ಬೈಜುಸ್ನಿಂದ ವಂಚನೆ ಎಂದ ಅಮೆರಿಕದ ಕೋರ್ಟ್; ಎಲ್ಲಾ ಸೇರಿ ಸಂಚು ರೂಪಿಸಿದ್ರು, ತನಿಖೆ ಆಗಲಿ ಎಂದ ಸಿಇಒ ಬೈಜು ರವೀಂದನ್
Byju's controversies: ಬೈಜುಸ್ನಿಂದ ಸಾಲಗಾರರಿಗೆ ವಂಚನೆ ಆಗಿದೆ ಎಂಬ ಆರೋಪವನ್ನು ಅಮೆರಿಕದ ದಿವಾಳಿ ನ್ಯಾಯಾಲಯ ಒಪ್ಪಿದೆ. ಇದೇ ವೇಳೆ, ಬೈಜುಸ ಸಿಇಒ ಬೈಜು ರವೀಂದ್ರನ್ ಸೋಷಿಯಲ್ ಮೀಡಿಯಾದಲ್ಲಿ ಎಮೋಷನಲ್ ಪೋಸ್ಟ್ ಹಾಕಿದ್ದಾರೆ. ತಮ್ಮ ಸಂಸ್ಥೆ ಮುಗಿಸಲು ವಿವಿಧ ಶಕ್ತಿಗಳು ಪ್ರಯತ್ನಿಸುತ್ತಿದ್ದು, ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರು, ಮಾರ್ಚ್ 2: ಕೋವಿಡ್ ಸಂದರ್ಭದಲ್ಲಿ ಇಡೀ ದೇಶದ ಗಮನ ಸೆಳೆಯುವಷ್ಟು ಅದ್ವಿತೀಯವಾಗಿ ಬೆಳೆದಿದ್ದ ಬೈಜುಸ್ ಸಂಸ್ಥೆ ಇವತ್ತು ದಿವಾಳಿ ಎದ್ದಿದೆ. ಕಳೆದ ವಾರಾಂತ್ಯದಲ್ಲಿ ಬೈಜುಸ್ ಸಂಬಂಧ ಎರಡು ಬೆಳವಣಿಗೆಗಳು ಆಗಿವೆ. ಮೊದಲನೆಯದು, ಅಮೆರಿಕ ನ್ಯಾಯಾಲಯವೊಂದು ಬೈಜುಸ್ನಿಂದ ಸಾಲಗಾರರಿಗೆ ವಂಚನೆ ಆಗಿದೆ ಎಂದು ಅಭಿಪ್ರಾಯಪಟ್ಟಿದೆ. ಮತ್ತೊಂದು ಘಟನೆ ಎಂದರೆ, ಬೈಜುಸ್ನ ಸಿಇಒ ಬೈಜು ರವೀಂದ್ರನ್ ಬಹಳ ದಿನಗಳ ಬಳಿಕ ಲಿಂಕ್ಡ್ಇನ್ ಪ್ಲಾಟ್ಫಾರ್ಮ್ನಲ್ಲಿ ಒಂದು ಪೋಸ್ಟ್ ಹಾಕಿದ್ದು, ಸಾಲಗಾರರು ಹಾಗೂ ಇತರರು ಸೇರಿ ಹೇಗೆ ತಮ್ಮನ್ನು ಮುಗಿಸಲು ಯತ್ನಿಸಿದ್ದಾರೆ ಎಂಬುದನ್ನು ವಿವರಿಸಿದ್ದಾರೆ.
ಸಾಲದ ಹಣ ಏನಾಯ್ತು, ಲೆಕ್ಕ ಕೊಡದ ಬೈಜುಸ್; ಯುಎಸ್ ಕೋರ್ಟ್ ತರಾಟೆ
ಬೈಜುಸ್ ಸಂಸ್ಥೆಗೆ ವಿವಿಧ ಸಂದರ್ಭಗಳಲ್ಲಿ ಒಟ್ಟು 1.2 ಬಿಲಿಯನ್ ಡಾಲರ್ನಷ್ಟು ಟರ್ಮ್ ಲೋನ್ಗಳನ್ನು ನೀಡಲಾಗಿತ್ತು. ಅದರಲ್ಲಿ 533 ಮಿಲಿಯನ್ ಡಾಲರ್ನ ಸಾಲದ ಭಾಗವೂ ಇದೆ. ಈ 533 ಮಿಲಿಯನ್ ಡಾಲರ್ ಹಣವನ್ನು ಎಲ್ಲಿಗೆ ಬಳಕೆಯಾಯಿತು, ಎಲ್ಲಿ ಹೋಯಿತು ಎಂಬ ವಿವರವನ್ನು ತಮಗೆ ನೀಡಿಲ್ಲ ಎಂಬುದು ಸಾಲಗಳನ್ನು ನೀಡಿದ ಸಂಸ್ಥೆಗಳ ಆರೋಪ. ಕೋರ್ಟ್ ಕೂಡ ಬೈಜುಸ್ದೇ ತಪ್ಪೆಂದು ಹೇಳಿದೆ. ಬೈಜುಸ್ ಆಲ್ಫಾದ ಖಾತೆಯಿಂದ ಅಕ್ರಮ ರೀತಿಯಲ್ಲಿ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವನ್ನು ದಿವಾಳಿ ಪ್ರಕರಣಗಳ ಕೋರ್ಟ್ ಒಪ್ಪಿದೆ. ಈ ಬಗ್ಗೆ ನ್ಯಾಯಾಲಯ ಅಂತಿಮ ತೀರ್ಪು ನೀಡಬೇಕಿದೆ.
ಇದನ್ನೂ ಓದಿ: 300 ಕೋಟಿ ರೂಗೆ ಖರೀದಿಸಿ 3 ವರ್ಷದಲ್ಲಿ ಕಂಪನಿ ಮುಚ್ಚಿದ ಫ್ಲಿಪ್ಕಾರ್ಟ್
ಬೈಜು ರವೀಂದ್ರನ್ ಭಾವನಾತ್ಮಕ ಪೋಸ್ಟ್
ಅತ್ತ, ಅಮೆರಿಕದ ಕೋರ್ಟ್ ಅಭಿಪ್ರಾಯ ಹೊರಬರುತ್ತಿರುವ ಹೊತ್ತಲ್ಲೇ ಇತ್ತ ಬೈಜುಸ್ ಸಿಇಒ ಬೈಜು ರವೀಂದ್ರನ್ ತಮ್ಮ ಲಿಂಕ್ಡ್ಇನ್ ಪ್ಲಾಟ್ಫಾರ್ಮ್ನಲ್ಲಿ ಭಾವನಾತ್ಮಕ ಪೋಸ್ಟ್ವೊಂದನ್ನು ಹಾಕಿದ್ದಾರೆ. ಬಹಳ ಅಪರೂಪಕ್ಕೆ ಅವರು ಈ ಪ್ಲಾಟ್ಫಾರ್ಮ್ ಬಳಸುವುದು. ಇದ್ದಕ್ಕಿದ್ದಂತೆ ಅವರು ಪೋಸ್ಟ್ ಹಾಕಿ, ತಮ್ಮ ಸಂಸ್ಥೆಯನ್ನು ಮುಗಿಸಲು ವಿವಿಧ ಸಂಸ್ಥೆಗಳು ಮತ್ತು ವ್ಯಕ್ತಿಗಳು ಪಿತೂರಿ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ಹಾಗೆಯೇ, ಸಮಗ್ರ ತನಿಖೆ ಆಗಬೇಕು ಎಂದೂ ಆಗ್ರಹಿಸಿದ್ದಾರೆ.
‘ನಾನು ಬೈಜುಸ್ನ ಬೈಜು ಇಲ್ಲಿದ್ದೇನೆ. ಇಲ್ಲಿಗೆ ಇನ್ನೂ ಬೇಗ ಬರಬೇಕಿತ್ತು. ಆದರೆ, ನನ್ನ ಕಂಪನಿ ಕಟ್ಟಲು ತುಂಬಾ ಬ್ಯುಸಿ ಆಗಿಹೋಗಿದ್ದೆ. ನಾನು ಕಟ್ಟಿದ ಎಲ್ಲವನ್ನು ಉಳಿಸಲೂ ಬ್ಯುಸಿಯಾಗಿದ್ದೆ. ನೇರವಾಗಿ ನಿಮ್ಮನ್ನು ಸಂಪರ್ಕಿಸಲು ಬಹಳ ದಿನಗಳಿಂದ ಬಯಸಿದ್ದೆ. ಆದರೆ, ನನ್ನ ವಿಚಾರದಲ್ಲಿ ನ್ಯಾಯ ಸಿಗುತ್ತದೆ, ಸತ್ಯ ಹೊರಬರುತ್ತದೆ ಎಂದು ಕಾಯುತ್ತಲೇ ಇದ್ದೆ,’ ಎಂದು ಬೈಜು ರವೀಂದ್ರನ್ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಎಲ್ಟಿಸಿಜಿ ತೆರಿಗೆ ಬೇಡ, ಎಸ್ಟಿಸಿಜಿ ಅವಧಿ ಹೆಚ್ಚಿಸಿ; ಎಸ್ಟಿಟಿ ಏರಿಸಿ: ಗುರ್ಮೀತ್ ಚಡ್ಡಾ ಸಲಹೆ
ತಮ್ಮ ಸಂಸ್ಥೆಗೆ ಸಾಲ ಕೊಟ್ಟಿರುವ ಇವೈ ಇಂಡಿಯಾ, ಗ್ಲಾಸ್ ಟ್ರಸ್ಟ್, ಹಾಗೂ ಐಆರ್ಪಿ ಅಧಿಕಾರಿ ಸೇರಿ ದ್ರೋಹ ಎಸಗಿದ್ದಾರೆ ಎನ್ನುವುದು ಬೈಜು ಆರೋಪ. ಬೈಜುಸ್ ಸಂಸ್ಥೆಯ ಸಾಲ ಮರುಪಾವತಿ ಪ್ರಕ್ರಿಯೆಯನ್ನು ಸುಗಮಗೊಳಿಸಲೆಂದು ಕೋರ್ಟ್ನಿಂದ ನೇಮಕವಾದ ಇನ್ಸಾಲ್ವೆನ್ಸಿ ರೆಸಲ್ಯೂಶನ್ ಪ್ರೊಫೆಷನಲ್ ಅಥವಾ ಐಆರ್ಪಿ ಅಧಿಕಾರಿ ಶೈಲೇಂದ್ರ ಅಜ್ಮೇರಾ ಅವರು ಇವೈ ಸಂಸ್ಥೆಯ ಉದ್ಯೋಗಿ. ಇವರನ್ನು ಐಆರ್ಪಿ ಅಧಿಕಾರಿಯಾಗಿ ನೇಮಿಸುವುದನ್ನು ಬೈಜು ರವೀಂದ್ರ ವಿರೋಧಿಸಿದ್ದರು. ಎಲ್ಲಾ ಸೇರಿ ಕ್ರಿಮಿನಲ್ ಸಂಚು ರೂಪಿಸಿ ತಮ್ಮನ್ನು ಮುಗಿಸಲು ಯತ್ನಿಸಿದ್ದಾರೆ. ಇದರ ಕೂಲಂಕಷ ತನಿಖೆ ಆಗಬೇಕು ಎಂದು ಬೈಜು ರವೀಂದ್ರ ತಮ್ಮ ಲಿಂಕ್ಡ್ಇನ್ ಪೋಸ್ಟ್ನಲ್ಲಿ ಒತ್ತಾಯಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ