AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ವೈ-ಫೈ ಹಾಟ್‌ಸ್ಪಾಟ್ ಇಲ್ಲದಿದ್ದರೂ ಫೋನ್‌ನಿಂದ ಇಂಟರ್‌ನೆಟ್ ಹಂಚಿಕೊಳ್ಳಬಹುದು; ಹೇಗೆ ನೋಡಿ

ವೈ-ಫೈ ಹಾಟ್‌ಸ್ಪಾಟ್ ಬಳಸಲು ಸಾಧ್ಯವಾಗದ ಸಂದರ್ಭದಲ್ಲೂ ನಿಮ್ಮ ಫೋನ್‌ನ ಇಂಟರ್‌ನೆಟ್ ಅನ್ನು ಲ್ಯಾಪ್‌ಟಾಪ್ ಅಥವಾ ಮತ್ತೊಂದು ಸಾಧನದಲ್ಲಿ ಬಳಸಬಹುದು. ಇದಕ್ಕೆ ಬ್ಲೂಟೂತ್ ಟೆಥರಿಂಗ್ ಸಹಾಯ ಮಾಡುತ್ತದೆ. ಇದು ಹೇಗೆ ಕೆಲಸ ಮಾಡುತ್ತದೆ, ಯಾವಾಗ ಬಳಸಬೇಕು ಮತ್ತು ವೈ-ಫೈ ಹಾಟ್‌ಸ್ಪಾಟ್‌ಗಿಂತ ಇದು ಹೇಗೆ ಭಿನ್ನ ಎಂಬುದನ್ನು ತಿಳಿದುಕೊಳ್ಳಿ.

Tech Tips: ವೈ-ಫೈ ಹಾಟ್‌ಸ್ಪಾಟ್ ಇಲ್ಲದಿದ್ದರೂ ಫೋನ್‌ನಿಂದ ಇಂಟರ್‌ನೆಟ್ ಹಂಚಿಕೊಳ್ಳಬಹುದು; ಹೇಗೆ ನೋಡಿ
Bluetooth Tethering
ಮಾಲಾಶ್ರೀ ಅಂಚನ್​
| Edited By: |

Updated on: Sep 21, 2026 | 3:11 PM

Share

ಮುಖ್ಯಾಂಶಗಳು

  • ಬ್ಲೂಟೂತ್ ಮೂಲಕವೂ ಇಂಟರ್‌ನೆಟ್ ಹಂಚಿಕೊಳ್ಳಬಹುದೇ?
  • ವೈ-ಫೈ ಇಲ್ಲದಾಗ ಬ್ಲೂಟೂತ್ ಟೆಥರಿಂಗ್ ಬಳಸಿ!
  • ಫೋನ್‌ನ ನೆಟ್‌ನ್ನು ಲ್ಯಾಪ್‌ಟಾಪ್‌ಗೆ ಹಂಚಿಕೊಳ್ಳುವುದು ಹೇಗೆ?

ಸ್ಮಾರ್ಟ್‌ಫೋನ್‌ನ (Smartphone) ಮೊಬೈಲ್ ಡೇಟಾವನ್ನು ಲ್ಯಾಪ್‌ಟಾಪ್ ಅಥವಾ ಮತ್ತೊಂದು ಸಾಧನದಲ್ಲಿ ಬಳಸಬೇಕಾದಾಗ ಸಾಮಾನ್ಯವಾಗಿ ನಾವು ವೈ-ಫೈ ಹಾಟ್‌ಸ್ಪಾಟ್‌ ಬಳಸುತ್ತೇವೆ. ಆದರೆ ಹಾಟ್‌ಸ್ಪಾಟ್ ಬಳಸಲು ಸಾಧ್ಯವಾಗದ ಸಂದರ್ಭದಲ್ಲೂ ಫೋನ್‌ನ ಇಂಟರ್‌ನೆಟ್ ಅನ್ನು ಮತ್ತೊಂದು ಸಾಧನಕ್ಕೆ ಹಂಚಿಕೊಳ್ಳಬಹುದು. ಇದಕ್ಕೆ ಬ್ಲೂಟೂತ್ ಟೆಥರಿಂಗ್ ಎಂಬ ಆಯ್ಕೆ ಇದೆ. ಸರಳವಾಗಿ ಹೇಳುವುದಾದರೆ, ಬ್ಲೂಟೂತ್ ಮೂಲಕ ನಿಮ್ಮ ಫೋನ್ ಅನ್ನು ಮತ್ತೊಂದು ಸಾಧನಕ್ಕೆ ಸಂಪರ್ಕಿಸಿ, ಫೋನ್‌ನ ಇಂಟರ್‌ನೆಟ್ ಸಂಪರ್ಕವನ್ನು ಆ ಸಾಧನದಲ್ಲೂ ಬಳಸುವ ವಿಧಾನವೇ ಬ್ಲೂಟೂತ್ ಟೆಥರಿಂಗ್.

ಬ್ಲೂಟೂತ್ ಟೆಥರಿಂಗ್ ಹೇಗೆ ಆನ್ ಮಾಡುವುದು?

ಮೊದಲು ನಿಮ್ಮ ಫೋನ್ ಮತ್ತು ಇಂಟರ್‌ನೆಟ್ ಬಳಸಬೇಕಾದ ಮತ್ತೊಂದು ಸಾಧನವನ್ನು ಬ್ಲೂಟೂತ್ ಮೂಲಕ ಜೋಡಿಸಬೇಕು. ಉದಾಹರಣೆಗೆ, ಲ್ಯಾಪ್‌ಟಾಪ್‌ನಲ್ಲಿ ಫೋನ್‌ನ ಇಂಟರ್‌ನೆಟ್ ಬಳಸಬೇಕಾದರೆ ಎರಡೂ ಸಾಧನಗಳನ್ನು ಮೊದಲು ಪರಸ್ಪರ ಸಂಪರ್ಕಿಸಬೇಕು.

ನಂತರ ಫೋನ್‌ನ ಸೆಟ್ಟಿಂಗ್ಸ್ ತೆರೆಯಿರಿ. ಅಲ್ಲಿ ನೆಟ್‌ವರ್ಕ್ ಮತ್ತು ಇಂಟರ್‌ನೆಟ್ ಅಥವಾ ಕನೆಕ್ಷನ್ಸ್ ಎಂಬ ಆಯ್ಕೆಯನ್ನು ತೆರೆಯಿರಿ. ಬಳಿಕ ಹಾಟ್‌ಸ್ಪಾಟ್ ಮತ್ತು ಟೆಥರಿಂಗ್ ಆಯ್ಕೆಗೆ ಹೋಗಿ ಬ್ಲೂಟೂತ್ ಟೆಥರಿಂಗ್ ಅನ್ನು ಆನ್ ಮಾಡಬೇಕು.

ವಿವಿಧ ಕಂಪನಿಗಳ ಫೋನ್‌ಗಳಲ್ಲಿ ಈ ಆಯ್ಕೆಯ ಹೆಸರು ಅಥವಾ ಅದರ ಸ್ಥಳ ಸ್ವಲ್ಪ ಬದಲಾಗಿರಬಹುದು. ಆದ್ದರಿಂದ ನಿಮ್ಮ ಫೋನ್‌ನ ಸೆಟ್ಟಿಂಗ್ಸ್‌ನಲ್ಲಿ ‘ಟೆಥರಿಂಗ್’ ಎಂದು ಹುಡುಕಿದರೂ ಸುಲಭವಾಗಿ ಪತ್ತೆಹಚ್ಚಬಹುದು.

ವೈ-ಫೈ ಹಾಟ್‌ಸ್ಪಾಟ್‌ಗಿಂತ ಹೇಗೆ ಭಿನ್ನ?

ಎರಡೂ ವಿಧಾನಗಳ ಉದ್ದೇಶ ಒಂದೇ—ಫೋನ್‌ನ ಇಂಟರ್‌ನೆಟ್ ಅನ್ನು ಮತ್ತೊಂದು ಸಾಧನದಲ್ಲಿ ಬಳಸುವುದು. ಆದರೆ ಸಂಪರ್ಕಿಸುವ ವಿಧಾನ ಮಾತ್ರ ಭಿನ್ನ. ವೈ-ಫೈ ಹಾಟ್‌ಸ್ಪಾಟ್‌ನಲ್ಲಿ ಫೋನ್ ಒಂದು ವೈ-ಫೈ ಜಾಲವನ್ನು ಸೃಷ್ಟಿಸುತ್ತದೆ. ಮತ್ತೊಂದು ಸಾಧನ ಅದಕ್ಕೆ ವೈ-ಫೈ ಮೂಲಕ ಸಂಪರ್ಕಗೊಳ್ಳುತ್ತದೆ.

ಟ್ರಾಯ್ ಹೊಸ ನಿಯಮ: ಈ ರೀತಿಯ ಕರೆಗಳಿಗೆ ಇನ್ನು ಮುಂದೆ ನಿಮಿಷಕ್ಕೆ 5 ಪೈಸೆ ವರೆಗೆ ಶುಲ್ಕ

ಬ್ಲೂಟೂತ್ ಟೆಥರಿಂಗ್‌ನಲ್ಲಿ ಇಂಟರ್‌ನೆಟ್ ಸಂಪರ್ಕ ಬ್ಲೂಟೂತ್ ಮೂಲಕ ಹಂಚಿಕೆಯಾಗುತ್ತದೆ. ಸಾಮಾನ್ಯವಾಗಿ ಇದರ ವೇಗ ವೈ-ಫೈ ಹಾಟ್‌ಸ್ಪಾಟ್‌ಗಿಂತ ಕಡಿಮೆ ಇರುತ್ತದೆ. ಆದ್ದರಿಂದ ದೊಡ್ಡ ಫೈಲ್​ಗಳನ್ನು ಡೌನ್‌ಲೋಡ್ ಮಾಡುವುದು, ಹೆಚ್ಚು ಗುಣಮಟ್ಟದ ವಿಡಿಯೊಗಳನ್ನು ವೀಕ್ಷಿಸುವುದು ಅಥವಾ ವೇಗದ ಇಂಟರ್‌ನೆಟ್ ಅಗತ್ಯವಿರುವ ಕೆಲಸಗಳಿಗೆ ವೈ-ಫೈ ಹಾಟ್‌ಸ್ಪಾಟ್ ಹೆಚ್ಚು ಸೂಕ್ತ.

ಹಾಗಾದರೆ ಬ್ಲೂಟೂತ್ ಟೆಥರಿಂಗ್ ಯಾವಾಗ ಉಪಯುಕ್ತ?

ನೀವು ಲ್ಯಾಪ್‌ಟಾಪ್‌ನಲ್ಲಿ ಕೇವಲ ಇಮೇಲ್ ಪರಿಶೀಲಿಸಬೇಕು, ವೆಬ್‌ಸೈಟ್ ತೆರೆಯಬೇಕು ಅಥವಾ ಸ್ವಲ್ಪ ಸಮಯದವರೆಗೆ ಸಣ್ಣ ಪ್ರಮಾಣದ ಆನ್‌ಲೈನ್ ಕೆಲಸ ಮಾಡಬೇಕು ಎಂದಾದರೆ ಬ್ಲೂಟೂತ್ ಟೆಥರಿಂಗ್ ಉಪಯುಕ್ತವಾಗಬಹುದು.

ಡೇಟಾ ಮತ್ತು ಬ್ಯಾಟರಿ ಬಗ್ಗೆ ಎಚ್ಚರಿಕೆ ಇರಲಿ

ಬ್ಲೂಟೂತ್ ಟೆಥರಿಂಗ್ ಬಳಸಲು ನಿಮ್ಮ ಫೋನ್‌ನಲ್ಲಿ ಇಂಟರ್‌ನೆಟ್ ಸಂಪರ್ಕ ಇರಬೇಕು. ಸಾಮಾನ್ಯವಾಗಿ ಮೊಬೈಲ್ ಡೇಟಾವನ್ನೇ ಇದಕ್ಕಾಗಿ ಬಳಸಲಾಗುತ್ತದೆ. ಹೀಗಾಗಿ ಮತ್ತೊಂದು ಸಾಧನದಲ್ಲಿ ಇಂಟರ್‌ನೆಟ್ ಬಳಸಿದಷ್ಟು ನಿಮ್ಮ ಮೊಬೈಲ್ ಡೇಟಾ ಕೂಡ ಖರ್ಚಾಗುತ್ತದೆ. ಟೆಥರಿಂಗ್ ಬಳಸುತ್ತಿರುವಾಗ ಫೋನ್‌ನ ಬ್ಯಾಟರಿಯೂ ಖರ್ಚಾಗುತ್ತದೆ. ಕೆಲಸ ಮುಗಿದ ಬಳಿಕ ಬ್ಲೂಟೂತ್ ಟೆಥರಿಂಗ್ ಅನ್ನು ಆಫ್ ಮಾಡುವುದು ಉತ್ತಮ. ಇದರಿಂದ ಅನಗತ್ಯವಾಗಿ ಡೇಟಾ ಮತ್ತು ಬ್ಯಾಟರಿ ಬಳಕೆಯಾಗುವುದನ್ನು ತಪ್ಪಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us