ನವದೆಹಲಿ: ನೆಸ್ಲೆ ಇಂಡಿಯಾ (Nestle India) ಮೂರನೇ ತ್ರೈಮಾಸಿಕ ಫಲಿತಾಂಶ (Q3 Results) ಬುಧವಾರ ಪ್ರಕಟಗೊಂಡಿದೆ. ನಿವ್ವಳ ಲಾಭದಲ್ಲಿ (Net profit) ಶೇಕಡಾ 8.3ರಷ್ಟು ಹೆಚ್ಚಳವಾಗಿದ್ದು, ಲೆಕ್ಕಾಚಾರಗಳನ್ನು ಮೀರಿ 668 ಕೋಟಿ ರೂ. ಲಾಭ ಗಳಿಸಿದೆ. ತ್ರೈಮಾಸಿಕ ಅವಧಿಯ ಆದಾಯದಲ್ಲಿ ಶೇಕಡಾ 18.3 ಹೆಚ್ಚಳವಾಗಿದ್ದು, 4,591 ಕೋಟಿ ರೂ. ತಲುಪಿದೆ. ಕಂಪನಿಯ ಉತ್ಪನ್ನಗಳ ಮಾರಾಟದ ಒಟ್ಟು ಮೊತ್ತ 4,567 ಕೋಟಿ ರೂ. ಆಗಿದ್ದು, ಕಳೆದ ಐದು ವರ್ಷಗಳಲ್ಲಿ ಇದೇ ತ್ರೈಮಾಸಿಕ ಅವಧಿಗೆ ಹೋಲಸಿದರೆ ಗರಿಷ್ಠ ಮೊತ್ತವಾಗಿದೆ. ಒಟ್ಟಾರೆ ಮಾರಾಟ ಬೆಳವಣಿಗೆಯು ಶೇಕಡಾ 18.2 ಆಗಿದೆ. ದೇಶೀಯ ಮಾರಾಟ ಕೂಡ ಶೇಕಡಾ 18.3ಕ್ಕೆ ಹೆಚ್ಚಳಗೊಂಡಿದೆ.
ಕಂಪನಿಯು ಈ ತ್ರೈಮಾಸಿಕದಲ್ಲಿ ಐದು ವರ್ಷಗಳ ಗರಿಷ್ಠ ಮಾರಾಟ ದಾಖಲಿಸಿದೆ ಎಂದು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾರಾಯಣನ್ ತಿಳಿಸಿದ್ದಾರೆ. ಮೆಟ್ರೊ ಮತ್ತು ದೊಡ್ಡ ನಗರಗಳಲ್ಲಿ ಕಂಪನಿಯ ಬೆಳವಣಿಗೆ ಬಲವಾಗಿದೆ. ಗ್ರಾಮೀಣ ಮಾರುಕಟ್ಟೆಗಳು ಹಾಗೂ ಸಣ್ಣ ನಗರಗಳಲ್ಲಿಯೂ ಕಂಪನಿ ಉತ್ತಮ ಸಾಧನೆ ತೋರಿದೆ ಎಂದು ಅವರು ಹೇಳಿದ್ದಾರೆ.
ತ್ರೈಮಾಸಿಕ ಫಲಿತಾಂಶದ ಮುಖ್ಯಾಂಶಗಳು:
ಒಟ್ಟು ಮಾರಾಟ – 4,567 ಕೋಟಿ ರೂ.
ಮಾರಾಟ ಬೆಳವಣಿಗೆ ಪ್ರಮಾಣ – 18.2%
ದೇಶೀಯ ಮಾರಾಟ ಬೆಳವಣಿಗೆ ಪ್ರಮಾಣ – 18.3%.
ಮಾರಾಟ ಕಾರ್ಯಾಚರಣೆಗಳಿಂದ ಗಳಿಸಿದ ಲಾಭದ ಪ್ರಮಾಣ – 20.3%
ನಿವ್ವಳ ಲಾಭ – 668 ಕೋಟಿ ರೂ.
ಪ್ರತಿ ಷೇರಿನ ಮೇಲಿನ ಗಳಿಕೆ – 69.3 ರೂ.
ನೆಸ್ಲೆ ಡಿವಿಡೆಂಡ್ 2022:
ಕಂಪನಿಯು 2022ನೇ ಸಾಲಿನ ಎರಡನೇ ಮಧ್ಯಂತರ ಡಿವಿಡೆಂಡ್ ಅನ್ನು ಘೊಷಿಸಿದ್ದು, ಇದು ಪ್ರತಿ ಈಕ್ವಿಟಿ ಷೇರಿಗೆ 120 ರೂ.ನಂತೆ ಇದೆ. ಒಟ್ಟು 1157 ಕೋಟಿ ರೂ. ಮೊತ್ತದ ಡಿವಿಡೆಂಡ್ ಬಿಡುಗಡೆ ಮಾಡಲಾಗಿದ್ದು, ಇದನ್ನು ನವೆಂಬರ್ 16 ಅಥವಾ ಅದಕ್ಕಿಂತ ಮೊದಲು ನೀಡಲಿದೆ. ಮೊದಲ ಮಧ್ಯಂತರ ಡಿವಿಡೆಂಡ್ಗೆ ಹೆಚ್ಚುವರಿಯಾಗಿ ಇದನ್ನು ನೀಡಲಾಗುತ್ತಿದೆ. ಮೇ 6ರಂದು ಪ್ರತಿ ಈಕ್ವಿಟಿ ಷೇರಿಗೆ 25 ರೂ.ನಂತೆ ಮೊದಲ ಮಧ್ಯಂತರ ಡಿವಿಡೆಂಡ್ ನೀಡಲಾಗಿತ್ತು.
ಇದನ್ನೂ ಓದಿ: Stock Market Updates: ಹಬ್ಬದ ಉತ್ಸಾಹದಲ್ಲಿ ಷೇರುಪೇಟೆ, ನಾಲ್ಕನೇ ದಿನವೂ ಗಳಿಕೆಯ ಓಟ
ಎನ್ಎಸ್ಇಯಲ್ಲಿ ಬುಧವಾರ ಮಧ್ಯಾಹ್ನ 11.55ರ ಸುಮಾರಿಗೆ ನೆಸ್ಲೆ ಇಂಡಿಯಾದ ಷೇರಿನ ಬೆಲೆ ಸುಮಾರು ಶೇಕಡಾ 1.50ರಷ್ಟು ಹೆಚ್ಚಾಗಿ 19669 ರೂ.ಗೆ ತಲುಪಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Wed, 19 October 22