Bank Nominee: ನಾಮಿನಿ ಯಾಕೆ ಬೇಕು? ಹತ್ತು ನಿಮಿಷ ಕೆಲಸಕ್ಕೆ ಹತ್ತಾರು ದಿನ ಅಲೆದಾಡಬೇಕಾದೀತು ಹುಷಾರ್
Importance of Nomination: ಬ್ಯಾಂಕ್ ಖಾತೆಯಲ್ಲಿ ಹಣ ಎಷ್ಟೇ ಇರಲಿ, ಆದರೆ, ನಾಮಿನಿ ಹೆಸರಿಸುವುದನ್ನು ಖಂಡಿತ ಮರೆಯದಿರಿ. ನಿಮ್ಮ ಹಣ ಅರ್ಹ ವಾರಸುದಾರರಿಗೆ ತಲುಪಲು ನಾಮಿನಿ ಬೇಕು. ನಾಮಿನಿ ಎಂದಾಕ್ಷಣ ಹಣಕ್ಕೆ ವಾರಸುದಾರನೆಂದಲ್ಲ. ನೀವು ಸತ್ತ ಬಳಿಕ ನಿಮ್ಮ ಹಣ ಹಂಚಿಕೆ ನಿರ್ವಹಿಸುವ ನಂಬಿಕಸ್ಥರಾಗಿರಬೇಕು. ನಾಮಿನಿ ಇಲ್ಲದಿದ್ದರೆ ವಾರಸುದಾರರು ಹಣ ಪಡೆಯಲು ಸಾಕಷ್ಟು ಯಾತನಾತ್ಮಕ ಎನಿಸುವ ಕಾನೂನು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.
ಬ್ಯಾಂಕ್ ಖಾತೆಯನ್ನೂ ಒಳಗೊಂಡಂತೆ ಯಾವುದೇ ಹಣಕಾಸು ಯೋಜನೆಯಲ್ಲೂ ನಾಮಿನಿ (bank nominee) ಹೆಸರಿಸುವ ಆಯ್ಕೆ ಇರುತ್ತದೆ. ಕೆಲ ಕಡೆ ನಾಮಿನಿ ಹೆಸರಿಸುವುದು ಕಡ್ಡಾಯ ಇರುತ್ತದೆ. ಮತ್ತೆ ಕೆಲ ಕಡೆ ಐಚ್ಛಿಕ. ಸಾಕಷ್ಟು ಸಂದರ್ಭದಲ್ಲಿ ಬ್ಯಾಂಕ್ ಖಾತೆದಾರರು ಬೇರೆ ಬೇರೆ ಕಾರಣಕ್ಕೆ ನಾಮಿನಿ ಹೆಸರಿಸಿರುವುದಿಲ್ಲ. ಅಥವಾ ನಾಮಿನಿ ಅಪ್ಡೇಟ್ ಮಾಡಿರುವುದಿಲ್ಲ. ಇದರಿಂದ ಖಾತೆದಾರ ಮೃತಪಟ್ಟ ಬಳಿಕ ಅವರ ಹಣ ವರ್ಗಾವಣೆ ಕಾರ್ಯ ಕಷ್ಟವಾಗುತ್ತದೆ.
ನಾಮಿನಿ ಯಾಕೆ ಬೇಕು?
ಖಾತೆದಾರ ಮೃತಪಟ್ಟಾಗ ಅವರ ಹಣ ಯಾರಿಗೆ ಸೇರಬೇಕು ಎಂಬುದನ್ನು ನಿರ್ಧರಿಸುವ ಕಾರ್ಯಕ್ಕೆ ನಾಮಿನಿ ಬೇಕು. ನಾಮಿನಿ ಎಂದರೆ ವಾರಸುದಾರರೇ ಎಂದರ್ಥವಲ್ಲ. ತಮ್ಮ ಸಾವಿನ ಬಳಿಕ ಹಣವನ್ನು ಅರ್ಹ ವಾರಸುದಾರರಿಗೆ ಹಂಚಲು ತಾನು ನಂಬುವ ವ್ಯಕ್ತಿಯನ್ನು ನಾಮಿನಿಯಾಗಿ ಹೆಸರಿಸಬಹುದು. ಆ ನಾಮಿನಿಯೇ ವಾರಸುದಾರರಾಗಿರಲೂ ಬಹುದು.
ಇದನ್ನೂ ಓದಿ: ಪವರ್ ಆಫ್ ಕಾಂಪೌಂಡಿಂಗ್: ನಿಮ್ಮ ಸಂಪತ್ತು ವೃದ್ಧಿಸುವ ವಿಸ್ಮಯಕಾರಿ ಹೂಡಿಕೆ ಅಂಶ
ನಾಮಿನಿ ಹೆಸರಿಸದೇ ಇದ್ದರೆ ಏನಾಗುತ್ತದೆ?
ಒಂದು ಬ್ಯಾಂಕ್ ಖಾತೆಗೆ ನಾಮಿನಿಯೇ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆ ಖಾತೆಯಲ್ಲಿರುವ ಹಣ ಪಡೆಯಲು ವಾರಸುದಾರರು ಕಷ್ಟಪಡಬೇಕಾಗುತ್ತದೆ. ನಾಮಿನಿ ಇದ್ದಾಗ ಅವರು ಯಾರಿಗೆ ಹಣ ಹೋಗಬೇಕು ಎಂಬುದನ್ನು ಬ್ಯಾಂಕ್ಗೆ ತಿಳಿಸಿ ಹಣ ವರ್ಗಾವಣೆ ಕಾರ್ಯವನ್ನು ಸುಲಭವಾಗಿಸುತ್ತಾರೆ.
ನಾಮಿನಿ ಇಲ್ಲದಿದ್ದರೆ ಮೃತ ಖಾತೆದಾರನ ಬ್ಯಾಂಕ್ ಹಣಕ್ಕಾಗಿ ವಾರಸುದಾರರು ಹರಸಾಹಸ ನಡೆಸಬೇಕಾಗುತ್ತದೆ. ವಾರಸುದಾರ ಪ್ರಮಾಣಪತ್ರ ಸೇರಿದಂತೆ ವಿವಿಧ ಸರ್ಟಿಫಿಕೇಟ್, ಅಫಿಡವಿಟ್ ಸಲ್ಲಿಸಬೇಕಾಗುತ್ತದೆ. ಪತ್ರಿಕೆಗಳಲ್ಲಿ ನೋಟೀಸ್ ಮುದ್ರಿಸಬೇಕಾಗುತ್ತದೆ. ವಿವಾದಾತ್ಮಕ ಪ್ರಕರಣಗಳಲ್ಲಿ ವಾರಸುದಾರರು ಪ್ರೊಬೇಟ್ ಪಡೆಯಬೇಕಾಗುತ್ತದೆ. ಕೆಲವೊಮ್ಮೆ ಇಂಥ ಪ್ರೊಬೇಟ್ಗಳನ್ನು ಪಡೆಯಲು 50,000 ರೂವರೆಗೂ ವೆಚ್ಚ ಆಗಬಹುದು.
ಇದನ್ನೂ ಓದಿ: Money Matters: ಒಟ್ಟಿಗೆ ಹಣ ಬಂದರೆ ಸಾಲ ತೀರಿಸಬೇಕಾ? ಹೂಡಿಕೆ ಮಾಡಬೇಕಾ? ಯಾವ ನಿರ್ಧಾರ ಉತ್ತಮ?
ಅದೇ ನಾಮಿನಿಯನ್ನು ಹೆಸರಿಸಲಾಗಿದ್ದರೆ ಹಣ ವರ್ಗಾವಣೆ ಪ್ರಕ್ರಿಯೆ ಕೇವಲ 10 ನಿಮಿಷದಲ್ಲಿ ಸಮಾಪ್ತಿಗೊಳ್ಳುತ್ತದೆ. ಹೀಗಾಗಿ, ನೀವು ಬ್ಯಾಂಕ್ ಖಾತೆ ಹೊಂದಿದ್ದರೆ ನಾಮಿನಿ ಹೆಸರಿಸುವುದನ್ನು ಮರೆಯದಿರಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:33 pm, Tue, 12 December 23