
ನವದೆಹಲಿ, ಜುಲೈ 17: ಬಾಬಾ ರಾಮದೇವ್ ನೇತೃತ್ವದ ಪತಂಜಲಿ ಫೂಡ್ಸ್ ಸಂಸ್ಥೆ (Patanjali Foods) ನಿರೀಕ್ಷೆಯಂತೆ ತನ್ನ ಮಂಡಳಿ ಸಭೆಯಲ್ಲಿ ಬೋನಸ್ ಷೇರು (Bonus Shares) ವಿತರಿಸುವ ಕ್ರಮಕ್ಕೆ ಅನುಮೋದನೆ ನೀಡಿದೆ. 2:1 ಅನುಪಾತದಲ್ಲಿ ಬೋನಸ್ ಷೇರು ವಿತರಣೆಗೆ ಶಿಫಾರಸು ಮಾಡಲಾಗಿದೆ. ಬೋನಸ್ ಷೇರು ಕ್ರಮ ಜಾರಿಯಾದಾಗ 2 ರೂ ಮುಖಬೆಲೆಯ ಪ್ರತೀ ಷೇರಿಗೂ 2 ರೂ ಮುಖಬೆಲೆ ಎರಡು ಹೆಚ್ಚುವರಿ ಷೇರುಗಳನ್ನು ನೀಡಲಾಗುತ್ತದೆ. ಆದರೆ, ವಿತರಣೆ ದಿನಾಂಕ ಅಥವಾ ರೆಕಾರ್ಡ್ ಡೇಟ್ ಯಾವಾಗ ಎಂದು ತಿಳಿಸಲಾಗಿಲ್ಲ. ಈ ವಿಷಯವನ್ನು ಸಂಸ್ಥೆಯ ಇವತ್ತು ತನ್ನ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ.
ನೀವು 50 ಪತಂಜಲಿ ಫುಡ್ಸ್ ಷೇರುಗಳನ್ನು ಹೊಂದಿದ್ದರೆ, ನಿಮಗೆ 100 ಷೇರು ಹೆಚ್ಚುವರಿಯಾಗಿ ಸಿಗುತ್ತದೆ. ನಿಮ್ಮ ಪತಂಜಲಿ ಷೇರುಗಳ ಪ್ರಮಾಣ 150ಕ್ಕೆ ಏರುತ್ತದೆ. ಪತಂಜಲಿ ಫೂಡ್ಸ್ನ ನಿರ್ದೇಶಕರ ಮಂಡಳಿಯಿಂದ ಅನುಮೋದನೆಯಾಗಿರುವ ಬೋನಸ್ ಷೇರು ಕ್ರಮವು ಷೇರುದಾರರಿಂದ ಅನುಮೋದನೆಗೊಂಡ ಬಳಿಕ ಜಾರಿಯಾಗುತ್ತದೆ.
ಇದನ್ನೂ ಓದಿ: ಎಫ್ಎಂಸಿಜಿ ಮಾರುಕಟ್ಟೆಯ ಕಿಂಗ್ ಮಾತ್ರವಲ್ಲ, ಇತರ ಕ್ಷೇತ್ರಗಳಲ್ಲೂ ಮಿಂಚುತ್ತಿದೆ ಪತಂಜಲಿ
ಪತಂಜಲಿ ಫೂಡ್ಸ್ ಸಂಸ್ಥೆಯಲ್ಲಿ ಸದ್ಯ ಇರುವ ಷೇರುಗಳ ಸಂಖ್ಯೆ 36,06,31,414 (36 ಕೋಟಿ) ಇದೆ. ಬೋನಸ್ ಸ್ಕೀಮ್ ಅಡಿಯಲ್ಲಿ ಅದು 72,50,12,628 (72.50 ಕೋಟಿ) ಹೊಸ ಈಕ್ವಿಟಿ ಷೇರುಗಳನ್ನು ವಿತರಿಸಲಿದೆ. ಅದಾದ ಬಳಿಕ ಒಟ್ಟು ಷೇರು ಸಂಖ್ಯೆ 108.75 ಕೋಟಿಗೆ ಏರಲಿದೆ. ಒಂದು ಷೇರಿನ ಫೇಸ್ ವ್ಯಾಲ್ಯೂ 2 ರೂ ಎಂದಿಟ್ಟುಕೊಂಡರೆ ಬೋನಸ್ ಷೇರುಗಳ ವಿತರಣೆ ಬಳಿಕ ಕಂಪನಿಯ ಷೇರು ಬಂಡವಾಳ 145 ಕೋಟಿ ರೂನಿಂದ 217.50 ಕೋಟಿ ರೂಗೆ ಏರಲಿದೆ.
ಪತಂಜಲಿ ಫೂಡ್ಸ್ ಕಂಪನಿ ಪ್ರತೀ ಷೇರಿಗೆ ಎರಡು ಹೆಚ್ಚುವರಿ ಷೇರು ನೀಡಿದರೂ ಅದರ ಒಟ್ಟಾರೆ ಮಾರುಕಟ್ಟೆ ಬಂಡವಾಳದಲ್ಲಿ ಏರಿಕೆ ಆಗುವುದಿಲ್ಲ. ಪ್ರತೀ ಷೇರಿನ ಮೌಲ್ಯವನ್ನು ಹೆಚ್ಚುವರಿ ಷೇರುಗಳಿಗೆ ಅನುಗುಣವಾಗಿ ತಗ್ಗಿಸಲಾಗುತ್ತದೆ. ಒಂದು ಷೇರಿಗೆ 1,900 ರೂ ಬೆಲೆ ಇತ್ತೆಂದರೆ, ಎರಡು ಬೋನಸ್ ಷೇರು ಸೇರಿ, ಮೂರು ಷೇರುಗಳ ಒಟ್ಟು ಮೌಲ್ಯ 1,900 ರೂ ಮಾತ್ರವೇ ಇರುತ್ತದೆ. ಒಂದು ಷೇರಿನ ಮೌಲ್ಯ 633.33 ರೂ ಆಗಬಹುದು.
ಇದನ್ನೂ ಓದಿ: ಭಾರತದಲ್ಲಿ ಖಾದ್ಯ ಎಣ್ಣೆ ಬೆಲೆ ಇಳಿಕೆಗೆ, ಸ್ವಾವಲಂಬನೆಗೆ ಪತಂಜಲಿ ಮಾಸ್ಟರ್ ಪ್ಲಾನ್; ಮಲೇಷ್ಯನ್ ಕಂಪನಿ ಜೊತೆ ಡೀಲ್
ಆದರೆ, ಗಮನಿಸಬೇಕಾದ ಸಂಗತಿ ಎಂದರೆ ಪತಂಜಲಿ ಫೂಡ್ಸ್ ಸಂಸ್ಥೆ ಬೋನಸ್ ಷೇರು ವಿತರಿಸಿದರೂ ಫೇಸ್ ವ್ಯಾಲ್ಯೂವನ್ನು ತಗ್ಗಿಸಲಾಗಿಲ್ಲ. 2 ರೂ ಫೇಸ್ ವ್ಯಾಲ್ಯೂ ಮುಂದುವರಿಯುತ್ತದೆ. ಇದು ಪತಂಜಲಿ ಸಂಸ್ಥೆಯ ಆರ್ಥಿಕ ಆರೋಗ್ಯವನ್ನು ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತದೆ.
ಬೋನಸ್ ಷೇರು ವಿತರಣೆ ಮಾಡಲು ಯೋಚಿಸಲಾಗುತ್ತಿದೆ ಎನ್ನುವ ಸುದ್ದಿ ಹೊರ ಬಂದ ಬೆನ್ನಲ್ಲೇ ಕಳೆದ ಒಂದು ವಾರದಿಂದ ಪತಂಜಲಿ ಫೂಡ್ಸ್ ಷೇರುಬೆಲೆ ಸತತವಾಗಿ ಏರುತ್ತಿದೆ. ಇವತ್ತೂ ಕೂಡ ಶೇ. 2ರಷ್ಟು ಏರಿಕೆ ಆಗಿದೆ. ಗುರುವಾರ ಟ್ರೇಡಿಂಗ್ ಅಂತ್ಯದಲ್ಲಿ ಅದರ ಬೆಲೆ 1891 ರೂ ಮುಟ್ಟಿತ್ತು. ಒಂದು ಹಂತದಲ್ಲಿ ಇವತ್ತು ಬೆಲೆ 1,913 ರುವರೆಗೂ ಹೋಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ