
ಹೊಸದಾಗಿ ಕೆಲಸಕ್ಕೆ ಸೇರಿದಾಗಿನಿಂದ ಹಿಡಿದು ಮೊದಲಿನ 15-20 ವರ್ಷ ಬಹಳ ಮುಖ್ಯ. ವೃತ್ತಿಜೀವನದ ಗತಿ ಹೇಗೆ ಸಾಗುತ್ತದೆ ಎಂದು ನಿರ್ಧಾರವಾಗುವ ಕಾಲಘಟ್ಟ ಅದು. ನಿಮ್ಮ ಹೂಡಿಕೆ ವಿಚಾರಕ್ಕೂ ಇದು ಅನ್ವಯ ಆಗುತ್ತದೆ. ನೀವು ಎಷ್ಟು ಬೇಗ ಹೂಡಿಕೆ ಆರಂಭಿಸುತ್ತೀರೋ ಅಷ್ಟು ನಿಮ್ಮ ಹಣಕಾಸು ಜೀವನದ ಗತಿ ಉತ್ತಮ ಲಯದಲ್ಲಿರುತ್ತದೆ. ಆದರೆ, ಈ ವಯಸ್ಸಿನಲ್ಲಿ ತಪ್ಪು ಮಾಡುವುದು ಬಹಳ ಸಹಜ. ಹಣಕಾಸು ಜಾಗೃತಿ ಇಲ್ಲದೇ ಹೋದರೆ ಈ ತಪ್ಪುಗಳು (investment mistakes) ಹೊಸ ಪ್ರಮಾದಗಳಿಗೆ ಎಡೆ ಮಾಡಿಕೊಡಬಹುದು. ನಿಮಗೆ ತಪ್ಪಿನ ಅರಿವಾಗುವಷ್ಟರಲ್ಲಿ ಕಾಲ ಮಿಂಚಿರುತ್ತದೆ.
ಹೊಸದಾಗಿ ಕೆಲಸಕ್ಕೆ ಸೇರುತ್ತಿರುವವರಲ್ಲಿ ಸಾಮಾನ್ಯವಾಗಿ ವಿದ್ಯಾರ್ಥಿ ಸಾಲ, ಪ್ರವಾಸ ವೆಚ್ಚ, ಮದುವೆ ವೆಚ್ಚ ಇತ್ಯಾದಿ ಖರ್ಚುಗಳು ಹೆಚ್ಚಿರುತ್ತವೆ. ಈ ಮಧ್ಯೆ ಹೂಡಿಕೆ ಬಗ್ಗೆ ಆಲೋಚನೆ ಮಾಡುವವರು ತೀರಾ ಕಡಿಮೆ. ಆದರೆ, ನೀವು ಎಷ್ಟು ಬೇಗ ಇನ್ವೆಸ್ಟ್ಮೆಂಟ್ ಆರಂಭಿಸುತ್ತೀರೋ ಅಷ್ಟು ಒಳ್ಳೆಯದು. ನಿಮ್ಮ ಗಳಿಕೆಯಲ್ಲಿ ಸಣ್ಣ ಮೊತ್ತದ್ದಾದರೂ ಸರಿ, ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಉಳಿಸಿ ಅದನ್ನು ಹೂಡಿಕೆ ಮಾಡುವ ಪ್ರವೃತ್ತಿ ರೂಢಿಸಿಕೊಳ್ಳಬೇಕು. ತಿಂಗಳಿಗೆ 500ರಿಂದ ಹಿಡಿದು 5,000 ರೂವರೆಗಿನ ಯಾವುದಾದರೂ ಎಸ್ಐಪಿ ಮೂಲಕ ಮ್ಯುಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಿರಿ.
ಇದನ್ನೂ ಓದಿ: 6 ತಿಂಗಳಿಂದ 1 ವರ್ಷದವರೆಗೆ ಹೂಡಿಕೆ ಮಾಡಲು ಯಾವ ಪ್ಲಾನ್ಗಳು ಬೆಸ್ಟ್?
ಹೂಡಿಕೆ ಮಾಡುವುದು ಒಂದು ಕಲೆ. ಬಹಳ ಜನ ಯುವಕರು ತಮ್ಮೆಲ್ಲಾ ಹೂಡಿಕೆಯನ್ನು ಒಂದೇ ಸ್ಥಳಕ್ಕೆ ಹಾಕಿಬಿಡುತ್ತಾರೆ. ಎಲ್ಲವನ್ನೂ ಷೇರುಗಳಿಗೆ ಹಾಕುವುದು, ಅಥವಾ ರಿಯಲ್ ಎಸ್ಟೇಟ್ಗೆ ಹಾಕುವುದು, ಅಥವಾ ಕ್ರಿಪ್ಟೋಗೆ ಹಾಕುವುದು, ಹೀಗೆ ಒಂದು ಅಸೆಟ್ ಕ್ಲಾಸ್ನಲ್ಲೇ ಎಲ್ಲ ಹಣ ಹಾಕುವುದು ತಪ್ಪು. ಷೇರು, ಡೆಟ್, ಚಿನ್ನ, ರಿಯಲ್ ಎಸ್ಟೇಟ್ ಇತ್ಯಾದಿ ಬೇರೆ ಬೇರೆ ಅಸೆಟ್ಗಳಲ್ಲಿ ನಿಮ್ಮ ಹೂಡಿಕೆ ಹರಡಿರಬೇಕು. ಹೀಗಿದ್ದಾಗ ನಿಮ್ಮ ಹೂಡಿಕೆಯು ಸಮತೋಲನದ ರಿಟರ್ನ್ಸ್ ನೀಡಬಲ್ಲುದು.
ಹೂಡಿಕೆ ಮೊತ್ತ ಹೆಚ್ಚಿದಂತೆ ನೀವು ಯಾವ ಉದ್ದೇಶಕ್ಕೆ ಹೂಡಿಕೆ ಮಾಡಲಾಗುತ್ತದೆ ಎಂದು ವರ್ಗೀಕರಿಸಬೇಕು. ಕಿರು ಅವಧಿ, ಮಧ್ಯಮ ಅವಧಿ ಮತ್ತು ದೀರ್ಘಾವಧಿ ಹೂಡಿಕೆ ಎಂದು ವರ್ಗೀಕರಿಸಿ, ಅದಕ್ಕೆ ತಕ್ಕದಾಗಿ ಪ್ರತ್ಯೇಕವಾಗಿ ಹೂಡಿಕೆಗಳನ್ನು ಮಾಡುವುದನ್ನು ರೂಢಿಸಿಕೊಳ್ಳಿ.
ಬಹಳ ಜನರು ಎಮರ್ಜೆನ್ಸಿ ಫಂಡ್ ಅಥವಾ ಬ್ಯಾಕಪ್ ಫಂಡ್ ಇಲ್ಲದೇ ಅಗ್ರೆಸಿವ್ ಆಗಿ ಹೂಡಿಕೆ ಮಾಡುತ್ತಾರೆ. ಇದು ತಪ್ಪು. ಯಾವುದಾದರೂ ತುರ್ತು ಸಂದರ್ಭ ಬಂದಾಗ ವೆಚ್ಚಕ್ಕಾಗಿ ಹೂಡಿಕೆಯ ಹಣವನ್ನು ತೆಗೆಯುವುದು ಸಮಂಜಸ ಅಲ್ಲ. ಅದರ ಬದಲು ತುರ್ತು ವೆಚ್ಚಕ್ಕೆಂದು ಪ್ರತ್ಯೇಕವಾಗಿ ಎತ್ತಿ ಇಟ್ಟಿರಬೇಕು. ಹೂಡಿಕೆ, ದೈನಂದಿನ ವೆಚ್ಚ ಇತ್ಯಾದಿ ನಿಮ್ಮ ಮಾಸಿಕ ವೆಚ್ಚದ ಆರು ಪಟ್ಟು ಹಣವನ್ನು ಲಿಕ್ವಿಡ್ ಫಂಡ್ ಅಥವಾ ಎಫ್ಡಿಗಳಲ್ಲಿ ಇಡುವುದು ಉತ್ತಮ.
ಇದನ್ನೂ ಓದಿ: ಷೇರುಗಳಲ್ಲಿ ಹೆಚ್ಚು ವರ್ಷ ಹಣ ಇಟ್ಟರೆ ಹೆಚ್ಚು ಫಲವಾ? ಇದೆಲ್ಲಾ ಮಿಥ್ ಎನ್ನುತ್ತಾರೆ ಸಮೀರ್ ಅರೋರಾ
ಹಲವರು ಮದುವೆಯಾಗಿ ಮಕ್ಕಳಾದ ಬಳಿಕ ಹೂಡಿಕೆ ಬಗ್ಗೆ ಆಲೋಚಿಸುವುದುಂಟು. ಇಷ್ಟು ತಡವಾಯಿತು, ಹೇಗೆ ಹೂಡಿಕೆ ಮಾಡುವುದು ಎಂದನಿಸುವ ವಯಸ್ಸು ಅದು. ನೀವು ಬಹಳ ಮುಂಚೆಯೇ ಹೂಡಿಕೆ ಮಾಡಬೇಕಿತ್ತು ಎಂಬುದು ಹೌದು. ಆದರೆ, ತಡವಾಯಿತು ಎಂದು ಹೂಡಿಕೆ ಆರಂಭಿಸುವುದನ್ನು ನಿಲ್ಲಿಸುವುದು ತಪ್ಪು. ಈಗಿಂದೀಗಲೇ ಪ್ಲಾನ್ ಮಾಡಿ ಹೂಡಿಕೆ ಶುರು ಮಾಡಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ