ESIC: ನವೆಂಬರ್ ತಿಂಗಳಲ್ಲಿ 15.92 ಲಕ್ಷ ಹೊಸ ಇಎಸ್ಐ ಸದಸ್ಯರ ಸೇರ್ಪಡೆ; 24 ವರ್ಷದೊಳಗಿನವರು ಶೇ. 47
Employees' State Insurance Corporation: ಉದ್ಯೋಗಿಗಳಿಗೆ ಮೆಡಿಕಲ್ ಇನ್ಷೂರೆನ್ಸ್ ಸೌಲಭ್ಯ ಒದಗಿಸುವ ಇಎಸ್ಐಸಿಗೆ 2023ರ ನವೆಂಬರ್ನಲ್ಲಿ 15.92 ಲಕ್ಷ ಹೊಸ ಸದಸ್ಯರ ಸೇರ್ಪಡೆಯಾಗಿದೆ. 25 ವರ್ಷ ವಯೋಮಾನದವರಾದ 7.47 ಲಕ್ಷ ಮಂದಿ ಇಎಸ್ಐಸಿಯ ಹೊಸ ಸದಸ್ಯರ ಪೈಕಿ ಇದ್ದಾರೆ. 21,000 ರೂ ಹಾಗೂ ಅದಕ್ಕಿಂತ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳಿಗೆ ಮೆಡಿಕಲ್ ಇನ್ಷೂರೆನ್ಸ್ ಒದಗಿಸುತ್ತದೆ ಇಎಸ್ಐಸಿ.
ನವದೆಹಲಿ, ಜನವರಿ 16: ಸರ್ಕಾರಿ ನಿಯಂತ್ರಣದ ಎಂಪ್ಲಾಯೀಸ್ ಸ್ಟೇಟ್ ಇನ್ಷೂರೆನ್ಸ್ ಕಾರ್ಪೊರೇಶನ್ (ESIC- Employees’ State Insurance Corporation) 2023ರ ನವೆಂಬರ್ ತಿಂಗಳಲ್ಲಿ 15.92 ಲಕ್ಷ ಹೊಸ ಸದಸ್ಯರನ್ನು ಸೇರ್ಪಡೆ ಮಾಡಿದೆ. ಇಎಸ್ಐಸಿ ವ್ಯಾಪ್ತಿಗೆ ಆ ತಿಂಗಳಲ್ಲಿ 20,830 ಹೊಸ ಸಂಸ್ಥೆಗಳು ಸೇರಿವೆ. ಇಂದು ಮಂಗಳವಾರ (ಜ. 16) ಬಿಡುಗಡೆ ಮಾಡಲಾದ ದತ್ತಾಂಶದ ಪ್ರಕಾರ, ಇಎಸ್ಐಸಿಗೆ ಸೇರ್ಪಡೆಯಾದ 15.92 ಲಕ್ಷ ಹೊಸ ಉದ್ಯೋಗಿಗಳ ಪೈಕಿ ಶೇ 47ರಷ್ಟು ಮಂದಿ 25 ವರ್ಷ ವಯೋಮಾನಕ್ಕೆ ಸೇರಿದವರಾಗಿದ್ದಾರೆ. 7.47 ಲಕ್ಷ ಹೊಸ ಸದಸ್ಯರು 24 ವರ್ಷದೊಳಗಿನ ವಯಸ್ಸಿನವರೇ ಆಗಿದ್ದಾರೆ.
ಇನ್ನು, ಇಎಸ್ಐಸಿಗೆ ಹೊಸ ಸದಸ್ಯತ್ವ ಪಡೆದವರ ಪೈಕಿ ಮಹಿಳಾ ಉದ್ಯೋಗಿಗಳ ಸಂಖ್ಯೆ 3.17 ಲಕ್ಷ ಇದೆ. ಹಾಗೆಯೇ, 58 ಲಿಂಗ ಪರ್ತಿತ ವ್ಯಕ್ತಿಗಳೂ ಇದರಲ್ಲಿ ಇದ್ದಾರೆ.
ಏನಿದು ಇಎಸ್ಐಸಿ?
ಇಎಸ್ಐಸಿ ಎಂಬುದು ಎಂಪ್ಲಾಯೀಸ್ ಸ್ಟೇಟ್ ಇನ್ಷೂರೆನ್ಸ್ ಕಾರ್ಪೊರೇಶನ್ ಸಂಸ್ಥೆ. ಇಪಿಎಫ್ಒಗೆ ಜೋಡಿತವಾಗುವ ರೀತಿಯಲ್ಲಿ ವಿವಿಧ ಸಂಘ ಸಂಸ್ಥೆಗಳು ಇಎಸ್ಐಸಿಗೆ ಜೋಡಿತಗೊಂಡಿರುತ್ತವೆ. ಇದು ತಿಂಗಳಿಗೆ 25,000 ರೂಗಿಂತ ಕಡಿಮೆ ಸಂಬಳ ಹೊಂದಿರುವ ಉದ್ಯೋಗಿಗಳಿಗೆ ಮೆಡಿಕಲ್ ಇನ್ಷೂರೆನ್ಸ್ ಒದಗಿಸಲಾಗುತ್ತದೆ.
ಈ ಸ್ಕೀಮ್ನಲ್ಲಿ ಉದ್ಯೋಗಿಯ ಸಂಬಳದ ಶೇ. 0.75ರಷ್ಟು ವೇತನವನ್ನು ಪ್ರತೀ ತಿಂಗಳು ಇಎಸ್ಐಗೆ ಮುರಿದುಕೊಳ್ಳಲಾಗುತ್ತದೆ. ಸಂಸ್ಥೆ ವತಿಯಿಂದ ಶೇ. 3.25ರಷ್ಟು ಹಣವನ್ನು ಇಎಸ್ಐ ಅಕೌಂಟ್ಗೆ ಜಮೆ ಮಾಡಲಾಗುತ್ತದೆ. ಉದಾಹರಣೆಗೆ, ಒಬ್ಬ ಉದ್ಯೋಗಿಗೆ 20,000 ರೂ ಸಂಬಳ ಬರುತ್ತಿದ್ದರೆ, ಸಂಬಳದಲ್ಲಿ 150 ರೂವನ್ನು ಕಡಿತಗೊಳಿಸಲಾಗುತ್ತದೆ. ಹಾಗೆಯೇ ಸಂಸ್ಥೆ 650 ರೂ ಹಣವನ್ನು ಸೇರಿಸಿ ಹಾಕುತ್ತದೆ.
ಇಎಸ್ಐ ಒಂದು ಮೆಡಿಕಲ್ ಇನ್ಷೂರೆನ್ಸ್ ಸ್ಕೀಮ್ ಆಗಿದೆ. ದೇಶಾದ್ಯಂತ ಇರುವ ಇಎಸ್ಐ ಆಸ್ಪತ್ರೆಗಳಲ್ಲಿ ಉದ್ಯೋಗಿಗಳು ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಅಥವಾ ಇಎಸ್ಐ ಆಸ್ಪತ್ರೆಯ ವೈದ್ಯರ ಶಿಫಾರಸು ಮೇರೆಗೆ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ