ಸೆನ್ಸೆಕ್ಸ್, ನಿಫ್ಟಿ ಕುಸಿತದ ನಡುವೆ ಪತಂಜಲಿ ಷೇರುಗಳಿಗೆ 3 ದಿನ ಹೆಚ್ಚಿದ ಬೇಡಿಕೆ; ಹೂಡಿಕೆದಾರರಿಗೆ ಸಾವಿರ ಕೋಟಿ ರೂ ಲಾಭ
Patanjali Foods shares gain for 3 days:ಈ ವಾರದ ಕೊನೆಯ ಮೂರು ವಹಿವಾಟು ದಿನಗಳಲ್ಲಿ (ಜ. 21-23) ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ. 0.70 ಕ್ಕಿಂತ ಹೆಚ್ಚು ಕುಸಿದಿದ್ದರೆ, ಪತಂಜಲಿ ಫುಡ್ಸ್ ಷೇರುಗಳು ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿವೆ. ಈ ಅವಧಿಯಲ್ಲಿ, ಕಂಪನಿಯ ಷೇರುಗಳು ಸುಮಾರು ಶೇ. 2 ರಷ್ಟು ಏರಿಕೆಯಾಗಿವೆ. ಅದರ ಮಾರುಕಟ್ಟೆ ಬಂಡವಾಳದಲ್ಲಿ 1,000 ಕೋಟಿ ರೂಗಿಂತ ಹೆಚ್ಚು ಏರಿಕೆ ಆಗಿದೆ.

ಷೇರು ಮಾರುಕಟ್ಟೆ (Share Market) ನಿರಂತರ ಹಿನ್ನಡೆ ಅನುಭವಿಸುತ್ತಿದ್ದರೂ, ಕಳೆದ ವಾರ ಸತತ ಮೂರು ವಹಿವಾಟು ದಿನಗಳಲ್ಲಿ ಪತಂಜಲಿ ಫುಡ್ಸ್ (Patanjali Foods) ಸಂಸ್ಥೆಯ ಷೇರುಗಳು ಲಾಭ ಕಂಡವು. ಕಂಪನಿಯ ಷೇರುಗಳು ಮೂರು ವಹಿವಾಟು ದಿನಗಳಲ್ಲಿ ಸರಿಸುಮಾರು ಶೇ. 2 ರಷ್ಟು ಏರಿಕೆಯಾದರೆ, ಅದೇ ವೇಳೆ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ. 0.70 ರಷ್ಟು ಕುಸಿದಿವೆ. ಒಂದೆಡೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಮೂರು ದಿನಗಳಲ್ಲಿ ಒಟ್ಟಾರೆ ನಷ್ಟ ಅನುಭವಿಸಿದ್ದಾರೆ. ಮತ್ತೊಂದೆಡೆ, ಪತಂಜಲಿ ತನ್ನ ಹೂಡಿಕೆದಾರರಿಗೆ 1,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಲಾಭ ದಕ್ಕಿಸಿದೆ. ಪತಂಜಲಿಯ ಷೇರುಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಕಾಣಬಹುದು ಎಂಬುದು ತಜ್ಞರ ಎಣಿಕೆ. ಕುಸಿತ ಕಾಣುತ್ತಿರುವ ಷೇರು ಮಾರುಕಟ್ಟೆಯಲ್ಲಿ ಪತಂಜಲಿ ಫುಡ್ಸ್ ಷೇರುಗಳು ಹೇಗೆ ಕಾರ್ಯನಿರ್ವಹಿಸಿದವು ಎಂಬುದರ ವಿವರ ಇಲ್ಲಿದೆ.
ಪತಂಜಲಿ ಷೇರು ಬೆಲೆ ಏರಿಕೆ
ಈ ವಾರದ ಕೊನೆಯ ಮೂರು ವಹಿವಾಟು ದಿನಗಳಲ್ಲಿ ಪತಂಜಲಿ ಫುಡ್ಸ್ ಷೇರುಗಳು ಏರಿಕೆ ಕಂಡವು. ಜನವರಿ 20 ರಂದು ಕಂಪನಿಯ ಷೇರುಗಳು ₹502 ಇತ್ತು ಎಂದು ಡೇಟಾ ತೋರಿಸುತ್ತದೆ. ನಂತರ, ಜನವರಿ 21, 22 ಮತ್ತು 23 ರಂದು ಕಂಪನಿಯ ಷೇರುಬೆಲೆ ₹511.80 ಕ್ಕೆ ಏರಿವೆ. ಅಂದರೆ ಶೇ. 1.95 ರಷ್ಟು ಮೌಲ್ಯ ಏರಿಕೆಯಾಗಿದೆ. ಅಷ್ಟಕ್ಕೆ ನಿಲ್ಲದ ಪತಂಜಲಿ ಷೇರುಬೆಲೆ ಶುಕ್ರವಾರ ₹515 ರ ಗರಿಷ್ಠ ಮಟ್ಟವನ್ನು ತಲುಪಿವೆ. ಶುಕ್ರವಾರ ಷೇರು ಮಾರುಕಟ್ಟೆ ವಹಿವಾಟು ಮುಚ್ಚುವ ಹೊತ್ತಿಗೆ ಕಂಪನಿಯ ಷೇರುಗಳು ಸ್ವಲ್ಪ ಲಾಭದೊಂದಿಗೆ ಮುಕ್ತಾಯಗೊಂಡಿದ್ದವು.
ಮೂರು ದಿನಗಳಲ್ಲಿ ಪತಂಜಲಿ ಷೇರು ಹೂಡಿಕೆದಾರರಿಗೆ ಸಿಕ್ಕ ಲಾಭ?
ಸತತ ಮೂರು ವಹಿವಾಟು ದಿನಗಳ ಲಾಭದಿಂದಾಗಿ ಕಂಪನಿಯ ವ್ಯಾಲ್ಯುಯೇಶನ್ ಹೆಚ್ಚಾಗಿದೆ. ಜನವರಿ 20 ರಂದು ಕಂಪನಿಯ ಮಾರುಕಟ್ಟೆ ಬಂಡವಾಳ ₹54,608.98 ಕೋಟಿ ತಲುಪಿತ್ತು. ಜನವರಿ 23 ರಂದು (ಶುಕ್ರವಾರ) ಮಾರುಕಟ್ಟೆ ಮುಕ್ತಾಯದ ವೇಳೆಗೆ ಕಂಪನಿಯ ಮಾರ್ಕೆಟ್ ಕ್ಯಾಪಿಟಲ್ ₹55,675.05 ಕೋಟಿಗೆ ತಲುಪಿದೆ. ಅಂದರೆ, ಪತಂಜಲಿ ಫುಡ್ಸ್ನ ವ್ಯಾಲ್ಯುಯೇಶನ್ ಈ ಮೂರು ದಿನಗಳಲ್ಲಿ ಒಟ್ಟು ₹1,066.07 ಕೋಟಿ ಹೆಚ್ಚಾದಂತಾಗಿದೆ.
ಇದನ್ನೂ ಓದಿ: ಸಾಮಾನ್ಯ ಹೂಡಿಕೆದಾರರು ಈ ಬಾರಿಯ ಬಜೆಟ್ನಲ್ಲಿ ಗಮನಿಸಬೇಕಾದ ಸಂಗತಿಗಳಿವು
ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ
ಪತಂಜಲಿ ಏರಿಕೆ ಕಾಣುತ್ತಿರುವ ಹೊತ್ತಲ್ಲೇ ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ಕಂಡಿದ್ದು ಗಮನಾರ್ಹ. ಜನವರಿ 20 ರಂದು ಸೆನ್ಸೆಕ್ಸ್ 82,180.47 ಅಂಕಗಳಲ್ಲಿತ್ತು, ಜನವರಿ 23 ರಂದು 81,537.70 ಕ್ಕೆ ಇಳಿದಿದೆ ಎಂದು ಡೇಟಾ ತೋರಿಸುತ್ತದೆ. ಇದರರ್ಥ ಈ ಅವಧಿಯಲ್ಲಿ ಸೆನ್ಸೆಕ್ಸ್ ಶೇಕಡಾ 0.78 ರಷ್ಟು ಕುಸಿದಿದೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ಪ್ರಮುಖ ಸೂಚ್ಯಂಕವಾದ ನಿಫ್ಟಿ ಜನವರಿ 20 ರಂದು 25,232.50 ಕ್ಕೆ ತಲುಪಿತ್ತು ಮತ್ತು ಜನವರಿ 23 ರಂದು ಶೇಕಡಾ 0.73 ರಷ್ಟು ಕುಸಿತದೊಂದಿಗೆ 25,048.65 ಕ್ಕೆ ಮುಕ್ತಾಯವಾಯಿತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




