Loss for Maldives: ಭಾರತೀಯರು ಯಾರೂ ಮಾಲ್ಡೀವ್ಸ್ ಟ್ರಿಪ್ಗೆ ಹೋಗೋದು ನಿಲ್ಲಿಸಿದರೆ, ಆ ದೇಶಕ್ಕೆ ಆಗುವ ನಷ್ಟ ಎಷ್ಟು?
Indians Boycott of Maldives: ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡಿದ ಬಳಿಕ ಮಾಲ್ಡೀವ್ಸ್ ದೇಶಕ್ಕೆ ಪ್ರವಾಸ ಹೋಗಲು ಭಾರತೀಯರು ಹಿಂದೇಟು ಹಾಕುತ್ತಿದ್ದಾರೆ. ವರದಿ ಪ್ರಕಾರ, ಭಾರತೀಯರು ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗೋದನ್ನು ನಿಲ್ಲಿಸಿದರೆ ಆ ದೇಶಕ್ಕೆ ದಿನಕ್ಕೆ 9 ಕೋಟಿ ರೂ ನಷ್ಟ ಆಗುತ್ತದೆ. ಮಾಲ್ಡೀವ್ಸ್ಗೆ ಹೋಗುವ ಪ್ರವಾಸಿಗರಲ್ಲಿ ಚೀನೀಯರು ಬಿಟ್ಟರೆ ಭಾರತೀಯರೇ ಹೆಚ್ಚು.
ನವದೆಹಲಿ, ಜನವರಿ 16: ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ಭೇಟಿ ಬಳಿಕ ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಬಿರುಕು ಇನ್ನಷ್ಟು ದಟ್ಟವಾಗಿ ಕಾಣುತ್ತಿದೆ. ಮಾಲ್ಡೀವ್ಸ್ನ ಕೆಲ ಸಚಿವರು, ಸಂಸದರು ನರೇಂದ್ರ ಮೋದಿ ಹಾಗೂ ಭಾರತದ ಬಗ್ಗೆ ಕುಚೋದ್ಯ ಮಾಡಿದ ಬಳಿಕ ಬಹಳಷ್ಟು ಭಾರತೀಯರು ಮಾಲ್ಡೀವ್ಸ್ ಪ್ರವಾಸ (Maldives tour) ರದ್ದು ಮಾಡಿದ್ದಾರೆ. ಭಾರತೀಯ ಸೆಲಬ್ರಿಟಿಗಳೂ ಜನಸಾಮಾನ್ಯರಿಗೆ ಧ್ವನಿಗೂಡಿಸಿದ್ದಾರೆ. ಪ್ರವಾಸೋದ್ಯಮವೇ ಪ್ರಮುಖ ಆದಾಯ ಮೂಲ ಹೊಂದಿರುವ ಮಾಲ್ಡೀವ್ಸ್ಗೆ ಈ ಬೆಳವಣಿಗೆ ಇಕ್ಕಟ್ಟು ತಂದಿದೆ. ಒಂದು ವೇಳೆ ಮಾಲ್ಡೀವ್ಸ್ಗೆ ಯಾವುದೇ ಭಾರತೀಯರೂ ಪ್ರವಾಸ ಹೋಗದೇ ಹೋದರೆ ಏನಾಗುತ್ತದೆ? ಟೈಮ್ಸ್ ಆಲ್ಜೀಬ್ರಾದ (Times Alzebra) ಎಕ್ಸ್ ಪೋಸ್ಟ್ವೊಂದರಲ್ಲಿ ಕುತೂಹಲಕಾರಿ ಮಾಹಿತಿ ಕೊಡಲಾಗಿದೆ. ಅದರ ಪ್ರಕಾರ ಭಾರತೀಯರು ಮಾಲ್ಡೀವ್ಸ್ ಪ್ರವಾಸ ಬಾಯ್ಕಾಟ್ ಮಾಡಿದರೆ ಆ ದೇಶಕ್ಕೆ ದಿನಕ್ಕೆ 9 ಕೋಟಿ ರೂ ನಷ್ಟ ಆಗುತ್ತದಂತೆ.
‘ಬಿಗ್ ನ್ಯೂಸ್, ವರದಿ ಪ್ರಕಾರ, ಮಾಲ್ಡೀವ್ಸ್ಗೆ ಭಾರತೀಯರು ಹೋಗುವುದನ್ನು ನಿಲ್ಲಿಸಿದರೆ, ಮಾಲ್ಡೀವ್ಸ್ಗೆ ದಿನಕ್ಕೆ 9 ಕೋಟಿ ರೂ ನಷ್ಟ ಆಗುತ್ತದೆ… ಭಾರತೀಯರು ಬಾಯ್ಕಾಟ್ ಮಾಡಿದರೆ 44,000 ಮಾಲ್ಡೀವ್ಸ್ ಕುಟುಂಬಗಳಿಗೆ ಹಿನ್ನಡೆ ಆಗುತ್ತದೆ ಅಂತ ಟ್ರಾವಲ್ ಏಜೆನ್ಸಿಗಳೂ ಹೇಳುತ್ತಿವೆ. ಹಲವು ಸೆಲಬ್ರಿಟಿಗಳ ಅಭಿಯಾನದ ಬಳಿಕ ಭಾರತೀಯರು ಮಾಲ್ಡೀವ್ಸ್ ಬದಲು ಭಾರತೀಯ ದ್ವೀಪ ಪ್ರದೇಶಗಳಿಗೆ ಪ್ರವಾಸ ಹೋಗಲು ಬಯಸುತ್ತಿದ್ದಾರೆ,’ ಎಂದು ಟೈಮ್ಸ್ ಆಲ್ಜೀಬ್ರಾದ ಎಕ್ಸ್ ಪೋಸ್ಟ್ನಲ್ಲಿ ಬರೆಯಲಾಗಿದೆ.
BIG NEWS – As per report, if Indians stop going to Maldives, Maldives will suffer a loss of Rs 9 crore daily 🔥
Even travel agencies in Maldives have said that the boycott of Indians will affect 44,000 Maldivian families.
⚡ Indians have started preferring Indian islands over… pic.twitter.com/mYu2dp3Eb4
— Times Algebra (@TimesAlgebraIND) January 15, 2024
ಮಾಲ್ಡೀವ್ಸ್ಗೆ ಪ್ರವಾಸಿಗರು ಮುಖ್ಯ
ಮುನ್ನೂರಕ್ಕೂ ಹೆಚ್ಚು ಪುಟ್ಟ ದ್ವೀಪಗಳ ಸಮೂಹವಾಗಿರುವ ಮಾಲ್ಡೀವ್ಸ್ ದೇಶಕ್ಕೆ ಪ್ರವಾಸೋದ್ಯಮವೇ ಪ್ರಮುಖ ಆದಾಯ ಮೂಲ. ಮಾಲ್ಡೀವ್ಸ್ಗೆ ಹೋಗುವ ಅತಿ ಹೆಚ್ಚು ಪ್ರವಾಸಿಗರಲ್ಲಿ ಚೀನಾ ಬಿಟ್ಟರೆ ಭಾರತೀಯರೇ ಹೆಚ್ಚು. ಹೀಗಾಗಿ, ಭಾರತೀಯ ಪ್ರವಾಸಿಗರು ಬರುವುದು ನಿಂತರೆ ಮಾಲ್ಡೀವ್ಸ್ಗೆ ಬಹಳ ನಷ್ಟ ಆಗುವುದು ಸ್ವಾಭಾವಿಕ. ದಿನಕ್ಕೆ 9 ಕೋಟಿ ರೂ ನಷ್ಟ ಎಂದರೆ ವರ್ಷಕ್ಕೆ ಮೂರರಿಂದ ನಾಲ್ಕು ಸಾವಿರ ಕೋಟಿ ರೂನಷ್ಟು ಆದಾಯವು ಮಾಲ್ಡೀವ್ಸ್ ಕೈ ತಪ್ಪುತ್ತದೆ.
ಭಾರತ ವಿರೋಧಿ ನಿಲುವಿನ ಪಕ್ಷ
ಮಾಲ್ಡೀವ್ಸ್ನಲ್ಲಿ ಈಗ ಆಡಳಿತದಲ್ಲಿರುವ ಅಧ್ಯಕ್ಷ ಮೊಹಮ್ಮದ್ ಮೋಯಿಜ್ಜು ನೇತೃತ್ವದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಪಕ್ಷ ಭಾರತ ವಿರೋಧಿ ಮತ್ತು ಚೀನಾ ಪರ ನೀತಿ ಹೊಂದಿದೆ. ಅದೇ ಅಜೆಂಡಾದಲ್ಲಿ ಅಧ್ಯಕ್ಷೀಯ ಚುನಾವಣೆಯನ್ನು ಮೋಯಿಜ್ಜು ಗೆದ್ದಿದ್ದರು. ಸಹಜವಾಗಿ ಅವರು ಚೀನಾ ಪರ ನಿಲುವು ತಳೆದಿದ್ದಾರೆ.
ಮಾಲ್ಡೀವ್ಸ್ನಲ್ಲಿ ಪಹರೆ ಇದ್ದ ಭಾರತೀಯ ಸೇನಾ ತುಕಡಿಗಳನ್ನು ವಾಪಸ್ ಹೋಗುವಂತೆ ಮೊಯಿಜ್ಜು ಅಧಿಕಾರಕ್ಕೆ ಬಂದ ಆರಂಭದಿಂದಲೇ ಹೇಳುತ್ತಾ ಬಂದಿದ್ದಾರೆ. ಬಹಿರಂಗವಾಗಿ ಚೀನಾ ಪರ ವಾಲುತ್ತಿದ್ದಾರೆ. ನರೇಂದ್ರ ಮೋದಿ ಲಕ್ಷದ್ವೀಪ ಭೇಟಿ ಬಳಿಕ ನಿಕೃಷ್ಟವಾಗಿ ಮಾತನಾಡಿದ್ದ ಮೂವರು ಸಚಿವರನ್ನು ಅವರು ಅಮಾನತುಗೊಳಿಸಿದರಾದೂ ಭಾರತದ ಬಗ್ಗೆ ಅವರ ಕಠೋರ ನಿಲುವು ಮೃದುಗೊಳ್ಳಲಿಲ್ಲ. ಚೀನಾಗೆ ಐದು ದಿನದ ಭೇಟಿ ಮಾಡಿ, ಆ ದೇಶದ ಸಹಾಯವನ್ನು ಯಾಚಿಸಿಕೊಂಡು ಮರಳಿದ್ದಾರೆ ಮಾಲ್ಡೀವ್ಸ್ ಅಧ್ಯಕ್ಷರು.
ಇದನ್ನೂ ಓದಿ: AI Effect: ಎಐ ಟೆಕ್ನಾಲಜಿಯಿಂದ ಉದ್ಯೋಗನಷ್ಟ; ಮುಂದುವರಿದ ದೇಶಗಳಿಗೆ ಹೆಚ್ಚು ಬಾಧೆ ಎಂದ ಐಎಂಎಫ್ ಮುಖ್ಯಸ್ಥೆ
ಮೇಯರ್ ಚುನಾವಣೆಯಲ್ಲಿ ಮುಖಭಂಗ
ಇದೇ ವೇಳೆ, ಅಧ್ಯಕ್ಷ ಮೊಹಮ್ಮದ್ ಮೊಯಿಜ್ಜು ಅವರು ಅಧ್ಯಕ್ಷರಾಗುವ ಮುನ್ನ ಹೊಂದಿದ್ದ ಮಾಲೆ ಮೇಯರ್ ಹುದ್ದೆ ಈಗ ವಿಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷದ ಪಾಲಾಗಿದೆ. ಮೇಯರ್ ಚುನಾವಣೆಯಲ್ಲಿ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುಖಭಂಗ ಅನುಭವಿಸಿದೆ. ಕುತೂಹಲ ಎಂದರೆ ಮೇಯರ್ ಸ್ಥಾನ ಗೆದ್ದಿರುವ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಭಾರತದ ಪರ ನಿಲುವು ಹೊಂದಿರುವ ಪಕ್ಷವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ