ಎಐ ಆರ್ಥಿಕತೆ ನಿರ್ಮಿಸಲು ಭಾರತದ ವೇಗ ಹೆಚ್ಚಬೇಕು: ಎನ್‌ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್

ಎಐ ತಂತ್ರಜ್ಞಾನ ಅಭಿವೃದ್ಧಿಯ ಫಲ ಪಡೆಯಲು ಭಾರತ ತನ್ನ ಪ್ರಯತ್ನಗಳನ್ನು ಮುಂದುವರಿಸಬೇಕು ಎಂದು ಎನ್‌ವಿಡಿಯಾ (NVIDIA) ಸಿಇಒ ಜೆನ್ಸನ್ ಹುವಾಂಗ್ (Jensen Huang) ತಿಳಿಸಿದ್ದಾರೆ. ಹತ್ತು ವರ್ಷದ ಹಿಂದೆಯೇ ಪ್ರಧಾನಿಗಳು ಎಐ ಬಗ್ಗೆ ಮಾತನಾಡುತ್ತಿದ್ದುದನ್ನು ಕಂಡು ತಾನು ಚಕಿತಗೊಂಡಿದ್ದೆ ಎಂದಿದ್ದಾರೆ ಹುವಾಂಗ್.

ಎಐ ಆರ್ಥಿಕತೆ ನಿರ್ಮಿಸಲು ಭಾರತದ ವೇಗ ಹೆಚ್ಚಬೇಕು: ಎನ್‌ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್
ಜೆನ್ಸೆನ್ ಹುವಾಂಗ್ ಅವರ ಫೈಲ್ ಚಿತ್ರ
Image Credit source: AP

Updated on: Sep 03, 2026 | 1:48 PM

ನವದೆಹಲಿ, ಸೆಪ್ಟೆಂಬರ್ 3: ಜಾಗತಿಕ ಸೆಮಿಕಂಡಕ್ಟರ್ ಮತ್ತು ಎಐ ತಂತ್ರಜ್ಞಾನ ದೈತ್ಯ ‘ಎನ್‌ವಿಡಿಯಾ’ (NVIDIA) ಸಂಸ್ಥೆಯ ಸಿಇಒ ಜೆನ್ಸನ್ ಹುವಾಂಗ್ ಅವರು ಭಾರತದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬೆಳೆಯುತ್ತಿರುವ ವೇಗವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ದಶಕದ ಹಿಂದೆಯೇ ಎಐ ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ಗುರುತಿಸಿದ್ದನ್ನು ಹುವಾಂಗ್ ಸ್ಮರಿಸಿದ್ದಾರೆ. ವೇಗವಾಗಿ ಬೆಳೆಯುತ್ತಿರುವ ಎಐ ವಿಚಾರದಲ್ಲಿ ಕಾನೂನು ಕಟ್ಟಳೆ ಹೇಗಿರಬೇಕು ಎಂದು ಸ್ಥೂಲವಾಗಿ ಸಲಹೆ ಕೂಡ ತಿಳಿಸಿದ್ದಾರೆ.

ಅಮೆರಿಕದಲ್ಲಿ ಜಿ20 ಇನ್ನೋವೇಶನ್ ಮಿನಸ್ಟರಿಯಲ್ ಸಭೆಯ ವೇಳೆ ನಡೆದ ‘ಫಾರ್ಚೂನ್ ಗ್ಲೋಬಲ್ ಫೋರಂ’ ಕಾರ್ಯಕ್ರಮದಲ್ಲಿ ಮಾತನಾಡಿದ ಹುವಾಂಗ್, ಭಾರತವು ಎಐ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ ಎಂದರು. ಬಹಳ ವೇಗವಾಗಿ ಓಡುತ್ತಿರುವ ಎಐನಿಂದ ಸಿಗುವ ಪ್ರಯೋಜನಗಳನ್ನು ಸಮರ್ಪಕವಾಗಿ ಪಡೆಯಲು ಮತ್ತು ಎಐ ಆರ್ಥಿಕತೆಯನ್ನು ನಿರ್ಮಿಸಲು ಭಾರತ ತನ್ನ ಪ್ರಯತ್ನಗಳ ವೇಗ ಹೆಚ್ಚಿಸಬೇಕೆಂದು ಕಿವಿಮಾತು ಹೇಳಿದರು.

ಇದನ್ನೂ ಓದಿ: ಪತ್ನಿಯ ಮೊದಲ ಭೇಟಿ, ಹ್ಯಾರಿಸ್​ನ ಊಟ, ಇಲ್ಲು ಹಬ್ಬ, ಫ್ಲಾಪಿ ಡಿಸ್ಕ್… ಐಐಟಿ ಖರಗ್​ಪುರ್​ನ ದಿನಗಳನ್ನು ಮೆಲುಕಿಸಿದ ಗೂಗಲ್ ಬಾಸ್

ಪ್ರಧಾನಿ ಮೋದಿಯವರ ದೂರದೃಷ್ಟಿ

“ಸುಮಾರು 10 ವರ್ಷಗಳ ಹಿಂದೆ ನಾನು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾಗ, ಅವರು ಭಾರತದಲ್ಲಿ ಕೃತಕ ಬುದ್ಧಿಮತ್ತೆಯನ್ನು (AI) ಅಭಿವೃದ್ಧಿಪಡಿಸುವ ಹಾಗೂ ಬಳಸಿಕೊಳ್ಳುವ ಕುರಿತು ಮಾತನಾಡಿದ್ದರು. ತಂತ್ರಜ್ಞಾನವು ಇಷ್ಟೊಂದು ಮುನ್ನೆಲೆಗೆ ಬರದಿದ್ದ ಕಾಲದಲ್ಲೇ ಅವರಲ್ಲಿದ್ದ ಆ ದೂರದೃಷ್ಟಿ ನನ್ನನ್ನು ಆಶ್ಚರ್ಯಚಕಿತಗೊಳಿಸಿತ್ತು” ಎಂದು ಹುವಾಂಗ್ ಹೇಳಿದ್ದಾರೆ.

ಭಾರತ ಎಐ ತಂತ್ರಜ್ಞಾನದ ಹೊಸ ಶಕ್ತಿ

ಭಾರತವು ಇಂದು ಅತ್ಯಂತ ವೇಗವಾಗಿ ಎಐ ಮೂಲಸೌಕರ್ಯ (AI Infrastructure) ಮತ್ತು ಡೇಟಾ ಸೆಂಟರ್‌ಗಳನ್ನು ನಿರ್ಮಿಸುತ್ತಿದೆ. ಜಗತ್ತಿನ ಪ್ರಮುಖ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಹಾಗೂ ಐಟಿ ಉದ್ಯೋಗಿಗಳು ಭಾರತದಲ್ಲಿದ್ದಾರೆ. ಸುದೃಢವಾದ ಐಟಿ ಉದ್ಯಮ ಇದೆ. ಈ ಉದ್ಯಮ ಮತ್ತು ಮಾನವ ಸಂಪನ್ಮೂಲವೇ ಭಾರತಕ್ಕೆ ಎಐ ಕ್ಷೇತ್ರದಲ್ಲಿ ದೊಡ್ಡ ಬಲವಾಗಿದೆ. ಭಾರತವು ತನ್ನದೇ ಆದ ಡೇಟಾ ಮತ್ತು ಭಾಷೆಗಳನ್ನು ಬಳಸಿಕೊಂಡು ಸ್ವಂತ ಎಐ ಮಾದರಿಗಳನ್ನು (Sovereign AI) ಅಭಿವೃದ್ಧಿಪಡಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದಿದ್ದಾರೆ.

ಭಾರತವು ಕೇವಲ ತಂತ್ರಜ್ಞಾನ ಸೇವೆಯನ್ನು ನೀಡುವ ದೇಶವಾಗಿ ಉಳಿಯದೆ, ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಜಾಗತಿಕ ಮಟ್ಟದ ನಾಯಕತ್ವ ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭಾರತದ ಆರ್ಥಿಕ ಪ್ರಗತಿ ಕುರಿತು ವಿಪಕ್ಷಗಳಿಂದ ಅಪಪ್ರಚಾರ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಕಿಡಿ

ಎಐ ನಿಯಂತ್ರಣಕ್ಕೆ ಕಾನೂನು ಕಟ್ಟಳೆ ಹೇಗಿರಬೇಕು?

ಎಐ ವಿಚಾರದಲ್ಲಿ ಅದರ ನಿಯಂತ್ರಣಕ್ಕೆ ಕಠಿಣ ಕಾನೂನು ರೂಪಿಸುವುದರ ವಿರುದ್ಧ ಅವರು ಎಚ್ಚರಿಸಿದ್ದಾರೆ. ಎಐ ಬೆಳವಣಿಗೆಯು ಸುರಕ್ಷಿತವಾಗಿರುವುದು ಮುಖ್ಯ. ಆದರೆ, ಎಐನಿಂದ ಸಂಭಾವ್ಯ ಅಪಾಯ ಬರಬಹುದು ಎಂದು ಕಲ್ಪಿಸಿ ಅದಕ್ಕೆ ಕಾನೂನು ಕಟ್ಟಳೆ ತರುವುದು ತಪ್ಪು ಕ್ರಮವಾಗುತ್ತದೆ. ವಾಸ್ತವಿಕವಾಗಿ ಆಗುವ ಹಾನಿ ಮತ್ತು ತೊಂದರೆ ಪರಿಸ್ಥಿತಿ ಎದುರಿಸಲು ಕಾನೂನು ರೂಪಿಸಬೇಕು ಎಂದು ಜೆನ್ಸೆನ್ ಹುವಾಂಗ್ ಸಲಹೆ ನೀಡಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:09 pm, Thu, 3 September 26

Loading...
Unable to load recommendations.
Follow Us