ನಮ್ಮ ಸಾಲದ ವ್ಯವಹಾರವನ್ನು ಟ್ರ್ಯಾಕ್ ಮಾಡುವ ಮತ್ತು ಅದಕ್ಕನುಗುಣವಾಗಿ ಅಂಕಗಳನ್ನು ನೀಡುವ ಸಂಸ್ಥೆಯೇ ಸಿಬಿಲ್ (CIBIL). ಈ ಸಂಸ್ಥೆ ನೀಡುವ ನೀಡುವ ಅಂಕಗಳನ್ನೇ ಸಿಬಿಲ್ ಸ್ಕೋರ್ (CIBIL Score) ಎಂದು ಕರೆಯಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಸಿಬಿಲ್ ಸ್ಕೋರ್ ಎಂಬುದೇ ಕ್ರೆಡಿಟ್ ಸ್ಕೋರ್ (Credit Score). ಸಿಬಿಲ್ ಸ್ಕೋರ್ ಸಾಮಾನ್ಯವಾಗಿ 300 ರಿಂದ 900 ರವರೆಗೆ ಇರುತ್ತದೆ. 750 ಮತ್ತು ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಅನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. 550 ರಿಂದ 750 ಅನ್ನು ಡಿಸೆಂಟ್ ಕ್ರೆಡಿಟ್ ಸ್ಕೋರ್ ಎಂದು ಕರೆಯಬಹುದು. 550ಕ್ಕಿಂತ ಕಡಿಮೆ ಇದ್ದರೆ ಕಳಪೆ ಸ್ಕೋರ್ ಎಂದು ಬ್ಯಾಂಕ್ಗಳು ಪರಿಗಣಿಸುತ್ತವೆ. ಈ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಬಗ್ಗೆ ಗ್ರಾಹಕರಲ್ಲಿ ಹಲವು ತಪ್ಪುಕಲ್ಪನೆಗಳು ಇವೆ. ಈ ಕುರಿತು ಅರಿವು ಮೂಡಿಸಲು ಸಿಬಿಲ್ ವೆಬ್ಸೈಟ್ನಲ್ಲಿ ಮಾಹಿತಿ ನೀಡಲಾಗಿದ್ದು, ಸಿಬಿಲ್ ಸ್ಕೋರ್ ಬಗ್ಗೆ ಸಾಮಾನ್ಯವಾಗಿ ಇರುವ ತಪ್ಪು ಕಲ್ಪನೆಗಳು ಮತ್ತು ನಿಜವೇನೆಂಬುದನ್ನು ವಿವರಿಸಲಾಗಿದೆ. ಅವುಗಳನ್ನು ಇಲ್ಲಿ ನೀಡಲಾಗಿದೆ.
ಕಡಿಮೆ ಸಿಬಿಲ್ ಸ್ಕೋರ್ ಹೊಂದಿರುವ ವ್ಯಕ್ತಿಗೆ ಸಾಲವೇ ಸಿಗಲಾರದು ಎಂಬುದು ನಿಜವಲ್ಲ. ಕೆಲವೊಂದು ಬ್ಯಾಂಕ್ಗಳು ಸಾಲ ನೀಡಲು ನಿರಾಕರಿಸದಬಹುದು. ಆದರೆ, ಕಡಿಮೆ ಸಿಬಿಲ್ ಸ್ಕೋರ್ ಹೊಂದಿರುವವರೂ ಕೆಲವೊಂದು ವಿಧಾನಗಳ ಮೂಲಕ ಸಾಲ ಪಡೆಯಲು ಸಾಧ್ಯವಿದೆ.
ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಪರ್ಸನಲ್ ಲೋನ್ ಪಡೆಯುವುದು ಹೇಗೆ? ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.
ಸಿಬಿಲ್ ಸ್ಕೋರ್ ಎಂಬುದು ವ್ಯಕ್ತಿಯ ಸಾಲದ ಇತಿಹಾಸಕ್ಕೆ ಮಾತ್ರ ಸಂಬಂಧಿಸಿದ್ದಾಗಿದೆ. ಆದಾಯ, ಹೂಡಿಕೆ, ಸ್ವತ್ತುಗಳು ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುವುದಿಲ್ಲ. ಸಾಲದ ಇತಿಹಾಸ, ಕ್ರೆಡಿಟ್ ಬಿಲ್ ಪಾವತಿ, ಸಾಲ ಮರುಪಾವತಿ ಆಧಾರದಲ್ಲಿ ಸಿಬಿಲ್ ರೇಟಿಂಗ್ ನೀಡಲಾಗುತ್ತದೆ.
ಇದನ್ನೂ ಓದಿ: CIBIL Score: ಸಿಬಿಲ್ ಸ್ಕೋರ್ ಉತ್ತಮವಾಗಿರಬೇಕೇ? ಹಾಗಿದ್ದರೆ ಈ ತಪ್ಪುಗಳನ್ನು ಮಾಡಬೇಡಿ
ವ್ಯಕ್ತಿಯ ಹೂಡಿಕೆ ಮತ್ತು ಉಳಿತಾಯಕ್ಕೂ ಸಿಬಿಲ್ ಸ್ಕೋರ್ಗೂ ಸಂಬಂಧವಿಲ್ಲ. ಉಳಿತಾಯ ಖಾತೆಯ ಚೆಕ್ ಬೌನ್ಸ್ ಆದರೆ ಅದು ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರದು. ಇಎಂಐ ಅಥವಾ ಸಾಲದ ಕಂತನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡದೇ ಇದ್ದರೆ ಸಿಬಿಲ್ ಸ್ಕೋರ್ ಕಡಿಮೆಯಾಗಬಹುದು.
ನೀವು ಸಿಬಿಲ್ನ ಸಾಲಗಾರರ ಪಟ್ಟಿಯಲ್ಲಿದ್ದರೆ ಚಿಂತಿಸುವ ಅಗತ್ಯವಿಲ್ಲ. ಸುಸ್ತಿದಾರರು, ಅಂದರೆ ಸಾಲ ಪಾವತಿಸದೇ ಇರುವವರು ಮಾತ್ರ ಎಂದಲ್ಲ; ಬ್ಯಾಂಕ್ಗಳಿಂದ, ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿರುವ ಎಲ್ಲರ ವಿವರಗಳನ್ನೂ ಸಿಬಿಲ್ ಹೊಂದಿರುತ್ತದೆ. ಸಾಲ ಪಡೆದವರಿಗೆ ಸಂಬಂಧಿಸಿದ ದತ್ತಾಂಶಗಳನ್ನು ಇಟ್ಟುಕೊಳ್ಳುವುದಷ್ಟೇ ಸಿಬಿಲ್ ಕೆಲಸ.
ಸಿಬಿಲ್ ಸ್ಕೋರ್ ಪರಿಶೀಲಿಸುವುದರಿಂದ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ ಎಂಬ ಅಪನಂಬಿಕೆ ಹೆಚ್ಚಿನವರಲ್ಲಿದೆ. ಇದು ನಿಜವಲ್ಲ. ಹಣಕಾಸು ಸಂಸ್ಥೆಯೊಂದು ನಮ್ಮ ಸಿಬಿಲ್ ಸ್ಕೋರ್ ಪರಿಶೀಲಿಸಿದರೆ ನಾವು ಸಾಲ ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ಭಾವಿಸಿ ಸಿಬಿಲ್ ಪ್ರತಿ ಬಾರಿ ಕೆಲವು ಅಂಕಗಳನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಇದರಿಂದ ಸಿಬಿಲ್ ಸ್ಕೋರ್ ತುಸು ಕಡಿಮೆಯಾಗಬಹುದು. ಆದರೆ, ನಮ್ಮದೇ ಸಿಬಿಲ್ ಸ್ಕೋರ್ ಅನ್ನು ನಾವು ಪರಿಶೀಲಿಸುವುದರಿಂದ ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಅರ್ಜಿದಾರನು ಮಾಡುವ ಕ್ರೆಡಿಟ್ ಸ್ಕೋರ್ ಪರಿಶೀಲನೆಯ ಬಗ್ಗೆ ಸಿಬಿಲ್ ದಾಖಲೆಗಳನ್ನು ಇಟ್ಟುಕೊಳ್ಳುವುದಿಲ್ಲ. ಹೀಗಾಗಿ ನಾವು ಸಿಬಿಲ್ ಪರಿಶೀಲಿಸುತ್ತಿದ್ದರೆ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮವಾಗುವುದಿಲ್ಲ. ಬದಲಿಗೆ ಅದರ ಮೇಲೆ ಹೆಚ್ಚಿನ ಗಮನ ಇಟ್ಟುಕೊಂಡು, ಅದನ್ನು ಸುಧಾರಿಸಲು ಅನುಕೂಲವಾಗಲಿದೆ. ಜತೆಗೆ, ವಂಚನೆಗಳನ್ನು ತಡೆಗಟ್ಟಲೂ ಸಾಧ್ಯವಿದೆ.
ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:30 pm, Mon, 19 December 22