Infosys vs Wipro: ಅಯ್ಯೋ ತಪ್ಪು ಮಾಡಿದೆ..! ಮೂರ್ತಿಯನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕಿತ್ತು- ಒಮ್ಮೆ ಪರಿತಪಿಸಿದ್ದರಂತೆ ವಿಪ್ರೋ ಅಜೀಮ್ ಪ್ರೇಮ್ಜಿ
NR Narayana Murthy reveals Interesting facts: ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಈ ಹಿಂದೆ ವಿಪ್ರೋದಲ್ಲಿ ಕೆಲಸಕ್ಕೆ ಸೇರಲು ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾಗಿತ್ತು. ಐಐಟಿಯಲ್ಲಿ ಓದಿದ ನಾರಾಯಣಮೂರ್ತಿ ಇನ್ಫೋಸಿಸ್ ಸ್ಥಾಪಿಸುವ ಮುನ್ನ ಸಾಫ್ಟ್ರಾನಿಕ್ಸ್ ಎಂಬ ಕಂಪನಿಯನ್ನು ಕಟ್ಟಿ ವಿಫಲಗೊಂಡಿದ್ದರಂತೆ. ತಮ್ಮ ವೈಫಲ್ಯಗಳ ಬಗ್ಗೆ ನಾರಾಯಣಮೂರ್ತಿ ಸಿಎನ್ಬಿಸಿ ಟಿವಿ18 ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.
ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ (NR Narayana Murthy) ಭಾರತ ಕಂಡ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರು. ಭಾರತದ ಅತಿದೊಡ್ಡ ಐಟಿ ಸಂಸ್ಥೆಗಳಲ್ಲಿ ಒಂದಾದ ಇನ್ಫೋಸಿಸ್ನ ಹಿಂದಿನ ಪ್ರಮುಖ ರೂವಾರಿ ಅವರು. ಇನ್ಫೋಸಿಸ್ ಸ್ಥಾಪಿಸುವ ಮೊದಲು ಅವರ ವಿಪ್ರೋ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಲು ಯತ್ನಿಸಿದ್ದರಂತೆ. ಆದರೆ, ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು. ಆ ಬಳಿಕ ಮೂರ್ತಿಯವರು ತಮ್ಮ ಹಿಂದಿನ ಕೆಲ ಸಹೋದ್ಯೋಗಿಗಳು ಹಾಗೂ ಮಿತ್ರರೊಂದಿಗೆ ಸೇರಿ ತಮ್ಮದೇ ಇನ್ಫೋಸಿಸ್ ಸಂಸ್ಥೆಯನ್ನು ಸ್ಥಾಪಿಸಿದರು. ಇವತ್ತು, ಇನ್ಫೋಸಿಸ್ನ ಮಾರ್ಕೆಟ್ ಕ್ಯಾಪ್ ವಿಪ್ರೋಗಿಂತ ಹಲವು ಪಟ್ಟು ಹೆಚ್ಚು ಬೆಳೆದಿದೆ.
ಪರಿತಪಿಸಿದ್ದ ಅಜೀಮ್ ಪ್ರೇಮ್ಜಿ
ನಾರಾಯಣಮೂರ್ತಿ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕಿತ್ತು. ತಪ್ಪು ಮಾಡಿಬಿಟ್ಟೆವು ಎಂದು ವಿಪ್ರೋ ಸಂಸ್ಥಾಪಕ ಅಜೀಮ್ ಪ್ರೇಮ್ಜಿ ಹಿಂದೊಮ್ಮೆ ಪರಿತಪಿಸಿದ್ದರಂತೆ. ವಿಪ್ರೋದಲ್ಲಿ ಕೆಲಸಕ್ಕೆ ಸೇರುವ ತಮ್ಮ ಅರ್ಜಿ ತಿರಸ್ಕೃತಗೊಂಡಿದ್ದು, ಅಜೀಮ್ ಪ್ರೇಮ್ಜಿ ಪರಿತಪಿಸಿದ್ದು, ಈ ವಿಚಾರಗಳನ್ನು ಎನ್.ಆರ್. ನಾರಾಯಣಮೂರ್ತಿಯವರೇ ಸಂದರ್ಶನವೊಂದರಲ್ಲಿ ಸ್ವತಃ ಹಂಚಿಕೊಂಡಿದ್ದಾರೆ.
‘ನನ್ನನ್ನು ಕೆಲಸ ಸೇರಿಸಿಕೊಳ್ಳದೇ ಹೋಗಿದ್ದು ನಾನು ಮಾಡಿದ ಒಂದು ದೊಡ್ಡ ತಪ್ಪು ಎಂದು ಅಜೀಮ್ ಒಂದೊಮ್ಮೆ ನನ್ನ ಬಳಿ ಹೇಳಿಕೊಂಡಿದ್ದರು,’ ಸಿಎನ್ಬಿಸಿ ಟಿವಿ18 ವಾಹಿನಿಯ ಸಂದರ್ಶನದಲ್ಲಿ ನಾರಾಯಣಮೂರ್ತಿ ಹೇಳಿದ್ದಾರೆ.
ಯಶಸ್ಸಿನ ಹಿಂದಿನ ಕೆಲ ವೈಪಲ್ಯಗಳು
ನಾರಾಯಣಮೂರ್ತಿ ಇನ್ಫೋಸಿಸ್ ಸ್ಥಾಪಿಸುವ ಮುನ್ನ ಸಾಕಷ್ಟು ಯಶಸ್ಸು ಮತ್ತು ವೈಫಲ್ಯಗಳ ಏರಿಳಿತಗಳನ್ನು ಕಂಡಿದ್ದರು. ಐಐಟಿಯಲ್ಲಿ ಮಾಸ್ಟರ್ಸ್ ಮಾಡಿದ ಬಳಿಕ ಅವರು ಐಐಎಂ ಅಹ್ಮದಾಬಾದ್ನಲ್ಲಿ ಅವರು ರಿಸರ್ಚ್ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದರು. ಎಲೆಕ್ಟ್ರಾನಿಕ್ಸ್ ಕಾರ್ಪೊರೇಶನ್ ಸಂಸ್ಥೆಗೆ ಬೇಸಿಕ್ ಇಂಟರ್ಪ್ರಿಟರ್ ಸಾಧನವನ್ನು ತಯಾರಿಸಿಕೊಟ್ಟರು.
ಬಳಿಕ ಸ್ವಂತವಾಗಿ ಸಾಫ್ಟ್ಟ್ರಾನಿಕ್ಸ್ ಎಂಬ ಸಂಸ್ಥೆ ಸ್ಥಾಪಿಸಿದರು. ಅದು ಒಂದು ಒಂದೂವರೆ ವರ್ಷದಲ್ಲಿ ನಿಂತು ಹೋಯಿತು. ಆಗ ಅವರು ವಿಪ್ರೋದಲ್ಲಿ ಕೆಲಸಕ್ಕೆ ಸೇರಲು ವಿಫಲ ಯತ್ನ ಮಾಡಿದರು. ಬಳಿಕ ಪುಣೆಯಲ್ಲಿ ಪತ್ನಿ ಕಂಪ್ಯೂಟರ್ ಸಿಸ್ಟಮ್ಸ್ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದರು. ಇಲ್ಲಿ ಇನ್ಫೋಸಿಸ್ ಸ್ಥಾಪನೆಗೆ ಟ್ವಿಸ್ಟ್ ಸಿಕ್ಕಿತು. ಪತ್ನಿ ಕಂಪ್ಯೂಟರ್ ಸಿಸ್ಟಮ್ಸ್ನಲ್ಲಿನ ಕೆಲ ಸಹೋದ್ಯೋಗಿಗಳೊಂದಿಗೆ ಸೇರಿ ನಾರಾಯಣಮೂರ್ತಿ ಇನ್ಫೋಸಿಸ್ ಸ್ಥಾಪನೆ ಮಾಡಿದರು. ಮೂರ್ತಿ ಅಲ್ಲದೇ ನಂದನ್ ನಿಲೇಕಣಿ, ಕ್ರಿಸ್ ಗೋಪಾಲಕೃಷ್ಣನ್, ಶಿಬುಲಾಲ್, ಕೆ ದಿನೇಶ್, ಎನ್ ಎಸ್ ರಾಘವನ್ ಮತ್ತು ಅಶೋಕ್ ಅರೋರಾ ಅವರು 1981ರಲ್ಲಿ ಪುಣೆಯಲ್ಲಿ ಇನ್ಫೋಸಿಸ್ ಅನ್ನು ಸ್ಥಾಪಿಸಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ