆದರೆ, ಪಿಐಬಿ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ಫಲಾನುಭವಿಗಳ ಸಂಖ್ಯೆ 8.56 ಕೋಟಿ ಇದೆ. ಇಲ್ಲಿ ಅನರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಟ್ಟಿರುವ ಸಾಧ್ಯತೆ ಇದೆ.

ಇದನ್ನೂ ಓದಿ: ನಾರಾಯಣಮೂರ್ತಿ ಹೇಳಿದ್ದು ಹಂಗಲ್ಲ, ಹಿಂಗೆ: 70 ಗಂಟೆ ಕೆಲಸವನ್ನು ಬಿಡಿಸಿ ವಿವರಿಸಿದ ಟೆಕ್ ಮಹೀಂದ್ರ ಸಿಇಒ ಗುರ್ನಾನಿ

ಈಗಾಗಲೇ ಗ್ರಾಮ ಗ್ರಾಮಗಳಿಗೆ ತೆರಳಿ ಇ ಕೆವೈಸಿ ಮಾಡದ ಫಲಾನುಭವಿಗಳನ್ನು ಸಂಪರ್ಕಿಸುವ ಕೆಲಸವಾಗುತ್ತಿದೆ. ಅರ್ಹ ಫಲಾನುಭವಿಗಳು ಯೋಜನೆಯಿಂದ ಕೈತಪ್ಪಬಾರದೆಂಬುದು ಇದರ ಉದ್ದೇಶ. ಹಾಗೆಯೇ, ಐಟಿ ಪಾವತಿದಾರರು, ಸಾಂವಿಧಾನಿಕ ಹುದ್ದೆ ಹೊಂದಿರುವವರು, ಸರ್ಕಾರಿ ನೌಕರರು, ವೃತ್ತಿಪರರು, ಪಿಂಚಣಿದಾರರು ಮೊದಲಾದವರು ಈ ಯೋಜನೆಯ ಭಾಗವಾಗುವಂತಿಲ್ಲ. ಒಂದು ವರದಿ ಪ್ರಕಾರ ಈ ರೀತಿ 1.72 ಕೋಟಿ ಮಂದಿಯನ್ನು ಗುರುತಿಸಿ ಯೋಜನೆಯಿಂದ ಕೈಬಿಡಲಾಗಿದೆ.

ಹಾಗೆಯೆ, ಸ್ವಯಂಪ್ರೇರಿತವಾಗಿ ಯೋಜನೆಯಿಂದ ಹೊರಬರಲೂ ಅವಕಾಶ ನೀಡಲಾಗಿದೆ. ಪಿಎಂ ಕಿಸಾನ್ ವೆಬ್​ಸೈಟ್​ನಲ್ಲಿ ಇದಕ್ಕೆ ಅವಕಾಶ ಇದೆ.

ಇದೆಲ್ಲದರ ಮಧ್ಯೆ, ಯೋಜನೆಯ ಫಲ ಪಡೆಯಲು ಅರ್ಹರಾಗಿದ್ದೂ ಸಿಗದವರ ಸಂಖ್ಯೆ ಕೋಟಿಗೂ ಹೆಚ್ಚಿರಬಹುದು ಎನ್ನಲಾಗಿದೆ. ಇವರನ್ನು ತಲುಪಲು ಸರ್ಕಾರ ವಿವಿಧ ಕ್ರಮ ಕೈಗೊಳ್ಳುವ ಉದ್ದೇಶ ಹೊಂದಿದೆ. ಅದಕ್ಕಾಗಿ ಒಂದು ಐಟಿ ವ್ಯವಸ್ಥೆಯನ್ನು ಸರ್ಕಾರ ರೂಪಿಸಿದೆ. ಯೋಜನೆಯಲ್ಲಿ ಯಾವುದೇ ಫಲಾನುಭವಿ ಕೈತಪ್ಪಿ ಹೋಗದಂತೆ ನೋಡಿಕೊಳ್ಳುವತ್ತ ಗಮನ ಹರಿಸಲಾಗಿದೆ.

ಇದನ್ನೂ ಓದಿ: FIRE Model: ನಿಮ್ಮ ಜೀವನಕ್ಕೆ ಬೆಂಕಿ ಕಿಚ್ಚು; ಫೈರ್ ತಂತ್ರ ಅನುಸರಿಸಿ ಬೇಗ ನಿವೃತ್ತಿ ಪಡೆದು ಆರಾಮವಾಗಿರಿ

ಯೋಜನೆ ಸಿಗದ ರೈತರು ನೀಡಿರುವ ದೂರಿನಲ್ಲಿ ಎರಡು ಅಂಶಗಳು ಪ್ರಮುಖವಾಗಿವೆ. ಒಂದು, ರೈತರ ಜಮೀನು ವಿವರವು ಭೂದಾಖಲೆ ವ್ಯವಸ್ಥೆ ಪ್ರಕಾರ ಇಲ್ಲದಿರುವುದು. ಇನ್ನೊಂದು, ರೈತ ಇ ಕೆವೈಸಿ ಮಾಡಿಲ್ಲದಿರುವುದು. ಇವುಗಳನ್ನು ಸರಿಪಡಿಸಿ ಅರ್ಹ ರೈತರನ್ನು ಯೋಜನೆಗೆ ಒಳಗೊಳ್ಳಲು ಸರ್ಕಾರ ಗುರಿ ಇಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ