
ನವದೆಹಲಿ, ಡಿಸೆಂಬರ್ 30: ಪತಂಜಲಿ ಫುಡ್ಸ್ (Patanjali foods) ಷೇರುಬೆಲೆ ಇವತ್ತು ಎರಡಕ್ಕೂ ಹೆಚ್ಚು ರೂನಷ್ಟು ಏರಿದೆ. 544 ರೂಗೆ ಇದು ಏರಿದೆ. ಐದು ವರ್ಷದ ಹಿಂದೆ ಪತಂಜಲಿ ಫುಡ್ಸ್ ಸಂಸ್ಥೆಯು ಷೇರು ಮಾರುಕಟ್ಟೆಯನ್ನು ಪ್ರವೇಶಿಸಿದಾಗಿನಿಂದ, ಹೂಡಿಕೆದಾರರಿಗೆ 55% ಕ್ಕಿಂತ ಹೆಚ್ಚು ಲಾಭವನ್ನು ತಂದುಕೊಟ್ಟಿದೆ. ಕಳೆದ ಐದು ವರ್ಷದ ಅಂಕಿ ಅಂಶ ಇದು. ಹಿಂದೂಸ್ತಾನ್ ಯೂನಿಲಿವರ್, ನೆಸ್ಲೆ ಮತ್ತು ಡಾಬರ್ ಸೇರಿದಂತೆ ದೇಶದ ಪ್ರಮುಖ FMCG ಕಂಪನಿಗಳ ಷೇರುಗಳೂ ಸಹ ಪತಂಜಲಿ ರೀತಿಯಲ್ಲಿ ಲಾಭವನ್ನು ನೀಡಲು ಸಾಧ್ಯವಾಗಿಲ್ಲ. HUL ಮತ್ತು ಡಾಬರ್ ಇಂಡಿಯಾ ಷೇರುಗಳು ಕಳೆದ 5 ವರ್ಷದಲ್ಲಿ ಹೂಡಿಕೆದಾರರಿಗೆ ನಕಾರಾತ್ಮಕ ಆದಾಯ ನೀಡಿವೆ. ನೆಸ್ಲೆ ಇಂಡಿಯಾ ಐದು ವರ್ಷಗಳಲ್ಲಿ 38% ಕ್ಕಿಂತ ಹೆಚ್ಚು ಆದಾಯ ಕೊಟ್ಟಿದೆ. ಪತಂಜಲಿ ಷೇರುಗಳು ಇವೆಲ್ಲಕ್ಕಿಂತಲೂ ಹೆಚ್ಚಿನ ರಿಟರ್ನ್ ಕೊಟ್ಟಿದೆ. ಅದರ ಬ್ಯುಸಿನೆಸ್ ಕೂಡ ಗಮನಾರ್ಹವಾಗಿ ಹೆಚ್ಚಿದೆ. ಪತಂಜಲಿ ಫುಡ್ಸ್‌ನ ಷೇರುಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಲಾಭ ಕೊಡುವ ನಿರೀಕ್ಷೆ ಇದೆ.
ಕಳೆದ ಐದು ವರ್ಷಗಳಲ್ಲಿ, ಪತಂಜಲಿ ಫುಡ್ಸ್‌ನ ಷೇರುಗಳು ದೊಡ್ಡ ಕಂಪನಿಗಳಿಗೆ ಹೋಲಿಸಿದರೆ ಹೂಡಿಕೆದಾರರಿಗೆ ಗಣನೀಯ ಲಾಭ ನೀಡಿವೆ. ಎನ್ಎಸ್ಇ ದತ್ತಾಂಶದ ಪ್ರಕಾರ, ಪತಂಜಲಿ ಫುಡ್ಸ್‌ನ ಷೇರುಗಳು ಹೂಡಿಕೆದಾರರಿಗೆ ಸರಿಸುಮಾರು 57% ಲಾಭವನ್ನು ನೀಡಿವೆ. ಐದು ವರ್ಷಗಳ ಹಿಂದೆ, ಕಂಪನಿಯ ಷೇರುಬೆಲೆ ಸುಮಾರು ₹347 ಇತ್ತು. ಅದಾದ ಬಳಿಕ 197 ರೂಗಿಂತ ಹೆಚ್ಚು ವೃದ್ಧಿಸಿದೆ. ಸೋಮವಾರ ಟ್ರೇಡಿಂಗ್ ಅಂತ್ಯದಲ್ಲಿ ಅದರ ಬೆಲೆ 540 ರೂ ಇತ್ತು. ಸೋಮವಾರದ ವಹಿವಾಟಿನ ಒಂದು ಹಂತದಲ್ಲಿ ಬೆಲೆ 547 ರೂವರೆಗೆ ಬೆಲೆ ಹೋಗಿತ್ತು. ಕಳೆದ 52 ವಾರಗಳ ಕನಿಷ್ಠವಾದ 521 ರೂಗಿಂತ ಉತ್ತಮ ಬೆಲೆ ಹೊಂದಿದೆ. ಮುಂದಿನ ವರ್ಷ ಅದರ ಗರಿಷ್ಠ ಮಟ್ಟವಾದ 670 ರೂ ಅನ್ನು ದಾಟಿದರೂ ಅಚ್ಚರಿ ಇಲ್ಲ ಎಂಬುದು ತಜ್ಞರ ಅಂದಾಜು.
ಇದನ್ನೂ ಓದಿ: ಆಯುರ್ವೇದ ಬಳಸಿ, ದುಬಾರಿ ಚಿಕಿತ್ಸೆಗೆ ಮುಕ್ತಿ ಕೊಡಿ; ಕೈಗೆಟುಕುವ ಬೆಲೆಗೆ ಆನ್ಲೈನ್ನಲ್ಲೇ ಪತಂಜಲಿ ಔಷಧಗಳು
ಮತ್ತೊಂದೆಡೆ, ದೇಶದ ಅತಿದೊಡ್ಡ FMCG ಕಂಪನಿಯಾದ ಹಿಂದೂಸ್ತಾನ್ ಯೂನಿಲಿವರ್ ಷೇರುಗಳು ಕಳೆದ ಐದು ವರ್ಷಗಳಲ್ಲಿ ಕುಸಿತ ಕಂಡಿವೆ. ಕಳೆದ ಐದು ವರ್ಷಗಳಲ್ಲಿ ಈ ಕಂಪನಿಯ ಷೇರುಗಳು NSE ನಲ್ಲಿ 4% ಕ್ಕಿಂತ ಹೆಚ್ಚು ಕುಸಿದಿದೆ ಎಂದು ಡೇಟಾ ತೋರಿಸುತ್ತದೆ. ಎಚ್ಯುಎಲ್ನ ಷೇರುಗಳು ಕಳೆದ ಐದು ವರ್ಷಗಳಿಂದ ₹2,100 ರಿಂದ ₹2,200 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸುತ್ತಿವೆ. ಸೆಪ್ಟೆಂಬರ್ 2024 ರಲ್ಲಿ, ಕಂಪನಿಯ ಷೇರುಗಳು ₹2,900 ರ ಗಡಿಯನ್ನು ಮೀರಿದ್ದವಾದರೂ, ಅಂದಿನಿಂದ ಹಿನ್ನಡೆ ಕಾಣುತ್ತಲೇ ಇವೆ.
ಮತ್ತೊಂದೆಡೆ, ಡಾಬರ್ ಷೇರು ಕೂಡ ಹೂಡಿಕೆದಾರರಿಗೆ ನಷ್ಟವನ್ನುಂಟುಮಾಡಿದೆ. ಕಳೆದ ಐದು ವರ್ಷಗಳಲ್ಲಿ ಕಂಪನಿಯ ಷೇರುಗಳು ಶೇಕಡಾ 8 ಕ್ಕಿಂತ ಹೆಚ್ಚು ಕುಸಿದಿವೆ. ಇದರ ಷೇರುಬೆಲೆ ಪ್ರಸ್ತುತ 8 ಪ್ರತಿಶತದಷ್ಟು ಕುಸಿದು 490.10 ರೂ.ಗಳಲ್ಲಿ ವಹಿವಾಟು ನಡೆಸುತ್ತಿದೆ. ಸೆಪ್ಟೆಂಬರ್ 2024 ರಲ್ಲಿ ಕಂಪನಿಯ ಷೇರುಬೆಲೆ 670 ರೂ ತಲುಪಿದ್ದರೂ, ಅಂದಿನಿಂದ ಹಿನ್ನಡೆ ಕಂಡಿದೆ. ಐದು ವರ್ಷಗಳ ಹಿಂದೆ, ಹಿಂದೂಸ್ತಾನ್ ಯುನಿಲಿವರ್ನ ಷೇರುಬೆಲೆ ರೂ. 534 ಕ್ಕಿಂತ ಹೆಚ್ಚು ಇತ್ತು. ಅದಾದ ಬಳಿಕ 44 ರೂ ಕುಸಿದಿದೆ.
ಇದನ್ನೂ ಓದಿ: ಷೇರುಪೆಟೆಯಲ್ಲಿ ಪತಂಜಲಿ ಫುಡ್ಸ್; ಹೂಡಿಕೆದಾರರಿಗೆ 3,900 ಕೋಟಿ ರೂ ಗಳಿಕೆ
ಕಳೆದ ಐದು ವರ್ಷಗಳಲ್ಲಿ ನೆಸ್ಲೆ ಇಂಡಿಯಾದ ಹೂಡಿಕೆದಾರರಿಗೆ ಸಕಾರಾತ್ಮಕ ಲಾಭ ನೀಡಿದ್ದರೂ, ಅದು ಪತಂಜಲಿ ಷೇರಿಗಿಂತ ಕಡಿಮೆಯೇ. ಕಳೆದ ಐದು ವರ್ಷಗಳಲ್ಲಿ ನೆಸ್ಲೆ ತನ್ನ ಹೂಡಿಕೆದಾರರಿಗೆ 39% ಲಾಭವನ್ನು ಒದಗಿಸಿದೆ. ಪ್ರಸ್ತುತ, ಕಂಪನಿಯ ಷೇರು ₹1,283.70 ನಲ್ಲಿ ವಹಿವಾಟು ನಡೆಸುತ್ತಿದೆ. ಈ ಸಮಯದಲ್ಲಿ, ಕಂಪನಿಯ ಷೇರು ಸುಮಾರು ₹359 ರಷ್ಟು ಏರಿಕೆ ಕಂಡಿದೆ. ಸೆಪ್ಟೆಂಬರ್ 2024 ರ ಕೊನೆಯ ವಾರದಲ್ಲಿ, ಕಂಪನಿಯ ಷೇರು ಸುಮಾರು ₹1,400 ತಲುಪಿದೆ. ಇದೇ ವೇಳೆ ಪತಂಜಲಿ ಫುಡ್ಸ್ ಷೇರುಬೆಲೆ ಶೇ. 50ಕ್ಕಿಂತಲೂ ಹೆಚ್ಚಿನ ರಿಟರ್ನ್ ಅನ್ನು ಐದು ವರ್ಷದಲ್ಲಿ ನೀಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ