ಭಾರತದ ಆರ್ಥಿಕ ಪ್ರಗತಿ ಕುರಿತು ವಿಪಕ್ಷಗಳಿಂದ ಅಪಪ್ರಚಾರ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಕಿಡಿ
ಮೊದಲ ಕ್ವಾರ್ಟರ್ನಲ್ಲಿ ದಾಖಲಾದ ಶೇ. 7.8ರ ಜಿಡಿಪಿ ದರದ ಬಗ್ಗೆ ವಿಪಕ್ಷಗಳು ಮಾಡುತ್ತಿರುವ ಲೇವಡಿ ವಿರುದ್ಧ ಕೇಂದ್ರ ಸಚಿವ ಪಿಯೂಷ್ ಗೋಯಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಪಕ್ಷಗಳು ನಿರುದ್ಯೋಗ ಇತ್ಯಾದಿ ಕ್ಷೇತ್ರದಲ್ಲಿನ ಸುಳ್ಳು ಅಂಕಿ ಅಂಶಗಳನ್ನು ಮುಂದಿಟ್ಟು ಜಿಡಿಪಿ ಬೆಳವಣಿಗೆ ಬಗ್ಗೆ ಅನುಮಾನ ಪಡುತ್ತಿವೆ ಎಂದು ಗೋಯಲ್ ಹೇಳಿದ್ದಾರೆ.

ನವದೆಹಲಿ, ಸೆಪ್ಟೆಂಬರ್ 2: ದೇಶದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿ ದರದ ಕುರಿತು ಪ್ರತಿಪಕ್ಷಗಳು ದೇಶದ ಜನರನ್ನು ದಾರಿ ತಪ್ಪಿಸುತ್ತಿವೆ ಹಾಗೂ ವಿನಾಕಾರಣ ಅಪಪ್ರಚಾರ ಮಾಡುತ್ತಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರತಿಪಕ್ಷಗಳ ಟೀಕೆಗಳಿಗೆ ಕಡಾಖಂಡಿತವಾಗಿ ಉತ್ತರಿಸಿದ ಸಚಿವರು, ಜಾಗತಿಕ ಸವಾಲುಗಳ ಮಧ್ಯೆಯೂ ಭಾರತವು ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ದೃಢ ಆರ್ಥಿಕ ಸುಧಾರಣೆಗಳು, ಮೂಲಸೌಕರ್ಯ ವೆಚ್ಚ ಮತ್ತು ಉತ್ಪಾದನಾ ವಲಯಕ್ಕೆ ನೀಡಿದ ಉತ್ತೇಜನವೇ ಇದಕ್ಕೆ ಮುಖ್ಯ ಕಾರಣ ಎಂದಿದ್ದಾರೆ.
ಇದನ್ನೂ ಓದಿ: ಜಿಡಿಪಿ ದತ್ತಾಂಶದ ಬಗ್ಗೆ ಎದ್ದ ಗೊಂದಲಗಳಿಗೆ ಕೇಂದ್ರದಿಂದ ಸ್ಪಷ್ಟನೆ; ವಿವಿಧ ಪ್ರಶ್ನೆಗಳಿಗೆ ಸಮಾಧಾನ
ಪ್ರತಿಪಕ್ಷಗಳು ನಿರುದ್ಯೋಗ ಮತ್ತು ಆರ್ಥಿಕ ಮಂದಗತಿಯ ಸುಳ್ಳು ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿವೆ. ಆದರೆ, ಜಾಗತಿಕ ರೇಟಿಂಗ್ ಸಂಸ್ಥೆಗಳು ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ನಂತಹ ಸಂಸ್ಥೆಗಳು ಭಾರತದ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿವೆ ಎಂದು ಗೋಯಲ್ ಸ್ಪಷ್ಟಪಡಿಸಿದ್ದಾರೆ.
ದೇಶದ ಯುವಜನತೆಯಲ್ಲಿ ಧನಾತ್ಮಕ ವಾತಾವರಣ ಸೃಷ್ಟಿಸುವ ಬದಲು ವಿಪಕ್ಷಗಳು ನಕಾರಾತ್ಮಕತೆಯನ್ನು ಹಬ್ಬಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಭಾರತವು ‘ವಿಕಸಿತ ಭಾರತ 2047’ (Viksit Bharat 2047) ಗುರಿಯತ್ತ ವೇಗವಾಗಿ ಹೆಜ್ಜೆ ಹಾಕುತ್ತಿದ್ದು, ಇಂತಹ ಅಪಪ್ರಚಾರಗಳಿಂದ ದೇಶದ ಅಭಿವೃದ್ಧಿ ರಥವನ್ನು ತಡೆಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಭಾರತದ ಕ್ರೆಡಿಟ್ ರೇಟಿಂಗ್ ಹೆಚ್ಚಿಸಿದ ಜಪಾನೀ ಏಜೆನ್ಸಿ; ಬಿಬಿಬಿ+ ನಿಂದ ಎ- ಗೆ ಏರಿಕೆ; ದೇಶಕ್ಕೆ ಏನು ಲಾಭ?
ಸರ್ಕಾರ ಬಿಡುಗಡೆ ಮಾಡಿದ ಜಿಡಿಪಿ ದತ್ತಾಂಶದ ಪ್ರಕಾರ ಭಾರತದ ಆರ್ಥಿಕತೆ ಏಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸಿಕದಲ್ಲಿ ಶೇ. 7.8ರಷ್ಟು ಬೆಳವಣಿಗೆ ಹೊಂದಿದೆ. ಈ ದತ್ತಾಂಶವು ಸುಳ್ಳು ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಸೃಷ್ಟಿಸಲಾಗಿದೆ ಎಂಬುದು ಕೆಲ ವಿಪಕ್ಷ ನಾಯಕರ ಆರೋಪವಾಗಿದೆ. ನಿರುದ್ಯೋಗ ಹಾಗೂ ಇತರ ಹಲವು ಮಾನಕಗಳು ಸರ್ಕಾರದ ಜಿಡಿಪಿ ದತ್ತಾಂಶಕ್ಕೆ ಪೂರಕವಾಗಿಲ್ಲ ಎಂಬುದು ಇವರ ವಾದ. ಈ ಹಿನ್ನೆಲೆಯಲ್ಲಿ ಕೇಂದ್ರ ಸಾಂಖ್ಯಿಕ ಸಚಿವಾಲಯವು ಇಂದು ಜಿಡಿಪಿ ದತ್ತಾಂಶದ ಕುರಿತು ಕೆಲ ಸಂದೇಹಗಳಿಗೆ ಉತ್ತರಿಸುವ ವರದಿ ಬಿಡುಗಡೆ ಮಾಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




