ನಿಮ್ಮ ಫೋನ್ ವೈಫೈ ಶೇರ್ ಮಾಡುವ ಮುನ್ನ ನೂರು ಬಾರಿ ಯೋಚಿಸಿ: ನಿಮ್ಮ ಸಣ್ಣ ನಿರ್ಲಕ್ಷ್ಯದಿಂದ ಜೈಲು ಪಾಲು
ವೈಫೈ ಹಂಚಿಕೆ ಸಾಮಾನ್ಯವಾಗಿ ಕಂಡರೂ, ಅಪರಿಚಿತರಿಗೆ ಹಾಟ್‌ಸ್ಪಾಟ್ ನೀಡಿದರೆ ನಿಮ್ಮನ್ನು ಸೈಬರ್ ಅಪರಾಧಗಳಲ್ಲಿ ಸಿಲುಕಿಸಬಹುದು. ನಿಮ್ಮ ಐಪಿ ಅಡ್ರೆಸ್ ಮೂಲಕ ನಡೆದ ಯಾವುದೇ ಕಾನೂನುಬಾಹಿರ ಕಾರ್ಯಕ್ಕೆ ನೀವೇ ಹೊಣೆಗಾರರಾಗುತ್ತೀರಿ. ಡೇಟಾ ಕಳ್ಳತನ, ಮಾಲ್‌ವೇರ್ ದಾಳಿ ಹಾಗೂ ಕಾನೂನು ತೊಂದರೆಗಳ ಅಪಾಯವಿದೆ. ಜೈಲುಪಾಲಾಗುವ ಸಾಧ್ಯತೆಗಳಿರುವುದರಿಂದ, ವೈಫೈ ಹಂಚುವಾಗ ಅತ್ಯಂತ ಎಚ್ಚರ ವಹಿಸಿ, ಸುರಕ್ಷತಾ ನಿಯಮ ಪಾಲಿಸುವುದು ಅನಿವಾರ್ಯ.

ಇಂದು ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಸ್ನೇಹಿತರು, ಸಹೋದ್ಯೋಗಿಗಳು ಅಥವಾ ಅಪರಿಚಿತರು “ಸ್ವಲ್ಪ ಡಾಟಾ/ವೈಫೈ ಹಾಟ್‌ಸ್ಪಾಟ್ ಆನ್ ಮಾಡಿ, ತುರ್ತು ಮೆಸೇಜ್ ಕಳುಹಿಸಬೇಕು” ಎಂದರೆ ನಾವು ಯಾವುದೇ ಯೋಚನೆ ಮಾಡದೆ ತಕ್ಷಣ ವೈಫೈ ಹಂಚಿಕೊಳ್ಳುತ್ತೇವೆ. ಆದರೆ, ಹೀಗೆ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ನಿಮ್ಮ ಮೊಬೈಲ್ ವೈಫೈ ಶೇರ್ ಮಾಡುವುದು ನಿಮ್ಮ ಜೀವನವನ್ನೇ ಹಾಳು ಮಾಡಬಹುದು ಹಾಗೂ ನಿಮ್ಮನ್ನು ಜೈಲು ಪಾಲು ಮಾಡಬಹುದು ಎನ್ನುವ ಆಘಾತಕಾರಿ ಸತ್ಯವನ್ನು ಸೈಬರ್ ಕ್ರೈಮ್ ತಜ್ಞರು ಬಹಿರಂಗಪಡಿಸಿದ್ದಾರೆ. ಅನೇಕರಿಗೆ ಗೊತ್ತಿಲ್ಲದ ವಿಷಯವೆಂದರೆ, ನಿಮ್ಮ ಫೋನ್‌ನಿಂದ ವೈಫೈ ಹಂಚಿಕೊಂಡಾಗ ಆ ಇಂಟರ್ನೆಟ್ ಸಂಪರ್ಕದ ಸಂಪೂರ್ಣ ‘ಡಿಜಿಟಲ್ ಜವಾಬ್ದಾರಿ’ ಹಾಗೂ ‘IP ಅಡ್ರೆಸ್’ ನಿಮ್ಮ ಹೆಸರಿನಲ್ಲೇ ಇರುತ್ತದೆ.
ಉಚಿತ ವೈಫೈ ಹಂಚಿಕೊಳ್ಳುವುದರಿಂದ ಎದುರಾಗುವ ಮಾರಕ ಅಪಾಯಗಳು:
ಸೈಬರ್ ಅಪರಾಧದಲ್ಲಿ ನಿಮ್ಮ ಪರೋಕ್ಷ ಭಾಗಿತ್ವ:
ನಿಮ್ಮ ಫೋನ್‌ನಿಂದ ವೈಫೈ ಸಂಪರ್ಕ ಪಡೆದ ವ್ಯಕ್ತಿ ಯಾವುದೇ ಸೈಬರ್ ಅಪರಾಧ (ಉದಾಹರಣೆಗೆ: ಬ್ಯಾಂಕ್ ವಂಚನೆ, ಬೆದರಿಕೆ ಕರೆ, ಸೈಬರ್ ಬುಲ್ಲಿಯಿಂಗ್, ಅಥವಾ ನಿಷೇಧಿತ ವೆಬ್‌ಸೈಟ್‌ಗಳ ಬಳಕೆ) ಎಸಗಿದರೆ, ಪೊಲೀಸರ ತನಿಖೆಯಲ್ಲಿ ಸೈಬರ್ ಪೊಲೀಸರಿಗೆ ನಿಮ್ಮ ಫೋನ್‌ನ IP ಅಡ್ರೆಸ್ ಪತ್ತೆಯಾಗುತ್ತದೆ. ಅಪರಾಧ ಎಸಗಿದ ವ್ಯಕ್ತಿಯ ಬದಲು, ಮೊದಲು ನಿಮ್ಮನ್ನೇ ಮುಖ್ಯ ಆರೋಪಿಯನ್ನಾಗಿ ಪೊಲೀಸರು ವಶಕ್ಕೆ ಪಡೆಯುತ್ತಾರೆ.
ಡಾಟಾ ಕಳ್ಳತನ ಹಾಗೂ ಹ್ಯಾಕಿಂಗ್ :
ಸೈಬರ್ ಹ್ಯಾಕರ್‌ಗಳು ‘ವೈಫೈ ಶೇರಿಂಗ್’ ಅನ್ನೇ ಅಸ್ತ್ರವಾಗಿಸಿಕೊಂಡಿದ್ದಾರೆ. ನಿಮ್ಮ ಫೋನ್‌ನಿಂದ ವೈಫೈ ಪಡೆದುಕೊಂಡು, ನಿಮ್ಮ ಸಾಧನದ ಒಳಗೆ ರಹಸ್ಯವಾಗಿ ಮಾಲ್‌ವೇರ್ ಅಥವಾ ಸ್ಪೈವೇರ್ ಪ್ರವೇಶಿಸುವಂತೆ ಮಾಡುತ್ತಾರೆ. ಇದರಿಂದ ನಿಮ್ಮ ಫೋನ್‌ನಲ್ಲಿರುವ ಬ್ಯಾಂಕಿಂಗ್ ವಿವರಗಳು, ರಹಸ್ಯ ಪಾಸ್‌ವರ್ಡ್‌ಗಳು ಹಾಗೂ ಖಾಸಗಿ ಫೋಟೋಗಳು ಕಳವಾಗುವ ಭಾರಿ ಅಪಾಯವಿರುತ್ತದೆ.
ಡಾರ್ಕ್ ವೆಬ್ ಮತ್ತು ಕಾನೂನುಬಾಹಿರ ಚಟುವಟಿಕೆ:
ನಿಮ್ಮ ವೈಫೈ ನೆಟ್‌ವರ್ಕ್ ಬಳಸಿ ಯಾರಾದರೂ ಉಗ್ರವಾದಿ ಚಟುವಟಿಕೆಗಳು, ಚೈಲ್ಡ್ ಪೋರ್ನೋಗ್ರಫಿ ಅಥವಾ ಡಾರ್ಕ್ ವೆಬ್‌ನಲ್ಲಿ ಅಕ್ರಮ ವ್ಯವಹಾರ ನಡೆಸಿದರೆ, ಕಾನೂನಿನ ಪ್ರಕಾರ ಆ ಇಂಟರ್ನೆಟ್ ಸಂಪರ್ಕದ ಮಾಲೀಕರಾದ ನೀವೇ ನೇರ ಹೊಣೆಗಾರರಾಗುತ್ತೀರಿ.
ಇದನ್ನೂ ಓದಿ: ಕಣ್ಣೆದುರಲ್ಲೇ ಮಗುವಿಗೆ ಜನ್ಮ ನೀಡುವ ಬೊಂಬೆ: ‘ಝುರು’ ಕಂಪನಿಯ ವಿಚಿತ್ರ ಆಟಿಕೆ ವೀಡಿಯೋ ವೈರಲ್
ವೈಫೈ ಹಾಟ್‌ಸ್ಪಾಟ್ ಬಳಸುವಾಗ ತಪ್ಪದೇ ಈ ಸುರಕ್ಷತಾ ನಿಯಮ ಪಾಲಿಸಿ:
- ಅಪರಿಚಿತರಿಗೆ ವೈಫೈ ನೀಡಬೇಡಿ: ಪರಿಚಯವಿಲ್ಲದ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಹಾಟ್‌ಸ್ಪಾಟ್ ಆನ್ ಮಾಡಿ ನೀಡಬೇಡಿ.
- ಕಡ್ಡಾಯವಾಗಿ ಕಠಿಣ ಪಾಸ್‌ವರ್ಡ್ ಬಳಸಿ: ನಿಮ್ಮ ಹಾಟ್‌ಸ್ಪಾಟ್‌ಗೆ ಸದಾ ಕಠಿಣವಾದ ಪಾಸ್‌ವರ್ಡ್ ಇಡಿ. ಮುಕ್ತವಾಗಿಇಡಬೇಡಿ.
- ‘One-Time Password’ ಅಥವಾ ‘Limit’ ಹೊಂದಿಸಿ: ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ‘Data Limit’ ಹಾಗೂ ‘Set One-Time Password’ ಆಯ್ಕೆಗಳಿರುತ್ತವೆ. ಅಗತ್ಯವಿದ್ದಾಗ ಮಾತ್ರ ಇದನ್ನು ಬಳಸಿ.
- QR ಕೋಡ್ ಹಂಚುವಾಗ ಎಚ್ಚರ: QR ಕೋಡ್ ಮೂಲಕ ತಕ್ಷಣ ವೈಫೈ ಕನೆಕ್ಟ್ ಮಾಡುವ ಸೌಲಭ್ಯವಿದ್ದರೂ, ನಂಬಿಕಸ್ಥರಿಗೆ ಮಾತ್ರ ಅದನ್ನು ನೀಡಿ.
- ಬಳಕೆಯ ನಂತರ ಆಫ್ ಮಾಡಿ: ಕೆಲಸ ಮುಗಿದ ತಕ್ಷಣ ವೈಫೈ ಹಾಟ್‌ಸ್ಪಾಟ್ ಅನ್ನು ತಕ್ಷಣವೇ ‘Turn Off’ ಮಾಡಿ.
ನಿಮ್ಮ ಒಂದು ಕ್ಷಣದ ಉದಾರತೆ ಅಥವಾ ನಿರ್ಲಕ್ಷ್ಯ ಸೈಬರ್ ಕಳ್ಳರ ಜಾಲಕ್ಕೆ ನಿಮ್ಮನ್ನು ತಳ್ಳಬಹುದು. ಹೀಗಾಗಿ ಜಾಗರೂಕರಾಗಿರಿ, ಡಿಜಿಟಲ್ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ.
ವಾಣಿಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




