ಶೇ. 35ರಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡಿದ ಓಲಾ; ನಷ್ಟ ತಗ್ಗಿಸಲು ಆಟೊಮೇಶನ್ ಅಳಡಿಸಿದ ಕಂಪನಿ
Ola layoff: ಬೆಂಗಳೂರು ಮೂಲದ ಓಲಾ ಎಲೆಕ್ಟ್ರಿಕ್ ಸಂಸ್ಥೆ ಒಂದು ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಲೇ ಆಫ್ ಮಾಡುತ್ತಿದೆ ಎಂದು ಬ್ಲೂಮ್ಬರ್ಗ್ ವರದಿಯಲ್ಲಿ ಹೇಳಲಾಗಿದೆ. ಸಂಸ್ಥೆಯ ನಷ್ಟ ಹೆಚ್ಚಾದ ಹಿನ್ನೆಲೆಯಲ್ಲಿ ವೆಚ್ಚ ತಗ್ಗಿಸುವ ಕ್ರಮಗಳ ಭಾಗವಾಗಿ ಈ ಲೇ ಆಫ್ ಮಾಡಲಾಗುತ್ತಿದೆ. ಡಿಸೆಂಬರ್ ಅಂತ್ಯದ ಕ್ವಾರ್ಟರ್ನಲ್ಲಿ ಓಲಾ ಸಂಸ್ಥೆಯ ನಷ್ಟ ಶೇ. 50ರಷ್ಟು ಹೆಚ್ಚಾಗಿದೆ. ಫೆಬ್ರುವರಿಯಲ್ಲಿ ಅದರ ವಾಹನಗಳ ಮಾರಾಟ ನಿರೀಕ್ಷೆಗಿಂತ ಶೇ. 50ರಷ್ಟು ಕಡಿಮೆ ಇದೆ.

ಬೆಂಗಳೂರು, ಮಾರ್ಚ್ 3: ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ತಯಾರಿಸುವ ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಲಿ ಸಂಸ್ಥೆ ಭಾರೀ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿದೆ (Ola Layoffs) ಎನ್ನುವಂತಹ ಸುದ್ದಿ ಬಂದಿದೆ. ಬ್ಲೂಮ್ಬರ್ಗ್ ಸುದ್ದಿ ಸಂಸ್ಥೆ ವರದಿ ಪ್ರಕಾರ ಒಂದು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ವಿವಿಧ ವಿಭಾಗಗಳಲ್ಲಿನ ಉದ್ಯೋಗಿಗಳ ಲೇ ಆಫ್ ಆಗುತ್ತಿದೆಯಾದರೂ, ಪ್ರಮುಖವಾಗಿ ಚಾರ್ಜಿಂಗ್ ಇನ್ಫ್ರಾಸ್ಟ್ರಕ್ಚರ್, ಕಸ್ಟಮರ್ ರಿಲೇಶನ್ಸ್, ಪ್ರೊಕ್ಯೂರ್ಮೆಂಟ್, ಫುಲ್ಫಿಲ್ಮೆಂಟ್ ವಿಭಾಗಗಳಲ್ಲಿ ಹೆಚ್ಚಿನ ಲೇ ಆಫ್ ಆಗುತ್ತಿದೆ ಎನ್ನಲಾಗಿದೆ.
ಕಳೆದ ನಾಲ್ಕು ತಿಂಗಳಲ್ಲಿ ಓಲಾದಲ್ಲಿ ನಡೆಯುತ್ತಿರುವ ಎರಡನೇ ಲೇ ಆಫ್ ಇದು. 2024ರ ನವೆಂಬರ್ನಲ್ಲಿ 500 ಮಂದಿಯನ್ನು ಕೆಲಸದಿಂದ ತೆಗೆಯಲಾಗಿತ್ತು. 2024ರ ಮಾರ್ಚ್ 31ರಲ್ಲಿ ಓಲಾ ಸಂಸ್ಥೆಯಲ್ಲಿ 4,000 ಮಂದಿ ಉದ್ಯೋಗಿಗಳಿದ್ದರು. ಇದರಲ್ಲಿ ಗುತ್ತಿಗೆ ನೌಕರರೂ ಒಳಗೊಂಡಿದ್ದಾರೆ. ಅಲ್ಲಿಂದೀಚೆ ಒಂದೂವರೆ ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಲೇ ಆಫ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: 300 ಕೋಟಿ ರೂಗೆ ಖರೀದಿಸಿ 3 ವರ್ಷದಲ್ಲಿ ಕಂಪನಿ ಮುಚ್ಚಿದ ಫ್ಲಿಪ್ಕಾರ್ಟ್
ನಷ್ಟ ಹೆಚ್ಚಾದ ಹಿನ್ನೆಲೆಯಲ್ಲಿ ಓಲಾದಿಂದ ಲೇ ಆಫ್ ಕ್ರಮ
2024ರ ಡಿಸೆಂಬರ್ ಕ್ವಾರ್ಟರ್ನಲ್ಲಿ ಓಲಾ ಬರೋಬ್ಬರಿ 564 ಕೋಟಿ ರೂನಷ್ಟು ನಷ್ಟ ಅನುಭವಿಸಿದೆ. ಹಿಂದಿನ ವರ್ಷದಕ್ಕೆ ಹೋಲಿಸಿದರೆ ನಷ್ಟದಲ್ಲಿ ಶೇ. 50ರಷ್ಟು ಹೆಚ್ಚಳ ಆಗಿದೆ.
ಫೆಬ್ರುವರಿ ತಿಂಗಳಲ್ಲಿ ಒಲಾ ಗಾಡಿಗಳು ಮಾರಾಟವಾಗಿದ್ದು 25,000 ಮಾತ್ರ. ನಷ್ಟದಿಂದ ಹೊರಬರಲು ಒಂದು ತಿಂಗಳಲ್ಲಿ 50,000 ವಾಹನಗಳ ಮಾರಾಟವಾಗಬೇಕೆಂಬ ಗುರಿಯನ್ನು ಸಿಇಒ ಭವಿಷ್ ಅಗರ್ವಾಲ್ ಮುಂದಿಟ್ಟಿದ್ದರು. ಆದರೆ, ಫೆಬ್ರುವರಿಯಲ್ಲಿ ಗುರಿಯ ಅರ್ಧದಷ್ಟು ಮಾತ್ರವೇ ಸಾಧನೆಯಾಗಿದೆ.
ಇದನ್ನು ತಡೆಯಲು ಓಲಾ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದರಲ್ಲಿ ವಿವಿಧ ಕಾರ್ಯಗಳಿಗೆ ಆಟೊಮೇಶನ್ ಅಥವಾ ಯಂತ್ರ ಬಳಕೆ ಮಾಡಲಾಗುತ್ತಿದೆ. ಅನಗತ್ಯ ಎನಿಸಿರುವ ಹುದ್ದೆ ಅಥವಾ ಕೆಲಸಗಳನ್ನು ನಿರ್ಮೂಲನೆ ಮಾಡಲಾಗುತ್ತಿದೆ. ಹೀಗಾಗಿ, ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಬೈಜುಸ್ನಿಂದ ವಂಚನೆ ಎಂದ ಅಮೆರಿಕದ ಕೋರ್ಟ್; ಎಲ್ಲಾ ಸೇರಿ ಸಂಚು ರೂಪಿಸಿದ್ರು, ತನಿಖೆ ಆಗಲಿ ಎಂದ ಸಿಇಒ ಬೈಜು ರವೀಂದನ್
ಒಲಾ ಷೇರುಗಳಿಗೆ ಹಿನ್ನಡೆ
ಕಳೆದ ವರ್ಷದ ಆಗಸ್ಟ್ನಲ್ಲಿ ಷೇರು ಮಾರುಕಟ್ಟೆಗೆ ಅಡಿ ಇಟ್ಟ ಒಲಾ ಎಲೆಕ್ಟ್ರಿಕ್ ಸಂಸ್ಥೆಯ ಷೇರು ಬೆಲೆ ತನ್ನ ಗರಿಷ್ಠ ಮಟ್ಟದಿಂದ ಶೇ. 60ರಷ್ಟು ನಷ್ಟ ಕಂಡಿದೆ. ವಾಹನಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕವಾಗಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾದ ದೂರುಗಳ ಹಿನ್ನೆಲೆಯಲ್ಲಿ ಷೇರುಗಳಿಗೆ ಹಿನ್ನಡೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




