Flipkart ANS: 300 ಕೋಟಿ ರೂಗೆ ಖರೀದಿಸಿ 3 ವರ್ಷದಲ್ಲಿ ಕಂಪನಿ ಮುಚ್ಚಿದ ಫ್ಲಿಪ್ಕಾರ್ಟ್
Flipkart's arm ANS Commerce to shutdown its operations: ಫ್ಲಿಪ್ಕಾರ್ಟ್ ತನ್ನ ಅಂಗಸಂಸ್ಥೆಯಾದ ಎಎನ್ಎಸ್ ಕಾಮರ್ಸ್ ಅನ್ನು ಮುಚ್ಚಲು ನಿರ್ಧರಿಸಿದೆ. ಅದರಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಉದ್ಯೋಗಿಗಳನ್ನೂ ಲೇ ಆಫ್ ಮಾಡಲಾಗುತ್ತಿದೆ. ಕೆಲವರನ್ನು ಫ್ಲಿಪ್ಕಾರ್ಟ್ನಲ್ಲಿ ಸೂಕ್ತ ಹುದ್ದೆಗಳಿದ್ದರೆ ನೇಮಕ ಮಾಡಿಕೊಳ್ಳಲಾಗುತ್ತಿದೆ. 2017ರಲ್ಲಿ ಆರಂಭವಾದ ಎಎನ್ಎಸ್ ಕಾಮರ್ಸ್ ಅನ್ನು 2022ರಲ್ಲಿ ಫ್ಲಿಪ್ಕಾರ್ಟ್ 300 ಕೋಟಿ ರೂಗೆ ಖರೀದಿ ಮಾಡಿತ್ತು.

ನವದೆಹಲಿ, ಮಾರ್ಚ್ 2: ದೇಶದ ಎರಡನೇ ಅತಿದೊಡ್ಡ ಇಕಾಮರ್ಸ್ ಕಂಪನಿ ಎನಿಸಿದ ಫ್ಲಿಪ್ಕಾರ್ಟ್ ತನ್ನ ಅಂಗಸಂಸ್ಥೆಯಾದ ಎಎನ್ಎಸ್ ಕಾಮರ್ಸ್ ಅನ್ನು ಮುಚ್ಚಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ‘ಸಾಕಷ್ಟು ಯೋಚನೆ ಬಳಿಕ ಎಎನ್ಎಸ್ ಕಾಮರ್ಸ್ ಸಂಸ್ಥೆ ತನ್ನ ವ್ಯವಹಾರಗಳನ್ನು ನಿಲ್ಲಿಸಲು ನಿರ್ಧರಿಸಿದೆ. ಉದ್ಯೋಗಿಗಳು, ಗ್ರಾಹಕರು ಸೇರಿದಂತೆ ಎಲ್ಲಾ ಭಾಗಿದಾರರಿಗೆ (stakeholders) ಸಮಸ್ಯೆಯಾಗದ ರೀತಿಯಲ್ಲಿ ಇದನ್ನು ಅಂತ್ಯವಾಡಲು ಬದ್ಧವಾಗಿದ್ದೇವೆ,’ ಎಂದು ಫ್ಲಿಪ್ಕಾರ್ಟ್ನ ವಕ್ತಾರರು ಹೇಳಿದ್ದಾರೆ ಟೈಮ್ಸ್ ಆಫ್ ಇಂಡಿಯಾ ವೆಬ್ಸೈಟ್ನ ವರದಿಯಲ್ಲಿ ತಿಳಿಸಲಾಗಿದೆ.
ಗುರುಗ್ರಾಮ್ ಮೂಲದ ಎಎನ್ಎಸ್ ಕಾಮರ್ಸ್ ಸಂಸ್ಥೆ 2017ರಲ್ಲಿ ಆರಂಭವಾಗಿತ್ತು. ಆನ್ಲೈನ್ನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಬಯಸುವ ಸಂಸ್ಥೆಗಳಿಗೆ ಮಾರ್ಕೆಟಿಂಗ್ ಟೂಲ್, ಸಂಗ್ರಹಗಾರ ಇತ್ಯಾದಿ ಬೆಂಬಲ ಸೇವೆಗಳನ್ನು ನೀಡುವ ಕಂಪನಿ ಅದು. 2022ರಲ್ಲಿ ಫ್ಲಿಪ್ಕಾರ್ಟ್ ಸಂಸ್ಥೆ 300 ಕೋಟಿ ರೂ ಮೊತ್ತಕ್ಕೆ ಎಎನ್ಎಸ್ ಕಾಮರ್ಸ್ ಅನ್ನು ಖರೀದಿ ಮಾಡಿತು. ಈಗ ಮೂರು ವರ್ಷದ ಬಳಿಕ ಅದನ್ನು ಮುಚ್ಚುತ್ತಿದೆ. ಯಾವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ಗೊತ್ತಾಗಿಲ್ಲ. ಫ್ಲಿಪ್ಕಾರ್ಟ್ನಿಂದ ಇನ್ನೂ ಅಧಿಕೃತ ಹೇಳಿಕೆ ಬಂದಿಲ್ಲ.
ಇದನ್ನೂ ಓದಿ: ಎಲ್ಟಿಸಿಜಿ ತೆರಿಗೆ ಬೇಡ, ಎಸ್ಟಿಸಿಜಿ ಅವಧಿ ಹೆಚ್ಚಿಸಿ; ಎಸ್ಟಿಟಿ ಏರಿಸಿ: ಗುರ್ಮೀತ್ ಚಡ್ಡಾ ಸಲಹೆ
2022ರಲ್ಲಿ ಎಎನ್ಎಸ್ ಕಾಮರ್ಸ್ ಸಂಸ್ಥೆಯಲ್ಲಿ 600 ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಈಗ ಅವರ ಸಂಖ್ಯೆ ಎಷ್ಟಿದೆ ಎನ್ನುವುದು ಗೊತ್ತಿಲ್ಲ. ಆದರೆ, ಆ ವಿಭಾಗದಲ್ಲಿ ಕೆಲಸ ಮಾಡತ್ತಿರುವ ಉದ್ಯೋಗಿಗಳಿಗೆ ಫ್ಲಿಪ್ಕಾರ್ಟ್ನಲ್ಲಿ ಸೂಕ್ತ ಹುದ್ದೆಗಳಿದ್ದರೆ ನೇಮಕವಾಗುವ ಅವಕಾಶ ಕಲ್ಪಿಸಲಾಗಿದೆ. ಬೇರೆ ಕಡೆ ಕೆಲಸ ಅರಸಲು ಸಹಾಯ ಕೂಡ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನಲ್ಲಿ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಎಂಬ ಸೋದರರಿಬ್ಬರು 2007ರಲ್ಲಿ ಸ್ಥಾಪಿಸಿದ ಸಂಸ್ಥೆ ಫ್ಲಿಪ್ಕಾರ್ಟ್. 2018ರಲ್ಲಿ ಅಮೆರಿಕದ ರೀಟೇಲ್ ದೈತ್ಯ ಸಂಸ್ಥೆ ವಾಲ್ಮಾರ್ಟ್ ಈ ಫ್ಲಿಪ್ಕಾರ್ಟ್ ಅನ್ನು ಖರೀದಿಸಿತು. ಬಳಿಕ ಎಎನ್ಎಸ್ ಕಾಮರ್ಸ್, ಮಿನ್ತ್ರಾ ಇತ್ಯಾದಿ ಹಲವು ಆನ್ಲೈನ್ ಬ್ರ್ಯಾಂಡ್ ಮತ್ತು ಕಾಮರ್ಸ್ ಕಂಪನಿಗಳನ್ನು ಫ್ಲಿಪ್ಕಾರ್ಟ್ ಮೂಲಕ ಖರೀದಿ ಮಾಡಲಾಗಿದೆ.
ಇದನ್ನೂ ಓದಿ: ಫೆಬ್ರುವರಿಯಲ್ಲಿ ಸರ್ಕಾರಕ್ಕೆ ಸಿಕ್ಕಿದ ಒಟ್ಟು ಜಿಎಸ್ಟಿ 1.84 ಲಕ್ಷ ಕೋಟಿ ರೂ; ಶೇ 9.1 ಹೆಚ್ಚು ಸಂಗ್ರಹ
ಇತ್ತೀಚಿನ ಬೆಳವಣಿಗೆಯಲ್ಲಿ ಫ್ಲಿಪ್ಕಾರ್ಟ್ನ ಇನ್ವೆಸ್ಟ್ಮೆಂಟ್ ವಿಭಾಗವಾದ ಫ್ಲಿಪ್ಕಾರ್ಟ್ ವೆಂಚರ್ಸ್ ಸಂಸ್ಥೆ ಐದು ಸ್ಟಾರ್ಟಪ್ಗಳಿಗೆ ಬಂಡವಾಳ ನೆರವು ಒದಗಿಸಲು ನಿರ್ಧರಿಸಿದೆ. ಎಕ್ಸ್ಪೋರ್ಟೆಲ್, ಫ್ಯಾಕ್ಟರ್ಸ್ ಡಾಟ್ ಎಐ, ಎಕ್ಸ್ಪರ್ಟಿಯಾ ಡಾಟ್ ಎಐ, ಭಾರತ್ ಕೃಷಿ ಸೇವಾ ಮತ್ತು ವೀಸಾ ಟು ಫ್ಲೈ ಎನ್ನುವ ಸ್ಟಾರ್ಟಪ್ಗಳು ಫ್ಲಿಪ್ಕಾರ್ಟ್ನಿಂದ ಬಂಡವಾಳ ಪಡೆಯಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




