ಕ್ರೆಡಿಟ್ ಕಾರ್ಡ್ ಎಂದರೆ ಈಗಲೂ ಕೆಲ ಜನರು ಓಡಿ ಹೋಗುತ್ತಾರೆ. ಅಬ್ಬಬ್ಬಾ, ಈ ಕ್ರೆಡಿಟ್ ಕಾರ್ಡ್ ಸಹವಾಸ ಸಾಕಪ್ಪಾ ಎನ್ನುತ್ತಾರೆ. ಇನ್ನೂ ಕೆಲವರು ಹಲವಾರು ಕ್ರೆಡಿಟ್ ಕಾರ್ಡ್ಗಳನ್ನು (Credit Card) ಹೊಂದಿ ಆರಾಮವಾಗಿ ಇರುತ್ತಾರೆ. ಇದೆಲ್ಲವೂ ನಾವು ಕ್ರೆಡಿಟ್ ಕಾರ್ಡ್ ಹೇಗೆ ಬಳಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಕ್ರೆಡಿಟ್ ಕಾರ್ಡ್ ಎಂದರೆ ಭಯ ಪಡುವವರು ಪ್ರಮುಖವಾಗಿ ನೀಡುವ ಕಾರಣವೆಂದರೆ ಕ್ರೆಡಿಟ್ ಕಾರ್ಡ್ನಲ್ಲಿ ವಿಪರೀತ ಬಡ್ಡಿ, ದಂಡಗಳನ್ನು ಹಾಕಲಾಗುತ್ತದೆ. ಹಾಗೆಯೇ, ವಿಪರೀತವಾಗಿ ಕಾರ್ಡ್ ಸ್ವೈಪ್ ಮಾಡಿ ಬಿಲ್ ಕಟ್ಟಲು ಆಗುವುದಿಲ್ಲ ಎಂಬುದು ಇನ್ನೊಂದು ಕಾರಣ. ಕ್ರೆಡಿಟ್ ಕಾರ್ಡ್ ಬಳಸಿ ಕ್ರೆಡಿಟ್ ಸ್ಕೋರ್ ಕಡಿಮೆ ಆಗಿಹೋಗಿದೆ. ಇದರಿಂದ ಬ್ಯಾಂಕ್ ಲೋನ್ ಸಿಗುವುದೂ ಕಷ್ಟವಾಗಿದೆ ಎಂದೂ ಹಲವರು ಹಲಬುತ್ತಾರೆ. ಆದರೆ, ಕ್ರೆಡಿಟ್ ಕಾರ್ಡ್ ವಾಸ್ತವದಲ್ಲಿ ಇಷ್ಟೊಂದು ತೊಂದರೆ ಕೊಡುತ್ತದಾ?
ಕ್ರೆಡಿಟ್ ಕಾರ್ಡ್ ಎಂದರೆ ಸಾಲದ ಕಾರ್ಡ್. ಅಂದರೆ ನಿಮ್ಮ ಖರ್ಚುವೆಚ್ಚಗಳಿಗೆ ಸೀಮಿತ ಅವಧಿಗೆ ಸಾಲ ಕೊಡುವಂತಹ ಒಂದು ಸಾಧನ ಅದು. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣದ ಕೊರತೆ ಎದುರಾಗಿ, ನೀವು ಯಾವುದಾದರೂ ಖರೀದಿ ಮಾಡಬೇಕೆಂದರೆ ಕ್ರೆಡಿಟ್ ಕಾರ್ಡ್ ಉಪಯೋಗಿಸಬಹುದು. 50 ದಿನಗಳವರೆಗೆ ಈ ಹಣಕ್ಕೆ ಯಾವುದೇ ಬಡ್ಡಿ ಹೇರಲಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಈ ಅವಧಿಯೊಳಗೆ ಈ ಹಣವನ್ನು ಮರುಪಾವತಿ ಮಾಡಿದರೆ ನಿಶ್ಚಿಂತೆಯಿಂದ ಇರಬಹುದು.
ಇದನ್ನೂ ಓದಿ: Blue Aadhaar Card: ನೀಲಿ ಬಣ್ಣದ ಆಧಾರ್ ಕಾರ್ಡ್; ಯಾಕೆ ಬೇಕು, ಹೇಗೆ ಮಾಡಿಸುವುದು?; ವಿವರ ಓದಿ
ನೀವು ನಿಗದಿತ ಅವಧಿಯೊಳಗೆ ಬಿಲ್ ಕಟ್ಟದೇ ಇದ್ದಲ್ಲಿ ಪೆನಾಲ್ಟಿ, ಬಡ್ಡಿ, ಚಕ್ರಬಡ್ಡಿ ಇತ್ಯಾದಿ ಶುಲ್ಕಗಳನ್ನು ತೆರಬೇಕಾದೀತು. ಇಂಥ ಸನ್ನಿವೇಶಕ್ಕೆ ಸಿಲುಕಿಕೊಳ್ಳುವಂತಹ ಪರಿಸ್ಥಿತಿಗೆ ಹೋಗದಂತೆ ನೋಡಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ.
ನಿಮ್ಮ ಆದಾಯ ಎಷ್ಟಿದೆ, ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಖರ್ಚನ್ನು ಒಂದು ತಿಂಗಳೊಳಗೆ ಮರುಪಾವತಿ ಮಾಡಲು ಆಗುತ್ತದಾ, ಇತ್ಯಾದಿ ಎಲ್ಲವನ್ನೂ ಯೋಚಿಸಿ ನಂತರ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಬಹುದು. ಇಲ್ಲದಿದ್ದರೆ ಬಿಲ್ ಕಟ್ಟಲಾಗದ ಸ್ಥಿತಿಗೆ ಹೋಗಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ನಿಮ್ಮ ಖರ್ಚಿಗೆ ಸಾಲ ಕೊಡುವುದೂ ಮಾತ್ರವಲ್ಲ, ಕ್ಯಾಷ್ಬ್ಯಾಕ್, ಡಿಸ್ಕೌಂಟ್ ಇತ್ಯಾದಿ ರಿವಾರ್ಡ್ಗಳನ್ನೂ ನೀಡಬಹುದು. ಕೆಲವೊಂದು ಉತ್ಪನ್ನಗಳು, ಅಂಗಡಿಗಳಲ್ಲಿ ಶಾಪಿಂಗ್ ಮಾಡಿ ನಿರ್ದಿಷ್ಟ ಕ್ರೆಡಿಟ್ ಕಾರ್ಡ್ ಬಳಸಿ ಹಣ ಪಾವತಿಸಿದರೆ ರಿವಾರ್ಡ್ ಸಿಗಬಹುದು. ನಿಮ್ಮ ಕ್ರೆಡಿಟ್ ಕಾರ್ಡ್ಗೆ ಎಲ್ಲೆಲ್ಲಿ ಡಿಸ್ಕೌಂಟ್ ಇದೆ ಎಂಬ ಮಾಹಿತಿ ಪಡೆದೂ ನೀವು ಶಾಪಿಂಗ್ ಮಾಡಬಹುದು.
ನೀವು ವಿಮಾನ ಟಿಕೆಟ್ ಹೆಚ್ಚು ಬುಕ್ ಮಾಡುತ್ತಿರುವವರಾದರೆ ಅದಕ್ಕೆಂದೇ ರಿವಾರ್ಡ್ ಕೊಡುವ ಕ್ರೆಡಿಟ್ ಕಾರ್ಡ್ ಇರುತ್ತದೆ. ಐಆರ್ಸಿಟಿಸಿ ರೈಲು ಟಿಕೆಟ್ ಬುಕಿಂಗ್ ಹೆಚ್ಚು ಮಾಡುವಿರಾದರೆ ಐಆರ್ಸಿಟಿಸಿ ಕಾರ್ಡ್ಗಳು ಸಿಗುತ್ತವೆ. ಕ್ಯಾಷ್ಬ್ಯಾಕ್ ಕೊಡುವಂತಹ ಕ್ರೆಡಿಟ್ ಕಾರ್ಡ್ಗಳಿವೆ. ಎಲ್ಲಾ ರೀತಿಯ ರಿವಾರ್ಡ್ ಪಾಯಿಂಟ್ ಒದಗಿಸುವ ಕ್ರೆಡಿಟ್ ಕಾರ್ಡ್ಗಳಿವೆ. ನಿಮ್ಮ ಅಗತ್ಯಗಳಿಗೆ ತಕ್ಕಂತಹ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡಿಕೊಳ್ಳಬಹುದು.