
ನವದೆಹಲಿ, ಏಪ್ರಿಲ್ 23: ಕೇಂದ್ರ ಸರ್ಕಾರವು ಆನ್‌ಲೈನ್ ಗೇಮಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು (Promotion and Regulation of Online Gaming Act, 2025) ಜಾರಿಗೊಳಿಸಿದೆ. ಈ ನಿಯಮಗಳು ಮೇ 1, 2026 ರಿಂದ ಜಾರಿಗೆ ಬರಲಿವೆ. ಕಳೆದ ವರ್ಷ (2025) ಆಗಸ್ಟ್ ತಿಂಗಳಲ್ಲಿ ಸಂಸತ್ತು ಈ ಆನ್ಲೈನ್ ಗೇಮಿಂಗ್ ಕಾಯ್ದೆಗೆ ಅನುಮೋದನೆ ಕೊಟ್ಟಿತ್ತು. ಇದೀಗ ಕಾರ್ಯಾತ್ಮಕ ನಿಯಮಗಳನ್ನು ಚಾಲನೆಗಳಿಸಲಾಗಿದೆ. ಬಳಕೆದಾರರಿಗೆ ರಕ್ಷಣೆ ಹಾಗೂ ಉದ್ಯಮ ಬೆಳವಣಿಗೆ ಎರಡನ್ನೂ ಸಮತೋಲನಗೊಳಿಸಲು ಸಾಧ್ಯವಾಗುವಂತೆ ಒಂದು ಫ್ರೇಮ್ವರ್ಕ್ ರೂಪಿಸಲಾಗುತ್ತಿದೆ. ಈ ಆನ್ಲೈನ್ ಗೇಮಿಂಗ್ ಕಾನೂನಿನ ಕೆಲ ಪ್ರಮುಖ ಅಂಶಗಳು ಇಲ್ಲಿವೆ:
ಆನ್ಲೈನ್ ಗೇಮಿಂಗ್ ಕ್ಷೇತ್ರವನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರವು ‘ಭಾರತೀಯ ಆನ್‌ಲೈನ್ ಗೇಮಿಂಗ್ ಪ್ರಾಧಿಕಾರ’ವನ್ನು (Online Gaming Authority of India) ಸ್ಥಾಪಿಸಿದೆ. ಇದು ಐಟಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಗೃಹ, ಹಣಕಾಸು ಮತ್ತು ಕ್ರೀಡಾ ಸಚಿವಾಲಯದ ಅಧಿಕಾರಿಗಳನ್ನು ಒಳಗೊಂಡಿರುತ್ತದೆ.
ಹಣದ ಆಟಗಳು (Money games) ಮತ್ತು ಕೌಶಲ್ಯದ ಆಟಗಳನ್ನು ವರ್ಗೀಕರಿಸಲು ಸ್ಪಷ್ಟ ಮಾನದಂಡಗಳನ್ನು ತರಲಾಗಿದೆ. ಬಳಕೆದಾರರು ಹಣ ಪಾವತಿಸುತ್ತಾರೆಯೇ? ಬಹುಮಾನವಾಗಿ ನಗದು ಸಿಗುತ್ತದೆಯೇ? ಗೇಮ್ ಹೇಗೆ ಆದಾಯ ಸೃಷ್ಟಿಸುತ್ತದೆ? ಗೇಮ್ನಲ್ಲಿ ಕ್ಯಾಷ್ ಅಥವಾ ರಿವಾರ್ಡ್ ಗೆಲ್ಲುವ ನಿರೀಕ್ಷೆ ಇದೆಯೇ? ಎಂಬಿತ್ಯಾದಿ ಅಂಶಗಳ ಆಧಾರದ ಮೇಲೆ ಆಟಗಳನ್ನು ಮನಿ ಗೇಮ್ ಅಥವಾ ಸ್ಕಿಲ್ ಗೇಮ್ ಎಂದು ವರ್ಗೀಕರಿಸಲಾಗುತ್ತದೆ.
ಇದನ್ನೂ ಓದಿ: ಜಾಗತಿಕ ಆಘಾತಗಳಿಗೆ ಭಾರತದ 3 ಆರ್ಥಿಕ ರಕ್ಷಾ ಕವಚಗಳು: ಫಿಚ್ ಬಿಎಂಐ ವಿಶ್ಲೇಷಣೆ
ಎಲ್ಲಾ ಗೇಮ್‌ಗಳಿಗೆ ನೋಂದಣಿ ಅಗತ್ಯವಿಲ್ಲದಿದ್ದರೂ, ‘ಇ-ಸ್ಪೋರ್ಟ್ಸ್’ ಶೀರ್ಷಿಕೆಗಳಿಗೆ (Esports titles) ನೋಂದಣಿ ಕಡ್ಡಾಯವಾಗಿದೆ. ಕಂಪನಿಯ ಮೂಲ, ಬಳಕೆದಾರರ ಸಂಖ್ಯೆ ಮತ್ತು ಹಣಕಾಸಿನ ವಹಿವಾಟಿನ ಆಧಾರದ ಮೇಲೆ ಕೆಲವು ಆಟಗಳಿಗೆ ಅನುಮತಿ ಪಡೆಯುವುದು ಅಗತ್ಯವಿರುತ್ತದೆ. ಒಮ್ಮೆ ಅನುಮತಿ ಸಿಕ್ಕರೆ ಅದು 10 ವರ್ಷಗಳವರೆಗೆ ಮಾನ್ಯವಾಗಿರುತ್ತದೆ.
ಯಾವುದೇ ಗೇಮಿಂಗ್ ಪ್ಲಾಟ್‌ಫಾರ್ಮ್ ಸರ್ಕಾರದಿಂದ ಅನುಮೋದನೆ ಪಡೆದಿದೆಯೇ ಎಂದು ಬ್ಯಾಂಕುಗಳು ಪರಿಶೀಲಿಸಬೇಕು. ಅನಧಿಕೃತ ಅಥವಾ ನಿಷೇಧಿತ ಆಟಗಳಿಗೆ ಹಣ ಸಂದಾಯ ಮಾಡುವುದನ್ನು ಬ್ಯಾಂಕುಗಳು ನಿರ್ಬಂಧಿಸಲಿವೆ.
ಇದನ್ನೂ ಓದಿ: ಈ ವರ್ಷದ ಪ್ರಮುಖ ಸೆಕ್ಟರ್ ಇದು; ಗಮನಿಸಬೇಕಾದ 6 ಪ್ರಮುಖ ಮ್ಯೂಚುವಲ್ ಫಂಡ್ಗಳಿವು
ಆಟಗಾರರಿಗೆ ಯಾವುದೇ ತೊಂದರೆಯಾದಲ್ಲಿ ಮೊದಲು ಗೇಮಿಂಗ್ ಕಂಪನಿಗೆ ದೂರು ನೀಡಬೇಕು. ಅಲ್ಲಿ ಪರಿಹಾರ ಸಿಗದಿದ್ದರೆ 30 ದಿನಗಳ ಒಳಗಾಗಿ ಸರ್ಕಾರಿ ಪ್ರಾಧಿಕಾರಕ್ಕೆ ದೂರು ನೀಡಬಹುದು.
ಒಟ್ಟಾರೆಯಾಗಿ, ಈ ನಿಯಮಗಳು ಆನ್‌ಲೈನ್ ಗೇಮಿಂಗ್ ಕ್ಷೇತ್ರವನ್ನು ವ್ಯವಸ್ಥಿತಗೊಳಿಸಲು ಮತ್ತು ಆಟಗಾರರ ಹಿತರಕ್ಷಣೆಯನ್ನು ಕಾಯುವ ಉದ್ದೇಶ ಹೊಂದಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ