ಝೀ ಸಂಸ್ಥಾಪಕ ಸುಭಾಷ್ ಚಂದ್ರಗೆ ಮತ್ತೆ ಸಂಕಟ; ಅವರ 6.25 ಕೋಟಿ ರೂ ಸೆಟಲ್ಮೆಂಟ್ ಪ್ಲಾನ್​ಗೆ ತಡೆ

Zee founder Subhash Chandra faces setback in NCLT proceedings: ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ಐವರು ಸದಸ್ಯರ ವಿಶೇಷ ಪೀಠವು ಸುಭಾಷ್ ಚಂದ್ರ ವಿರುದ್ಧದ ಇನ್ಸಾಲ್ವೆನ್ಸಿ ಪ್ರಕರಣದ ವಿಚಾರಣೆಯನ್ನು ಮತ್ತೊಮ್ಮೆ ನಡೆಸಲಿದೆ. ಹಿಂದಿನ ಏಕಸದಸ್ಯ ಪೀಠವು ಸುಭಾಷ್ ಚಂದ್ರರ 6.25 ಕೋಟಿ ರೂ ಸೆಟಲ್ಮೆಂಟ್ ಪ್ಲಾನ್​ಗೆ ನೀಡಿದ್ದ ಅನುಮೋದನೆಯನ್ನು ಹಿರಿಯ ಪೀಠವು ರದ್ದುಗೊಳಿಸಿದೆ. ಎಲ್​ಐಸಿ ಹೌಸಿಂಗ್ ಫೈನಾನ್ಸ್ ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳು ಸುಭಾಷ್ ಚಂದ್ರರಿಂದ 22,006 ಕೋಟಿ ರೂ ವಸೂಲಿ ಮಾಡಬೇಕು ಎಂದು ಕೋರಿಕೊಂಡಿವೆ.

ಝೀ ಸಂಸ್ಥಾಪಕ ಸುಭಾಷ್ ಚಂದ್ರಗೆ ಮತ್ತೆ ಸಂಕಟ; ಅವರ 6.25 ಕೋಟಿ ರೂ ಸೆಟಲ್ಮೆಂಟ್ ಪ್ಲಾನ್​ಗೆ ತಡೆ
ಸುಭಾಷ್ ಚಂದ್ರ
Image Credit source: x user @subhashchandra

Updated on: Sep 01, 2026 | 2:22 PM

ನವದೆಹಲಿ, ಸೆಪ್ಟೆಂಬರ್ 1: ಎಸ್ಸೆಲ್ ಗ್ರೂಪ್ (Essel Group) ಸಂಸ್ಥಾಪಕ ಸುಭಾಷ್ ಚಂದ್ರ (Subhash Chandra) ಅವರ 6.25 ಕೋಟಿ ರೂ ಸೆಟಲ್ಮೆಂಟ್ ಪ್ಲಾನ್​ಗೆ ಎನ್​ಸಿಎಲ್​ಟಿಯ (NCLT) ಏಕಸದಸ್ಯ ಪೀಠವು ನೀಡಿದ ಅನುಮತಿಗೆ ಐವರು ಸದಸ್ಯರ ವಿಶೇಷ ಪೀಠವೊಂದು ತಡೆ ನೀಡಿದೆ. ಈ ಮರುಪಾವತಿ ಯೋಜನೆ ಸದ್ಯಕ್ಕೆ ಜಾರಿಯಾಗುವುದು ಬೇಡ ಎಂದು ಮಧ್ಯಂತರ ತಡೆ ನೀಡಿದೆ.

ನ್ಯಾಯಮೂರ್ತಿಗಳಾದ ಅನುಪೀಂದರ್ ಸಿಂಗ್ ಗ್ರೆವಾಲ್, ಬಚ್ಚು ವೆಂಕಟ ಬಲರಾಮ್ ದಾಸ್, ಮಹೇಂದ್ರ ಖಂಡೇಲ್​ವಾಲ್, ಅತಾನು ಚಂದ್ರ ಚತುರ್ವೇದಿ ಮತ್ತು ರವೀಂದ್ರ ಚತುರ್ವೇದಿ ಅವರಿರುವ ಐವರು ಸದಸ್ಯರ ನ್ಯಾಯಮಂಡಳಿ ಪೀಠವು ಈ ಆದೇಶ ಹೊರಡಿಸಿದೆ. ಸುಭಾಷ್ ಚಂದ್ರ ಅವರು ತಮ್ಮ ಯಾವುದೇ ಆಸ್ತಿಗಳನ್ನು ನೇರವಾಗಿಯಾಗಲೀ, ಪರೋಕ್ಷವಾಗಿಯಾಗಲೀ ಮಾರುವಂತಿಲ್ಲ, ವರ್ಗಾವಣೆ ಮಾಡುವಂತಿಲ್ಲ ಎಂದು ನ್ಯಾಯಮಂಡಳಿಯು ಆದೇಶಿಸಿದೆ.

ಇದನ್ನೂ ಓದಿ: ಝೀ ಸಂಸ್ಥಾಪಕ ಸುಭಾಷ್​ಚಂದ್ರರ 6.5 ಕೋಟಿ ರೂ ರೀಪೇಮೆಂಟ್ ಪ್ಲಾನ್​ಗೆ ಎನ್​ಸಿಎಲ್​ಟಿ ಸಮ್ಮತಿ; ಏನಿದು ಪ್ರಕರಣ?

ಬೃಹತ್ ಮೊತ್ತದ ಸಾಲ ಪಾವತಿ ಆಗಬೇಕಿದೆ ಎನ್ನುತ್ತಿರುವ ಸಾಲ ನೀಡುಗರು

ಎಲ್​ಐಸಿ ಹೌಸಿಂಗ್ ಫೈನಾನ್ಸ್ ಸೇರಿದಂತೆ ವಿವಿಧ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು (Creditors) ಸುಭಾಷ್ ಚಂದ್ರ ಅವರಿಂದ ಒಟ್ಟು ₹22,006 ಕೋಟಿಗೂ ಹೆಚ್ಚು ಮೊತ್ತದ ಸಾಲದ ಮರುಪಾವತಿಯಾಗಬೇಕು ಎಂದು ಹೇಳುತ್ತಿವೆ. ಅಷ್ಟು ಹಣ ಮರುಪಾವತಿಸುವಂತೆ ಮಾಡಿ ಎಂದು ಕೋರಿ ಎನ್​ಸಿಎಲ್​ಟಿಯಲ್ಲಿ ಮನವಿ ಮಾಡಿದ್ದವು ಈ ಹಣಕಾಸು ಸಂಸ್ಥೆಗಳು.

ಎಸ್ಸೆಲ್ ಗ್ರೂಪ್​ನ ವಿವಿಧ ಕಂಪನಿಗಳು ವಿವಿಧ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಗಳಿಗೆ ಸುಭಾಷ್ ಚಂದ್ರ ಅವರು ವೈಯಕ್ತಿಕವಾಗಿ ಶೂರಿಟಿ ಅಥವಾ ಗ್ಯಾರಂಟಿಗಳನ್ನು ಕೊಟ್ಟಿದ್ದಾರೆ. ಇದರ ಮೊತ್ತವು ₹22,006 ಕೋಟಿ ಎಂದು ಕ್ಲೇಮ್ ಮಾಡಲಾಗುತ್ತಿದೆ. ಆದರೆ, ತಾವು ಇತ್ತ ಗ್ಯಾರಂಟಿಗಳಲ್ಲಿ ಹೆಚ್ಚಿನ ಸಾಲವನ್ನು ಮರುಪಾವತಿಸಲಾಗಿದೆ. ತಾವು ಮರುಪಾವತಿಸಬೇಕಿರುವ ಬಾಕಿ ಸಾಲ ಇಷ್ಟಿಲ್ಲ ಎಂಬುದು ಸುಭಾಷ್ ಚಂದ್ರ ಅವರ ವಾದವಾಗಿದೆ.

ಎನ್​ಸಿಎಲ್​ಟಿಯಲ್ಲಿ ಸುಭಾಷ್ ಚಂದ್ರ ವಿರುದ್ಧ ವೈಯಕ್ತಿಕ ದಿವಾಳಿತನ ಮತ್ತು ಸಾಲಮರುಪಾವತಿ ಕ್ರಮದ (Personal Insolvency Proceedings) ವಿಚಾರಣೆ 2024ರಲ್ಲಿ ಆರಂಭವಾಯಿತು. ಸುಭಾಷ್ ಚಂದ್ರ ಅವರು 6.25 ಕೋಟಿ ರೂ ಮರುಪಾವತಿ ಮಾಡುವುದಾಗಿ ಹೇಳಿದ್ದರು. ಎರಡು ಸದಸ್ಯರ ನ್ಯಾಯಮಂಡಳಿ ಪೀಠವು ಈ ಪ್ಲಾನ್​ಗೆ ಬಹುಮತದ ತೀರ್ಪು ನೀಡಲು ವಿಫಲವಾಯಿತು. 2026ರ ಆಗಸ್ಟ್ 25ರಂದು ಮೂರನೇ ಸದಸ್ಯರು ಸುಭಾಷ್ ಚಂದ್ರ ಅವರ ಪ್ಲಾನ್​ಗೆ ಅನುಮೋದನೆ ನೀಡಿದ್ದರು.

ಇದನ್ನೂ ಓದಿ: ಭಾರತದಲ್ಲಿ ಅರಾಕಲ್, ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಲೇ ಆಫ್ ಭೀತಿ; 3,000ಕ್ಕೂ ಹೆಚ್ಚು ಮಂದಿಗೆ ಹೋಗುತ್ತಾ ಕೆಲಸ?

ಸಾಲದಾತರಿಂದ ನಡೆದ ಮತದಾನದಲ್ಲಿ ರೀಪೇಮೆಂಟ್ ಪ್ಲಾನ್ ಪರವಾಗಿ ಶೇ. 80ಕ್ಕಿಂತಲೂ ಹೆಚ್ಚಿನ ಮತಗಳು ಬಂದಿವೆ. ಹೀಗಾಗಿ, ಅವರ ಪ್ಲಾನ್​ಗೆ ನ್ಯಾಯಮಂಡಳಿ ಅನುಮೋದನೆ ನೀಡಿತು. ಆದರೆ, ಬ್ಯಾಂಕುಗಳು ಹಾಗು ಹಣಕಾಸು ಸಂಸ್ಥೆಗಳು ಈ ಮತದಾನದ ಬಗ್ಗೆ ತಗಾದೆ ಎತ್ತಿವೆ. ಪ್ಲಾನ್ ಪರವಾಗಿ ಮತ ಚಲಾಯಿಸಿದವರಲ್ಲಿ ಹೆಚ್ಚಿನವರು ಸುಭಾಷ್ ಚಂದ್ರ ಅವರಿಗೆ ಸಂಬಂಧಿಸಿದ ಸಂಘ ಸಂಸ್ಥೆಗಳೇ ಆಗಿವೆ ಎನ್ನುವುದು ಇವರ ವಾದ.

ಹಣಕಾಸು ಸಂಸ್ಥೆಗಳು ಈ ತೀರ್ಪನ್ನು ಆಕ್ಷೇಪಿಸಿವೆ. ಸುಭಾಷ್ ಚಂದ್ರ ಅವರ ಹಣಕಾಸು ಆಸ್ತಿಗಳನ್ನು ಸರಿಯಾಗಿ ವಿಚಾರಿಸದೆಯೇ ತೀರ್ಪು ನೀಡಲಾಗಿದೆ ಎಂಬುದು ಇವರ ಇನ್ನೊಂದು ಪ್ರಮುಖ ಆಕ್ಷೇಪ. ಈ ಹಿನ್ನೆಲೆಯಲ್ಲಿ ಎನ್​ಸಿಎಲ್​ಟಿ ನ್ಯಾಯಮಂಡಳಿಯ ದೊಡ್ಡ ಪೀಠವು ಮತ್ತೊಮ್ಮೆ ಹೊಸದಾಗಿ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us