ದುಬೈಗೆ ಟೂರ್ ಹೋಗುತ್ತಿದ್ದೀರಾ? ಲೈಫ್ ಈಸಿ ಮಾಡುತ್ತೆ ರುಪೇ ಪ್ರೀಪೇಡ್ ಫೋರೆಕ್ಸ್ ಕಾರ್ಡ್
RuPay Prepaid Forex Card: ಥಾಮಸ್ ಕುಕ್, ಕಾರ್ಡ್91 ಮತ್ತು ಎನ್ಪಿಸಿಐ ಜಂಟಿಯಾಗಿ ರೂಪಿಸಿರುವ ಪ್ರೀಪೆಯ್ಡ್ ರುಪೇ ಫೋರೆಕ್ಸ್ ಕಾರ್ಡ್ ಅನ್ನು ಪ್ರಾಯೋಗಿಕವಾಗಿ ಚಾಲನೆಗೊಳಿಸಲಾಗಿದೆ. ಮೊದಲಿಗೆ ಇದರ ಪ್ರಯೋಗ ಯುಎಇನಲ್ಲಿ ಆಗಲಿದೆ. ಶಾರ್ಜಾ, ದುಬೈ, ಅಬುಧಾಬಿಗೆ ಪ್ರಯಾಣಿಸುವ ಭಾರತೀಯರು ರುಪೇ ಫೋರೆಕ್ಸ್ ಕಾರ್ಡ್ ಪಡೆಯಬಹುದು. ಯುಎಇನಲ್ಲಿ ಹಣದ ವಹಿವಾಟು ನಡೆಸಲು, ಶಾಪಿಂಗ್ ಮಾಡಲು, ಎಟಿಎಂನಿಂದ ಸ್ಥಳೀಯ ಕರೆನ್ಸಿಯ ಹಣ ವಿತ್ಡ್ರಾ ಮಾಡಲು ಈ ಕಾರ್ಡ್ ಉಪಯುಕ್ತವಾಗುತ್ತದೆ.
ನವದೆಹಲಿ, ಸೆಪ್ಟೆಂಬರ್ 7: ದುಬೈ, ಅಬುಧಾಬಿ ಮತ್ತು ಶಾರ್ಜಾ ನಗರಗಳಿಗೆ ಪ್ರಯಾಣಿಸುವ ಭಾರತೀಯರಿಗೆ ಶುಭ ಸುದ್ದಿ. ಇನ್ಮುಂದೆ ನೀವು ದುಬೈನಲ್ಲಿ ಹಣದ ವಹಿವಾಟಿಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ಬ್ಯಾಂಕುಗಳಿಂದ ನೀವು ರುಪೇ ಪ್ರೀಪೇಯ್ಡ್ ಫೋರೆಕ್ಸ್ ಕಾರ್ಡನ್ನು (RuPay Prepaid Forex Card) ಪಡೆಯಬಹುದು. ಫೋರೆಕ್ಸ್ ಸೇವೆ ಒದಗಿಸುವ ಥಾಮಸ್ ಕುಕ್ ಸಹಯೋಗದಲ್ಲಿ ಯುಪಿಐ ರೂವಾರಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ (NPCI) ಸಂಸ್ಥೆಗಳು ಜಂಟಿಯಾಗಿ ರುಪೇ ಪ್ರೀಪೆಯ್ಡ್ ಫೋರೆಕ್ಸ್ ಕಾರ್ಡನ್ನು ರೂಪಿಸಿದೆ. ಸದ್ಯ ಇದರ ಪ್ರಾಯೋಗಿಕ ಬಿಡುಗಡೆ ಮಾತ್ರವೇ ಆಗಿದೆ. ಯುಎಇಗೆ ಹೋಗುವ ಭಾರತೀಯ ಪ್ರಯಾಣಿಕರಿಗೆ ಮಾತ್ರ ರುಪೇ ಫೋರೆಕ್ಸ್ ಕಾರ್ಡ್ ನೀಡಲಾಗುತ್ತಿದೆ. ಈ ಯೋಜನೆ ಯಶಸ್ವಿಯಾದರೆ ಜಾಗತಿಕವಾಗಿ ಇದು ಲಭ್ಯವಾಗುವಂತೆ ಮಾಡಲು ಸರ್ಕಾರ ಯೋಜಿಸಿದೆ.
‘ಭಾರತದ ಬ್ಯಾಂಕುಗಳು ಒದಗಿಸುವ ರುಪೇ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಿಗೆ ವಿದೇಶಗಳಲ್ಲಿ ಮಾನ್ಯತೆ ಹೆ್ಚ್ಚಾಗುತ್ತಿದೆ. ಈಗ ರುಪೇ ಪ್ರೀಪೇಯ್ಡ್ ಫೋರೆಕ್ಸ್ ಕಾರ್ಡ್ ವಿತರಿಸಲು ಬ್ಯಾಂಕುಗಳಿಗೆ ಅನುಮತಿ ಕೊಡಲು ನಿರ್ಧರಿಸಲಾಗಿದೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತ ಈ ವಿಶ್ವದ ಹೊಸ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಲಿದೆ: ಫಾಕ್ಸ್ಕಾನ್ ವಿಶ್ವಾಸ
ಥಾಮಸ್ ಕುಕ್ ರುಪೇ ಕಾರ್ಡ್ ಎಂದು ಕರೆಯಲಾಗುವ ಈ ಕಾರ್ಡ್ ಡೆಬಿಟ್ ಕಾರ್ಡ್ ರೀತಿಯದ್ದಾಗಿದ್ದು, ಮೊದಲೇ ಹಣ ತುಂಬಿಸಿಟ್ಟಿರಬೇಕು. ಕಾರ್ಡ್91 ಎಂಬ ತಂತ್ರಜ್ಞಾನವನ್ನು ಥಾಮಸ್ ಕುಕ್ ಸಂಸ್ಥೆ ಬಳಕೆ ಮಾಡಿದೆ. ಈ ರುಪೇ ಫಾರೆಕ್ಸ್ ಕಾರ್ಡ್ಗಳು ವಿದೇಶಗಳಿಗೆ ಪ್ರಯಾಣಿಸುವ ಭಾರತೀಯರಿಗೆ ಅನುಕೂಲ ಮಾಡಿಕೊಡುತ್ತದೆ. ಅವರ ಪೇಮೆಂಟ್ ಆಯ್ಕೆಗಳ ಸಂಖ್ಯೆ ಹೆಚ್ಚುತ್ತದೆ. ರುಪೇ ಕಾರ್ಡ್ಗಳ ವ್ಯಾಪ್ತಿಯೂ ಹೆಚ್ಚುತ್ತದೆ.
ರುಪೇ ಫಾರೆಕ್ಸ್ ಕಾರ್ಡ್ ಹೇಗೆ ಕೆಲಸ ಮಾಡುತ್ತದೆ?
ಮೊದಲಿಗೆ ಯುಎಇಯನ್ನು ರುಪೇ ಫೋರೆಕ್ಸ್ ಕಾರ್ಡ್ ಪ್ರಯೋಗಕ್ಕೆ ಆಯ್ಕೆ ಮಾಡಲಾಗಿದೆ. ಈ ಹಂತದಲ್ಲಿ ಫಾರೆಕ್ಸ್ ಕಾರ್ಡ್ಗೆ ನಿರ್ದಿಷ್ಟ ಮೊತ್ತದ ಯುಎಇ ಕರೆನ್ಸಿಯ (Dirham) ಹಣವನ್ನು ಸೇರಿಸಲಾಗುತ್ತದೆ. ಹಣದ ವಹಿವಾಟು, ಎಟಿಎಂನಲ್ಲಿ ಹಣ ವಿತ್ಡ್ರಾ ಮಾಡುವುದು, ಶಾಪಿಂಗ್ ಮಾಡುವುದು ಇತ್ಯಾದಿ ಕಾರ್ಯಗಳನ್ನು ಈ ಕಾರ್ಡ್ ಮೂಲಕ ಮಾಡಬಹುದು. ಡಿರಾಮ್ ಕರೆನ್ಸಿಯ ಹಣವನ್ನು ಎಟಿಎಂನಿಂದ ಪಡೆಯಬಹುದು.
ಥಾಮಸ್ ಕುಕ್ ರುಪೇ ಕಾರ್ಡ್ನಲ್ಲಿ ಸಾಕಷ್ಟು ಅನುಕೂಲಗಳ ಆಕರ್ಷಣೆ ಇದೆ. 13,900 ರೂ ಮೌಲ್ಯದ ಟ್ರಾವಲ್ ವೋಚರ್ಗಳು, ಭಾರತದಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಲಾಂಜ್ ಸೌಲಭ್ಯ, ಎಟಿಎಂನಲ್ಲಿ ಉಚಿತವಾಗಿ ಹಣ ಹಿಂಪಡೆಯುವುದು, ಕಾರ್ಡ್ ಕಳೆದುಹೋದರೆ ಉಚಿತವಾಗಿ ಹೊಸ ಕಾರ್ಡ್ ಪಡೆಯುವುದು, ಇನ್ಷೂರೆನ್ಸ್ ಕವರೇಜ್ ಹೀಗೆ ಹಲವು ಸೌಲಭ್ಯಗಳನ್ನು ರುಪೇ ಫೋರೆಕ್ಸ್ ಕಾರ್ಡ್ನಲ್ಲಿ ಒದಗಿಸಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:37 pm, Thu, 7 September 23