NPS Partial Withdrawal: ಎನ್ಪಿಎಸ್ ಭಾಗಶಃ ಮೊತ್ತ ಹಿಂಪಡೆಯಲು ಬಯಸಿದ್ದೀರಾ? ನಿಯಮ ಮತ್ತೆ ಬದಲಾಗಿದೆ ಗಮನಿಸಿ
NPS Partial Withdrawal Rule; ಸರ್ಕಾರಿ ಕ್ಷೇತ್ರದ ಎಲ್ಲ ಉದ್ಯೋಗಿಗಳು ಭಾಗಶಃ ಹಿಂಪಡೆಯುವಿಕೆ ಮನವಿಯನ್ನು ಕಡ್ಡಾಯವಾಗಿ ಸಂಬಂಧಪಟ್ಟ ನೋಡಲ್ ಅಧಿಕಾರಿಗಳ ಮೂಲಕವೇ ಕಳುಹಿಸಬೇಕು ಎಂದು ಪಿಎಫ್ಆರ್ಡಿಎ ಸುತ್ತೋಲೆ ಉಲ್ಲೇಖಿಸಿದೆ.
ನವದೆಹಲಿ: ರಾಷ್ಟ್ರೀಯ ಪಿಂಚಣಿಯ ವ್ಯವಸ್ಥೆಯಡಿ (NPS) ಮಾಡಿದ್ದ ಹೂಡಿಕೆಯಿಂದ ಭಾಗಶಃ ಹಿಂಪಡೆಯುವುದು ಕೋವಿಡ್ (Covid-19) ಸಾಂಕ್ರಾಮಿಕದ ಸಂದರ್ಭದಲ್ಲಿ ಮೊದಲಿಗೆ ಸುಲಭವಾಗಿತ್ತು. ಲಾಕ್ಡೌನ್ ಮತ್ತಿತರ ಸಂಕಷ್ಟಗಳಿಂದ ತತ್ತರಿಸಿದ್ದ ಜನರಿಗೆ ನೆರವಾಗಲೆಂದು ಸರ್ಕಾರ ತಾತ್ಕಾಲಿಕವಾಗಿ ನಿಯಮದಲ್ಲಿ ತುಸು ಬದಲಾವಣೆ ಮಾಡಿತ್ತು. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ಕೇಂದ್ರ ಸ್ವಾಯತ್ತ ಸಂಸ್ಥೆಗಳ ಉದ್ಯೋಗಿಗಳಿಗೆ ಸ್ವಯಂದೃಢೀಕರಣದ ಮೂಲಕ ಭಾಗಶಃ ಮೊತ್ತ ಹಿಂಪಡೆಯಲು ಅವಕಾಶವಿತ್ತು. ಆದರೆ, ಇದೀಗ ಕೋವಿಡ್ ಮತ್ತೆ ಏರಿಕೆಯಾಗುತ್ತಿರುವ ಸಂದರ್ಭದಲ್ಲೇ ಸ್ವಯಂ ದೃಢೀಕರಣದ ಮೂಲಕ ಭಾಗಶಃ ಮೊತ್ತ ಹಿಂಪಡೆಯುವ ನಿಯಮವನ್ನು ರದ್ದುಗೊಳಿಸಿದೆ. ಈ ವಿಚಾರವಾಗಿ ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಡಿಸೆಂಬರ್ 23ರಂದು ಸುತ್ತೋಲೆ ಹೊರಡಿಸಿದೆ.
ಸರ್ಕಾರಿ ಕ್ಷೇತ್ರದ ಎಲ್ಲ ಉದ್ಯೋಗಿಗಳು ಭಾಗಶಃ ಹಿಂಪಡೆಯುವಿಕೆ ಮನವಿಯನ್ನು ಕಡ್ಡಾಯವಾಗಿ ಸಂಬಂಧಪಟ್ಟ ನೋಡಲ್ ಅಧಿಕಾರಿಗಳ ಮೂಲಕವೇ ಕಳುಹಿಸಬೇಕು ಎಂದು ಪಿಎಫ್ಆರ್ಡಿಎ ಸುತ್ತೋಲೆ ಉಲ್ಲೇಖಿಸಿದೆ. ಕೆಲವು ರಾಜ್ಯಗಳು ಹಳೆಯ ಪಿಂಚಣಿ ವ್ಯವಸ್ಥೆ ಅಥವಾ ಒಪಿಎಸ್ ಅನ್ನು ಮರು ಜಾರಿಗೊಳಿಸಲು ಮುಂದಾಗಿದ್ದು, ತಮ್ಮ ಉದ್ಯೋಗಿಗಳಿಗೆ ಸಂಬಂಧಿಸಿದ ಮೊತ್ತವನ್ನು ರಿಫಂಡ್ ಮಾಡುವಂತೆ ಪಿಎಫ್ಆರ್ಡಿಎಗೆ ಮನವಿ ಸಲ್ಲಿಸಿವೆ. ಈ ಸಂದರ್ಭದಲ್ಲೇ ಪಿಎಫ್ಆರ್ಡಿಎ ನಿಯಮ ಬದಲಾವಣೆ ಮಾಡಿದೆ.
ಪಿಎಫ್ಆರ್ಡಿಎ ಸುತ್ತೋಲೆಯಲ್ಲೇನಿದೆ?
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಎನ್ಪಿಎಸ್ ಹೂಡಿಕೆದಾರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸ್ವಯಂ ದೃಢೀಕರಣದ ಮೂಲಕ ಭಾಗಶಃ ಮೊತ್ತ ಹಿಂಪಡೆಯಲು ಅವಕಾಶ ಮಾಡಿಕೊಡಲಾಗಿತ್ತು. ನೋಡಲ್ ಅಧಿಕಾರಿಗಳ ಮೇಲಿನ ಹೊರೆ ತಗ್ಗಿಸುವುದರ ಜತೆಗೆ ದೃಢೀಕರಣ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳಲಾಗಿತ್ತು. ಇದೀಗ ಮತ್ತೆ ಹಿಂದಿನಂತೆಯೇ ನೋಡಲ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: OPS vs NPS: ಹಳೆ ಪಿಂಚಣಿ ಪರ ಕೂಗೆದ್ದಿರುವುದೇಕೆ? ಒಪಿಎಸ್, ಎನ್ಪಿಎಸ್ ವ್ಯತ್ಯಾಸದ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ
ಸರ್ಕಾರೇತರ ಕ್ಷೇತ್ರದವರಿಗಿಲ್ಲ ಸಮಸ್ಯೆ
ಸರ್ಕಾರೇತರ ಕ್ಷೇತ್ರದವರಿಗೆ ಸ್ವಯಂದೃಢೀಕರಣದ ಮೂಲಕ ಭಾಗಶಃ ಹಿಂಪಡೆಯುವ ನಿಯಮ ಮುಂದುವರಿಯಲಿದೆ. ಸ್ವಯಂಪ್ರೇರಿತರಾಗಿ ಎನ್ಪಿಎಸ್ನಲ್ಲಿ ಹೂಡಿಕೆ ಮಾಡುವವರು (ನಾಗರಿಕರು ಮತ್ತು ಕಾರ್ಪೊರೇಟ್ ಕ್ಷೇತ್ರದ ಉದ್ಯೋಗಿಗಳು) ಈ ಹಿಂದಿನಂತೆಯೇ ಮನವಿ ಸಲ್ಲಿಸಬಹುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:45 am, Mon, 26 December 22