Ruchi Soya: ರುಚಿ ಸೋಯಾದಿಂದ ಪತಂಜಲಿ ಆಯುರ್ವೇದ ಆಹಾರ ವ್ಯಾಪಾರ 690 ಕೋಟಿ ರೂಪಾಯಿಗೆ ಸ್ವಾಧೀನ

ಪತಂಜಲಿ ಆಯುರವೇದ ಆಹಾರ ವ್ಯಾಪಾರವನ್ನು ರುಚಿ ಸೋಯಾ ಸ್ವಾಧೀನ ಮಾಡಿಕೊಂಡಿದೆ. 690 ಕೊಟಿ ರೂಪಾಯಿಗೆ ಮಾತುಕತೆ ಆಗಿದೆ.

Ruchi Soya: ರುಚಿ ಸೋಯಾದಿಂದ ಪತಂಜಲಿ ಆಯುರ್ವೇದ ಆಹಾರ ವ್ಯಾಪಾರ 690 ಕೋಟಿ ರೂಪಾಯಿಗೆ ಸ್ವಾಧೀನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: May 19, 2022 | 1:04 PM

ಖಾದ್ಯ ತೈಲ (edible oil) ಪ್ರಮುಖ ಕಂಪೆನಿಯಾದ ರುಚಿ ಸೋಯಾ ಘೋಷಿಸಿರುವಂತೆ, ಪತಂಜಲಿ ಆಯುರ್ವೇದ ಆಹಾರ ವ್ಯಾಪಾರವನ್ನು ಸುಮಾರು 690 ಕೋಟಿ ರೂಪಾಯಿಗೆ ಸ್ವಾಧೀನ ಮಾಡಿಕೊಳ್ಳುವುದಾಗಿ ಹೇಳಿದೆ. ಇದು ರುಚಿ ಸೋಯಾವನ್ನು ಎಫ್‌ಎಂಸಿಜಿ ವರ್ಗಕ್ಕೆ ಬದಲಾಯಿಸಬಹುದು ಎಂದು ನಿರೀಕ್ಷಿಸಲಾಗಿದೆ. ನಿಯಂತ್ರಕ ಅನುಮೋದನೆಗಳ ನಂತರ ರುಚಿ ಸೋಯಾ ಇಂಡಸ್ಟ್ರೀಸ್ ಲಿಮಿಟೆಡ್ ಹೆಸರನ್ನು ಪತಂಜಲಿ ಫುಡ್ಸ್ ಲಿಮಿಟೆಡ್ ಎಂದು ಬದಲಾಯಿಸಲಾಗುತ್ತದೆ. ಸ್ವಾಧೀನಪಡಿಸಿಕೊಂಡಿರುವ ಆಹಾರ ವ್ಯಾಪಾರವು ತುಪ್ಪ, ಜೇನುತುಪ್ಪ, ಮಸಾಲೆಗಳು, ಜ್ಯೂಸ್​ಗಳು ಮತ್ತು ಹಿಟ್ಟು ಸೇರಿದಂತೆ 21 ಉತ್ಪನ್ನಗಳನ್ನು ಒಳಗೊಂಡಿದೆ. ರುಚಿ ಸೋಯಾವು ಪತಂಜಲಿ ಆಯುರ್ವೇದಕ್ಕೆ ವಾರ್ಷಿಕ ರಾಯಲ್ಟಿ ಪಾವತಿಸುತ್ತದೆ. ಕಂಪೆನಿಯ ಮೂಲಗಳ ಪ್ರಕಾರ, ವರ್ಗಾವಣೆ ಒಪ್ಪಂದದ ಅಡಿಯಲ್ಲಿ ಉತ್ಪನ್ನಗಳ ಒಟ್ಟು ವಹಿವಾಟಿನ ಶೇಕಡಾ 1ರಷ್ಟು ಅಂದಾಜಿಸಲಾಗಿದೆ.

ಇದು ಸಾಲ-ಮುಕ್ತ ವರ್ಗಾವಣೆಯಾಗಿದೆ ಮತ್ತು ರುಚಿ ಸೋಯಾ ಆಂತರಿಕ ಸಂಚಯದ ಮೂಲಕ ಸ್ವಾಧೀನಪಡಿಸಿಕೊಳ್ಳಲು ಹಣವನ್ನು ನೀಡುತ್ತದೆ ಎಂದು ಅವರು ಹೇಳಲಾಗಿದೆ. “ಆಹಾರ ವಿಭಾಗದ ಎಲ್ಲ ಸ್ಥಿರ ಆಸ್ತಿಗಳು ಮತ್ತು ಕುಸಿತದ ಮಾರಾಟ ಆಧಾರದ ಮೇಲೆ ಸಂಬಂಧಿಸಿದ ಪ್ರಸ್ತುತ ಆಸ್ತಿಗಳ ಆಧಾರದಲ್ಲಿ 690 ಕೋಟಿ ರೂಪಾಯಿಗಳ ನ್ಯಾಯಯುತ ಮಾರುಕಟ್ಟೆ ಮೌಲ್ಯದಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ,” ಎಂದು ಕಂಪೆನಿಯು ವಿನಿಮಯ ಕೇಂದ್ರದ ಫೈಲಿಂಗ್​ನಲ್ಲಿ ತಿಳಿಸಿದೆ. ಪತಂಜಲಿ ಆಯುರ್ವೇದ ಮಂಡಳಿಯು ಮೇ 9ರಿಂದ ಜಾರಿಗೆ ಬರುವಂತೆ ಈ ಆಹಾರ ವ್ಯವಹಾರವನ್ನು ರುಚಿ ಸೋಯಾ ಇಂಡಸ್ಟ್ರೀಸ್‌ಗೆ ವರ್ಗಾಯಿಸಲು ಅನುಮೋದನೆ ನೀಡಿದೆ. ಬುಧವಾರದ ವಹಿವಾಟಿನಲ್ಲಿ ರುಚಿ ಸೋಯಾ ಶೇರುಗಳು ಶೇ 10ರಷ್ಟು ಏರಿಕೆ ಕಂಡು, 1,192.15 ರೂಪಾಯಿಯಲ್ಲಿ ಕೊನೆಗೊಂಡಿತು.

ಒಪ್ಪಂದದ ಭಾಗವಾಗಿ ರುಚಿ ಸೋಯಾ ಪದಾರ್ಥ (ಉತ್ತರಾಖಂಡದ ಹರಿದ್ವಾರ) ಮತ್ತು ನೇವಾಸಾ (ಮಹಾರಾಷ್ಟ್ರ)ದಲ್ಲಿ ಉತ್ಪಾದನಾ ಘಟಕಗಳನ್ನು ಪಡೆಯುತ್ತದೆ. ಇದು ಪತಂಜಲಿ ಆಯುರ್ವೇದ ಆಹಾರ ರೀಟೇಲ್ ವ್ಯಾಪಾರಕ್ಕೆ ಸಂಬಂಧಿಸಿದ ಉದ್ಯೋಗಿಗಳು, ಆಸ್ತಿಗಳು, ಒಪ್ಪಂದಗಳು, ಪರವಾನಗಿಗಳು ಮತ್ತು ಅನುಮೋದನೆಗಳು, ವಿತರಣೆ ಜಾಲ ಮತ್ತು ಗ್ರಾಹಕರ ವರ್ಗಾವಣೆ ಒಳಗೊಂಡಿರುತ್ತದೆ. ಆದರೆ ಇದು ಪತಂಜಲಿಯ ಬ್ರ್ಯಾಂಡ್, ಟ್ರೇಡ್‌ಮಾರ್ಕ್‌ಗಳು, ವಿನ್ಯಾಸಗಳು ಮತ್ತು ಕಾಪಿರೈಟ್ಸ್ ಹೊರತುಪಡಿಸುತ್ತದೆ. ವಹಿವಾಟು ಸದ್ಯಕ್ಕೆ ಸ್ವತ್ತುಗಳನ್ನು ಒಳಗೊಂಡಿರುತ್ತದೆ. ಇದು ಸಾಲಗಾರರು, ವಾಹನಗಳು, ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೊರತುಪಡಿಸುತ್ತದೆ ಎಂದು ಕಂಪೆನಿಯು ತನ್ನ ಷೇರು ವಿನಿಮಯ ಕೇಂದ್ರ ಫೈಲಿಂಗ್​ನಲ್ಲಿ ತಿಳಿಸಿದೆ.

ಮೂರು ಹಂತಗಳಲ್ಲಿ ಪಾವತಿ

ಮೊದಲ ಕಂತಿನಲ್ಲಿ ಒಟ್ಟು ಖರೀದಿಯ ಮೊತ್ತದ ಶೇ 15ರಷ್ಟು (ರೂ. 103.5 ಕೋಟಿ) ವ್ಯಾಪಾರ ವರ್ಗಾವಣೆ ಒಪ್ಪಂದದ ಕಾರ್ಯಗತ ಮಾಡುವುದರೊಂದಿಗೆ ಅಥವಾ ವ್ಯಾಪಾರ ವರ್ಗಾವಣೆ ಒಪ್ಪಂದವನ್ನು ಕಾರ್ಯಗತಗೊಳಿಸಿದ ಮೂರು ದಿನಗಳಲ್ಲಿ ಏಕಕಾಲದಲ್ಲಿ ಪಾವತಿಸಲಾಗುತ್ತದೆ. ಎರಡನೇ ಹಂತದಲ್ಲಿ, ವ್ಯಾಪಾರ ವರ್ಗಾವಣೆ ಒಪ್ಪಂದದ ಅಡಿಯಲ್ಲಿ ವ್ಯಾಖ್ಯಾನಿಸಲಾದ ಮುಕ್ತಾಯದ ದಿನಾಂಕದಂದು ಒಟ್ಟು ಖರೀದಿ ಮೊತ್ತದ ಶೇ 42.5ರಷ್ಟು (ರೂ. 293.25 ಕೋಟಿ) ಪಾವತಿಸಲಾಗುತ್ತದೆ. ಮೂರನೇ ಕಂತಿನಲ್ಲಿ ಒಟ್ಟು ಖರೀದಿ ಮೊತ್ತದ ಉಳಿದ ಶೇ.42.5ರಷ್ಟು (293.25 ಕೋಟಿ ರೂ.) ಪಾವತಿಸಲಾಗುವುದು. ಜುಲೈ 15 ರೊಳಗೆ ವಹಿವಾಟು ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ: ದಿವಾಳಿಯೆದ್ದ ಕಂಪನಿ ಖರೀದಿಸಲು ಪತಂಜಲಿ‌ಗೆ 1200 ಕೋಟಿ ಸಾಲ ನೀಡಿದ SBI ಅಸಲಿಯತ್ತು ಏನು?

ಪತಂಜಲಿಯ ಆಹಾರ ರೀಟೇಲ್ ವ್ಯಾಪಾರವು ರೂ 4,174 ಕೋಟಿ ವಹಿವಾಟು ಹೊಂದಿದೆ. ಇದು ಹಿಂದಿನ ಹಣಕಾಸು ವರ್ಷಕ್ಕಿಂತ ಶೇ 28ರಷ್ಟು ಹೆಚ್ಚಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಪತಂಜಲಿ ಆಯುರ್ವೇದ ವಹಿವಾಟು ಸುಮಾರು 10,605 ಕೋಟಿ ರೂಪಾಯಿಗಳಷ್ಟಿತ್ತು ಎಂದು ರುಚಿ ಸೋಯಾ ತನ್ನ ವಿನಿಮಯ ಫೈಲಿಂಗ್‌ನಲ್ಲಿ ತಿಳಿಸಿದ್ದಾರೆ. ಪತಂಜಲಿ ಆಯುರ್ವೇದವು ಕೂದಲಿನ ಆರೈಕೆ, ದಂತ ಆರೈಕೆ, ತ್ವಚೆ, ಔಷಧ ಮತ್ತು ಗಿಡಮೂಲಿಕೆಗಳಂಥ ವ್ಯವಹಾರಗಳನ್ನು ಉಳಿಸಿಕೊಳ್ಳುತ್ತದೆ. “ಆಹಾರ ವ್ಯವಹಾರವನ್ನು ಸ್ವಾಧೀನಪಡಿಸಿಕೊಳ್ಳಲು ಈ ಕಾರ್ಯತಂತ್ರದ ಉಪಕ್ರಮವು ತನ್ನ ಆಹಾರ ಉತ್ಪನ್ನಗಳ ಬಂಡವಾಳವನ್ನು ಬ್ರ್ಯಾಂಡ್‌ಗಳ ಶ್ರೇಣಿಯೊಂದಿಗೆ ಬಲಪಡಿಸುತ್ತದೆ ಮತ್ತು ಆದಾಯ ಹಾಗೂ EBIDTA ಬೆಳವಣಿಗೆಗೆ ಕೊಡುಗೆ ನೀಡುತ್ತದೆ,” ಎಂದು ಕಂಪೆನಿ ಹೇಳಿದೆ. ಕಂಪೆನಿಯು ತನ್ನ ಫಾಲೋ-ಆನ್ ಪಬ್ಲಿಕ್ ಆಫರ್ (FPO) ಸಮಯದಲ್ಲಿ ಷೇರುದಾರರಿಗೆ ಬದ್ಧವಾಗಿರುವ ಬಲವಾದ FMCG ಕಂಪೆನಿಯಾಗಿ ತನ್ನ ಸ್ಥಾನವನ್ನು ಮತ್ತೊಮ್ಮೆ ಹೇಳಿರುವುದಾಗಿ ಅದು ಸೇರಿಸಲಾಗಿದೆ.

ಹೂಡಿಕೆದಾರರಿಗೆ ಬರೆದಿರುವ ಟಿಪ್ಪಣಿಯಲ್ಲಿ ರುಚಿ ಸೋಯಾ, “PALನ (ಪತಂಜಲಿ ಆಯುರ್ವೇದ) ಆಹಾರ ವ್ಯಾಪಾರ ಬಂಡವಾಳವನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ರುಚಿಯ ಆಹಾರ ಪೋರ್ಟ್‌ಫೋಲಿಯೊ ಪ್ರಸಕ್ತ ಹಣಕಾಸು ವರ್ಷದಲ್ಲಿ (FY23) ಶೇ 6ಕ್ಕೆ ಹೋಲಿಸಿದರೆ ಒಟ್ಟು ಆದಾಯದ ಸರಿಸುಮಾರು ಶೇ 18ರಷ್ಟು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. FY22ರಲ್ಲಿ ಇದು ಮಾರ್ಜಿನ್ ಪ್ರೊಫೈಲ್‌ನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ರುಚಿಯನ್ನು ಹೆಚ್ಚಾಗಿ ಸರಕು-ಆಧಾರಿತ ಕಂಪೆನಿಯಿಂದ ಭಾರತದ ಪ್ರಮುಖ ಆಹಾರ ಕಂಪೆನಿಗೆ ಮರು-ಸ್ಥಾನಗೊಳಿಸುತ್ತದೆ. ಪತಂಜಲಿ ಆಹಾರ ವ್ಯಾಪಾರವು ಉದ್ಯಮದ ಬೆಳವಣಿಗೆಗಿಂತ 2- 2.5 ಪಟ್ಟು ಬೆಳವಣಿಗೆ ಆಗುತ್ತಿದೆ ಎಂದು ಟಿಪ್ಪಣಿ ಹೇಳಿದೆ, ಉದ್ಯಮದ ಬೆಳವಣಿಗೆಯು ಶೇಕಡಾ 11 ರಷ್ಟಿದೆ.

ರುಚಿ ಮತ್ತು ಪತಂಜಲಿ ಆಹಾರ ವ್ಯಾಪಾರದ ಸಂಯೋಜಿತ ಆಹಾರ ಪೋರ್ಟ್‌ಫೋಲಿಯೊ FY23ರಲ್ಲಿ 6,600ರಿಂದ 6,800 ಕೋಟಿ ಆದಾಯವನ್ನು ದಾಟುತ್ತದೆ ಎಂದು ಅಂದಾಜಿಸಲಾಗಿದೆ. “ಸುಮಾರು ಶೇ 25ರ CAGRನ ಬೆಳವಣಿಗೆಯ ಅಂದಾಜಿನ ಪ್ರಕಾರ, ರುಚಿಯ ಸಂಯೋಜಿತ ಆಹಾರ ಬಂಡವಾಳವು ಮುಂದಿನ ಐದು ವರ್ಷಗಳಲ್ಲಿ ಸ್ಥಿರ ಬೆಲೆಯಲ್ಲಿ (ತೈಲವನ್ನು ಹೊರತುಪಡಿಸಿ) 22,000 ಕೋಟಿ ರೂಪಾಯಿಗಳ ಆದಾಯವನ್ನು ದಾಟುತ್ತದೆ ಎಂದು ನಿರೀಕ್ಷಿಸಲಾಗಿದೆ,” ಎಂಬುದಾಗಿ ಹೂಡಿಕೆದಾರರ ಟಿಪ್ಪಣಿ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ