ನವದೆಹಲಿ, ಡಿಸೆಂಬರ್ 17: ಷೇರು ಮಾರುಕಟ್ಟೆಯ ಡಿರೈವೇಟಿವ್ಸ್ ಸೆಗ್ಮೆಂಟ್ನ ಭಾಗವಾದ ಆಪ್ಷನ್ಸ್ ಟ್ರೇಡಿಂಗ್ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಇಳಿಕೆ ಆಗುತ್ತಿದೆ. ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್ನಿಂದ ಬಹಳಷ್ಟು ಹೂಡಿಕೆದಾರರು ಅತೀವ ನಷ್ಟ ಕಾಣುತ್ತಿದ್ದಾರೆ ಎನ್ನಲಾಗುತ್ತಿದ್ದು, ಆ ಕಾರಣಕ್ಕೆ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ ಇತ್ತೀಚೆಗೆ ವಿವಿಧ ರೀತಿಯ ನಿರ್ಬಂಧಗಳಿರುವ ನಿಯಮಗಳನ್ನು ಹೇರಿತ್ತು. ಇದರಿಂದಾಗಿ ಆಪ್ಷನ್ಸ್ ಟ್ರೇಡಿಂಗ್ ಪ್ರಮಾಣ ಬಹಳಷ್ಟು ಕಡಿಮೆ ಆಗಿದೆ.
ವರದಿಗಳ ಪ್ರಕಾರ ಬ್ಯಾಂಕ್ ನಿಫ್ಟಿಯಲ್ಲಿ ಸಾಮಾನ್ಯವಾಗಿ ದಿನವೊಂದಕ್ಕೆ ಸರಾಸರಿಯಾಗಿ 200 ಮಿಲಿಯನ್ ಟ್ರೇಡಿಂಗ್ ನಡೆಯುತ್ತಿತ್ತು. ಅಂದರೆ 20 ಕೋಟಿ ಟ್ರೇಡಿಂಗ್ ಆಗುತ್ತಿತ್ತು. ಈಗ ಡಿಸೆಂಬರ್ ತಿಂಗಳಲ್ಲಿ ಸರಾಸರಿಯಾಗಿ ದಿನವೊಂದಕ್ಕೆ 2 ಕೋಟಿಯಷ್ಟು ಮಾತ್ರವೇ ಟ್ರೇಡಿಂಗ್ ಆಗುತ್ತಿದೆ. ಅಂದರೆ, ಬ್ಯಾಂಕ್ ನಿಫ್ಟಿಯಲ್ಲಿ ಶೇ. 90ರಷ್ಟು ಆಪ್ಷನ್ಸ್ ಟ್ರೇಡಿಂಗ್ ಕಡಿಮೆ ಆಗಿದೆ.
ಇದನ್ನೂ ಓದಿ: ಭಾರತದ ಮರುಬಳಕೆ ಉದ್ಯಮದ ಮಾರುಕಟ್ಟೆ ಮೌಲ್ಯ 2 ಟ್ರಿಲಿಯನ್ ಡಾಲರ್ ಆಗಬಲ್ಲುದು: ಅಮಿತಾಭ್ ಕಾಂತ್
ಇಂಡೆಕ್ಸ್ ಡಿರೈವೇಟಿವ್ಸ್ನ ಕಾಂಟ್ರಾಕ್ಟ್ ಗಾತ್ರವನ್ನು ಹೆಚ್ಚಿಸಿದ್ದು ಸೇರಿ ಕೆಲ ಕಠಿಣ ನಿಯಮಗಳನ್ನು ಸೆಬಿ ಜಾರಿಗೆ ತಂದಿದ್ದು, ಬಹಳಷ್ಟು ಹೂಡಿಕೆದಾರರನ್ನು ದೂರ ನೂಕುವಲ್ಲಿ ಯಶಸ್ವಿಯಾಗಿದೆ. ಈ ಬೆಳವಣಿಗೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ಗಿಂತ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ಗೆ ಹೆಚ್ಚಿನ ಘಾಸಿಯಾಗಿದೆ.
ಟ್ರೇಡಿಂಗ್ನಲ್ಲಿ ವಾರದ ಎಕ್ಸ್ಪೈರೀಗಳು ಕಡಿಮೆ ಆಗಿರುವುದು ಡಿಸೆಂಬರ್ ಮೊದಲ ವಾರದಲ್ಲಿ ಟ್ರೇಡಿಂಗ್ ಮೌಲ್ಯದ ಮೇಲೆ ಪರಿಣಾಮ ಬೀರಿರಬಹುದು. ಡಿಸೆಂಬರ್ ಮೊದಲ ವಾರದಲ್ಲಿ ಎನ್ಎಸ್ಇನಲ್ಲಿ ಇಂಡೆಕ್ಸ್ ಆಪ್ಷನ್ಸ್ನ ಸಂಭಾವ್ಯ (notional) ಎಡಿಟಿವಿ (ನಿತ್ಯದ ಸರಾಸರಿ ಟ್ರೇಡಿಂಗ್ ಮೌಲ್ಯ) 207 ಲಕ್ಷ ಕೋಟಿ ರೂಗೆ ಇಳಿದಿದೆ. ಕಳೆದ ತಿಂಗಳ (ನವೆಂಬರ್) ಮೊದಲ ವಾರದಲ್ಲಿ ಇದು 357 ಲಕ್ಷ ಕೋಟಿ ರೂ ಇತ್ತು.
ಇದನ್ನೂ ಓದಿ: ನವೆಂಬರ್ನಲ್ಲಿ ಭಾರತದಿಂದ 20,000 ಕೋಟಿ ರೂ ಮೌಲ್ಯದ ಸ್ಮಾರ್ಟ್ಫೋನ್ ರಫ್ತು
ಇನ್ನು, ಬಿಎಸ್ಇನಲ್ಲಿ ಈ ಸಂಭಾವ್ಯ ಎಡಿಟಿವಿ ನವೆಂಬರ್ ಮೊದಲ ವಾರದಲ್ಲಿ 104 ಲಕ್ಷ ಕೋಟಿ ರೂ ಇದ್ದದ್ದು ಡಿಸೆಂಬರ್ ಮೊದಲ ವಾರದಲ್ಲಿ 80 ಲಕ್ಷ ಕೋಟಿ ರೂಗೆ ಇಳಿದಿದೆ. ಎಕ್ಸ್ಪಿರಿ ದಿನಗಳಲ್ಲಿ ಟ್ರೇಡ್ ಆಗುವ ಕಾಂಟ್ರಾಕ್ಟ್ಗಳ ಸಂಖ್ಯೆ ಕಡಿಮೆ ಆಗಿರುವುದು ಇದಕ್ಕೆ ಕಾರಣವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ